ದೇವಸ್ಥಾನದಲ್ಲಿ ಭಿಕ್ಷೆ ಬೇಡಿದ ಬಿಗ್‌ಬಾಸ್ ಖ್ಯಾತಿಯ ಕನ್ನಡ ನಟಿ
ಕನ್ನಡದ ಖ್ಯಾತ ನಟಿ ಹಾಗೂ ಬಿಗ್‌ಬಾಸ್ ಸ್ಪರ್ಧಿ ಭಿಕ್ಷಾಟನೆ ಮಾಡಿದ್ದಾರೆ. ಇದನ್ನು ಕಂಡು ಅವರ ಅಭಿಮಾನಿಗಳು ಕೂಡ ಶಾಕ್ ಆಗಿದ್ದಾರೆ. ದೇವಸ್ಥಾನದಲ್ಲಿ ನಟಿ ಭಿಕ್ಷೆ ಬೇಡುತ್ತಿರುವ ವಿಡಿಯೋ ಸಂಚಲನ ಮೂಡಿಸಿದೆ. ಕಿರುತೆರೆ ಹಾಗೂ ಸ್ಯಾಂಡಲ್‌ವುಡ್ ಸಿನಿಮಾಗಳಲ್ಲಿ ನಟಿಸಿದ್ದ ಇವರು ದಿಢೀರನೆ ಭಿಕ್ಷೆ ಬೇಡಲು ಕಾರಣವೇನು? ಅವರ ಬದುಕಿನಲ್ಲಿ ನಿಜಕ್ಕೂ ಏನಾಗಿದೆ ಎಂದು ಹಲವು ಪ್ರಶ್ನೆಗಳನ್ನು ಅಭಿಮಾನಿಗಳು ಮುಂದಿಟ್ಟಿದ್ದಾರೆ. ನಟಿ ಭಿಕ್ಷೆ ಬೇಡಲು ಕಾರಣವೇನು ಎಂಬುದಕ್ಕೆ ಕಾರಣ ಕೂಡ ಇಲ್ಲಿದೆ..
ಕನ್ನಡದ ಕಿರುತೆರೆ ಹಾಗೂ ಸ್ಯಾಂಡಲ್‌ವುಡ್ ಸಿನಿಮಾಗಳಲ್ಲಿ ನಟಿಸಿರುವ ಕಾವ್ಯಾ ಶಾಸ್ತ್ರಿ (Kavya Shastri) ಅವರು ದೇವಸ್ಥಾನದಲ್ಲಿ ಭಿಕ್ಷಾಟನೆ ಮಾಡಿದ್ದಾರೆ. ಎಲ್ಲರ ಬಳಿ ಹೋಗಿ ಭಿಕ್ಷೆ ಬೇಡಿದ್ದಾರೆ. ಈ ವಿಡಿಯೋ ಅನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅವರು ಇದಕ್ಕೆ ಕಾರಣವೇನು ಎಂದೂ ವಿವರಿಸಿದ್ದಾರೆ. ಇಷ್ಟಕ್ಕೂ ನಟಿ ಈ ರೀತಿ ಭಿಕ್ಷೆ ಬೇಡಿರುವುದಕ್ಕೆ ಕಾರಣವೇನು ಗೊತ್ತಾ?

ಇತ್ತೀಚೆಗೆ ಕಾಶಿ ವಿಶ್ವನಾಥನ ಸನ್ನಿಧಿಗೆ ಭೇಟಿ ನೀಡಿದ್ದ ನಟಿ ಕಾವ್ಯಾ ಶಾಸ್ತ್ರಿ ಅವರು ಭಿಕ್ಷಾಟನೆ ಮಾಡಿ ಊಟ ಮಾಡಿದ್ದಾರೆ. ಈ ವಿಡಿಯೋ ಹಂಚಿಕೊಂಡಿರುವ ಅವರು, ತನ್ನ ಅಪ್ಪನಿಗಾಗಿ ಭಿಕ್ಷೆ ಬೇಡಿದ್ದಾಗಿ ಕಾರಣ ಕೊಟ್ಟಿದ್ದಾರೆ. "ಕೊರೋನಾ ಸಂದರ್ಭದಲ್ಲಿ ನನ್ನ ತಂದೆ ಇನ್ನೇನು ನಮ್ಮನ್ನು ಬಿಟ್ಟು ಹೋಗ್ತಾರೇನೋ ಎಂಬ ಭಯದಲ್ಲಿ ಸಿಕ್ಕ ಸಿಕ್ಕ ದೇವರಿಗೆಲ್ಲ ಹರಕೆ ಹೊತ್ತಿದ್ದೆ. ಅದರಲ್ಲಿ ಕಾಶಿ ವಿಶ್ವನಾಥನ ಹರಕೆಯೂ ಒಂದು" ಎಂದಿದ್ದಾರೆ.
"ನನ್ನ ತಂದೆಗೆ ಜೀವದ ಭಿಕ್ಷೆ ಕೊಟ್ಟರೆ, ನಿನ್ನ ಸನ್ನಿಧಾನದಲ್ಲಿ ನಾನು ಭಿಕ್ಷೆ ಬೇಡಿ ಒಂದು ಇಡೀ ದಿನದ ಊಟ ಮಾಡುತ್ತೇನೆ ಎಂದು ಹರಕೆ ಹೊತ್ತಿದ್ದೆ. ಅದನ್ನು ನೆರವೇರಿಸುವಂತಹ ಸೌಭಾಗ್ಯ ಈಗ ಕೂಡಿಬಂದಿದೆ. ಮೊನ್ನೆ ನಾನು ಕಾಶಿಗೆ ಭೇಟಿ ನೀಡಿದಾಗ ಈ ಹರಕೆ ತೀರಿಸಿದೆ" ಎಂದಿದ್ದಾರೆ.
"ಇದೇನು ಅಂಧವಿಶ್ವಾಸ ಎಂದು ನೀವು ಕೇಳಬಹುದು. ಕಷ್ಟದಲ್ಲಿದ್ದಾಗ ಏನು ಬೇಕಾದ್ರೂ ಮಾಡುವ ಪರಿಸ್ಥಿತಿಗೆ ಬಂದು ನಿಲ್ಲುತ್ತೇವೆ. ಕಷ್ಟ ನಿವಾರಣೆಗೆ ಏನನ್ನಾದರೂ ಮಾಡಲು ಸಿದ್ಧರಾಗ್ತೀವಿ. ಹಿಂದೂ ಧರ್ಮದಲ್ಲಿ ಭಿಕ್ಷಾಟನೆಗೆ ಒಂದು ಪವಿತ್ರವಾದ ಸ್ಥಾನವಿದೆ. ಭಿಕ್ಷಾಟನೆ ನಾನು, ನನ್ನದು ಎನ್ನುವ ಅಹಂಕಾರ, ಮೋಹವೆಲ್ಲವನ್ನೂ ಮರೆಸಿಬಿಡುತ್ತೆ. ಒಬ್ಬರ ಮುಂದೆ ಕೈಚಾಚಿ ಭಿಕ್ಷೆ ಬೇಡಬೇಕಾದರೆ ದುರಹಂಕಾರವೆಲ್ಲ ಕಳೆದು ಹೋಗುತ್ತೆ. ಇದೇ ಭಿಕ್ಷಾಟನೆಯ ಪಾವಿತ್ರ್ಯತೆ" ಎಂದು ಕಾವ್ಯಾ ಶಾಸ್ತ್ರಿ ಹೇಳಿದ್ದಾರೆ.
"ಭಿಕ್ಷೆ ಕೊಡುವವರು ತಮ್ಮ ಪಾಪ ಕಳೆದುಕೊಳ್ತಾರೆ. ಭಿಕ್ಷೆ ತೆಗೆದುಕೊಳ್ಳೋರು ತಮ್ಮ ಅಹಂಕಾರ ಕಳೆದುಕೊಳ್ತಾರೆ. ಈ ದುಡ್ಡು, ಹೆಸರು ಎಲ್ಲವೂ ಜೀವದ ಮುಂದೆ ಏನೇನೂ ಅಲ್ಲ. ಯಾಕಂದ್ರೆ ಈ ಜೀವನ ಅನ್ನೋದೆ ಪರಮಾತ್ಮನ ಭಿಕ್ಷೆ. ಇದನ್ನ ಯಾವತ್ತೂ ಅಹಂಕಾರದಿಂದ ಮರೀಬಾರ್ದು. ಎಲ್ಲ ಆ ದೇವರ ದಯೆಯಿಂದ ನಾನು ಇಂದು ನನ್ನ ತಂದೆ ತಾಯಿ ಜೊತೆ ಖುಷಿಯಾಗಿದ್ದೀನಿ" ಎಂದು ನಟಿ ವಿಡಿಯೋದಲ್ಲಿ ವಿವರಿಸಿದ್ದಾರೆ.
ಕಾವ್ಯಾ ಶಾಸ್ತ್ರಿ ಅವರು ಬಿಗ್‌ಬಾಸ್ ಸೀಸನ್ 4ರ ಸ್ಪರ್ಧಿಯಾಗಿದ್ದರು. ಬಳಿಕ ಇತ್ತೀಚಿನ ಸೀಸನ್‌ಗಳ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದ್ದರು. ಈ ಶೋಗಳನ್ನು ಮಕ್ಕಳಿಗೆ ತೋರಿಸಬೇಡಿ ಎನ್ನುವ ಮೂಲಕ ಸುದ್ದಿಯಾಗಿದ್ದ ಇವರು ಸೀರಿಯಲ್‌ಗಳಲ್ಲಿ ಬ್ಯುಸಿಯಾಗಿದ್ದಾರೆ.












Click it and Unblock the Notifications