ಸಾಯೋವರೆಗೂ ತಾಯಿ, ತಾಯಿನೇ; ಅಮ್ಮ ಹಾಳು ಬಾವಿಗೆ ಬೀಳು ಎಂದರೆ ಬೀಳೋಕೂ ರೆಡಿನೇ ಎಂದ ನಟ ದರ್ಶನ್
ಮಂಡ್ಯ, ಏಪ್ರಿಲ್ 03: ಮಂಡ್ಯ ಲೋಕಸಭೆ ಚುನಾವಣೆ ಸಂಬಂಧ ಸಂಸದೆ ಸುಮಲತಾ ಅಂಬರೀಶ್ ಅವರು ಮಹತ್ವದ ನಿರ್ಧಾರವನ್ನ ಪ್ರಕಟಿಸಿದ್ದಾರೆ. ಈ ಸಭೆಯಲ್ಲಿ ನಟ ದರ್ಶನ ಸಹ ಭಾಗಿಯಾಗಿದ್ದು, ಮಂಡ್ಯ ಜಿಲ್ಲೆಯ ಎಲ್ಲಾ ತಾಯಿಯಂದಿರಗೂ ನಾನು ಧನ್ಯವಾದ ಹೇಳ್ತೇನೆ ಎಂದು ನಟ ದರ್ಶನ ಹೇಳಿದ್ದಾರೆ.
ಈ ಕುರಿತು ಬಹಿರಂಗ ಸಭೆಯಲ್ಲಿ ನಟ ದರ್ಶನ ಮಾತನಾಡಿ, ಕಳೆದ ಐದು ವರ್ಷದ ಹಿಂದೆ ಪ್ರಚಾರ ಮಾಡುವಾಗ ಜನ ನಮಗೆ ಪ್ರೀತಿ ಕೊಟ್ಟಿದ್ರು. ನಾನು ಎಲ್ಲೆಲ್ಲಿ ಹೋಗಿದ್ದೆ, ಅಲ್ಲೆಲ್ಲ ಎಳೆನೀರು ಕೊಟ್ಟು ಪ್ರೀತಿ ತೋರಿಸಿದ್ರಿ. ಮಂಡ್ಯ ಜಿಲ್ಲೆಯ ಎಲ್ಲಾ ರೈತರಿಗೂ ನಾನು ಧನ್ಯವಾದ ತಿಳಿಸುತ್ತೇನೆ. ಪ್ರಚಾರಕ್ಕೆ ಹೋದ ಕಡೆ ಎಲ್ಲಾ ತಾಯಂದಿರು ನಮಗೆ ಸ್ವಾಗತ ಕೋರಿದ್ದರು. ನಾನು ಮಂಡ್ಯ ಜಿಲ್ಲೆಯ ಜನತೆಯ ಪ್ರೀತಿಯನ್ನ ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.

ಯಮ ಕೂಡ ನನ್ನನ್ನು ಬಂದು ಕರೆದರೆ ಇರಪ್ಪ, ನಮ್ಮಮ್ಮನ ಒಂದೇ ಒಂದು ಕೆಲಸ ಇದೆ. ಮುಗಿಸಿಕೊಂಡು ಬರುತ್ತೇನೆ ಎಂದು ಹೇಳ್ತೇನೆ. ಯಾಕೆಂದರೆ ಆ ಮನೆಗೂ, ನಮಗೂ ಅಷ್ಟೊಂದು ಬಾಂಧವ್ಯ ಇದೆ. ಕಳೆದ ಚುನಾವಣೆ ವೇಳೆ ಬಲಗೈ ಮುರಿದಿತ್ತು, ಈಗ ಎಡಗೈ ಪೆಟ್ಟಾಗಿದೆ. ನಿಜ ಹೇಳಬೇಕು ಎಂದರೆ ಇವತ್ತು ಕೈ ಆಪರೇಷನ್ ಇತ್ತು. ಆದರೆ ಅಮ್ಮನಿಗೆ ಡೇಟ್ ಕೊಟ್ಟಿದ್ದೀನಿ ಎಂದು ಕ್ಯಾನ್ಸಲ್ ಮಾಡಿಸಿಕೊಂಡೆ. ಇವತ್ತಿನ ಈ ಕಾರ್ಯಕ್ರಮ ಮುಗಿಸಿಕೊಂಡು ಹೋಗಿ, ರಾತ್ರಿ ಆಸ್ಪತ್ರೆಗೆ ಅಡ್ಮಿಟ್ ಆಗ್ತೇನೆ. ನಾಳೆ ಬೆಳಗ್ಗೆ ಆಪರೇಷನ್ ಮಾಡಿಸಿಕೊಳ್ತೇನೆ ಎಂದು ವೇದಿಕೆಯ ಮೇಲೆ ನಟ ದರ್ಶನ ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ನಾನು ರಾಜಕೀಯವಾಗಿ ನಾನು ಏನೂ ಮಾತನಾಡಲ್ಲ. ಆದರೆ ಒಂದೇ ಒಂದು ಮಾತು ಹೇಳ್ತೇನೆ. ಮನೆ ಮಕ್ಕಳು ಮಕ್ಕಳ ರೀತಿಯಲ್ಲೇ ಇರಬೇಕು. ಇವತ್ತು ತಾಯಿ ಅನ್ಕೊಂಡು ನಾಳೆ, ಅವರಿಗೂ ನಮಗೂ ಸಂಬಂಧ ಇಲ್ಲ ಎಂದು ಹೇಳೋದಲ್ಲ. ಸಾಯೋವರೆಗೂ ತಾಯಿ ತಾಯಿನೇ. ಅಮ್ಮ ಏನೇ ಹೇಳಿದ್ದರೂ ಮಾಡ್ತೀನಿ. ಹಾಳು ಬಾವಿಗೆ ಅವರು ಬೀಳು ಎಂದರೂ ಬೀಳೋಕೆ ರೆಡಿನೇ ನಾನು. ಯಾಕೆಂದ್ರೆ ಆ ಮನೆಗೂ, ನಮಗೂ ಅಷ್ಟೊಂದು ಪ್ರೀತಿ ಕೊಟ್ಟಿದೆ ಎಂದರು. ಅಂಬರೀಶ್ ಅಂದ್ರೆ ಮಂಡ್ಯ, ಮಂಡ್ಯ ಅಂದ್ರೆ ಅಂಬರೀಶ್ ನಮ್ಮ ನಿಮ್ಮ ಪ್ರೀತಿ ಎಂದಿಗೂ ಇರುತ್ತದೆ ಎಂದು ತಿಳಿಸಿದರು.












Click it and Unblock the Notifications