ಕನ್ನಡ ತಮಿಳಿನಿಂದ ಬಂದಿದ್ರೆ ಏನ್ ಅವಮಾನ? ಇದನ್ನ ಭಾವುಕವಾಗಿ ನೋಡಬೇಡಿ: ನಟ ಕಿಶೋರ್
ತಮಿಳು ನಟ ಕಮಲ್ ಹಾಸನ್ ಅವರು ಕನ್ನಡದ ಬಗ್ಗೆ ತಮ್ಮ ಹೇಳಿಕೆಯಿಂದಾಗಿ ಕನ್ನಡಿಗರಿಂದ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಸ್ಯಾಂಡಲ್‌ವುಡ್ ನಟ ನಟಿಯರು ಕೂಡ ಕಮಲ್ ಅವರು ಕನ್ನಡಿಗರ ಕ್ಷಮೆ ಕೇಳುವಂತೆ ಧ್ವನಿ ಎತ್ತಿದ್ದಾರೆ. ಆದರೆ ನಟ ಕಿಶೋರ್ ಅವರು ಕಮಲ್ ಹಾಸನ್ ಅವರ ಪರ ಬ್ಯಾಟಿಂಗ್ ಬೀಸಿದ್ದಾರೆ. ಈ ವಿಚಾರವನ್ನು ಭಾವುಕವಾಗಿ ನೋಡಬೇಡಿ ಎಂದು ಕಿಶೋರ್ ಹೇಳಿರುವುದು ಸಂಚಲನ ಸೃಷ್ಟಿಸಿದೆ.
ಮೈಸೂರಿನಲ್ಲಿ ಈ ವಿವಾದದ ಬಗ್ಗೆ ಮಾತನಾಡಿರುವ ನಟ ಕಿಶೋರ್, 'ಕಮಲ್ ಹಾಸನ್ ಅವರ ಹೇಳಿಕೆಯನ್ನ ಅವಹೇಳನಕಾರಿ ಎಂದುಕೊಳ್ಳಬೇಕೋ ಅನ್ನೋದು ಗೊತ್ತಿಲ್ಲ. ತುಂಬಾ ತಿಳಿದಂತಹ ಮನುಷ್ಯ ಏನೋ ಹೇಳ್ತಿದ್ದಾರೆ ಅಂದಾಗ ಅದರ ಹಿಂದೆ ಏನೋ ಅರ್ಥ ಇರಬೇಕು. ಅದನ್ನ ನಾವು ಪ್ರಶ್ನೆ ಮಾಡಬೇಕಾಗುತ್ತೆ. ಅದನ್ನ ಅವರ ಬಳಿಯೇ ಕೇಳಿ ಕ್ಲಿಯರ್ ಮಾಡಿಕೊಳ್ಳುವುದು ನಮಗೆ ಬಿಟ್ಟಿದ್ದು' ಎಂದಿದ್ದಾರೆ.

'ನನ್ನ ಪ್ರಕಾರ ಈ ವಿಚಾರವನ್ನ ಅಷ್ಟು ಭಾವುಕವಾಗಿ ನೋಡುವ ಅವಶ್ಯಕತೆ ಇಲ್ಲ. ಎಲ್ಲ ಭಾಷೆಗಳು ಎಲ್ಲಿಂದಲೋ ಹುಟ್ಟಿಬಂದಿರುತ್ತವೆ. ಹಾಗಂತ ಒಂದು ಭಾಷೆ ಮೇಲು, ಮತ್ತೊಂದು ಕೀಳು ಅನ್ನುವ ಹಾಗಿಲ್ಲ. ಕನ್ನಡವೂ ಎಲ್ಲಿಂದಲೋ ಹುಟ್ಟಿಬಂದಿದೆ, ತಮಿಳು ಕೂಡ ಎಲ್ಲಿಂದಲೋ ಹುಟ್ಟಿ ಬಂದಿದೆ. ಈಗ ನನ್ನ ತಾಯಿ ಹೊಟ್ಟೆಯಿಂದ ನಾನು ಹುಟ್ಟಿದೆ ಅಂದರೆ ಅದೇನು ಅವಮಾನ ಅಲ್ವಲ್ಲ?' ಎಂದು ಪ್ರಶ್ನಿಸಿದ್ದಾರೆ.
'ಹಾಗಾಗಿ ಇದನ್ನ ಭಾವುಕವಾಗಿ ನೋಡದೆ, ಸಮಾಧಾನವಾಗಿ ನೋಡಬೇಕು. ಭಾವುಕವಾಗಿ ಜನರನ್ನ ರೊಚ್ಚಿಗೇಳಿಸದೆ ಜವಾಬ್ದಾರಿ ಸ್ಥಾನದಲ್ಲಿರುವವರು ನಡೆದುಕೊಳ್ಳಬೇಕಾಗುತ್ತೆ. ಈಗಾಗಲೇ ನಮ್ಮಲ್ಲಿ ಭಾಷೆ, ಧರ್ಮ, ಜಾತಿ ಎಲ್ಲವನ್ನೂ ಬಳಸಿಕೊಂಡು ರಾಜಕೀಯ ಮಾಡಿಕೊಂಡು, ಲಾಭ ಮಾಡಿಕೊಳ್ಳುವವರೇ ಹೆಚ್ಚಾಗಿದ್ದಾರೆ. ಹಾಗಾಗಿ ಇದನ್ನ ಭಾವುಕವಾಗಿ ನೋಡದೆ, ಭಾಷೆಯನ್ನ ಭಾಷೆಯಾಗಿ ಪರಿಗಣಿಸಿ' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಕಮಲ್ ಹಾಸನ್ ಅವರು ತಮಿಳಿನಿಂದ ಕನ್ನಡ ಹುಟ್ಟಿತು ಎಂಬ ವಿಚಾರವಾಗಿ, 'ಅದರಿಂದ ಯಾವ ರೀತಿ ಅವಮಾನ ಆಯ್ತು? ಯಾರಿಗೂ ಅವಮಾನ ಆದಂತೆ ಅಲ್ವಲ್ಲ?' ಎಂದು ನಟ ಕಿಶೋರ್ ಕೇಳಿದ್ದಾರೆ. 'ಒಂದು ವೇಳೆ ಕನ್ನಡ ಅವರು ಹೇಳಿದಂತೆ ಬಂದಿದ್ರೆ ಸರಿ. ಯಾಕಂದ್ರೆ ಬೇಕಾದಷ್ಟು ಥಿಯರಿಗಳಿವೆ. ಒಂದು ಭಾಷೆ ಎಲ್ಲಿಂದ ಬಂತು ಅಂತ ನಿಖರವಾದ ಮಾಹಿತಿ ಸಿಗೋದಿಲ್ಲ. ಈ ಬಗ್ಗೆ ಇನ್ನೂ ಸಂಶೋಧನೆಗಳು ನಡೆಯುತ್ತಿವೆ. ಹಾಗಾಗಿ ಭಾಷೆ ಅಲ್ಲಿಂದ ಬಂತು ಅಂದ್ರೆ, ಅದನ್ನು ಅವಮಾನ ಎಂದು ಯಾಕೆ ಅಂದುಕೊಳ್ಳಬೇಕು?' ಎಂದು ಪ್ರಶ್ನೆ ಎತ್ತಿದ್ದಾರೆ.
ಇದನ್ನ ಅವಮಾನ ಎಂದುಕೊಳ್ಳಬಾರದು!
'ಎಲ್ಲ ಭಾಷೆಗಳು ಕೂಡ ಸಾವಿರಾರು ವರ್ಷ ಇತಿಹಾಸ ಹೊಂದಿರುತ್ತವೆ. ಇದರಲ್ಲಿ ಪೈಪೋಟಿ ಏನಿದೆ? ಅದರಿಂದ ಭಾಷೆಗೆ ಪ್ರಾಮುಖ್ಯತೆ ಕಡಿಮೆ ಆಗುತ್ತೆ ಅಂತ ಇಲ್ವಲ್ಲಾ?ಈಗ ಕಮಲ್ ಅವರ ಥಿಯರ್ ಪ್ರಕಾರವೂ ಇರಬಹುದು. ಹಾಗಾಗಿ ಅವರ ಥಿಯರಿ ಏನು ಅನ್ನೋದನ್ನ ತಿಳಿದುಕೊಳ್ಳೋಣ ಎಂದಿದ್ದಾರೆ. ಇನ್ನು ಈ ವಿವಾದದಿಂದಾಗಿ ಕಮಲ್ ಅವರ ಥಗ್ ಲೈಫ್ ಸಿನಿಮಾ ಬ್ಯಾನ್ ಮಾಡುವ ವಿಚಾರವಾಗಿ ಮಾತನಾಡಿರುವ ಕಿಶೋರ್, ಅಧಿಕಾರದಲ್ಲಿರುವವರು ಏನು ಹೇಳ್ತಾರೋ ಅದು ನಡೆಯುತ್ತೆ, ನನ್ನ ಪ್ರಕಾರ ಇದನ್ನು ಅವಮಾನ ಎಂದು ಹೇಳಿಕೊಳ್ಳುವ ಅವಶ್ಯಕತೆ ಇಲ್ಲ. ಕಮಲ್ ಅವರ ಹೇಳಿಕೆ ಹಿಂದಿನ ತರ್ಕ ಏನು ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು' ಎಂದು ಹೇಳಿದ್ದಾರೆ.












Click it and Unblock the Notifications