ಮಗಳು ವಯಸ್ಸಿಗೆ ಬಂದಿದ್ದಾಳಾ ಅಂತ ಕೇಳ್ತಿದ್ರು: ಅಪ್ಪ ಸಾಲ ಮಾಡಿದ್ದಕ್ಕೆ ನಟಿ ಸೌಮ್ಯ ರಾವ್ ಬದುಕು ಹೇಗಿತ್ತು?
ಕನ್ನಡದಲ್ಲಿ ನಟಿಯಾಗಿ ನಿರೂಪಕಿಯಾಗಿ ಗುರುತಿಸಿಕೊಂಡಿದ್ದ ಸೌಮ್ಯ ರಾವ್ ಅವರು ಸದ್ಯ ತೆಲುಗು ಭಾಷೆಯಲ್ಲಿ ಮಿಂಚುತ್ತಿದ್ದಾರೆ. ಇತ್ತೀಚೆಗೆ ಅವರು ಕನ್ನಡ ಚಿತ್ರರಂಗದ ಬಗ್ಗೆ ಆಡಿದ್ದ ಕೆಲ ಮಾತುಗಳು ವಿವಾದಕ್ಕೆ ಕಾರಣವಾಗಿತ್ತು. ಇವರ ಸಂದರ್ಶನದ ವಿಡಿಯೋಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇತ್ತೀಚಿನ ಸಂದರ್ಶನದಲ್ಲಿ ತಮ್ಮ ಬದುಕಿನ ಕಷ್ಟದ ದಿನಗಳನ್ನು ಮೆಲುಕು ಹಾಕಿರುವ ಅವರು ಶಾಲೆಯಲ್ಲಿ ಓದುತ್ತಿರುವಾಗಲೇ ಅನುಭವಿಸಿದ ಮಾನಸಿಕ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ. ಮನೆಯ ಬಳಿ ಬಂದು ಕೆಲವರು ಮಗಳು ವಯಸ್ಸಿಗೆ ಬಂದಿದ್ದಾಳಾ? ಎಂದೆಲ್ಲ ಕೇಳುತ್ತಿದ್ದರು ಎಂಬ ಶಾಕಿಂಗ್ ವಿಚಾರ ಬಹಿರಂಗಪಡಿಸಿದ್ದಾರೆ.
'ಚಿಕ್ಕಂದಿನಲ್ಲಿ ತಮ್ಮ ತಂದೆಯಿಂದಲೇ ಸಾಕಷ್ಟು ಕಷ್ಟ ಅನುಭವಿಸಿದ್ದಾಗಿ ಸೌಮ್ಯ ರಾವ್ ಹೇಳಿದ್ದಾರೆ. ತಂದೆ ಬಗ್ಗೆ ಮಾತನಾಡೋಕೆ ಇಷ್ಟವಿಲ್ಲ. ನಾವು ಬಾಲ್ಯದಿಂದಲೂ ಬಡತನದಲ್ಲೇ ಬೆಳೆದಿದ್ದು, ನಮ್ಮ ಹತ್ತಿರ ಹಣ ಇಲ್ಲ ಎಂಬ ಕಾರಣಕ್ಕೆ ಎಲ್ಲರೂ ಕೇವಲವಾಗಿ ನೋಡುತ್ತಿದ್ದರು. ಅಂತಹ ಸಮಯದಲ್ಲೂ ನಮ್ಮನ್ನ ಸಾಕಿ ಬೆಳೆಸಿದ್ದು ನಮ್ಮ ತಾಯಿ. ಅವರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಆಸೆ ಇತ್ತು. ಆದರೆ ಅದು ನನಸಾಗುವ ಹೊತ್ತಿಗೆ ಅವರ ಆರೋಗ್ಯ ಹಾಳಾಯಿತು, ಬ್ರೈನ್ ಕ್ಯಾನ್ಸರ್ ಆಯ್ತು' ಎಂದು ಭಾವುಕರಾಗಿದ್ದಾರೆ.

'ಮಕ್ಕಳ ಪಾಲಿಗೆ ತಂದೆ ಹೀರೊ ಆಗಿರುತ್ತಾರೆ. ಆದರೆ ಒಳ್ಳೆಯ ತಂದೆ ಸಿಗಲು ಅದೃಷ್ಟ ಮಾಡಿರಬೇಕು. ನಾನು ನಮ್ಮ ತಂದೆ ಬಗ್ಗೆ ಹೇಳಿದರೆ ನಾನು ಎಲ್ಲರ ಪಾಲಿಗೆ ಕೆಟ್ಟದಾಗಿ ಕಾಣಬಹುದು. ತಂದೆ ಸ್ಥಾನದಲ್ಲಿದ್ದವರು ನಿಮ್ಮ ಚಟಗಳಿಗೆ ಹೆಂಡತಿ ಮಕ್ಕಳನ್ನು ಬಲಿ ಕೊಡಬೇಡಿ ಎಂದು ಸೌಮ್ಯ ಮನವಿ ಮಾಡಿದ್ದಾರೆ. ನಮ್ಮ ತಂದೆ ಸಿಕ್ಕಾಪಟ್ಟೆ ಸಾಲ ಮಾಡಿದ್ರು. ಆದರೆ ಸಾಲದ ಹಣ ಏನು ಮಾಡ್ತಿದ್ರೋ ಗೊತ್ತಿಲ್ಲ. ನಾವು ಒಂದು ಹೊತ್ತಿನ ಊಟಕ್ಕೂ ಪರದಾಡಿದ್ದೇವೆ' ಎಂದು ಆ ದಿನಗಳನ್ನು ನೆನೆದಿದ್ದಾರೆ.
'ಸಾಲ ಪಡೆದಿದ್ದು ನಮ್ಮಪ್ಪ, ಕೊಟ್ಟಿದ್ದು ಇನ್ಯಾರೋ, ಆದರೆ ಸಾಲ ಕೊಟ್ಟವರು ಮನೆಯ ಬಳಿ ಬಂದು ನಮಗೆ ಕಿರುಕುಳ ಕೊಡುತ್ತಿದ್ದರು. ನಮ್ಮ ತಾಯಿಗೂ ತುಂಬಾ ಹಿಂಸೆ ಕೊಡ್ತಿದ್ರು. ಮನೆಗೆ ಬಂದು ಸಾಲದ ಹಣ ಕೇಳಿ ಪೀಡಿಸುತ್ತಿದ್ದರು. ಅಷ್ಟೇ ಅಲ್ಲ ಮಗಳು ಇದ್ದಾಳಾ? ಅವಳು ವಯಸ್ಸಿಗೆ ಬಂದಿದ್ದಾಳಾ? ಎಂದೆಲ್ಲ ಕೆಟ್ಟದಾಗಿ ಕೇಳುತ್ತಿದ್ದರು. ಇದರಿಂದ ಬೇಸತ್ತ ನನ್ನ ತಾಯಿ ನಮ್ಮನ್ನ ತಿರುಪತಿಗೆ ಕರೆದುಕೊಂಡು ಹೋದರು. ಕೈಯಲ್ಲಿ 100 ರೂಪಾಯಿ ಇಟ್ಟುಕೊಂಡು ನಾನು, ತಮ್ಮ, ಅಮ್ಮ ಬಸ್ ನಿಲ್ದಾಣದಲ್ಲೇ ಮಲಗಿದ್ದೆವು ಎಂದು' ನೋವು ಹಂಚಿಕೊಂಡಿದ್ದಾರೆ.
'ವಕೀಲ ಎಲ್ಲೆಲ್ಲೋ ಮುಟ್ಟುತ್ತಿದ್ದ'
'ಆ ಸಮಯದಲ್ಲಿ ಊಟಕ್ಕೆ ತುಂಬಾ ಪರದಾಡಿದ್ದೆವು. ದೇವಸ್ಥಾನಕ್ಕೆ ಹೋಗಿ ಪ್ರಸಾದ ಯಾವಾಗ ಕೊಡುತ್ತಾರೆ ಅಂತ ಕಾಯುತ್ತಿದ್ದೆವು. ನಮ್ಮ ತಂದೆ ಸಾಲ ಮಾಡಿಕೊಂಡಿದ್ದರಿಂದಲೇ ನಮಗೆ ಇಂತಹ ಕಷ್ಟಗಳು ಬಂದವು. ಅಂತಹ ಜೀವನ ಯಾರಿಗೂ ಬೇಡ. ಇನ್ನು ಕಾಲೇಜಿನಲ್ಲಿ ಓದುತ್ತಿದ್ದಾಗ ವಕೀಲರ ಬಳಿ ಪಾರ್ಟ್‌ಟೈಮ್ ಕೆಲಸಕ್ಕೆ ಸೇರಿದ್ದೆ. ಆ ವ್ಯಕ್ತಿ ಕೂಡ ನನ್ನ ಕೆಟ್ಟದಾಗಿ ನೋಡಿದ. ನಮ್ಮ ಅಸಹಾಯಕತೆ ನೋಡಿ ಕೆಟ್ಟದಾಗಿ ಬಳಸಿಕೊಳ್ಳುವವರೇ ಹೆಚ್ಚು. ಆ ವಕೀಲ ಕೂಡ ನನ್ನ ಕೆಟ್ಟದಾಗಿ ಮುಟ್ಟುತ್ತಿದ್ದ' ಎಂದು ಕೆಟ್ಟ ಅನುಭವ ಹೇಳಿಕೊಂಡಿದ್ದಾರೆ.












Click it and Unblock the Notifications