ನಟ ಯಶ್ ತಾಯಿಗೆ ಜೀವ ಬೆದರಿಕೆ, ಮನೆಗೆ ಬಂದು ಗಲಾಟೆ ಮಾಡ್ತೀನಿ ಅಂದಿದ್ಯಾರು?
ಸ್ಯಾಂಡಲ್‌ವುಡ್‌ನ ಟಾಪ್ ನಟರಲ್ಲಿ ಒಬ್ಬರಾದ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಇತ್ತೀಚೆಗಷ್ಟೇ ಪುಷ್ಪ ಅವರು ನಿರ್ಮಾಪಕಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಕೊತ್ತಲವಾಡಿ ಸಿನಿಮಾ ನಿರ್ಮಾಣ ಕೂಡ ಮಾಡಿದ್ದಾರೆ. ಅತ್ತ ಪುತ್ರ ಯಶ್ ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾಗಳ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಪುಷ್ಪ ಅವರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿರುವುದು ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಸೃಷ್ಟಿಸಿದೆ.
ಕೊತ್ತಲವಾಡಿ ಬಳಿಕ ಮತ್ತೊಂದು ಸಿನಿಮಾವನ್ನು ಪುಷ್ಪ ಅವರು ಘೋಷಿಸಿದ್ದರು. ಇದರ ನಡುವೆ ಪುಷ್ಪ ಅವರಿಗೆ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಅವರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಎಫ್‌ಐಆರ್ ಕೂಡ ದಾಖಲಾಗಿದೆ. ಪುಷ್ಪ ಅವರಿಗೆ ಯಾರಿಂದ ಜೀವ ಬೆದರಿಕೆ? ಏನಿದು ಆರೋಪ ಎನ್ನುವ ವಿವರ ಇಲ್ಲಿದೆ.

ಚಲನಚಿತ್ರ ಪ್ರಚಾರಕ ಹರೀಶ್ ಅರಸು ಮತ್ತು ಅವರ ಸಹಚರರು ಪುಷ್ಪ ಅವರಿಗೆ ಭಾರೀ ಪ್ರಮಾಣದ ವಂಚನೆ, ಹಣ ದುರುಪಯೋಗ ಹಾಗೂ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಪೊಲೀಸರ ಮೊರೆ ಹೋಗಿದ್ದಾರೆ. ಈ ಸಂಬಂಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹರೀಶ್ ಅರಸು, ಮನು, ನಿತಿನ್, ಮಹೇಶ್ ಗುರು, ಸ್ವರ್ಣ ಲತಾ ಎಂಬುವವರ ಮೇಲೆ ಎಫ್‌ಐಆರ್ ಕೂಡ ದಾಖಲಾಗಿದೆ.
ಏನಿದು ಆರೋಪ?
ಕೊತ್ತಲವಾಡಿ ಸಿನಿಮಾ ಪ್ರಚಾರ ಮಾಡಲು ಹಣ ಪಡೆದು ಅಪಪ್ರಚಾರ ಮಾಡಿದ್ದಾರೆ ಎಂದು ಪುಷ್ಪ ಅವರು ದೂರು ನೀಡಿದ್ದಾರೆ. ಸದ್ಯ ಆರೋಪಿಗಳಿಗೆ ಹೈಗ್ರೌಂಡ್ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ತಮ್ಮ ಚಿತ್ರದ ಪ್ರಚಾರದ ಜವಾಬ್ದಾರಿಯನ್ನು ಹರೀಶ್ ಅವರಿಗೆ ನೀಡಿದ್ದೆ. ಹರೀಶ್ ತನ್ನಿಂದ 64 ಲಕ್ಷ ರೂಪಾಯಿ ಪಡೆದಿದ್ದಾರೆ. ಇದರಲ್ಲಿ ಜಾಹೀರಾತಿಗಾಗಿ 4 ಲಕ್ಷ ರೂಪಾಯಿ ನೀಡಲಾಗಿತ್ತು. ಆದರೆ ಪ್ರಚಾರ ಸರಿಯಾಗಿ ಮಾಡಲಿಲ್ಲ. ಹರೀಶ್ ಪ್ರಚಾರ ಮಾಡದ ಕಾರಣ ನಟರೇ ತಮ್ಮ ಸ್ವಂತ ಹಣ ಖರ್ಚು ಮಾಡಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪುಷ್ಪ ಅವರು ಕೇಳಿದಾಗ ಹರೀಶ್ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಹಣ ವಾಪಸ್ ನೀಡುವಂತೆ ಕೇಳಿದ್ದಾರೆ. ಇದಾದ ನಂತರ ಹರೀಶ್ ಈ ಸಿನಿಮಾ ಬಗ್ಗೆ ನೆಗೆಟಿವ್ ಪ್ರಚಾರ ಮಾಡುತ್ತಿದ್ದಾರೆ ಎಂಬುದು ಕೂಡ ತಿಳಿಯಿತು. ಸೋಷಿಯಲ್ ಮೀಡಿಯಾಗಳಲ್ಲಿ ತನ್ನ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡುತ್ತೇನೆ ಹಾಗು ಮನೆಗೆ ಬಂದು ಗಲಾಟೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಹರೀಶ್ ಮಾತು ಕೇಳಿ ಕೆಲವರು ಆನ್‌ಲೈನ್‌ನಲ್ಲಿ ತನ್ನ ಬಗ್ಗೆ ಅವಹೇಳನಕಾರಿ ಪೋಸ್ಟ್ ಕೂಡ ಹಾಕಿದ್ದಾರೆ. ಈ ಮೂಲಕ ನನಗೆ ಮಾನಹಾನಿ ಮಾಡಿದ್ದಾರೆ. ಅಲ್ಲದೆ ನನಗೆ ಹಲವರಿಂದ ಜೀವ ಬೆದರಿಕೆ ಕರೆಗಳು ಕೂಡ ಬಂದಿವೆ. ವಂಚನೆ, ಬೆದರಿಕೆ, ಮಾನನಷ್ಟ ಮತ್ತು ಕ್ರಿಮಿನಲ್ ಪಿತೂರಿಗಾಗಿ ಇವರೆಲ್ಲರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪುಷ್ಪ ಅವರು ದೂರಿನಲ್ಲಿ ತಿಳಿಸಿದ್ದಾರೆ.












Click it and Unblock the Notifications