Divya Suresh Accident: ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ: ಹಿಟ್ & ರನ್ ಬಗ್ಗೆ ದಿವ್ಯಾ ಸುರೇಶ್ ಏನಂದ್ರು?
ನಟಿ ಹಾಗೂ ಬಿಗ್‌ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಅವರ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿ ತೆರಳುತ್ತಿದ್ದವರು ಗಂಭೀರ ಗಾಯಗೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದಿವ್ಯಾ ಸುರೇಶ್ ವಿರುದ್ಧ ಪ್ರಕರಣ ಕೂಡ ದಾಖಲಾಗಿದೆ. ದಿವ್ಯಾ ಅವರ ಕಾರು ಅಪಘಾತವಾದರೂ ಬೈಕ್‌ನಲ್ಲಿ ಬಿದ್ದವರನ್ನು ನೋಡದೆ ಅಲ್ಲಿಂದ ಪರಾರಿಯಾಗಿದ್ದರು ಎಂಬ ಆರೋಪ ಕೇಳಿಬಂದಿತ್ತು. ಇದಕ್ಕೆ ವಿಡಿಯೋ ಮೂಲಕ ದಿವ್ಯಾ ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ನಟಿ ದಿವ್ಯಾ ಸುರೇಶ್ ತಮ್ಮ ಕಾರಿನಲ್ಲಿ ಹಿಟ್ ಅಂಡ್ ರನ್ ಮಾಡಿ ಪರಾರಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಬ್ಯಾಟರಾಯನಪುರದಲ್ಲಿ ದಿವ್ಯಾ ಸುರೇಶ್ ಕಾರನ್ನು ವೇಗವಾಗಿ ಚಾಲನೆ ಮಾಡಿ ಬೈಕ್‌ಗೆ ಡಿಕ್ಕಿ ಹೊಡೆದು, ಬಳಿಕ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ ಎಂದು ಹೇಳಲಾಗಿದೆ. ಬೈಕ್‌ನಲ್ಲಿದ್ದ ಮೂವರೂ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಈ ಪೈಕಿ ಒಬ್ಬರಿಗೆ ಕಾಲಿನ ಮಂಡಿಚಿಪ್ಪು ಮುರಿದಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಘಾತ ಮಾಡಿ ದಿವ್ಯಾ ಪರಾರಿಯಾಗಿದ್ದರು ಎಂದು ಹೇಳಲಾಗಿತ್ತು.

ಕಾನೂನಿನ ಮುಂದೆ ಎಲ್ಲ ಸಮಾನರು
ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪ್ರಕರಣ ತನಿಖೆಯಲ್ಲಿದೆ. ಈ ಬಗ್ಗೆ ನಟಿ ವಿಡಿಯೋ ಮೂಲಕ ಅಸಲಿ ವಿಚಾರ ತಿಳಿಸಿದ್ದಾರೆ. "ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಕಾನೂನಿನ ಮುಂದೆ ಎಲ್ಲರೂ ಸಮಾನರು. ತಪ್ಪು ಯಾರೇ ಮಾಡಿರಲಿ, ಹೇಗೇ ಮಾಡಿರಲಿ, ತಪ್ಪು ಮಾಡಿದವರಿಗೆ ಶಿಕ್ಷೆ ಆಗೇ ಆಗುತ್ತೆ. ಇದನ್ನ ಹೇಳಬೇಕು ಅನಿಸಿತು, ಹೇಳಿದ್ದೀನಿ" ಎಂದು ದಿವ್ಯಾ ವಿಡಿಯೋ ಹಂಚಿಕೊಂಡಿದ್ದಾರೆ.
ಪೊಲೀಸರು ಹೇಳಿದ್ದೇನು?
ಅಕ್ಟೋಬರ್ 4ರಂದು ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕಪ್ಪು ಬಣ್ಣದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯ ಮೂರು ದಿನಗಳ ನಂತರ ಸಂತ್ರಸ್ತರ ಕುಟುಂಬ ದೂರು ದಾಖಲಿಸಿದ್ದು, ಸೆಕ್ಷನ್ 181 ಮತ್ತು 125 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಬೆಂಗಳೂರು ಪಶ್ಚಿಮ ಸಂಚಾರ ವಿಭಾಗದ ಡಿಸಿಪಿ ಅನೂಪ್ ಎ.ಶೆಟ್ಟಿ ಮಾಹಿತಿ ನೀಡಿದ್ದಾರೆ.
ದೂರಿನ ಪ್ರಕಾರ ಬೈಕ್‌ನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಕಾರು ಕ್ರಾಸಿಂಗ್ ಬಳಿ ಇದ್ದಕ್ಕಿದ್ದಂತೆ ಅವರ ಮೇಲೆ ಡಿಕ್ಕಿ ಹೊಡೆದಿದೆ. ತನಿಖೆಯಲ್ಲಿ ಕಾರು ಚಾಲಕಿ ನಟಿ ದಿವ್ಯಾ ಸುರೇಶ್ ಎಂದು ತಿಳಿದುಬಂದಿದೆ. ನಾವು ಕಾರನ್ನು ವಶಪಡಿಸಿಕೊಂಡಿದ್ದೇವೆ. ತನಿಖೆಯ ಪ್ರಕಾರ ಪ್ರಾಥಮಿಕವಾಗಿ ಬೈಕ್ ಸವಾರರು ತ್ರಿಬಲ್ ರೈಡಿಂಗ್ ಮಾಡಿದ್ದು, ಅತಿ ವೇಗದಲ್ಲಿ ಚಾಲನೆ ಮಾಡುತ್ತಿದ್ದರು ಎಂದು ತೋರುತ್ತದೆ. ಮುಂದಿನ ತನಿಖೆಯಲ್ಲಿ ನಿಖರವಾದ ಕಾರಣ ತಿಳಿಯಲಿದೆ ಎಂದು ಹೇಳಿದ್ದಾರೆ.












Click it and Unblock the Notifications