'ಸಿನಿಮಾರಂಗ ಅಂದ್ಮೇಲೆ ಅದು ಇದ್ದೇ ಇರುತ್ತೆ..' ನಟಿ ಭಾವನಾ ಮಾತಿನ ಅರ್ಥವೇನು?
ಮಲಯಾಳಂ ಸಿನಿಮಾ ರಂಗದಲ್ಲಿ ನಟಿಯರಿಗೆ ಲೈಂಗಿಕ ದೌರ್ಜನ್ಯ ಕುರಿತಂತೆ ವರದಿ ಸಲ್ಲಿಸಿದ್ದ ಹೇಮಾ ಸಮಿತಿ ಮಾದರಿಯಲ್ಲಿ ಸ್ಯಾಂಡಲ್‌ವುಡ್‌ಗೂ ಒಂದು ಸಮಿತಿ ರಚಿಸಬೇಕು ಎಂದು ಸಿನಿರಂಗದ ಹಲವರು ಮನವಿ ಮಾಡಿದ್ದರು. ಇದೀಗ ನಮ್ಮ ಸ್ಯಾಂಡಲ್‌ವುಡ್‌ಗೆ ಅಂತಹ ಕಮಿಟಿ ಬೇಡ ಎನ್ನುವ ಕೂಗು ಕಲಾವಿದರಿಂದಲೇ ಕೇಳಿ ಬಂದಿದೆ.
ಕನ್ನಡ ಚಿತ್ರರಂಗದ ನಟಿ ಭಾವನಾ ರಾಮಣ್ಣ ಅವರು ಸಮಿತಿ ರಚನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇಂದು ಫಿಲ್ಮ್ ಚೇಂಬರ್‌ನಲ್ಲಿ ನಡೆದ ಕಲಾವಿದರ ಸಭೆಯಲ್ಲಿ ನಟಿ ಭಾವನಾ ಈ ರೀತಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.

'ಹೆಣ್ಣು ಅಂದಾಗ ಕೆಲವು ಸಮಸ್ಯೆಗಳು ಬರುವುದು ಸಹಜ. ಇಂಡಸ್ಟ್ರಿ ಅಂದ ಮೇಲೆ ಅದು ಇದ್ದೇ ಇರುತ್ತದೆ. ಈಗೆಲ್ಲ 100 ಮದುವೆಗಳಲ್ಲಿ 10 ಮದುವೆ ಉಳಿದರೆ ಅದೇ ಹೆಚ್ಚು. ಒಂದು ವೇಳೆ ನಮ್ಮ ಕನ್ನಡ ಚಿತ್ರರಂಗದಲ್ಲೂ ಆ ರೀತಿ ಕೆಟ್ಟದ್ದು ಇದೆ ಎನ್ನುವುದಾದರೆ, ಅಲ್ಲಿ ಕೆಲಸ ಮಾಡಲು ಹೋಗಬೇಡಿ. ಕಾಸ್ಟಿಂಗ್ ಕೌಚ್‌ನ ಕೂಗು ನಮ್ಮ ಇಂಡಸ್ಟ್ರಿಯಲ್ಲಿ ಕೇಳಿ ಬಂದಿಲ್ಲ' ಎಂದು ನಟಿ ಭಾವನಾ ಹೇಳಿದ್ದಾರೆ.
'ಫೈರ್' ಸಂಸ್ಥೆ ವಿರುದ್ಧವೂ ಗುಡುಗಿರುವ ಭಾವನಾ, 'ಕೆಲವರು ಸಮಾನ ಮನಸ್ಕರು ಗುಂಪು ಕಟ್ಟಿಕೊಂಡು, ಅದಕ್ಕೆ ಫೈರ್ ಸಂಸ್ಥೆ ಎಂದು ಬಿಂಬಿಸಿದ್ದಾರೆ. ಹೆಣ್ಣುಮಕ್ಕಳಿಗೆ ಏನಾದರೂ ಸಮಸ್ಯೆಗಳಾದರೆ ಅದಕ್ಕೆಂದೇ ಫಿಲ್ಮ್ ಚೇಂಬರ್ ಇದೆ. ಕಲಾವಿದರು ಹಾಗು ನಿರ್ಮಾಪಕರ ಸಂಘಗಳೂ ಇವೆ. ಅಲ್ಲಿ ಹೋಗಿ ತಮ್ಮ ಸಮಸ್ಯೆ ಹೇಳಿಕೊಳ್ಳಬಹುದು. ಅದಕ್ಕಾಗಿ ಹೊಸ ಸಂಘ ಮಾಡಬೇಕಾದ ಅಗತ್ಯವಿಲ್ಲ' ಎಂದು ಫೈರ್ ವಿರುದ್ಧ ಮಾತನಾಡಿದ್ದಾರೆ.

'ಆ ಫೈರ್ ಸಂಸ್ಥೆಯವರ ಮಾತನ್ನು ಕೇಳಬೇಡಿ. ಹೇಮಾ ಸಮಿತಿ ಮಾದರಿ ನಮ್ಮ ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಕಾಗಿಲ್ಲ. ಅಂತಹ ಕೂಗು ನಮ್ಮ ಚಿತ್ರರಂಗದಲ್ಲಿ ಕೇಳಿಯೂ ಇಲ್ಲ. ಕನ್ನಡ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ನಡೆಯುತ್ತಿಲ್ಲ, ಹಾಗಾಗಿ ಇಲ್ಲಿ ಸಮಿತಿಯ ಅಗತ್ಯವಿಲ್ಲ' ಎಂದು ನಟಿ ಭಾವನಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಏನಿದು ಸಮಿತಿ ಕೂಗು?: ನಟಿಯರಿಗೆ ವಿರುದ್ಧ ಲೈಂಗಿಕ ದೌರ್ಜನ್ಯ ನೀಡಲಾಗುತ್ತಿದೆಯೇ? ಎಂಬ ವಿಚಾರವಾಗಿ ಮಲೆಯಾಳಂ ಚಿತ್ರರಂಗದಲ್ಲಿ ರಚನೆಯಾಗಿದ್ದ ಹೇಮಾ ಕಮಿಟಿ ಮಾದರಿಯಲ್ಲೇ ಸ್ಯಾಂಡಲ್‌ವುಡ್‌ಗೂ ಒಂದು ಕಮಿಟಿ ರಚಿಸಬೇಕು ಎನ್ನುವ ಕೂಗು ಜೋರಾಗಿ ಎದ್ದಿದೆ. ಈ ಬಗ್ಗೆ ನಟ-ನಟಿಯರು ಸೇರಿ ನೂರಾರು ಮಂದಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಕೂಡ ಮಾಡಿದ್ದಾರೆ. ಮತ್ತೊಂದೆಡೆ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಸಭೆ ನಡೆಸಲು ನಿರ್ಧರಿಸಿತ್ತು.
ಚಿತ್ರರಂಗದಲ್ಲಿ ನಟಿಯರು ಎದುರಿಸುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ಅಧ್ಯಯನಕ್ಕೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸುವಂತೆ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (ಫೈರ್) ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿತ್ತು. ಬಳಿಕ ಚಿತ್ರರಂಗದ ಎಲ್ಲರನ್ನೂ ಒಟ್ಟುಗೂಡಿಸಿ ಸಭೆ ನಡೆಸುವಂತೆ ರಾಜ್ಯ ಮಹಿಳಾ ಆಯೋಗ, ಚಲನಚಿತ್ರ ವಾಣಿಜ್ಯ ಮಂಡಳಿಗೆ ಸೂಚಿಸಿತ್ತು.
ಸ್ಯಾಂಡಲ್‌ವುಡ್‌ನಲ್ಲಿ ನಟಿಯರು ಎದುರಿಸುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ಅಧ್ಯಯನ ಮಾಡಿ ವರದಿ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 16ರಂದು (ಇಂದು) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಟಿಯರು ಹಾಗೂ ಚಿತ್ರರಂಗದ ಹಿರಿಯರೆಲ್ಲ ಸೇರಿ ಸಭೆ ನಡೆಸಲು ನಿರ್ಧರಿಸಿದ್ದರು.
ಅದರಂತೆ ಇಂದು ಫಿಲ್ಮ್ ಚೇಂಬರ್‌ನಲ್ಲಿ ಸಭೆ ನಡೆದಿದ್ದು, ಈ ವೇಳೆ ಸಮಿತಿಗೆ ಪರ ಮತ್ತು ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿವೆ. ಸಭೆಯಲ್ಲಿ ಚೇಂಬರ್ ಅಧ್ಯಕ್ಷರಾದ ಎನ್.ಎಂ.ಸುರೇಶ್, ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಸಾರಾ ಗೋವಿಂದ್ ಹಾಗೂ ಚಿತ್ರರಂಗದ ನಟಿಯರು ಹಾಜರಿದ್ದರು ಎನ್ನಲಾಗಿದೆ.












Click it and Unblock the Notifications