'ಆಪ್ತಮಿತ್ರ-3' ಸಿನಿಮಾ ಸೆಟ್ಟೇರಲಿದೆಯಾ? ನಟ ರಮೇಶ್ ಅರವಿಂದ್ ಮತ್ತೆ ನಟಿಸುತ್ತಾರಾ?
ಕನ್ನಡ ಚಿತ್ರರಂಗದ ಹಾರರ್ ಸಿನಿಮಾಗಳ ಪೈಕಿ ನಟ ವಿಷ್ಣುವರ್ಧನ್ ಅಭಿನಯದ ಆಪ್ತಮಿತ್ರ ಕೂಡ ಒಂದು. 2004ರಲ್ಲಿ ಈ ಸಿನಿಮಾದಲ್ಲಿ ನಟಿ ಸೌಂದರ್ಯ ಅವರ ನಾಗವಲ್ಲಿ ಪಾತ್ರ ನೋಡಿ ಜನ ಬೆಚ್ಚಿಬಿದ್ದಿದ್ದರು. ಬಳಿಕ ಇದರ ಮುಂದುವರಿದ ಭಾಗವಾಗಿ ಆಪ್ತರಕ್ಷಕ ಕೂಡ ರಿಲೀಸ್ ಆಗಿತ್ತು. ಬಳಿಕ ಇದರ ಸೀಕ್ವೆಲ್ ಆಪ್ತಮಿತ್ರ-3 ಕೂಡ ಬರಲಿದೆ ಎಂದು ಹೇಳಲಾಗಿತ್ತು. ಆದರೆ ಮೊದಲೆರಡು ಸಿನಿಮಾಗಳ ಅವಧಿಯಲ್ಲೇ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಸೌಂದರ್ಯ ಹಾಗೂ ವಿಷ್ಣುವರ್ಧನ್ ಅವರು ಸಾವನ್ನಪ್ಪಿದ್ದರು. ಇದೇ ಕಾರಣಕ್ಕೆ ಮತ್ತೊಂದು ಸಿನಿಮಾ ಸೆಟ್ಟೇರಲಿಲ್ಲ. ಇದೀಗ ಆಪ್ತಮಿತ್ರ-3 ಬಗ್ಗೆ ನಟ ರಮೇಶ್ ಅರವಿಂದ್ ಮಾತನಾಡಿದ್ದಾರೆ.
ಆಪ್ತಮಿತ್ರ ಸಿನಿಮಾದಲ್ಲಿ ನಟ ರಮೇಶ್ ಅರವಿಂದ್ ಅವರು ವಿಷ್ಣುವರ್ಧನ್ ಅವರ ಸ್ನೇಹಿತನ ಪಾತ್ರದಲ್ಲಿ ನಟಿಸಿದ್ದರು. ಆದರೆ ಈ ಸಿನಿಮಾ ವೇಳೆ ನಟಿ ಸೌಂದರ್ಯ ಅವರು ಭೀಕರ ದುರಂತದಲ್ಲಿ ಸಾವನ್ನಪ್ಪಿದ್ದರು. ಆ ಸಾವಿಗೂ ನಾಗವಲ್ಲಿ ಪಾತ್ರಕ್ಕೂ ಸಂಬಂಧವಿದೆ ಎಂದೆಲ್ಲ ಸುದ್ದಿ ಹಬ್ಬಿತ್ತು. ಬಳಿಕ ಆಪ್ತಮಿತ್ರ ಸಿನಿಮಾದ ಸೀಕ್ವೆಲ್ ಆಪ್ತರಕ್ಷಕ ಸಿನಿಮಾ ಕೂಡ ರಿಲೀಸ್ ಆಗುವ ಮುನ್ನವೇ ವಿಷ್ಣುವರ್ಧನ್ ಅವರು ಕೂಡ ನಿಧನರಾದರು. ಇದು ಭಯಾನಕ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿತ್ತು.

2010ರಲ್ಲಿ ವಿಷ್ಣುವರ್ಧನ್ ಅಭಿನಯದ "ಆಪ್ತರಕ್ಷಕ" ಅವರ 200ನೇ ಸಿನಿಮಾ ಆಗಿತ್ತು. ಇದೇ ಅವರ ನಿಧನದ ನಂತರ ರಿಲೀಸ್ ಆಗಿತ್ತು. ಎರಡೂ ಸಿನಿಮಾಗಳ ಅವಧಿಯಲ್ಲೇ ಪ್ರಮುಖ ಪಾತ್ರಧಾರಿಗಳು ಸಾವನ್ನಪ್ಪಿದ್ದರಿಂದ ಗಾಳಿಸುದ್ದಿಗಳು ಹರಿದಾಡಿದ್ದವು. ನಾಗವಲ್ಲಿ ಆತ್ಮ ಅಂತೆಲ್ಲ ಸುದ್ದಿ ಹಬ್ಬಿತ್ತು. ಎಲ್ಲ ಅಂದುಕೊಂಡಂತಾಗಿದ್ದರೆ ಇಷ್ಟೊತ್ತಿಗೆ ಆಪ್ತಮಿತ್ರ-3 ಕೂಡ ರಿಲೀಸ್ ಆಗಬೇಕಿತ್ತು. ಆ ಎರಡು ಘಟನೆಗಳ ನಂತರ ಮತ್ತೆ ಅದರ ಸೀಕ್ವೆಲ್ ಮುಂದುವರಿಸಲು ಆಸಕ್ತಿ ತೋರಲಿಲ್ಲ ಎನ್ನಲಾಗಿದೆ.
ಆದರೆ ಈ ಸಿನಿಮಾಗಳು ಬಂದು ದಶಕಗಳೇ ಕಳೆದರೂ ಆಪ್ತಮಿತ್ರ ಎನ್ನುವ ಸಿನಿಮಾ ಬಗೆಗಿನ ಕುತೂಹಲ ಕಡಿಮೆಯಾಗಿಲ್ಲ. ಆಪ್ತಮಿತ್ರ-3 ಸಿನಿಮಾ ಕೂಡ ಬರಬೇಕು ಎಂದು ಹಲವರು ಬೇಡಿಕೆ ಇಡುತ್ತಲೇ ಇದ್ದಾರೆ. ಇನ್ನು ಈ ಬಗ್ಗೆ ರಮೇಶ್ ಅರವಿಂದ್ ಇತ್ತೀಚೆಗೆ ಮಾತನಾಡಿದ್ದಾರೆ. ಆಪ್ತಮಿತ್ರ-3 ಬರುತ್ತಾ, ಇಲ್ವಾ ಎಂಬ ಪ್ರಶ್ನೆಗೆ ಕ್ಲಾರಿಟಿ ಕೊಟ್ಟಿದ್ದಾರೆ.
ನಾಗವಲ್ಲಿ ಒಂದು ವಿಷಯ
ನನ್ನ ಪ್ರಕಾರ ನಾಗವಲ್ಲಿ ಅನ್ನೋದು ಒಂದು ಸಬ್ಜೆಕ್ಟ್, ಅದೊಂದು ಸ್ಕ್ರೀನ್, ಕ್ಯಾರೆಕ್ಟರ್ ಅಷ್ಟೇ. ಆಪ್ತರಕ್ಷಕ ಸಿನಿಮಾ ಮಾಡುವ ವೇಳೆ ಅಂತಹ ಕಥೆಯೊಂದು ಬಂದಿತ್ತು. ಆದರೆ ಆಪ್ತಮಿತ್ರ, ಆಪ್ತರಕ್ಷಕ ಆದ ಮೇಲೆ ನಾನು ಮಾಡುತ್ತಿರುವ ಹಾರರ್ ಸಿನಿಮಾ "ದೈಜಿ" ಮಾತ್ರ ಎಂದಿದ್ದಾರೆ. ಹಾಗಾಗಿ ಸದ್ಯಕ್ಕೆ ಆಪ್ತಮಿತ್ರ-3 ಸೆಟ್ಟೇರುವುದು ಅನುಮಾನ ಎನ್ನಲಾಗಿದೆ. ಇತ್ತೀಚೆಗೆ ಡಾ.ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿರುವುದಕ್ಕೆ ಕೂಡ ರಮೇಶ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications