ಬೇಜಾರು..ಡಿಪ್ರೆಷನ್ ಸಾಕು..ಬದಲಾಗಿದ್ದೇನೆ- ನಟಿ ಅಮೃತಾ ಅಯ್ಯಂಗಾರ್
ಸದ್ಯ ಜೀವನ ಚೆನ್ನಾಗಿದೆ. ಜೀವನ ಚೆನ್ನಾಗಿ ನಡೆಯುತ್ತಿದೆ. ಸಿನಿಮಾ ಕೆಲಸಗಳು ನಡೆಯುತ್ತಿದೆ. ಕೆಲಸದ ಬಗ್ಗೆ ಹೆಚ್ಚು ಉತ್ಸುಕಳಾಗಿದ್ದೇನೆ. ನಾನೀಗ ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದ ಮನಸ್ಥಿತಿಯಲ್ಲಿದ್ದೇನೆ ಎಂದು ಲವ್ ಮಾಕ್ಟೇಲ್, ಬಡವ ರಾಸ್ಕಲ್, ಹೊಯ್ಸಳ, ಪಾಪ್ ಕಾರ್ನ್ ಮಂಕಿ ಟೈಗರ್, ಅಬ್ಬಬ್ಬಾ, ಲವ್ ಮಾಕ್ಟೇಲ್-2 ಚಿತ್ರಗಳ ನಾಯಕಿ, ನಟಿ ಅಮೃತ ಅಯ್ಯಂಗಾರ್ ಹೇಳಿದ್ದಾರೆ.
ಗೋಲ್ಡ್ ಕ್ಲಾಸ್ ವಿತ್ ಮಯೂರ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ಅವರು, ತಲೆಕೆಡಿಸಿಕೊಂಡಿರುವುದು ಸಾಕು. ಬೇಜಾರಾಗಿರುವುದು ಸಾಕು. ಬೇಜಾರಾಗಿದ್ದರೆ ಅಲ್ಲಿಯೇ ಕುಳಿತಿರುತ್ತೇವೆ. ಈಗ ತುಂಬಾ ಕಾಂಪಿಟೇಷನ್ ಇದೆ. ಹೀಗಾಗಿ ಬೇಜಾರು ಮಾಡಿಕೊಂಡು ಡಿಪ್ರೆಷನ್‌ನಲ್ಲಿ ಕೂರಲು ಸಮಯ ಇಲ್ಲ ಎಂದು ಮನವರಿಕೆಯಾಗಿ ಮುಂದೇನು ಕೆಲಸ ಮಾಡಬೇಕು ಮುಂದಿನ ಗುರು ಏನು ಎನ್ನುವುದರ ಬಗ್ಗೆ ಆಲೋಚನೆ ಇದೆ ಎಂದರು.

ಈಗಾಗಲೇ ನಮ್ಮ ಕನ್ನಡದ ಹುಡುಗಿಯರು ತುಂಬಾ ಒಳ್ಳೊಳ್ಳೆಯ ಸಿನಿಮಾಗಳನ್ನು ಬೇರೆ ಬೇರೆ ಭಾಷೆಯಲ್ಲಿ ಮಾಡುತ್ತಿದ್ದಾರೆ. ಹೀಗಾಗಿ ಮುಂದೇನು ಮಾಡಬೇಕು ಎನ್ನುವ ಆಲೋಚನೆ ನನ್ನಲ್ಲಿದೆ. ಕೆಲಸದ ಬಗ್ಗೆ ಹೆಚ್ಚು ಉತ್ಸಾಹ ಇದೆ. ತುಂಬಾ ಪಾಸಿಟಿವ್ ಆಗಿದ್ದೇನೆ. ನಾನು ಮುಂಚೆ ಹೀಗೆ ಇರಲಿಲ್ಲ. ಈಗ ತುಂಬಾ ಪಾಸಿಟಿವ್ ಆಗಿದ್ದೇನೆ. ಕಳೆದ ಎರಡು ತಿಂಗಳಿನಿಂದ ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ನನ್ನ ಬಗ್ಗೆ ನನಗೆ ಗೊತ್ತು. ನನ್ನ ಕೆಲಸ ನಾನು ಮಾಡುಬೇಕು ಎನ್ನುವ ಮನಸ್ಥಿತಿಯಲ್ಲಿದ್ದೇನೆ ಎಂದರು.
ನನಗೆ ಮುಂಚೆ ಭಯ ಜಾಸ್ತಿ ಇತ್ತು. ಎಷ್ಟೊಂದು ಕಡೆಯಲ್ಲಿ ನನ್ನ ಧ್ವನಿ ಹೊರಗೆ ಬರುತ್ತಿಲ್ಲವೇನೋ, ನನ್ನ ಪ್ರತಿಭೆ ಆಚೆ ಬರುತ್ತಿಲ್ಲವೇನೋ, ಎಷ್ಟೊಂದು ಸರಿ ನಾನು ಮಾತನಾಡಬೇಕು ಅಂದುಕೊಂಡಾಗ ಅವರೇನೋ ತಿಳಿದುಕೊಳ್ಳುತ್ತಾರೇನೋ ಎನ್ನುವ ಭಯ ಇತ್ತು. ಹೀಗಾಗಿ ನಾನು ಎಲ್ಲಿಯೂ ಮಾತನಾಡಿಲ್ಲ. ವೃತ್ತಿ ಹಾಗೂ ವೈಯಕ್ತಿಕ ಜೀವನ ಎರಡರಲ್ಲೂ ಹಾಗೆ ಇದ್ದೇ. ಮೊದಲು ನಾನು ಎಲ್ಲಿಯೂ ಮಾತನಾಡುತ್ತಿರಲಿಲ್ಲ. ಆಮೇಲೆ ನನಗೆ ಗೊತ್ತಾಯ್ತು ನಾನು ಮಾತನಾಡಿಲ್ಲ ಅಂದರೆ ನನ್ನ ಅಭಿಪ್ರಾಯ ಹೇಗೆ ಗೊತ್ತಾಗುತ್ತದೆ ಎಂದು, ಇದನ್ನು ಜೀವನದಲ್ಲಿ ತಿದ್ದುಕೊಂಡಿದ್ದೇನೆ ಎಂದು ಹೇಳಿದರು.
ಇದರಿಂದ ನಾನು ತುಂಬಾ ತಿಳಿದುಕೊಂಡಿದ್ದೇನೆ. ಇದು ನನಗೆ ತುಂಬಾ ಬಲ ಕೊಟ್ಟಿದೆ. ಜೀವನದಲ್ಲಿ ಏನೇ ಬದಲಾವಣೆ ಆದರೂ, ಏನೇ ನಿರ್ಧಾರ ತೆಗೆದುಕೊಂಡರೂ ನಾನೇ ತೆಗೆದುಕೊಂಡ ನಿರ್ಧಾರ ಎನ್ನುವ ಹೆಮ್ಮೆ ಇದೆ. ಯಾರೋ ನನ್ನ ಮೇಲೆ ಪ್ರಭಾವ ಬೀರಿದರು. ಯಾರೋ ನನಗೆ ಇದನ್ನು ಮಾಡಬೇಡ ಎಂದರು ಎನ್ನುವುದಿಲ್ಲ. ನನ್ನ ಜೀವನದ ಈಗಿನ ನಿರ್ಧಾರಗಳನ್ನು ನಾನೇ ತೆಗೆದುಕೊಳ್ಳುತ್ತಿರುವ ತೃಪ್ತಿ ಇದೆ ಎನ್ನುವುದನ್ನು ನಟಿ ಅಮೃತ ಅಯ್ಯಂಗಾರ್ ಹೇಳಿದ್ದಾರೆ.












Click it and Unblock the Notifications