ಬೆಂಗಳೂರಿನ ಆ ಫ್ಲೈಓವರ್ ಮೇಲೆ ನಟಿ ಸೌಂದರ್ಯ ಆತ್ಮ ಓಡಾಡುತ್ತಾ? ಈ ಬಗ್ಗೆ ಅತ್ತಿಗೆ ಹೇಳಿದ್ದಿಷ್ಟು
ಬಹುಭಾಷಾ ನಟಿ ಸೌಂದರ್ಯ ಅವರು ಸಣ್ಣವಯಸ್ಸಿನಲ್ಲೇ ದುರಂತ ಸಾವು ಕಂಡವರು. ಅವರ ಸಿನಿಮಾಗಳು ಇಂದಿಗೂ ಎವರ್‌ಗ್ರೀನ್. ಸೌಂದರ್ಯ ಅವರು ಅಕಾಲಿಕ ಸಾವು ಕಂಡು ಎರಡು ದಶಕಗಳು ಕಳೆದಿದ್ದರೂ ಅವರ ನೆನಪು ಇಂದಿಗೂ ಮಾಸಿಲ್ಲ. ಅಂದಹಾಗೆ ನಟಿ ಸೌಂದರ್ಯ ಅವರು ಬೆಂಗಳೂರಿನ ಜಕ್ಕೂರು ಬಳಿ ವಿಮಾನ ಅಪಘಾತದ ದುರಂತದಲ್ಲಿ ಕೊನೆಯುಸಿರೆಳೆದಿದ್ದು ಗೊತ್ತೇ ಇದೆ. ಇವರ ಸಾವಿನ ಹಲವು ವದಂತಿಗಳು ಹಬ್ಬಿದ್ದವು. ಈ ಪೈಕಿ ಬೆಂಗಳೂರಿನ ಫ್ಲೈಓವರ್ ಮೇಲೆ ಸೌಂದರ್ಯ ಅವರ ಆತ್ಮ ಓಡಾಡುತ್ತೆ ಎಂಬುದು ಕೂಡ ಒಂದು. ಈ ಬಗ್ಗೆ ಸೌಂದರ್ಯ ಅವರು ಅತ್ತಿಗೆ ಕೂಡ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಸೌಂದರ್ಯ ಅವರ ಅತ್ತಿಗೆ ನಿರ್ಮಲಾ ಅಮರನಾಥ್ ಅವರು ಈ ಬಗ್ಗೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಸೌಂದರ್ಯ ಅವರು 2004ರ ಏಪ್ರಿಲ್ 17ರಂದು ಬೆಂಗಳೂರಿನ ಜಕ್ಕೂರು ಬಳಿ ವಿಮಾನ ಅಪಘಾತದಲ್ಲಿ ಇಹಲೋಕ ತ್ಯಜಿಸಿದ್ದರು. ಇದೇ ದುರಂತದಲ್ಲಿ ನಿರ್ಮಲಾ ಅವರ ಪತಿ ಕೂಡ ಸಾವನ್ನಪ್ಪಿದ್ದರು.
'ನಾನು ಸೌಂದರ್ಯ ಎಲ್ಲ ಒಂದೇ ಕಡೆ ಇದ್ವಿ, ಹಾಗಾಗಿ ನನಗೆ ಸೌಂದರ್ಯ ಚಿಕ್ಕ ವಯಸ್ಸಿಂದಲೂ ಗೊತ್ತಿದ್ದರು. ನಾವೆಲ್ಲ ಒಟ್ಟಿಗೆ ಬೆಳೆದವರು. ಅವರ ಮನೆಯವರು ನನ್ನ ಜೊತೆಯಲ್ಲೇ ಓದಿದ್ದರು. ಹಾಗಾಗಿ ಒಬ್ಬರ ಮನೆಗೆ ಒಬ್ಬರು ಹೋಗ ಬರುತ್ತಿದ್ದೆವು. ಸೌಂದರ್ಯ ಕೂಡ ಆಗಿನಿಂದಲೇ ನನಗೆ ಪರಿಚಯ ಆಗಿದ್ದರು. ಆದರೆ ನಾನು ಮುಂದೆ ಒಂದು ದಿನ ಅವರ ಮನೆಗೆ ಸೊಸೆ ಆಗ್ತೀನಿ ಅಂತ ಊಹಿಸಿರಲಿಲ್ಲ. ಮದುವೆಯಾಗಿ ಅವರ ಮನೆಗೆ ಬಂದ ನಂತರ ನನಗೆ ಅವರೆಲ್ಲ ಹೊಸಬರು ಎಂದು ಅನಿಸಲಿಲ್ಲ' ಎಂದು ನಿರ್ಮಲಾ ನೆನೆದಿದ್ದಾರೆ.

'ಸೌಂದರ್ಯ ಮೊದಲ ಹೆಸರು ಸೌಮ್ಯ. ಚಿತ್ರರಂಗಕ್ಕೆ ಬಂದ ಮೇಲೆ ಸೌಂದರ್ಯ ಎಂದು ಹೆಸರು ಬದಲಾಯಿತು. ನಿಜ ಹೇಳಬೇಕು ಅಂದ್ರೆ ಅವಳದ್ದು ಸಹಜ ಸೌಂದರ್ಯ. ಶೂಟಿಂಗ್ ಇದ್ದಾಗ ಅಥವಾ ಯಾವುದಾದರೂ ಪ್ರೋಗ್ರಾಂಗೆ ಹೋಗಬೇಕಾದ್ರೆ ಮಾತ್ರವೇ ಮೇಕಪ್ ಮಾಡಿಕೊಳ್ಳುತ್ತಿದ್ದಳು. ಬಾಕಿ ಸಮಯದಲ್ಲಿ ಹಾಗೆಯೇ ಇರುತ್ತಿದ್ದಳು' ಎಂದಿದ್ದಾರೆ.
'ಸೌಂದರ್ಯ ಸಾವಿಗೆ ಆಪ್ತಮಿತ್ರ ಸಿನಿಮಾದಲ್ಲಿ ನಾಗವಲ್ಲಿ ಪಾತ್ರ ಮಾಡಿದ್ದೇ ಕಾರಣ' ಎಂಬ ವದಂತಿ ಜೋರಾಗಿ ಕೇಳಿಬಂದಿತ್ತು. ಈ ಬಗ್ಗೆಯೂ ಮಾತನಾಡಿರುವ ಅವರ ಅತ್ತಿಗೆ ನಿರ್ಮಲಾ, 'ಆಪ್ತಮಿತ್ರ ಸಿನಿಮಾ ಶೂಟಿಂಗ್ ವೇಳೆ ಸೌಂದರ್ಯಳಿಗೆ ಯಾವುದೇ ಕೆಟ್ಟ ಅನುಭವ ಆಗಿರಲಿಲ್ಲ. ಆ ಶೂಟಿಂಗ್ ಇಲ್ಲಿನ ಪ್ಯಾಲೇಸ್‌ನಲ್ಲೇ ನಡೆಯುತ್ತಿದ್ದರಿಂದ ನಾನು ಕೂಡ ಹಲವು ಸಲ ಶೂಟಿಂಗ್‌ಗೆ ಜಾಗಕ್ಕೆ ಹೋಗಿದ್ದೆ. ಆ ಸಿನಿಮಾದ ರಾ...ರಾ.. ಹಾಡಿನ ಶೂಟ್ ವೇಳೆಯೂ ನಾನು ಅಲ್ಲೇ ಇದ್ದೆ. ಆದರೆ ಯಾವುದೇ ಕಹಿ ಘಟನೆಗಳು ನಡೆದಿರಲಿಲ್ಲ' ಎಂದು ಕ್ಲಾರಿಟಿ ಕೊಟ್ಟಿದ್ದಾರೆ.
'ಸೌಂದರ್ಯ ಆಪ್ತಮಿತ್ರ ಸಿನಿಮಾದಲ್ಲಿ ನಟಿಸಿದ್ದು, ಅದೇ ಸಮಯದಲ್ಲಿ ದುರಂತದಲ್ಲಿ ಸಾವು ಕಂಡಿದ್ದೆಲ್ಲವೂ ಕಾಕತಾಳೀಯ. ಆಪ್ತಮಿತ್ರ ಸಿನಿಮಾ ಮಣಿಚಿತ್ತಿರತ್ತಾಳ್‌ನ ರಿಮೇಕ್ ಸಿನಿಮಾ. ಅದರಲ್ಲಿ ಭಯಾನಕ ಪಾತ್ರ ಮಾಡಿದ್ದ ಶೋಭನಾ ಅವರು ಈಗಲೂ ಚೆನ್ನಾಗಿಯೇ ಇದ್ದಾರೆ. ಹಾಗಾಗಿ ಈ ಗಾಳಿಮಾತುಗಳ ಬಗ್ಗೆ ನಂಬಿಕೆ ಇಲ್ಲ, ಅದೆಲ್ಲ ಸುಳ್ಳು' ಎಂದಿದ್ದಾರೆ.
'ಆಗ ಮಾಧ್ಯಮಗಳಲ್ಲಿ ಕೂಡ ಸುಳ್ಳುಸುದ್ದಿಗಳು ಪ್ರಸಾರವಾಗಿತ್ತು. ಆ ಸಮಯದಲ್ಲಿ ನನಗೆ ತುಂಬಾ ನೋವಾಯ್ತು. ಆ ಫ್ಲೈಓವರ್ ಮೇಲೆ ಅದೂ ಇದೂ, ಸೌಂದರ್ಯ ಆತ್ಮ ಅಲೆದಾಡುತ್ತಿದೆ ಎಂದೆಲ್ಲ ಹೇಳಿದ್ದರು. ಅದನ್ನು ಕೇಳಿ ನನಗೆ ನಿಜಕ್ಕೂ ನೋವಾಗಿತ್ತು. ಇವರಿಗೆಲ್ಲ ಈ ರೀತಿ ಹೇಳಲು ಮನಸ್ಸಾದರೂ ಹೇಗೆ ಬರುತ್ತೆ ಎಂದು ಬೇಸರಗೊಂಡಿದ್ದೆ. ಫ್ಲೈ ಓವರ್ ಮೇಲೆ ಆತ್ಮ ಇದೆ ಅನ್ನೋದೆಲ್ಲ ಸುಳ್ಳು' ಎಂದು ಸೌಂದರ್ಯ ಅತ್ತಿಗೆ ನಿರ್ಮಲಾ ತಳ್ಳಿ ಹಾಕಿದ್ದಾರೆ.











Click it and Unblock the Notifications