Darshan Thoogudeepa: ದರ್ಶನ್ ತಪ್ಪು ಮಾಡಿದ್ರೆ ಶಿಕ್ಷೆ ಆಗೇ ಆಗುತ್ತೆ: ದಿನಕರ್ ತೂಗುದೀಪ ಹೀಗಂದಿದ್ದೇಕೆ?
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ತೂಗುದೀಪ ಅವರು ಜಾಮೀನು ಪಡೆದು ಹೊರಬಂದಿದ್ದಾರೆ. ದರ್ಶನ್ ಸಹೋದರ ದಿನಕರ್ ತೂಗುದೀಪ ಅವರು ದರ್ಶನ್ ಬಗ್ಗೆ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಿಂದ ದರ್ಶನ್ ಅವರಿಗೆ ಪಶ್ಚಾತಾಪ ಏನಾದ್ರೂ ಆಗಿದ್ಯಾ ಎಂಬ ಪ್ರಶ್ನೆಗೆ ಅವರು ನೇರವಾದ ಉತ್ತರ ಕೊಟ್ಟಿದ್ದಾರೆ.
ಪಶ್ಚಾತಾಪ ಅಂದ್ರೆ ತಪ್ಪು ಮಾಡಿದಾಗ ಬರುತ್ತೆ. ದರ್ಶನ್ ತಪ್ಪೇ ಮಾಡಿಲ್ಲ ಅಂದ ಮೇಲೆ ಪಶ್ಚಾತಾಪದ ಮಾತೇಕೆ? ಎಂದು ದಿನಕರ್ ತೂಗುದೀಪ ದರ್ಶನ್ ಅವರ ಬೆನ್ನಿಗೆ ನಿಂತಿದ್ದಾರೆ. ಇನ್ನು ಘಟನೆಯಿಂದ ಬೇಜಾರಾಗಿರುವುದಂತೂ ಸತ್ಯ. ಮುಂದೇನಾಗುತ್ತೆ ಎಂದು ನೋಡೋಣ ಕೋರ್ಟ್‌ನಲ್ಲಿ ಏನು ತೀರ್ಪು ಬರುತ್ತೋ? ದರ್ಶನ್ ತಪ್ಪು ಮಾಡಿದ್ರೆ ಶಿಕ್ಷೆ ಆಗುತ್ತೆ, ತಪ್ಪು ಮಾಡಿಲ್ಲ ಅಂದ್ರೆ ಬಿಡುಗಡೆ ಆಗೇ ಆಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸದ್ಯ ಮೊದಲಿಗೆ ದರ್ಶನ್ ಅವರ ಆರೋಗ್ಯ ಸುಧಾರಣೆಗೆ ನಮ್ಮ ಮೊದಲ ಆದ್ಯತೆ. ದರ್ಶನ್ ಅವರ ಕಾಲಿನ ಸಮಸ್ಯೆ ನಿವಾರಣೆ ಆದ ನಂತರ ಸಿನಿಮಾಗಳ ಬಗ್ಗೆ ಗಮನ ಕೊಡುತ್ತೇವೆ. ದರ್ಶನ್ ಆರೋಗ್ಯ ಸುಧಾರಿಸಿದರೆ ಸುಮ್ಮನೆ ಕೂರುವ ವ್ಯಕ್ತಿಯೇ ಅಲ್ಲ ಎಂದು ದಿನಕರ್ ಹೇಳಿದ್ದಾರೆ.
ದರ್ಶನ್ ದೈಹಿಕವಾಗಿ ಗಟ್ಟಿಯಾದ ಕೂಡಲೇ ಸಿನಿಮಾಗಳಲ್ಲಿ ಬ್ಯುಸಿಯಾಗೋದು ಗ್ಯಾರಂಟಿ. ಆಗ ಶೂಟಿಂಗ್‌ಗಳಲ್ಲಿ ದರ್ಶನ್ ಭಾಗಿಯಾಗಲಿದ್ದಾರೆ. ನನ್ನ ಈಗಿನ ರಾಯಲ್ ಸಿನಿಮಾ ಬಗ್ಗೆಯೂ ದರ್ಶನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾನು ಸಿನಿಮಾ ಮಾಡುತ್ತೇನೆ ಅಂದ್ರೆ ದರ್ಶನ್ ಕಥೆಯನ್ನೇ ಕೇಳಲ್ಲ. ಅಷ್ಟರಮಟ್ಟಿಗೆ ನನ್ನ ಮೇಲೆ ಅವನಿಗೆ ಕಾನ್ಫಿಡೆನ್ಸ್ ಇದೆ ಎಂದಿದ್ದಾರೆ.

ಇನ್ನು ದರ್ಶನ್ ಈ ಕೇಸ್ ವಿಚಾರವಾಗಿ ಬಹಳ ಡಿಸ್ಟರ್ಬ್ ಆಗಿದ್ದ. ಈಗ ತೋಟದ ಮನೆಗೆ ಹೋಗಿರುವುದರಿಂದ ತನಗೆ ಇಷ್ಟವಾದ ಜಾಗದಲ್ಲಿ ಕಾಲ ಕಳೆಯುತ್ತಿದ್ದಾನೆ. ಅಲ್ಲಿ ಪ್ರಾಣಿ-ಪಕ್ಷಿಗಳೊಂದಿಗೆ ತುಂಬಾ ಖುಷಿಯಿಂದ ಇದ್ದಾನೆ. ನಾನು ನನ್ನ ಕುಟುಂಬ, ಅತ್ತಿಗೆ ಮಕ್ಕಳು ಎಲ್ಲರೂ ಅಲ್ಲಿ ಒಟ್ಟಾಗಿದ್ದು, ಮಜಾ ಮಾಡಿದರು. ದರ್ಶನ್ ಫೇವರೇಟ್ ಅಡುಗೆ ಗಳನ್ನು ಸಹ ಅಲ್ಲೇ ತಯಾರಿಸಿ ಸವಿದೆವು ಎಂದು ಹೇಳಿದ್ದಾರೆ.
ನಾನು ನಮ್ಮ ಅತ್ತಿಗೆಗೆ ಹ್ಯಾಟ್ಸಾಫ್ ಹೇಳಲೇಬೇಕು. ದರ್ಶನ್ ವಿಚಾರದಲ್ಲಿ ನಾನೂ ಸ್ವಲ್ಪ ಕುಗ್ಗಿ ಹೋಗಿದ್ದೆ. ಆಗ ನಮ್ಮ ಅತ್ತಿಗೆ ಬಂದು ದಿನಕರ್ ನೀನು ಯಾವ ಕಾರಣಕ್ಕೆ ಚಿಂತೆ ಮಾಡಬೇಡ. ದರ್ಶನ್ ಅವರನ್ನು ನಾನು ಹೊರಗೆ ಕರ್ಕೊಂಡು ಬರ್ತೀನಿ ಎಂದು ಧೈರ್ಯ ತುಂಬುತ್ತಿದ್ದರು. ಆ ವಿಚಾರದಲ್ಲಿ ಅವರ ಧೈರ್ಯ ನೋಡಿ ನನಗೆ ಶಾಕ್ ಆಗುತ್ತಿತ್ತು ಜೊತೆಗೆ ನಮಗೂ ಧೈರ್ಯ ಬರುತ್ತಿತ್ತು. ನಮ್ಮ ಅಮ್ಮ ಕೂಡ ವಿಜಯಲಕ್ಷ್ಮಿಯಂತಹ ಸೊಸೆ ಪಡೆಯೋಕೆ ನಾನು ಕೂಡ ಪುಣ್ಯ ಮಾಡಿದ್ದೆ ಎಂದು ನೆನೆಯುತ್ತಿದ್ದರು ಎಂದು ದಿನಕರ್ ಹೇಳಿಕೊಂಡಿದ್ದಾರೆ. ಒಬ್ಬ ಅತ್ತೆಯಾಗಿ ಇಂತ ಮೆಚ್ಚುಗೆ ಸಿಗುವುದು ಅಪರೂಪ ಎಂದಿದ್ದಾರೆ. ಸದ್ಯ ದರ್ಶನ್ ಅವರು ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.












Click it and Unblock the Notifications