Aparna: 'ಅಪರ್ಣಾ ಅವರಿಗೆ ನಾನು ಹಸು ಅಂತಾ ಕರೆಯುತ್ತಿದೆ..ಯಾಕೆಂದರೆ..'
ಬೆಂಗಳೂರು, ಜುಲೈ 13: ಅಚ್ಚ ಕನ್ನಡದ ನಿರೂಪಕಿಯಾಗಿದ್ದ ಅಪರ್ಣಾ ವಿಧಿವಶರಾಗಿದ್ದಾರೆ. ನಿರೂಪಣೆ ಮಾತ್ರವಲ್ಲದೇ ನಟನೆಯಲ್ಲೂ ಮಿಂಚಿದ್ದ ಅಪರ್ಣಾ, 'ಮಜಾ ಟಾಕೀಸ್' ಮೂಲಕ ಒನ್ ಅಂಡ್ ಒನ್ಲಿ ವರಲಕ್ಷ್ಮಿ ಎಂಬ ಖ್ಯಾತಿಯನ್ನೂ ಗಳಿಸಿದ್ದರು.
ನಟ ಸೃಜನ್ ಲೋಕೇಶ್ ನೇತೃತ್ವದಲ್ಲಿ ಮೂಡಿ ಬಂದ ಈ ಕಾರ್ಯಕ್ರಮಲ್ಲಿ ಬಾಯಿ ಬಿಟ್ಟರೆ ಸಾಕು.. ಬರಾಕ್ ಒಬಾಮಾ, ಸಲ್ಮಾನ್ ಖಾನ್, ಶಾರುಖ್ ಖಾನ್ ಅಂತ ಅಪರ್ಣಾ 'ಒನ್ ಅಂಡ್ ಒನ್ಲಿ ವರಲಕ್ಷ್ಮಿ' ಪಾತ್ರಕ್ಕೆ ಜೀವ ತುಂಬಿ ವೀಕ್ಷಕರ ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದ್ದರು. ಹೀಗಾಗಿ ಅಪರ್ಣಾ ಅವರೊಂದಿಗಿನ ಬಾಂಧವ್ಯದ ಬಗ್ಗೆ ಸೃಜನ್ ಲೋಕೇಶ್ ಮಾತನಾಡಿದ್ದಾರೆ.

'ಕೆಲವೇ ದಿನಗಳ ಹಿಂದೆ ಅವರ ಜೊತೆ ಮಾತನಾಡಿದ್ದು, ಡಾಕ್ಟರ್ ಕೂಡ ಹೇಳುತ್ತಿದ್ದರಂತೆ ನಿಮಗೆ ಮಜಾ ಟಾಕೀಸ್ ನೋಡಿದಾಗ ಜೀವನದಲ್ಲಿ ಒಂದು ಹೊಸ ಹುರುಪು ಬರುತ್ತಿದೆ. ಹೀಗಾಗಿ ದಯವಿಟ್ಟು ಅದನ್ನು ಪ್ರತಿ ದಿನ ನೋಡಿ ಅಂತಾ ಹೇಳುತ್ತಿದ್ದರಂತೆ. ಹೀಗಾಗಿ ನನಗೆ ಕರೆ ಮಾಡಿದ ಅಪರ್ಣಾ ಅವರು ಹೇಳಿದ್ದು ಒಂದೇ ಒಂದು ನನ್ನಗೊಂದು ಅವಕಾಶ ಕೊಟ್ಟಿದಕ್ಕೆ ಥ್ಯಾಂಕ್ಯೂ ಸೃಜಾ ಎಂದಿದ್ದರು.
ಆಗ ನಾನು ಅವರಿಗೆ ಹೇಳಿದೆ ಥ್ಯಾಂಕ್ಯೂ ನಿಮಗೆ..ನಿಮ್ಮಂತ ಪ್ರತಿಭೆ ಜೊತೆ ನಟನೆ ಮಾಡಲು ಅವಕಾಶ ಸಿಕ್ಕಿದ್ದಕ್ಕೆ ಅಂತಾ ಹೇಳಿದ್ದೆ. ಅವರು ಯಾವತ್ತೂ ನಾನು ಸೀನಿಯರ್ ನಟಿ, ದೊಡ್ಡ ಪ್ರತಿಭೆ, ದೊಡ್ಡ ನಿರೂಪಕಿ ಅಂತಾ ತೋರಿಸಿಕೊಂಡಿಲ್ಲ. ಬೇಕಿದ್ದರೆ ನೀವೇ ನೋಡಿ ಎಲ್ಲೇ ಹೋದರೂ ಸರ್ಕಾರಿ ಕಾರ್ಯಕ್ರಮದಿಂದ ಹಿಡಿದು ಮೆಟ್ರೋವರೆಗೂ ಅಪರ್ಣಾ ಕಾಣುತ್ತಾರೆ. ಕೇಳಿಸುತ್ತಾರೆ.

ದೂರದರ್ಶನ ಶುರುವಾದ ದಿನದಿಂದಲೂ ನಮ್ಮನ್ನೆಲ್ಲಾ ರಂಜಿಸಿದ ಪ್ರತಿಭೆ. ಬಹಳ ದುಃಖ ಏನು ಅಂದರೆ ಅವರು ಎರಡು ವರ್ಷಗಳ ಕಾಲ ಈ ಕಾಯಿಲೆಯಿಂದ ಬಳಲಿದ್ದಾರೆ. ನನಗಿಂತ ಹೆಚ್ಚಾಗಿ ನನ್ನ ಹೆಂಡತಿ ಜೊತೆಗೆ ತುಂಬಾ ಕ್ಲೋಸ್..ಅವರಿಗ ಒಳ್ಳೆ ಫ್ರೆಂಡ್. ನಾನು ಅವರ ಜೊತೆಗೆ ಕೆಲಸ ಮಾಡಿದ್ದೀನಿ ಅಷ್ಟೆ ಅಂದರು.
ಮಜಾ ಟಾಕೀಸ್‌ಯಿಂದ ಕರೆ ಮಾಡಿದಾಗ ಅವರು ಭಯಪಟ್ಟರು. ಯಾಕೆಂದರೆ ಅವರು ತುಂಬಾ ಸೀರಿಯಸ್ ಆ್ಯಂಕರ್, ಕಾಮಿಡಿ ಹೇಗೆ ಮಾಡುವುದ ಅಂತಾ. ಫಸ್ಟ್ ಎಪಿಸೋಡ್ ಆದ ಮೇಲೆ ನನಗೆ ಕರೆ ಮಾಡಿ ನನಗೆ ಯಾಕೋ ಭಯವಾಗುತ್ತಿದೆ ಬೇಡ ಅಂತಾ ಹೇಳಿದರು. ನಮ್ಮ ಮೇಲೆ ನಂಬಿಕೆಯಿಡಿ ಅಂದಿದ್ದೆ. ಬಳಿಕ ಮಜಾ ಟಾಕೀಸ್ ಬಗ್ಗೆ ಅಷ್ಟು ಖುಷಿ ಪಟ್ಟ ವ್ಯಕ್ತಿ ಅಪರ್ಣಾ ಅವರು.
ಅಪರ್ಣಾ ನಮ್ಮ ಕುಟುಂಬಕ್ಕೆ ತುಂಬಾ ಹತ್ತಿರ. ಅವರಿಗೆ ನಾನು ಹಸು ಅಂತಾ ಕರೆಯುತ್ತಿದೆ. ಯಾಕೆಂದರೆ ಅವರು ಯಾವಾಗಲೂ ಏನಾದರೂ ಒಂದು ತಿನ್ನುತ್ತಿರುವ ಚಟ ಇತ್ತು. ಸುಮ್ಮನೆ ಏನಾದರೂ ತಿನ್ನುತ್ತಲೇ ಇರುತ್ತಿದ್ದರು. ಮಜಾ ಟಾಕೀಸ್ ಪ್ರಾಕ್ಟೀಸ್ ಸಮಯದಲ್ಲೂ ತಿನ್ನುತ್ತಲೇ ಇರುತ್ತಿದ್ದರು. ತುಂಬಾ ಸ್ನೇಹ ಜೀವಿ ಅವರು. ಆದರೆ ಆರೋಗ್ಯ ಸಮಸ್ಯೆ ಬಗ್ಗೆ ಯಾರಿಗೂ ಹೇಳಿರಲಿಲ್ಲ' ಎಂದು ಸೃಜನ್ ಲೋಕೇಶ್ ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications