Duniya Vijay: ನಿಮಗೆ ಕತ್ತು ನೋವುತ್ತೇ ಹೊರತು ಬಿದ್ದೋಗಲ್ಲ: ದುನಿಯಾ ವಿಜಯ್ ಹೀಗಂದಿದ್ದೇಕೆ?
ಸ್ಯಾಂಡಲ್‌ವುಡ್‌ನ ಸಲಗ ದುನಿಯಾ ವಿಜಯ್ ಅವರು ಸೋಷಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಳ್ಳುವ ಮೂಲಕ ಯಾರಿಗೋ ಕೌಂಟರ್ ಕೊಟ್ಟಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ಕನ್ನಡ ಸಿನಿಮಾ ಬಗ್ಗೆ ಕೆಲವರು ಲೇವಡಿ ಮಾಡಿರುವ ಹಿನ್ನೆಲೆ ದುನಿಯಾ ವಿಜಯ್ ಈ ಪೋಸ್ಟ್ ಹಂಚಿಕೊಂಡಿದ್ದಾರೆ. "ನಿಮಗ್ ಕತ್ ನೋವುತ್ತೇ ಹೊರತು ಬಿದ್ದೋಗಲ್ಲ" ಎಂದು ಸಲಗ ವಿಜಯ್ ತಮ್ಮದೇ ಸ್ಟೈಲಲ್ಲಿ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಇತ್ತೀಚೆಗೆ ರಿಲೀಸ್ ಆದ ಸ್ಯಾಂಡಲ್‌ವುಡ್‌ನ ಪ್ಯಾನ್ ಇಂಡಿಯಾ ಸಿನಿಮಾ ಅಂದ್ರೆ ಅದು ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಚಾಪ್ಟರ್-1. ಮೊದಲ ಕಾಂತಾರ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಕನ್ನಡ ಮಾತ್ರವಲ್ಲದೆ ಬಹುಭಾಷೆಗಳಲ್ಲಿ ಹಿಟ್ ಕಂಡಿತ್ತು. ಈ ಹಿನ್ನೆಲೆ ಅದರ ಪ್ರೀಕ್ವೆಲ್ ಆದ ಕಾಂತಾರ 1 ಸಿನಿಮಾವನ್ನು ರಿಷಬ್ ತೆರೆ ಮೇಲೆ ತಂದಿದ್ದಾರೆ. ನಿರೀಕ್ಷೆಯಂತೆ ಈ ಸಿನಿಮಾ ಕೂಡ ದಾಖಲೆಗಳನ್ನು ಮುರಿಯುತ್ತಿದೆ. ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಆದರೆ ಸಿನಿಮಾ ರಿಲೀಸ್ ವೇಳೆ ಕೆಲವರು ಈ ಸಿನಿಮಾ ಉತ್ತಮ ಪ್ರದರ್ಶನ ಕಾಣೋದಿಲ್ಲ ಎಂದು ಕಾಮೆಂಟ್ ಮಾಡಿದ್ದರು ಎನ್ನಲಾಗಿದೆ. ಇದಕ್ಕೆ ದುನಿಯಾ ವಿಜಯ್ ಸರಿಯಾಗಿ ಜಾಡಿಸಿದ್ದಾರೆ.

ಸೋಮವಾರದ್ ಮೇಲ್ ನೋಡ್ರೀ ಅಂದೋರಿಗೆ..
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ದುನಿಯಾ ವಿಜಯ್, "ಸೋಮವಾರದ್ ಮೇಲ್ ನೋಡ್ರೀ... ಹೆಂಗ್ ಬಿದ್ದೋಗುತ್ತೆ ಅಂದೋರಿಗೆ, ವರ್ಷಪೂರ್ತಿ ನೋಡ್ತಾಯಿರಿ, ನಿಮಗ್ ಕತ್ ನೋವುತ್ತೇ ಹೊರತು ಬಿದ್ದೋಗಲ್ಲ ಎಂದು ರಿಷಬ್ ಶೆಟ್ಟಿ ಸಾರಿದ್ದಾರೆ. ಮತ್ತೆ ಇಡೀ ದೇಶ ಹೆಮ್ಮ ಪಡುವಂತಹ ಯಶಸ್ವಿ ಚಿತ್ರ ಕೊಟ್ಟ ರಿಷಬ್ ಶೆಟ್ಟಿಯವರಿಗೆ ಅಭಿನಂದನೆಗಳು" ಎಂದು ದುನಿಯಾ ವಿಜಯ್ ಬರೆದುಕೊಂಡಿದ್ದಾರೆ. ರಿಷಬ್ ಸಿನಿಮಾ ಆರಂಭದಲ್ಲಿ ಮಾತ್ರವೇ ಸದ್ದು ಮಾಡುತ್ತದೆ. ಆದರೆ ಸೋಮವಾರದ ನಂತರ ಪ್ರದರ್ಶನ ಸೈಲೆಂಟ್ ಆಗುತ್ತೆ ಎಂದು ಕೆಲವರು ವ್ಯಂಗ್ಯ ಮಾಡಿದ್ದು, ಅವರ ಮಾತನ್ನೇ ಉಲ್ಲೇಖಿಸಿ ದುನಿಯಾ ವಿಜಯ್ ಕೌಂಟರ್ ಕೊಟ್ಟಿದ್ದಾರೆ ಎನ್ನಲಾಗಿದೆ.
ಪ್ರಕಾಶ್ ರಾಜ್, ಕೆಎಲ್ ರಾಹುಲ್ ಮೆಚ್ಚುಗೆ
ಬಹುಭಾಷಾ ನಟ ಪ್ರಕಾಶ್ ರಾಜ್ ಕೂಡ ರಿಷಬ್ ಶೆಟ್ಟಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ನಿಮ್ಮ ಅಭೂತಪೂರ್ವ ಯಶಸ್ಸಿಗೆ ಅಭಿನಂದನೆಗಳು. ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ನಮ್ಮ ಮಣ್ಣಿನ ಪ್ರತಿಭೆಗಳ ವೈಶಿಷ್ಟ್ಯವನ್ನು, ಕನ್ನಡ ಸಿನೆಮಾದ ಸಾಧ್ಯತೆಯನ್ನು ಹಿರಿಮೆಗೊಳಿಸಿದ ನಿಮ್ಮ ಹಾಗು ನಿಮ್ಮ ತಂಡಕ್ಕೆ ಓಳಿತಾಗಲಿ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಖ್ಯಾತ ಕ್ರಿಕೆಟಿಗ, ಕನ್ನಡಿಗ ಕೆ.ಎಲ್.ರಾಹುಲ್ ಕೂಡ ರಿಷಬ್ ಶೆಟ್ಟಿ ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾವು ಕಾಂತಾರವನ್ನು ವೀಕ್ಷಿಸಿದ್ದೇವೆ. ರಿಷಬ್ ಶೆಟ್ಟಿ ಮತ್ತೊಮ್ಮೆ ಸೃಷ್ಟಿಸಿದ ಮ್ಯಾಜಿಕ್ ಅದ್ಭುತವಾಗಿದೆ. ಇದು ಹೃದಯ ತುಂಬಿ ಮತ್ತು ಸುಂದರವಾಗಿ ಮಂಗಳೂರಿನ ಜನರು ಮತ್ತು ನಂಬಿಕೆಯನ್ನು ಪ್ರತಿನಿಧಿಸುತ್ತದೆ ಎಂದು ರಾಹುಲ್ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.












Click it and Unblock the Notifications