ಗಂಡಸು ಯಾವಾಗ ಅತ್ಯಾಚಾರ ಮಾಡ್ತಾನೋ ತಿಳಿಯಲ್ಲ, ಹಾಗಂತ ಎಲ್ಲರನ್ನ ಜೈಲಿಗೆ ಹಾಕ್ತೀರಾ? ನಟಿ ರಮ್ಯಾ
ಬೀದಿ ನಾಯಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕಚ್ಚುವ ಮನಸ್ಥಿತಿಯಲ್ಲಿರುವ ನಾಯಿಯ ಮನಸ್ಸನ್ನು ಓದಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್ ನಟಿ ರಮ್ಯಾ ಅವರು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ. "ಮನುಷ್ಯನ ಮನಸ್ಸನ್ನೂ ಓದಲು ಸಾಧ್ಯವಿಲ್ಲ. ಅವನು ಯಾವಾಗ ಅತ್ಯಾಚಾರ ಅಥವಾ ಕೊಲೆ ಮಾಡುತ್ತಾನೆಂದು ತಿಳಿಯುವುದಿಲ್ಲ. ಆದ್ದರಿಂದ ಎಲ್ಲ ಪುರುಷರನ್ನು ಜೈಲಿಗೆ ಹಾಕಬೇಕೇ?" ಎಂದು ರಮ್ಯಾ ಖಾರವಾಗಿ ಪ್ರಶ್ನಿಸಿದ್ದಾರೆ.
ಸುಪ್ರೀಂಕೋರ್ಟ್‌ನಲ್ಲಿ ಬೀದಿ ನಾಯಿಗಳ ಪ್ರಕರಣ ಕುರಿತು ಸಲ್ಲಿಕೆಯಾಗಿದ್ದ ಮಧ್ಯಂತರ ಅರ್ಜಿಗಳ ವಿಚಾರಣೆ ವೇಳೆ ಹೆದ್ದಾರಿಗಳಲ್ಲಿ ಪ್ರಾಣಿಗಳ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುವಂತೆ ತ್ರಿಸದಸ್ಯ ಪೀಠವು ಸೂಚಿಸಿದೆ. ಅಲ್ಲದೆ ಪೀಠವು ಪ್ರಾಣಿಯು ಕಚ್ಚಬೇಕೋ ಬೇಡವೋ ಎಂಬ ಮನಸ್ಥಿತಿಯಲ್ಲಿರುವಾಗ ಅದರ ಮನಸ್ಸನ್ನು ಯಾರೂ ಓದಲು ಸಾಧ್ಯವಿಲ್ಲ ಎಂದು ಹೇಳಿತು. ಜೊತೆಗೆ ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮ ಎಂದು ಅಭಿಪ್ರಾಯಪಟ್ಟಿತು.

'ಮನುಷ್ಯರ ಮನಸ್ಥಿತಿಯೂ ಅರ್ಥವಾಗಲ್ಲ'
ಇದರ ಬೆನ್ನಲ್ಲೇ ನಟಿ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ. ಬೀದಿನಾಯಿಗಳ ಮನಸ್ಥಿತಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಸುಪ್ರೀಂಕೋರ್ಟ್ ಹೇಳಿಕೆ ಉಲ್ಲೇಖಿಸಿ, ಅದರಂತೆ ಮನುಷ್ಯರ ಮನಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ, ಅವನು ಯಾವಾಗ ಯಾವಾಗ ಅತ್ಯಾಚಾರ ಅಥವಾ ಕೊಲೆ ಮಾಡುತ್ತಾನೆ ಎಂದು ಗೊತ್ತಿರುವುದಿಲ್ಲ. ಆದ್ದರಿಂದ ಎಲ್ಲ ಪುರುಷರನ್ನು ಜೈಲಿಗೆ ಕಳಿಸಬೇಕೇ? ಎಂದು ಪ್ರಶ್ನಿಸಿದ್ದಾರೆ.
ಸರ್ಕಾರವು ಎಬಿಸಿ ನಿಯಮಗಳನ್ನು ಜಾರಿಗೆ ತರುವಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಕಾರಣಕ್ಕಾಗಿ, ಸಾಮಾನ್ಯ ಜನರು ಬೀದಿ ನಾಯಿಗಳಿಂದ ತೊಂದರೆ ಅನುಭವಿಸಬೇಕೇ? ಎಂದು ಪೀಠ ಪ್ರಶ್ನಿಸಿದೆ. ಅಲ್ಲದೆ ವಿಚಾರಣೆಯನ್ನು ಮುಂದೂಡಿದೆ. ನಾಯಿಗಳನ್ನು ವಾಪಸ್ ಬಿಟ್ಟಾಗ ಕಚ್ಚದಂತೆ ಅವುಗಳನ್ನು ತಡೆಯುವುದರಲ್ಲಿ ಲೋಪವಿದೆ. ನಾಯಿ ಯಾರನ್ನಾದರೂ ಕಚ್ಚಿ ಬೆನ್ನಟ್ಟುವುದು ಮಾತ್ರವಲ್ಲ, ಅಪಘಾತ ಸಂಭವಿಸಬಹುದು. ಜನ ರಸ್ತೆಯಲ್ಲಿರುವಾಗ ಅದು ಒಂದು ಸಮಸ್ಯೆಯಾಗಿದೆ. ತಡೆಗಟ್ಟುವಿಕೆಯು ಯಾವಾಗಲೂ ಚಿಕಿತ್ಸೆಗಿಂತ ಉತ್ತಮ. ರಸ್ತೆಗಳು ಸ್ವಚ್ಛವಾಗಿರಬೇಕು ಮತ್ತು ನಾಯಿಗಳಿಂದ ಮುಕ್ತವಾಗಿರಬೇಕು. ಅವು ಕಚ್ಚದೆ ಇರಬಹುದು, ಆದರೆ ಅವು ಇನ್ನೂ ಅಪಘಾತಗಳಿಗೆ ಕಾರಣವಾಗುತ್ತವೆ" ಎಂದು ಸುಪ್ರೀಂಕೋರ್ಟ್ ಹೇಳಿದೆ.
ಈ ಹಿಂದೆಯೂ ದೆಹಲಿಯಲ್ಲಿ ಬೀದಿ ನಾಯಿಗಳ ಪ್ರಕರಣ ಬಗ್ಗೆ ಮಾತನಾಡಿದ್ದ ರಮ್ಯಾ, ದೆಹಲಿ - ಎನ್‌ಸಿಆರ್‌ನ ಬೀದಿಗಳಿಂದ ಬೀದಿ ನಾಯಿಗಳನ್ನು ಪ್ರಾಣಿಗಳ ಶೆಲ್ಟರ್ ಇರುವ ಪ್ರದೇಶಕ್ಕೆ ಸ್ಥಳಾಂತರಿಸುವ ವಿಷಯದ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪಿನ ಪ್ರತಿಯನ್ನು ಹಂಚಿಕೊಂಡಿದ್ದರು.
ಇದೀಗ ಬೀದಿ ನಾಯಿಗಳ ನಿಯಂತ್ರಣ, ಅವುಗಳಿಂದಾಗುವ ಅಪಾಯ ಮತ್ತು ಮಾನವ ಸುರಕ್ಷತೆ ಕುರಿತಾಗಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮಾಡಿದ ಹೇಳಿಕೆಯನ್ನು ಉಲ್ಲೇಖಿಸಿ, ರಮ್ಯಾ ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿದ್ದಾರೆ. ನಾಯಿಯ ವರ್ತನೆಯನ್ನು ಮುಂಚಿತವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಕಠಿಣ ಕ್ರಮಗಳು ನ್ಯಾಯಸಮ್ಮತವೇ ಎಂಬ ಪ್ರಶ್ನೆಯನ್ನು ಅವರು ತಮ್ಮ ಹೇಳಿಕೆಯ ಮೂಲಕ ಎತ್ತಿದ್ದಾರೆ. ನಟಿ ರಮ್ಯಾ ಅವರ ಈ ಪ್ರತಿಕ್ರಿಯೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.












Click it and Unblock the Notifications