Sonu Sood: ಎಲ್ಲ ಬಸ್‌ಗಳಲ್ಲಿ ಈ ನಿಯಮ ಕಡ್ಡಾಯ ಮಾಡಿ: ನಟ ಸೋನು ಸೂದ್ ಮಹತ್ವದ ಸಲಹೆ
ಇತ್ತೀಚೆಗಷ್ಟೇ ಆಂಧ್ರಪ್ರದೇಶದ ಕರ್ನೂಲು ಬಳಿ ಹೈದರಾಬಾದ್-ಬೆಂಗಳೂರು ಬಸ್ ಬೆಂಕಿಗಾಹುತಿಯಾಗಿ 20ಕ್ಕೂ ಹೆಚ್ಚು ಮಂದಿ ಸಜೀವ ದಹನವಾಗಿದ್ದರು. ಈ ಘಟನೆಯು ಇಡೀ ದೇಶವನ್ನು ಬೆಚ್ಚಿಬೀಳಿಸಿತ್ತು. ಅಲ್ಲದೆ ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆ ಬಗ್ಗೆ ಕಳವಳ ಉಂಟು ಮಾಡಿತ್ತು. ಬಸ್ ಚಾಲಕನ ನಿರ್ಲಕ್ಷ್ಯದಿಂದಲೇ ಈ ಘಟನೆ ಸಂಭವಿಸಿತ್ತು ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಬಹುಭಾಷಾ ನಟ ಸೋನು ಸೂದ್ ಕೂಡ ಕಳವಳ ವ್ಯಕ್ತಪಡಿಸಿದ್ದಾರೆ. ಬಸ್ ಪ್ರಯಾಣಿಕರ ಸುರಕ್ಷತೆಗಾಗಿ ಕೇಂದ್ರ ಸರ್ಕಾರಕ್ಕೆ ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ.
ಪ್ರತಿಯೊಂದು ಐಷಾರಾಮಿ ಬಸ್‌ನಲ್ಲಿ ಹಸ್ತಚಾಲಿತ (ಮ್ಯಾನುಯಲ್) ತುರ್ತು ನಿರ್ಗಮನದ ಬಾಗಿಲು ಇರಬೇಕು. ನಿರ್ಣಾಯಕ ಕ್ಷಣಗಳಲ್ಲಿ ವಿಫಲವಾಗುವ ಎಲೆಕ್ಟ್ರಾನಿಕ್ ಬಾಗಿಲುಗಳು ಮಾತ್ರವಲ್ಲ, ಪ್ರಯಾಣಿಕರ ಸುರಕ್ಷತೆಗಾಗಿ ಇದನ್ನು ಕಾನೂನಿನ ಮೂಲಕ ಕಡ್ಡಾಯಗೊಳಿಸಬೇಕು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಒತ್ತಾಯಿಸಿದ್ದಾರೆ. ಬಸ್ ನಿರ್ವಾಹಕರು ಪರವಾನಗಿಗಳನ್ನು ನವೀಕರಿಸುವ ಮೊದಲು ಚಿತ್ರಗಳೊಂದಿಗೆ ಪುರಾವೆಗಳನ್ನು ಅಪ್‌ಲೋಡ್ ಮಾಡಬೇಕು. ಇದರ ಅನುಸರಣೆಗೆ 1 ತಿಂಗಳು ಕಾಲಾವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ. ನಿತಿನ್ ಗಡ್ಕರಿ ಅವರೇ, ದಯವಿಟ್ಟು ಈಗಲೇ ಕ್ರಮ ಕೈಗೊಳ್ಳಿ ಸರ್. ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಯಾವುದೇ ರಾಜಿ ಬೇಡ ಎಂದಿದ್ದಾರೆ.

ಕರ್ನೂಲು ದುರಂತಕ್ಕೆ ಸಂತಾಪ ಸೂಚಿಸಿದ್ದ ಸೋನು ಸೂದ್, ಬಸ್ ಬೆಂಕಿ ಅವಘಡದಿಂದ 2 ವಾರಗಳಲ್ಲಿ ಸುಮಾರು 40 ಜೀವಗಳು ಬಲಿಯಾಗಿವೆ. ಜನರು ತಮ್ಮ ಕುಟುಂಬಗಳನ್ನು ನೋಡಲು ಪ್ರಯಾಣಿಸುತ್ತಾರೆ. ಅವರ ಅಂತ್ಯವನ್ನು ಕಾಣಲು ಅಲ್ಲ. ಸಮಯ, ಸುರಕ್ಷಿತ ವೈರಿಂಗ್, ತುರ್ತು ನಿರ್ಗಮನಗಳು ಸೇರಿದಂತೆ ಕಟ್ಟುನಿಟ್ಟಾದ ಸುರಕ್ಷತಾ ಮಾನದಂಡಗಳಿಗೆ ಆದ್ಯತೆ ಕೊಡಬೇಕು. ಆಗಿದ್ದು ಸಾಕು ಎಂದು ಎಕ್ಸ್‌ನಲ್ಲಿ ಬೇಸರದ ಪೋಸ್ಟ್ ಮಾಡಿದ್ದರು.
ಬಸ್ ಚಾಲಕ ಬಂಧನ
20 ಜನರನ್ನು ಬಲಿತೆಗೆದುಕೊಂಡ ಕರ್ನೂಲ್ ಬಸ್‌ಗೆ ಬೆಂಕಿ ದುರಂತದ ಚಾಲಕನನ್ನು ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಚಾಲಕ ಎಂ ಲಕ್ಷ್ಮಯ್ಯ (45) ಅವರನ್ನು ಶುಕ್ರವಾರ ವಶಕ್ಕೆ ಪಡೆಯಲಾಗಿದ್ದು, ಭಾನುವಾರ ಅಧಿಕೃತವಾಗಿ ಬಂಧನ ಮಾಡಲಾಗಿದೆ. ಚಾಲಕನನ್ನು ನಾಳೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಲಕ್ಷ್ಮಯ್ಯ ಬಸ್ ಚಲಾಯಿಸುತ್ತಿದ್ದಾಗ ಬೈಕ್‌ಗೆ ಡಿಕ್ಕಿ ಹೊಡೆದು ಸುಮಾರು 300 ಮೀಟರ್‌ಗಳಷ್ಟು ದೂರ ಎಳೆದುಕೊಂಡು ಹೋಗಿ ಬೆಂಕಿ ಹೊತ್ತಿಕೊಂಡಿತ್ತು. ಪ್ರತ್ಯೇಕ ಅಪಘಾತಕ್ಕೀಡಾದ ಬೈಕ್, ಬಸ್ ಡಿಕ್ಕಿ ಹೊಡೆದಾಗ ರಸ್ತೆಯಲ್ಲಿ ಬಿದ್ದಿತ್ತು. ಅಪಘಾತ ಸಂಭವಿಸಿದಾಗ ಬೈಕ್ ಸವಾರ ಮದ್ಯದ ಅಮಲಿನಲ್ಲಿದ್ದ ಎಂದು ಎಫ್‌ಎಸ್‌ಎಲ್ ವರದಿಯಲ್ಲಿ ತಿಳಿದುಬಂದಿದೆ.
ಮಳೆ ಬರುತ್ತಿದ್ದ ಕಾರಣ ಅಪಘಾತದ ಸಮಯದಲ್ಲಿ ಬಸ್ ಚಾಲಕ ವೇಗವಾಗಿ ಚಾಲನೆ ಮಾಡುತ್ತಿರಲಿಲ್ಲ. ಅವನು ಗಂಟೆಗೆ 90 ಕಿ.ಮೀ ವೇಗದಲ್ಲಿ ಚಾಲನೆ ಮಾಡುತ್ತಿದ್ದ. ಅಪಘಾತದ ಸಮಯದಲ್ಲಿ ಬಸ್‌ನ ಎರಡನೇ ಚಾಲಕ ಚಾಲನೆ ಮಾಡದ ಕಾರಣ ಅವನನ್ನು ಬಂಧಿಸಿಲ್ಲ. ಒಳಗೆ ಸಿಲುಕಿಕೊಂಡಿದ್ದ ಜನರನ್ನು ಉಳಿಸಲು ಕಿಟಕಿಗಳನ್ನು ಒಡೆದು ರಕ್ಷಿಸಲು ಯತ್ನಿಸಿದ್ದ. ಹೀಗಾಗಿ ನಾವು ಈಗ ಅವನನ್ನು ಬಂಧಿಸುವ ಬಗ್ಗೆ ಯೋಚಿಸುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಘಟನೆ ಬಳಿಕ ಚಾಲಕ ಕೂಡ ಪರಾರಿಯಾಗಿರಲಿಲ್ಲ. ನಮ್ಮ ಮುಂದೆ ಹಾಜರಾಗುವಂತೆ ನಾವು ಅವನಿಗೆ ನೋಟಿಸ್ ನೀಡಿದ್ದೆವು. ಅವನು ಹಾಜರಾಗುತ್ತಿದ್ದಾನೆ ಎಂದಿದ್ದಾರೆ.












Click it and Unblock the Notifications