ಅಬ್ಬಬ್ಬಾ! ಇದೇನ್ ಗುರು... 'ಪುಷ್ಪ-2' ಟಿಕೆಟ್ ರೇಟ್ ಇಷ್ಟಾಗಿದ್ಯಾ?
ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪುಷ್ಪ-2 ಸಿನಿಮಾ ರಿಲೀಸ್‌ಗೆ ಕ್ಷಣಗಣನೆ ಶುರುವಾಗಿದೆ. ಇಂದಿನಿಂದ ಸಿನಿಮಾದ ಮುಂಗಡ ಟಿಕೆಟ್ ಕೂಡ ಆರಂಭವಾಗಿದ್ದು, ಟಿಕೆಟ್ ದರ ನೋಡಿ ಪ್ರೇಕ್ಷಕರು ಕಂಗಾಲಾಗಿದ್ದಾರೆ. ಈ ಸಿನಿಮಾಗೆ ಕ್ರೇಜ್ ಹೆಚ್ಚಾಗಿರುವುದರಿಂದ ಟಿಕೆಟ್ ದರ ದಿಢೀರನೆ ಏರಿಸಿದ್ದಾರೆ ಎಂದು ಮಲ್ಟಿಪ್ಲೆಕ್ಸ್‌ಗಳ ವಿರುದ್ಧ ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲೂ ಈ ಸಿನಿಮಾಗೆ ಹೆಚ್ಚು ಕ್ರೇಜ್ ಇದ್ದು, ರಿಲೀಸ್ ದಿನ ಮುಂಜಾನೆ 4 ಗಂಟೆಯಿಂದಲೇ ಶೋಗಳನ್ನು ಹಾಕಿದೆ. ಈಗಾಗಲೇ ಕೆಲವರು ಶೋ ಟಿಕೆಟ್ ಬುಕಿಂಗ್ ಮಾಡಿ ಅದನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರಿನಲ್ಲೇ ಈ ಶೋ ಟಿಕೆಟ್ ದರವು 800 ರೂಪಾಯಿಯಿಂದ 1,000 ರೂಪಾಯಿವರೆಗೆ ಇದೆ ಎಂದು ಹೇಳಲಾಗುತ್ತಿದೆ.

ಇನ್ನೂ ಕೆಲವು ಕಡೆ ಸಾವಿರಾರು ರೂಪಾಯಿಗೂ ಹೆಚ್ಚಿನ ಬೆಲೆಯನ್ನು ಏರಿಸಲಾಗಿದೆ. ಅಸಲಿಗೆ ಈ ಸಿನಿಮಾ ಎರಡು ತೆಲುಗು ರಾಜ್ಯಗಳಲ್ಲಿ ಬಿಡುಗಡೆಯಾಗುತ್ತಿದ್ದು, ಅಲ್ಲಿಗಿಂತಲೂ ಬೆಂಗಳೂರಿನಲ್ಲೇ ಟಿಕೆಟ್ ದರ ಹೆಚ್ಚಾಗಿದೆ ಎಂದು ಫ್ಯಾನ್ಸ್ ಹಿಡಿಶಾಪ ಹಾಕುತ್ತಿದ್ದಾರೆ.
ಪುಷ್ಪಾ ದಿ ರೂಲ್ ನಿರ್ಮಾಪಕರು ತಮ್ಮ ಚಿತ್ರಗಳಿಗೆ ಟಿಕೆಟ್ ದರವನ್ನು ಹೆಚ್ಚಿಸಲು ತೆಲಂಗಾಣ ಮತ್ತು ಆಂಧ್ರಪ್ರದೇಶದಿಂದ ಅನುಮತಿ ಪಡೆದಿದ್ದಾರೆ ಎಂದು ವರದಿಯಾಗಿದೆ. ಈ ಎರಡೂ ತೆಲುಗು ರಾಜ್ಯಗಳಲ್ಲಿ ಪುಷ್ಪ ಸಿನಿಮಾದ ಟಿಕೆಟ್ ದರವು 600 ರೂಪಾಯಿವರೆಗೆ ಏರಿಸಲು ಅಲ್ಲಿನ ಸರ್ಕಾರಗಳು ಅನುಮತಿ ನೀಡಿವೆ ಎಂದು ಹೇಳಲಾಗಿದೆ.

ಏಕೆಂದರೆ ಅಲ್ಲಿ ಸಿನಿಮಾ ಟಿಕೆಟ್ ದರವನ್ನು ಮನಬಂದಂತೆ ಏರಿಸುವಂತಿಲ್ಲ. ಇನ್ನು ಸದ್ಯ ಟಾಲಿವುಡ್ ಸಿನಿಮಾಗಳ ಪೈಕಿ ಇದೇ ದುಬಾರಿ ಟಿಕೆಟ್ ದರ ಎಂದು ವರದಿಯಾಗಿದೆ. ಎರಡೂ ರಾಜ್ಯಗಳಲ್ಲಿ ಡಿಸೆಂಬರ್ 5ರಿಂದ ಡಿಸೆಂಬರ್ 9ರವರೆಗೆ ಮಾತ್ರವೇ ಈ ದರ ಹೆಚ್ಚಳಕ್ಕೆ ಅನುಮತಿ ನೀಡಲಾಗಿದೆ. ಬಳಿಕ ಎಂದಿನಂತೆ ಸಾಮಾನ್ಯ ದರವೇ ಇರಲಿದೆ ಎಂದು ಹೇಳಲಾಗಿದೆ.
ಈ ಹಿಂದೆ ನಟ ಡಾರ್ಲಿಂಗ್ ಪ್ರಭಾಸ್ ನಟನೆಯ ಕಲ್ಕಿ 2898 AD, ಸಲಾರ್ ಹಾಗೂ ಜ್ಯೂನಿಯರ್ ಎನ್‌ಟಿಆರ್ ನಟಿಸಿದ್ದ ದೇವರ ಸಿನಿಮಾಗಳು ಕೂಡ ಸರ್ಕಾರಗಳಿಂದ ಅನುಮತಿ ಪಡೆದು ಟಿಕೆಟ್ ದರವನ್ನು ಹೆಚ್ಚಿಸಿದವು. ಆಗ ಟಿಕೆಟ್ ದರಗಳು ಸಾಮಾನ್ಯ ದರಕ್ಕಿಂತ ಹೆಚ್ಚು ಅಂದರೆ 395 ರೂಪಾಯಿ, 403 ರೂಪಾಯಿ ಹಾಗೂ 495 ರೂಪಾಯಿವರೆಗೆ ನಿಗದಿ ಪಡಿಸಿದ್ದವು.

ಆದರೆ ಈ ಬಾರಿ, ಪುಷ್ಪಾ ದಿ ರೂಲ್ ಸಿನಿಮಾ ಈ ವಿಚಾರದಲ್ಲೂ ರೆಕಾರ್ಡ್ ಬ್ರೇಕ್ ಮಾಡಿದೆ. ಸದ್ಯ ಪುಷ್ಪ ಸಿನಿಮಾಗೆ 600 ರೂಪಾಯಿವರೆಗೆ ಟಿಕೆಟ್ ದರ ನಿಗದಿಪಡಿಸಲು ಅನುಮತಿ ನೀಡಿರುವುದರಿಂದ ಬಾಕ್ಸಾಫೀಸ್‌ನಲ್ಲಿ ಕಮಾಲ್ ಮಾಡಲು ಮುಂದಾಗಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ತೆಲುಗು ಸಿನಿಮಾಗಳ ಪೈಕಿ ಈ ಟಿಕೆಟ್ ದರ ಹೆಚ್ಚು ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಕನಿಷ್ಠವೆಂದರೂ ಎರಡೂ ರಾಜ್ಯಗಳಿಂದ 200 ಕೋಟಿ ರೂಪಾಯಿಯಷ್ಟು ಕಲೆಕ್ಷನ್ ದಾಟುವುದು ಪಕ್ಕಾ ಎಂದು ಹೇಳಲಾಗುತ್ತಿದೆ.












Click it and Unblock the Notifications