ಶಿವಣ್ಣನನ್ನ ದೂಷಿಸಬೇಡಿ, ಕಮಲ್ ಹಾಸನ್ ದೇಶ ಕಂಡ ಅದ್ಭುತ ಪ್ರತಿಭೆ: ನಟ ಕಿಶೋರ್
ಕಮಲ್ ಹಾಸನ್ ಕನ್ನಡದ ವಿವಾದದ ಬಗ್ಗೆ ಇತ್ತೀಚೆಗೆ ಪ್ರತಿಕ್ರಿಯಿಸಿದ್ದ ನಟ ಕಿಶೋರ್ ಅವರು ಕಮಲ್ ಬೆಂಬಲಕ್ಕೆ ನಿಂತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ವಿಚಾರವನ್ನು ಭಾವುಕವಾಗಿ ನೋಡಬಾರದು, ಕಮಲ್ ಹಾಸನ್ ಮಾತಿನಲ್ಲಿ ಏನೋ ಒಳಾರ್ಥ ಇರಬೇಕು, ಒಂದು ವೇಳೆ ಅವರು ಹೇಳಿದಂತೆ ಕನ್ನಡ ತಮಿಳಿನಿಂದ ಬಂದಿದ್ರೆ ಏನು ಅವಮಾನ? ಎಂದು ಅಭಿಪ್ರಾಯ ತಿಳಿಸಿದ್ದರು. ಇದು ಕೂಡ ಭಾರಿ ವಿರೋಧಕ್ಕೆ ಕಾರಣವಾಗಿತ್ತು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಕಿಶೋರ್ ಮತ್ತೆ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಇಂದು ನಾನು ಕನ್ನಡದವನೋ? ತಮಿಳು ಭಾಷಿಕನೋ? ಒಕ್ಕಲಿಗನೋ? ಬ್ರಾಹ್ಮಣನೋ? ಹಿಂದುವೊ? ಮುಸಲ್ಮಾನನೊ? ಭಾರತೀಯನೊ? ವಿದೇಶೀಯನೊ? ಆಗುವ ಮೊದಲು ಮಾನವತೆಯನ್ನು ಮೆರೆದು ಮನುಷ್ಯನಾಗಬೇಕಿದೆ ಎಂದು ಕಿಶೋರ್ ಹೇಳಿದ್ದಾರೆ.
ಕೆಲವು ಮಾಧ್ಯಮಗಳಲ್ಲಿ ಬಿಂಬಿಸುತ್ತಿರುವ ಹಾಗೆ ನಾನು ಯಾರ ಹೇಳಿಕೆಯನ್ನೂ ಸಮರ್ಥಿಸುತ್ತಿಲ್ಲ. ಹಾಗೆಯೇ ನನ್ನ ಭಾಷೆ, ಮತ್ತದರ ಪರಂಪರೆ ಯಾರ ಹೇಳಿಕೆಯಿಂದಲೂ ಅವಮಾನಿತವಾಗಿಬಿಡುವಷ್ಟು ದುರ್ಬಲವೂ ಅಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ, ನಿಜ. ಆದರೆ ನಮ್ಮ ಮಾತುಗಳ ಪರಿಣಾಮದ ಅರಿವೂ ನಮಗಿರಬೇಕಾದುದು ಬಹಳ ಮುಖ್ಯ. ಆದರೆ ಇನ್ನೊಬ್ಬರ ಅಭಿಪ್ರಾಯ ನಮ್ಮ ಕೈಯೊಳಗಿಲ್ಲ. ಹಾಗಿರುವಾಗ ನಾನು ಹುಡುಕುವುದು ನಮ್ಮ ಹಿಡಿತದಲ್ಲಿರುವ ನಮ್ಮ ಪ್ರತಿಕ್ರಿಯೆಯನ್ನು ಸಾಧ್ಯವಾದಷ್ಟು ಸಂಯಮಭರಿತ ಮತ್ತು ಆರೋಗ್ಯಕರವಾಗಿಸಬಲ್ಲ ಸಾಧ್ಯತೆಗಳನ್ನಷ್ಟೆ ಎಂದು ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ದ್ರಾವಿಡರು ಹಾಗೂ ದ್ರಾವಿಡ ಭಾಷೆಗಳು ಈಗಾಗಲೇ ಬಂಡವಾಳಶಾಹಿ, ಹಿಂದಿ ಹೇರಿಕೆ, ವಲಸೆ, ಡಿಲಿಮಿಟೇಶನ್‌ನಂತಹ ಉಳಿವಿನ ಹಲವಾರು ಸಮಸ್ಯೆಗಳನ್ನ ಎದುರಿಸುತ್ತಿರುವಾಗ ತಮ್ಮ ತಮ್ಮಲ್ಲೇ ಬಡಿದಾಡಿಕೊಳ್ಳುವ ಪರಿಸ್ಥಿತಿ ಬರದಂತೆ ಕಾಯ್ದುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಇಂತಹ ಪರಿಸ್ಥಿತಿಯಲ್ಲಿ ಸ್ಥಳೀಯ ಭಾಷೆಗಳೆಲ್ಲವೂ ಮೇಲು, ಕೀಳು ಭಾವನೆಯನ್ನು ತೊಲಗಿಸಿ, ಸರಿಸಮ ನಿಂತು ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಒಗ್ಗೂಡಬೇಕು ಎಂದು ಕಿಶೋರ್ ಕರೆ ನೀಡಿದ್ದಾರೆ.
ಭಾಷೆಯನ್ನೂ ರಾಜಕೀಯಕ್ಕೆ ಸಿಲುಕಿಸಬೇಕೆ?
ಇಂದು ಇಡೀ ದೇಶ, ಒಡೆದಾಳುವ ದ್ವೇಷದ ರಾಜಕಾರಣದ ಬಲಿಪಶುವಾಗಿದೆ. ನಮ್ಮ ಅತಿಭಾವುಕತೆಯನ್ನು ಬಳಸಿ ದೇಶ, ಧರ್ಮ, ಜಾತಿಗಳ ನಡುವೆ ಕಿಚ್ಚೆಬ್ಬಿಸಿ, ಕ್ರೌರ್ಯ ಹಿಂಸೆಗಳಿಗೆ ಜನರನ್ನು ದೂಡಿ, ಜನರ ನೆಮ್ಮದಿ ಕೆಡಿಸಿ, ಮೂಲಭೂತ ಸಮಸ್ಯೆಗಳಿಂದ ಬೇರೆಡೆಗೆ ಸೆಳೆಯುತ್ತಿರುವುದು ಕಣ್ಣೆದುರೇ ಇರುವಾಗ ಭಾಷೆಯನ್ನೂ ಆ ರಾಜಕೀಯಕ್ಕೆ ಸಿಲುಕಿಸಬೇಕೆ? ಎಂದು ಖಂಡಿಸಿದ್ದಾರೆ.
ಕನ್ನಡಿಗರು ಶಾಂತಿಪ್ರಿಯರು, ಸಹೃದಯರು, ಭಾವೋದ್ರೇಕಕ್ಕೆ ಆಸ್ಪದ ಕೊಡದೆ ಶಾಂತಿಯ, ಪ್ರೀತಿಯ ಮಾತಾಡಿದ ಕನ್ನಡ ಕಲಾಪ್ರತಿನಿಧಿ ಶಿವಣ್ಣನವರನ್ನು ಆಧಾರವಿಲ್ಲದೇ ದೂಷಿಸುವ ಬದಲು, ಸಾವಿರಾರು ಜನರ ಹೊಟ್ಟೆಪಾಡಿನ ಕೆಲಸವಾದ ಸಿನಿಮಾ ವಿರುದ್ಧ ಬಂಡೇಳುವ ಬದಲು, ದೇಶ ಕಂಡ ಅದ್ಭುತ ಪ್ರತಿಭೆ, ಇದುವರೆವಿಗೂ ತನ್ನ ಕೆಲಸಗಳ ಮೂಲಕ ಸಂವಿಧಾನಿಕ ಮೌಲ್ಯಗಳಿಗೆ ಬದ್ಧರಾಗಿ ನಿಂತ ಕಮಲ್ ಹಾಸನ್ ಅವರನ್ನು ಇಷ್ಟೂ ದಿನ ಅಪರಿಮಿತ ಗೌರವದಿಂದ ಕಂಡ ನಾವು ಈಗಲೂ ಸಂಯಮದಿಂದ ವರ್ತಿಸಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಕಮಲ್ ಹಾಸನ್ ಅವರ ಹೇಳಿಕೆ ಕನ್ನಡಕ್ಕೆ ಅಗೌರವ ತೋರುವ ಉದ್ದೇಶದಿಂದಲ್ಲವೆಂದು ನಂಬಿ, ಆರೋಗ್ಯಕರ ಪ್ರಶ್ನೆ, ಚರ್ಚೆಗಳ ಮೂಲಕ ಅವರ ಹೇಳಿಕೆಯ ಹಿಂದಿನ ಆಧಾರವನ್ನು ತರ್ಕವನ್ನು ತಿಳಿದು, ಸತ್ಯವನ್ನು ಆಧಾರಸಹಿತ ಮನದಟ್ಟು ಮಾಡಿಸಿ, ಭಿನ್ನಾಭಿಪ್ರಾಯಗಳನ್ನು ತಿಳಿಗೊಳಿಸಿಕೊಂಡು ದ್ರಾವಿಡ ಭಾಷೆಗಳ ನಡುವಿನ ಶಾಂತಿ ಸೌಹಾರ್ದ ಭ್ರಾತೃತ್ವವನ್ನು ಮೆರೆಯಬೇಕಿದೆ ಎಂದಿದ್ದಾರೆ.
ಇಂದು ನಾನು ಕನ್ನಡಿಗನೊ ತಮಿಳನೊ, ಒಕ್ಕಲಿಗನೊ ಬ್ರಾಹ್ಮಣನೊ, ಹಿಂದುವೊ ಮುಸಲ್ಮಾನನೊ, ಭಾರತೀಯನೊ ವಿದೇಶೀಯನೊ ಆಗುವ ಮೊದಲು ಮಾನವತೆಯನ್ನು ಮೆರೆದು ಮನುಷ್ಯನಾಗಬೇಕಿದೆ. ದೇಶ, ಧರ್ಮ, ಜಾತಿ, ಭಾಷೆಗಳ ಈ ಅಪಾಯಕಾರಿ ಅತಿ ಭಾವುಕತೆಯ ರಾಜಕೀಯದ ಬಗ್ಗೆ ಎಚ್ಚರದಿಂದಿದ್ದು, ವಿಶ್ವದ ಸೋದರ ಸೋದರಿಯರೆಲ್ಲರೂ ಕೈಜೋಡಿಸಿ ಅಭಿವೃದ್ಧಿಯ ಕಡೆ ಸಾಗಬೇಕಿದೆ ಎಂದು ಕರೆ ನೀಡಿದ್ದಾರೆ.












Click it and Unblock the Notifications