Rishab Shetty: ಮತದಾನ ಮಾಡಿ 'ಕಾಂತಾರ' ಪ್ರೀಕ್ವೆಲ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ರಿಷಬ್ ಶೆಟ್ಟಿ
ಉಡುಪಿ, ಮೇ 07: ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಎರಡನೇ ಹಂತದ ಮತದಾನ ನಡೆದಿದ್ದು, ಬೈಂದೂರಿನಲ್ಲಿ ನಟ ರಿಷಬ್ ಶೆಟ್ಟಿ ಮತ ಚಲಾವಣೆ ಮಾಡಿದ್ದಾರೆ. ಬೈಂದೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆರಾಡಿ ಮತಗಟ್ಟೆ ಸಂಖ್ಯೆ 135 ರಲ್ಲಿ ರಿಷಬ್ ಶೆಟ್ಟಿ ಮತದಾನ ಮಾಡಿದ್ದಾರೆ.
ಮತದಾನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಿಷಬ್ ಶೆಟ್ಟಿ, ನಾನು ದೇಶಕ್ಕೆ ಮತ ಹಾಕಿದ್ದೇನೆ. ಲೋಕಸಭಾ ಚುನಾವಣೆ ನಡೆಯುವುದು ದೇಶಕ್ಕೆ. ಮತದಾನ ನಮ್ಮ ಹಕ್ಕು ಜವಾಬ್ದಾರಿ ಅದನ್ನು ಚಲಾಯಿಸಿದ್ದೇನೆ. ಜನ ಕಡಿಮೆ ಇರ್ತಾರೆ ಅಂತಾ ಸಂಜೆ ಬಂದಿದ್ದೇನೆ. ಸರ್ಕಾರದ ನಿರೀಕ್ಷೆ ಬೇಡಿಕೆ ಬಗ್ಗೆ ಮಾತಾಡಲ್ಲ. ಜಾಸ್ತಿ ರಾಜಕೀಯದ ಬಗ್ಗೆ ಮಾತನಾಡಲ್ಲ. ನನ್ನ ಜವಾಬ್ದಾರಿಯನ್ನು ಮಾಡಿದ್ದೇನೆ ಅಷ್ಟೇ ಎಂದರು.

ಶಾಲೆಯನ್ನು ದತ್ತು ಸ್ವೀಕಾರ ಮಾಡಿ ಅಭಿವೃದ್ಧಿ ಮಾಡಲಾಗುತ್ತಿದೆ. ಚುನಾವಣೆ ಇರುವುದರಿಂದ ಪೂರ್ತಿ ಕೆಲಸ ಮಾಡಲು ಆಗಿಲ್ಲ. ಶಾಲೆಯ ಮೈದಾನವನ್ನು ಮಕ್ಕಳಿಗೆ ಆಟ ಆಡಲು ದೊಡ್ಡ ಮಾಡಿದ್ದೇವೆ. ಕಟ್ಟಡದ ಕೆಲಸ ಮತ್ತು ಪೀಠೋಪಕರಣ ಕೆಲಸ ಇನ್ನು ಆಗಬೇಕಾಗಿದೆ ಎಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆರಾಡಿ ಅಭಿವೃದ್ಧಿ ಬಗ್ಗೆ ವಿವರಿಸಿದರು.
ಕಾಂತಾರ ಚಿತ್ರದ ಬಗ್ಗೆ ಮಾತನಾಡಿದ ನಟ ರಿಷಬ್ ಶೆಟ್ಟಿ, ಜನ ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡಿದರೆ ಒಳ್ಳೆಯದು. ಅಧಿಕೃತವಾಗಿ ಹೊಂಬಾಳೆ ಎಲ್ಲವನ್ನೂ ಘೋಷಣೆ ಮಾಡುತ್ತದೆ. ಇತ್ತೀಚಿನ ದಿನದಲ್ಲಿ ನ್ಯೂಸ್ ಚಾನೆಲ್‌ನಲ್ಲಿ ಹೆಚ್ಚು ಸಿನಿಮಾದ ಬಗ್ಗೆ ನೋಡುತ್ತಿದ್ದಾರೆ. ಕಥೆನೂ ನ್ಯೂಸ್ ಚಾನೆಲ್‌ನಲ್ಲಿ ಹೇಳಿದರೆ ಕಷ್ಟ ಎಂದರು.

ಕಾಂತಾರ ಚಿತ್ರದ ಚಿತ್ರೀಕರಣ ಈಗಾಗಲೇ ಆರಂಭವಾಗಿದೆ. ಬಹಳ ಚೆನ್ನಾಗಿ ನಡೀತಾ ಇದೆ. ನಾವು ಅಂದುಕೊಂಡಂತೆ ಕೆಲಸ ನಡೆಯುತ್ತಿದೆ. ಮೊದಲಿಗಿಂತ ದೊಡ್ಡ ಜವಾಬ್ದಾರಿ, ದೊಡ್ಡ ತಂಡ ಕೆಲಸ ಮಾಡುತ್ತಿದೆ. ಹೊಂಬಾಳೆ ಪ್ರೊಡಕ್ಷನ್ ಹೌಸ್ ಸಿಕ್ಕಿರುವುದು ಫಿಲಂ ಮೇಕರ್‌ಗೆ ಒಂದು ಪುಣ್ಯ. ಅದ್ಭುತವಾದ ಟೆಕ್ನಿಷಿಯನ್ಸ್‌ಗಳು ಕೆಲಸ ಮಾಡುತ್ತಿದ್ದಾರೆ. ಪಾರ್ಟ್ ಬೈ ಪಾರ್ಟ್ ಚಿತ್ರೀಕರಣ ನಡೆಯುತ್ತದೆ ಎಂದರು.
ಜನ ಕಾಂತಾರವನ್ನು ಗೆಲ್ಲಿಸಿದ್ದಾರೆ. ಹೀಗಾಗಿ ಬಾಯಲ್ಲಿ ಏನು ಹೇಳಲ್ಲ.ಕೆಲಸ ಮೂಲಕ ಮಾಡಿ ತೋರಿಸಬೇಕು ಎಂದು ಅಂದುಕೊಂಡಿದ್ದೇನೆ. ಯಾವ ಒತ್ತಡವು ಇಲ್ಲ, ಆಗ ನನಗೆ ಬಹಳ ದೊಡ್ಡ ಚಿತ್ರವಾಗಿತ್ತು. ಸಿನಿಮಾ ಒಂದು ಕಲಿಯುವ ಪ್ರೊಸೆಸ್ ಅದನ್ನು ಮಾಡುತ್ತಿದ್ದೇನೆ. ಸಿನಿಮಾಗೋಸ್ಕರ ಒಂದು ವರ್ಷದಿಂದ ಗಡ್ಡ ಕೂದಲು ಬಿಟ್ಟಿದ್ದೇನೆ. ಚಿತ್ರೀಕರಣ ಪೂರ್ತಿ ಮುಗಿದ ಮೇಲೆ ಸೆಟ್ ವರ್ಕ್ ಚಿತ್ರೀಕರಣ ಸ್ಥಳಕ್ಕೆ ಕರೆಯುತ್ತೇವೆ. ಚಿತ್ರೀಕರಣ ಮುಗಿಯುವವರೆಗೆ ಬಹಳ ಗೌಪ್ಯತೆಯನ್ನು ಕಾಪಾಡಬೇಕಾಗುತ್ತದೆ. ಚಿತ್ರ ತೆರೆಗೆ ಬರುವ ತನಕ ಗೌಪ್ಯತೆ ಕಾಪಾಡಬೇಕು ಜನಕ್ಕೆ ಕುತೂಹಲ ಇರಬೇಕು. ಪೂರ್ತಿ ಕರಾವಳಿ ಭಾಗದಲ್ಲಿ ಚಿತ್ರೀಕರಣ ಮಾಡುತ್ತೇವೆ ಎಂದು ರಿಷಬ್ ಶೆಟ್ಟಿ ಹೇಳಿದರು.












Click it and Unblock the Notifications