ಬಾಡಿ ಬರಲಿಲ್ಲ ಮನುಷ್ಯ ಬಂದ್ನಲ್ಲ ಅಂತ ಬೇಜಾರಾಗಿರಬೇಕು: ಕನ್ನಡತಿ ಖ್ಯಾತಿಯ ಕಿರಣ್‌ರಾಜ್ ಹಿಂಗಂದಿದ್ಯಾಕೆ
ಕನ್ನಡತಿ ಧಾರಾವಾಹಿ ಖ್ಯಾತಿಯ ನಟ ಕಿರಣ್‌ರಾಜ್ ಅವರು ಈಚೆಗೆ ಕಾರು ಆಕ್ಸಿಡೆಂಟ್‌ವೊಂದರಲ್ಲಿ ಗಾಯಗೊಂಡಿದ್ದರು. ಅವರು ಅಪಘಾತಕ್ಕೆ ಒಳಗಾದ ಮರುದಿನವೇ ಅವರ ರಾನಿ ಸಿನಿಮಾ ಬಿಡುಗಡೆಯಾಗುವುದಿತ್ತು. ಆದರೆ, ಸಣ್ಣ ಅಪಘಾತ ಹಾಗೂ ಅದರ ಬೆನ್ನಲ್ಲೇ ಅವರು ವಿಡಿಯೋ ಮಾಡಿ ಹಾಕಿದ್ದು, ಹಲವರಲ್ಲಿ ಅನುಮಾನ ಮೂಡಿಸಿತ್ತು. ಕೆಲವರು ಇದು ಸಿನಿಮಾಗಾಗಿ ಮಾಡಿರುವ ಗಿಮಿಕ್ ಎಂಬರ್ಥದಲ್ಲಿ ಮಾತನಾಡಿದ್ದರು. ಅದೆಲ್ಲದಕ್ಕೂ ಕಿರಣ್‌ರಾಜ್ ಅವರು ತಿರುಗೇಟು ನೀಡಿದ್ದಾರೆ. ಗಿಮಿಕ್ ಮಾಡಿದ್ರೆ ಜನ ಥಿಯೇಟರ್‌ಗೆ ಬರ್ತಾರಾ ಅಂತ ಪ್ರಶ್ನೆ ಮಾಡಿದ್ದಾರೆ.
ಅಪಘಾತ ಸಿನಿಮಾ ಪ್ರಚಾರದ ಭಾಗವಾಗಿತ್ತು ಎನ್ನುವ ಆರೋಪದ ಬಗ್ಗೆ ಖಡಕ್ ರಿಪ್ಲೈ ಕೊಟ್ಟಿರುವ ಕಿರಣ್ ರಾಜ್ ಅವರು ನಾನು ನಿಜವಾಗಿಯೂ ಸಿನಿಮಾ ಪ್ರಚಾರಕ್ಕಾಗಿಯೇ ಅಪಘಾತ ಆಗಿದೆ ಅಂತ ಹೇಳಿಕೊಂಡಿದ್ದರೆ, ಸಿನಿಮಾದ ಹಿಂದಿನ ದಿನ ಮಾಡುತ್ತಿರಲಿಲ್ಲ. ಮೂರ್ನಾಲ್ಕು ವಾರಗಳ ಹಿಂದೆಯೇ ಮಾಡಿ, ನಾಲ್ಕೈದು ದಿನ ಆಸ್ಪತ್ರೆಯಲ್ಲಿ ಇರುತ್ತಿದ್ದೆ. ಆದರೆ, ನಾನು ಆ ರೀತಿ ಮಾಡಲಿಲ್ಲ. ಯಾಕೆಂದರೆ ನನಗೆ ಅದರ ಅವಶ್ಯಕತೆಯೂ ಇಲ್ಲ. ನಾನು ಒಂದು ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಅಪಘಾತವಾಗಿದೆ ಅಂತ ಹೇಳಿದ್ರೆ ನನಗೆ ಬೇರೆ ಸಿನಿಮಾದಲ್ಲಿ ಕೆಲಸ ಮಾಡೋದಕ್ಕೆ ಅವಕಾಶ ಸಿಗುತ್ತಾ ನಾನೇಕೆ ಆ ತರ ಮಾಡ್ಬೇಕು ಅಂತ ಕಿರಣ್‌ರಾಜ್ ಪ್ರಶ್ನೆ ಮಾಡಿದ್ದಾರೆ.

ನಾನು ಅಪಘಾತದಿಂದ ಚೇತರಿಸಿಕೊಂಡ ಕೂಡಲೇ ವಿಡಿಯೋ ಮಾಡಿದ್ದೇನೆ. ಆ ವಿಡಿಯೋದಲ್ಲೂ ನನಗೆ ಏನು ಆಗಿಲ್ಲ. ನಾನು ಆರಾಮಾಗಿ ಇದ್ದೇನೆ. ಯಾರು ಪ್ಯಾನಿಕ್ ಆಗ್ಬೇಡಿ ಅಂತನೇ ಹೇಳಿದ್ದೀನಿ. ಪ್ರಚಾರ, ಇಲ್ಲ ಗಿಮಿಕ್ ಮಾಡೋ ಅವಶ್ಯಕತೆ ಇದ್ದರೆ ಬ್ಯಾಂಡೇಜ್ ಕಟ್ಟಿಕೊಂಡು, ಕುಂಟಿಕೊಂಡು ಓಡಾಡ್ತಿದೆ. ಗಿಮಿಕ್‌ನಿಂದ ಯಾರು ಚಿತ್ರ ಮಂದಿರಕ್ಕೆ ಬರೋದಿಲ್ಲ. ಆ ರೀತಿ ಯಾವ ಕಲಾವಿದರೂ ಮಾಡವುದಿಲ್ಲ. ಪ್ರಚಾರ ಮಾಡುವುದಕ್ಕೆ ಸಾಕಾದಷ್ಟು ವೇದಿಕೆಗಳಿವೆ ಎಂದು ಹೇಳಿದರು.
ಸಿನಿಮಾದಲ್ಲಷ್ಟೇ ನಾನು ನಟಿಸ್ತೀನಿ, ಹೊರಗಲ್ಲ
ನಾನು ಸಿನಿಮಾದಲ್ಲಿ ನಟನೆ ಮಾಡೋದಕ್ಕೆ ದುಡ್ಡು ತಗೋತೀನಿ. ನಿಜ ಜೀವನದಲ್ಲಿ ನಟಿಸುವ ಅವಶ್ಯಕತೆ ಇಲ್ಲ. ನಟನಾಗಿ ಸಿನಿಮಾಗಳಲ್ಲಿ ನಟಿಸಿರುವ ನನಗೆ ಹೊರಗೆ ನಾಟಕ ಮಾಡುವುದು ದೊಡ್ಡ ವಿಷಯವೇನಲ್ಲ. ಆದರೆ, ನಾನು ಅಷ್ಟು ಕೀಳು ಮಟ್ಟಕ್ಕೆ ಇಳಿಯುವುದಿಲ್ಲ. ಈ ಸಿನಿಮಾಗಾಗಿ ನಾನು 2 ವರ್ಷಗಳಿಂದ ಕಷ್ಟಪಟ್ಟಿದ್ದೇನೆ. ಎರಡು ವರ್ಷದ ಪರಿಶ್ರಮದ ಮುಂದೆ ಗಿಮಿಕ್ ಯಾಕೆ ಬೇಕು. ಅಪಘಾತವಾದ ಸಂದರ್ಭದಲ್ಲಿ ತಂದೆ - ತಾಯಿಗೆ ಯಾವುದೇ ಕಾರಣಕ್ಕೂ ಈ ವಿಷಯ ತಿಳಿಯಬಾರದು ಎಂದು ನಮ್ಮ ಮ್ಯಾನೇಜರ್‌ಗೆ ಹೇಳಿದ್ದೆ. ಯಾಕೆಂದರೆ ಮನೆಯಲ್ಲಿ ಸಂತೋಷದ ವಾತಾವರಣ ಇತ್ತು. ನಾಳೆ ಮಗನ ಸಿನಿಮಾ ಬರ್ತಿದೆ ಅಂತ ಅಪ್ಪ - ಅಮ್ಮ ಖುಷಿಯಾಗಿದ್ದರು. ಅವರ ಸಂತೋಷ ಹಾಳಾಗಬಾರದು ಹಾಗೂ ಆತಂಕಕ್ಕೆ ಒಳಗಾಗಬಾರದು. ಆಶ್ರಮದವರೂ ಸಹ ಆಘಾತಕ್ಕೆ ಒಳಗಾಗಬಾರದು ಎನ್ನುವುದಷ್ಟೇ ನನ್ನ ಉದ್ದೇಶವಾಗಿತ್ತು. ಬಹುಶಃ ಕೆಲವರು ಬಾಡಿ ಬರುತ್ತೆ ಅಂತ ಕಾಯ್ತಿದ್ದರು ಅನಿಸುತ್ತೆ. ಮನುಷ್ಯಬಂದಿದ್ದು ಇಷ್ಟವಾಗಿಲ್ಲ ಅನಿಸುತ್ತೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಚಾರಕ್ಕಾಗಿ ಸಾವಿರಾರು ಜನರ ದುಃಖ ಬಯಸಲ್ಲ
ನನ್ನ ಸಿನಿಮಾ ಪ್ರಚಾರಕ್ಕಾಗಿ ನಾನು ಸಾವಿರಾರು ಜನರಿಗೆ ದುಃಖ ಕೊಡಲು ಇಷ್ಟ ಪಡೋನಲ್ಲ. ಆ ರೀತಿ ಸಾವಿರಾರು ಜನರಿಗೆ ನೋವು ಕೊಟ್ಟು ಸಿನಿಮಾ ಪ್ರಚಾರ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಮಾರ್ಕೆಟಿಂಗ್ ಹಾಗೂ ಸಿನಿಮಾ ಪ್ರಚಾರ ಮಾಡುವುದಕ್ಕೆ ಬೇರೆಯದೇ ಅವಕಾಶಗಳಿವೆ. ಇಷ್ಟೊಂದು ಸಣ್ಣತನದ ಗಿಮಿಕ್ ಮಾಡುವ ಅವಶ್ಯಕತೆ ನನಗೆ ಇಲ್ಲ. ನಾನು ಈ ಅಪಘಾತ ನಡೆದ ಸಂದರ್ಭವನ್ನು ಸಿಂಪತಿಗಾಗಿ ಬಳಸಿಕೊಂಡಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಜನ ಗಿಮಿಕ್ ಮಾಡಿದರೆ ಸಿನಿಮಾ ನೋಡೋಕೆ ಬರಲ್ಲ. ಹೆಚ್ಚೆಂದರೆ 100 ಟಿಕೆಟ್ ಹೆಚ್ಚಿಗೆ ಮಾರಾಟವಾಗಬಹುದು. ಇವೊತ್ತು ಗಿಮಿಕ್ ಮಾಡಿದರೆ, ನಾಳೆ ನಿಜವಾಗಿ ಏನಾದ್ರು ಆದ್ರೂ ಜನ ಬರಲ್ಲ ಅಂತ ಹೇಳಿದ್ದಾರೆ.












Click it and Unblock the Notifications