ಮಗು ಮಡಿಲು ಸೇರಲಿಲ್ಲ, ಆ ನೋವು ಎಂದಿಗೂ ಕಾಡುತ್ತೆ: ಹೆರಿಗೆ ಬಳಿಕ ನಟಿ ಭಾವನಾ ಪ್ರತಿಕ್ರಿಯೆ
ಸ್ಯಾಂಡಲ್‌ವುಡ್ ನಟಿ ಭಾವನಾ ರಾಮಣ್ಣ ಅವರು 40ನೇ ವಯಸ್ಸಿನಲ್ಲಿ ಐವಿಎಫ್ ಚಿಕಿತ್ಸೆ ಮೂಲಕ ಅವಳಿ ಮಕ್ಕಳಿಗೆ ತಾಯಿಯಾಗುವ ಕನಸು ಕಂಡಿದ್ದರು. ಅದ್ಧೂರಿ ಸೀಮಂತ ಕೂಡ ಮಾಡಿಕೊಂಡಿದ್ದ ಭಾವನಾ ಅವರಿಗೆ ಇತ್ತೀಚೆಗಷ್ಟೇ ಹೆರಿಗೆಯಾಗಿತ್ತು. ಆದರೆ ಅವಳಿ ಮಕ್ಕಳಲ್ಲಿ ಒಂದು ಮಗು ಜೀವ ಬಿಟ್ಟಿತ್ತು. ಮಗು ಕಳೆದುಕೊಂಡ ನೋವಿನಿಂದ ಭಾವನಾ ಅವರು ಇನ್ನೂ ಹೊರಬಂದಿಲ್ಲ. ಹೆರಿಗೆ ದಿನ ಅಸಲಿಗೆ ನಿಜಕ್ಕೂ ಏನಾಯ್ತು? ಆ ನೋವಿನ ಅನುಭವವನ್ನು ಹೇಗೆ ಎದುರಿಸಿದರು ಎಂದು ಭಾವನಾ ಪ್ರತಿಕ್ರಿಯಿಸಿದ್ದಾರೆ.
́́'ನನ್ನ ಪ್ರೆಗ್ನೆನ್ಸಿ ಪಯಣ ತುಂಬಾ ಚೆನ್ನಾಗಿತ್ತು. ಸೀಮಂತ ಮುಗಿದ ಮೇಲೆ ನನಗೆ ಹೆಚ್ಚು ಹೊತ್ತು ಕೂರಲು ಆಗುತ್ತಿರಲಿಲ್ಲ. ಬಳಿಕ ತುಸು ರಕ್ತಸ್ರಾವ ಶುರುವಾಗಿತ್ತು. ನಾನು ಚಿಕಿತ್ಸೆ ಪಡೆಯುವ ಆಸ್ಪತ್ರೆ ಕೂಡ ದೂರವೇ ಇತ್ತು. ಕುಟುಂಬದವರ ಸಲಹೆ ಮೇರೆಗೆ ಹತ್ತಿರದ ಆಸ್ಪತ್ರೆಗೆ ಹೋದೆವು. ಅಲ್ಲಿನ ವೈದ್ಯರು ನನ್ನ ನೋಡಿದ ಕೂಡಲೇ ಭಾವನಾ ನೀವು ಟೈಮ್ ಬಾಂಬ್ ಮೇಲೆ ಕೂತಿದ್ದೀರಿ, ಮುಂದಿನ ಕೆಲ ಗಂಟೆ ತುಂಬಾ ಕ್ರಿಟಿಕಲ್ ಎಂದುಬಿಟ್ಟರು' ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಭಾವನಾ ವಿವರಿಸಿದ್ದಾರೆ.

ಮಗುವಿನ ಹೃದಯ ಬಡಿತ ಇಳಿದಿತ್ತು
'ವೈದ್ಯರು ತುರ್ತಾಗಿ ಕೆಲ ಪರೀಕ್ಷೆಗಳನ್ನ ಮಾಡಿದ್ರು. ಮಗುವಿಗೆ ರಕ್ತ ಪೂರೈಸುವ ನಾಳವು ರಿವರ್ಸ್ ಆಗಿದೆ ಎಂದು ತಿಳಿಯಿತು. ಆಗಲೇ ಒಂದು ಮಗುವಿನ ಹೃದಯ ಬಡಿತ ಅರ್ಧ ಇಳಿದಿತ್ತು. ಇನ್ನೊಂದು ಮಗು ಆರೋಗ್ಯಕರವಾಗಿತ್ತು. ಆಗ ನಾವೆಲ್ಲ ಮಗುವಿನ ಆರೋಗ್ಯ ಸುಧಾರಿಸಲಿ ಎಂದು ಪ್ರಾರ್ಥನೆ ಮಾಡಿಕೊಂಡೆವು. ಅಂತಿಮವಾಗಿ ತುರ್ತಾಗಿ ಆಪರೇಷನ್ ಮಾಡಬೇಕಾಯಿತು' ಎಂದು ಭಾವನಾ ತಮ್ಮ ಅನುಭವ ಬಿಚ್ಚಿಟ್ಟಿದ್ದಾರೆ.
'ಆಪರೇಷನ್ ಥಿಯೇಟರ್‌ನ ಮಾನಿಟರ್‌ನಲ್ಲಿ ಒಂದು ಮಗುವಿನ ಹೃದಯ ಬಡಿತ ಕಡಿಮೆಯಾಗುತ್ತಿರುವುದು ನೋಡಿದೆ. ಆಗ ನನಗೆ ಆದ ಶಾಕ್ ವಿವರಿಸಲು ಸಾಧ್ಯವಿಲ್ಲ. ಕೊನೆಗೆ ವೈದ್ಯರು ಒಂದು ಮಗುವನ್ನ ಉಳಿಸಲು ಸಾಧ್ಯವಾಗಲಿಲ್ಲ ಅಂದ್ರು. ಹಾಗಾಗಿ ಇನ್ನೊಂದು ಮಗುವಿಗಾಗಿ ಕಾಯುವ ಪರಿಸ್ಥಿತಿ ಇರಲಿಲ್ಲ. ಇದೇ ಕಾರಣಕ್ಕೆ 32 ವಾರಕ್ಕೇ ಆಪರೇಷನ್‌ಗೆ ಒಳಗಾದೆ' ಎಂದಿದ್ದಾರೆ.

'ನಾನು ಆ ದಿನ ಅವಳಿ ಮಕ್ಕಳನ್ನು ಸ್ವಾಗತಿಸಲು ಸಜ್ಜಾಗಿದ್ದೆ. ಆದರೆ ದುರದೃಷ್ಟವಶಾತ್ ಒಂದು ಮಗುವಿನ ಜೀವ ಉಳಿಯಲಿಲ್ಲ. ಆ ನೋವು ಸಹಿಸುವುದು ನನಗೆ ಇಂದಿಗೂ ನನಗೆ ಕಷ್ಟವಾಗುತ್ತಿದೆ. ಇಬ್ಬರೂ ಹೆಣ್ಣುಮಕ್ಕಳೇ ಎನ್ನುವ ಖುಷಿ ಇತ್ತು. ಆದರೆ ಇನ್ನೊಂದು ಮಗು ನನ್ನ ಮಡಿಲು ಸೇರಲಿಲ್ಲ ಎನ್ನುವ ನೋವು ಎಂದಿಗೂ ನನ್ನನ್ನು ಕಾಡುತ್ತೆ' ಎಂದು ಭಾವುಕರಾಗಿದ್ದಾರೆ.
'ಮಗಳಿಗೆ ಅಜ್ಜಿಯ ಹೆಸರಿಟ್ಟಿದ್ದೇನೆ'
'ಅವಳಿ ಮಕ್ಕಳ ನಿರೀಕ್ಷೆಯಲ್ಲೇ ಇದ್ದೆ. ಒಂದು ಮಗು ದೂರವಾಗಿದ್ದಕ್ಕೆ ಅಳಬೇಕೋ? ಮತ್ತೊಂದು ಮಗು ಆರೋಗ್ಯವಾಗಿರುವುದಕ್ಕೆ ಖುಷಿ ಪಡಬೇಕೋ ಗೊತ್ತಾಗುತ್ತಿಲ್ಲ. ಮಗುವಿನ ನಿಗಾ ಕಾರಣಕ್ಕೆ ನಾನು ಹಲವು ದಿನ ಆಸ್ಪತ್ರೆಯಲ್ಲೇ ಇದ್ದೆ. ನನ್ನ ಮುದ್ದಿನ ಮಗಳಿಗೆ 'ರುಕ್ಮಿಣಿ' ಎಂಬ ಹೆಸರಿಟ್ಟಿದ್ದೇನೆ. ಇದು ನನ್ನ ಅಜ್ಜಿಯ ಹೆಸರು. ಮಗಳು ರುಕ್ಮಿಣಿ ಭಾವನಾ ರಾಮಣ್ಣ ಜೊತೆಗೆ ನಾನು ಮನೆಗೆ ವಾಪಸ್ ಆಗಿದ್ದೇನೆ' ಎಂದು ಭಾವನಾ ಹೇಳಿದ್ದಾರೆ.












Click it and Unblock the Notifications