Kantara: 'ಕಾಂತಾರ ಚಾಪ್ಟರ್-2'ರಲ್ಲಿ ಮತ್ತೊಬ್ಬ ಸ್ಟಾರ್ ಹೀರೋ, ಗೆಳೆಯನಿಗೆ ಗಾಳ ಹಾಕಿದ್ರಾ ರಿಷಬ್?
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಅವರನ್ನ ಪ್ಯಾನ್ ಇಂಡಿಯಾ ಸ್ಟಾರ್ ಮಾಡಿದ್ದು "ಕಾಂತಾರ" ಸಿನಿಮಾ. ಮೊದಲಿಗೆ ಕನ್ನಡದಲ್ಲಿ ರಿಲೀಸ್ ಆದ ಈ ಸಿನಿಮಾ ನಂತರ ಬೇರೆ ಭಾಷೆಗಳಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದಿತ್ತು. ಇದರಿಂದ ರಿಷಬ್ ಜನಪ್ರಿಯತೆಯೂ ದೇಶದಾದ್ಯಂತ ಹಬ್ಬಿದೆ. ಇದೇ ಹುರುಪಿನಲ್ಲಿ ಕಾಂತಾರ ಸಿನಿಮಾದ ಪ್ರೀಕ್ವೆಲ್ "ಕಾಂತಾರ ಚಾಪ್ಟರ್-1" ಕೂಡ ಮಾಡಿದ್ದು, ರಿಲೀಸ್‌ಗೆ ರೆಡಿಯಾಗಿದೆ. ಇದೇ ಅಕ್ಟೋಬರ್ 2ರಂದು ಈ ಸಿನಿಮಾ ಬಹುಭಾಷೆಗಳಲ್ಲಿ ಬರಲಿದೆ. ಈಗ ಮತ್ತೊಂದು ಸುದ್ದಿ ಹೊರಬಿದ್ದಿದ್ದು, ಪ್ರೀಕ್ವೆಲ್ ರಿಲೀಸ್ ಬಳಿಕ ಕಾಂತಾರ ಸೀಕ್ವೆಲ್ ಕೂಡ ಬರಲಿದೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾದಲ್ಲಿ ಖ್ಯಾತ ಸ್ಟಾರ್ ಹೀರೋ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆ ನಟ ಯಾರು ಗೊತ್ತಾ?
ರಿಷಬ್ ಶೆಟ್ಟಿ ನಿರ್ದೇಶಿಸಿ ತಾವೇ ನಟಿಸಿದ್ದ ಕಾಂತಾರ ಸಿನಿಮಾ, ಕೆಜಿಎಫ್ ನಂತರ ಸಖತ್ ಹಿಟ್ ಕಂಡ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಅದರಲ್ಲೂ ಈ ಸಿನಿಮಾದಲ್ಲಿ ರಿಷಬ್ ಅವರ ಅಭಿನಯಕ್ಕೆ ಬಾಲಿವುಡ್ ಮಂದಿಯೇ ತಲೆಬಾಗಿಸಿದ್ದರು. ಇದರಿಂದಲೇ ಈ ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗಿ ಯಶಸ್ಸು ಕಂಡಿತ್ತು. ಪ್ರೇಕ್ಷಕರ ಸ್ಪಂದನೆ ನೋಡಿ ಇದರ ಪ್ರೀಕ್ವೆಲ್ ಸಿನಿಮಾ ಮಾಡುವುದಾಗಿ ರಿಷಬ್ ಘೋಷಿಸಿದ್ದರು. ಅದರಂತೆ ಆ ಸಿನಿಮಾ ಕೂಡ ಶೂಟಿಂಗ್ ಮುಗಿಸಿ ರಿಲೀಸ್‌ಗೆ ರೆಡಿಯಾಗಿದೆ.

ಇನ್ನು ಎರಡೇ ತಿಂಗಳಲ್ಲಿ "ಕಾಂತಾರ ಚಾಪ್ಟರ್-1" ಸಿನಿಮಾ ತೆರೆಗೆ ಬರಲಿದ್ದು, ಇದರ ನಂತರ ಕಾಂತಾರ ಕಥೆಯನ್ನು ಮತ್ತೆ ಮುಂದುವರಿಸುವ ಪ್ಲ್ಯಾನ್ ಇದೆ ಎಂದು ಹೇಳಲಾಗುತ್ತಿದೆ. ಇಲ್ಲಿವರೆಗೆ ಕಾಂತಾರ ಹಾಗೂ ಚಾಪ್ಟರ್-1ರಲ್ಲಿ ಬಹುತೇಕ ಕನ್ನಡದ ಕಲಾವಿದರೇ ನಟಿಸಿದ್ದಾರೆ. ಆದರೆ ಸೀಕ್ವೆಲ್‌ನಲ್ಲಿ ಬೇರೆ ಭಾಷೆಯ ಕಲಾವಿದರು ಇರುವ ಸಾಧ್ಯತೆ ಇದೆಯಂತೆ. ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗುವ ಕಾರಣ ಬಹುಭಾಷಾ ಕಲಾವಿದರ ತಾರಾಗಣದಲ್ಲಿ ಸಿನಿಮಾ ಮೂಡಿಬರಲಿದೆ ಎಂದು ಮಾತುಗಳು ಕೇಳಿಬರುತ್ತಿವೆ.
ಆ ನಟನಿಗೂ ಕುಂದಾಪುರಕ್ಕೂ ನಂಟು
ಇನ್ನು ರಿಷಬ್ ಶೆಟ್ಟಿಯೇ ನಿರ್ದೇಶಿಸುವ ಈ ಸಿನಿಮಾದಲ್ಲಿ ಮತ್ತೊಬ್ಬ ಸ್ಟಾರ್ ನಟ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ರಿಷಬ್ ಶೆಟ್ಟಿ ಅವರ ಆಪ್ತ ಸ್ನೇಹಿತ ಹಾಗೂ ಟಾಲಿವುಡ್‌ನ ಸ್ಟಾರ್ ಹೀರೋ ಯಂಗ್ ಟೈಗರ್ ಜ್ಯೂನಿಯರ್ ಎನ್‌ಟಿಆರ್ (ತಾರಕ್) ಕಾಂತಾರ ಸೀಕ್ವೆಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ತಾರಕ್ ಅವರಿಗೂ ರಿಷಬ್ ಶೆಟ್ಟಿ ಅವರಿಗೂ ಸಿನಿಮಾ ಹೊರತುಪಡಿಸಿ, ನೆಲದ ನಂಟಿದೆ. ತಾರಕ್ ಅವರ ತಾಯಿ ಮೂಲತಃ ಕುಂದಾಪುರದವರು. ಅಲ್ಲದೆ ಕನ್ನಡದಲ್ಲೇ ಅಚ್ಚುಕಟ್ಟಾಗಿ ಮಾತನಾಡುತ್ತಾರೆ. ಹೀಗಾಗಿ ರಿಷಬ್ ಹಾಗೂ ತಾರಕ್ ನಡುವೆ ಒಳ್ಳೆಯ ಸ್ನೇಹವಿದೆ.

ಇದಕ್ಕೆ ಸಾಕ್ಷಿ ಎಂಬಂತೆ ಜ್ಯೂನಿಯರ್ ಎನ್‌ಟಿಆರ್ ಅವರು ತಮ್ಮ ಕುಟುಂಬದೊಂದಿಗೆ ಕುಂದಾಪುರಕ್ಕೆ ಬಂದು ರಿಷಬ್ ಶೆಟ್ಟಿ ಅವರನ್ನು ಭೇಟಿಯಾಗಿ ಅವರ ಊರುಗಳಲ್ಲಿ ಸುತ್ತಾಡಿ ಹೋಗಿದ್ದರು. ಇನ್ನು ಕಾಂತಾರ ಸಿನಿಮಾಗೆ ತಾರಕ್ ಕೂಡ ಫಿದಾ ಆಗಿದ್ದು, ಮುಂದೆ ಸೀಕ್ವೆಲ್‌ನಲ್ಲಿ ರಿಷಬ್ ಜೊತೆ ನಟಿಸುವುದು ಪಕ್ಕಾ ಎಂದು ಹೇಳಲಾಗುತ್ತಿದೆ. ಆದರೆ ಇನ್ನೂ ಪ್ರೀಕ್ವೆಲ್ ರಿಲೀಸ್ ಆಗದ ಕಾರಣ ಚಿತ್ರತಂಡವು ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಸಿನಿರಂಗದಲ್ಲಿ ಸದ್ಯಕ್ಕಂತೂ ಈ ಸುದ್ದಿ ಸದ್ದು ಮಾಡುತ್ತಿದೆ. ಒಂದು ವೇಳೆ ರಿಷಬ್-ತಾರಕ್ ಜೋಡಿಯಾಗಿ ಕಾಣಿಸಿಕೊಂಡರೆ ಅದರ ಕ್ರೇಜ್ ಬೇರೆ ಲೆವೆಲ್‌ನಲ್ಲೇ ಇರಲಿದೆ ಎನ್ನುವುದು ಇಬ್ಬರೂ ಅಭಿಮಾನಿಗಳ ಮನದಾಳದ ಮಾತು.












Click it and Unblock the Notifications