‘ಸಲಾರ್’ ಸಿನಿಮಾ ಯಾಕೆ ನೋಡಬೇಕು, 7 ಕಾರಣಗಳು ಇಲ್ಲಿವೆ ನೋಡಿ!
ಅಂತೂ ಕನ್ನಡಿಗರ ತೆಲುಗು ಸಿನಿಮಾ 'ಸಲಾರ್' ಜಗತ್ತಿನಾದ್ಯಂತ ಇಂದು ಅಬ್ಬರದಿಂದಲೇ ರಿಲೀಸ್ ಆಗಿದೆ. ಹಲವು ಬಾರಿ 'ಸಲಾರ್' ಸಿನಿಮಾ ಡೇಟ್ ಮುಂದೂಡಿಕೆ ಆಗಿದ್ದರೂ, ಈ ಸಿನಿಮಾ ತನ್ನ ಕೆಪಾಸಿಟಿ ಏನು ಅನ್ನೋದನ್ನ ಪ್ರೂವ್ ಮಾಡಿದೆ. ಜಗತ್ತಿನಾದ್ಯಂತ ಸಾವಿರ ಸಾವಿರ ಥಿಯೇಟರ್‌ಗಳಲ್ಲಿ ಸಲಾರ್ ಅಬ್ಬರ ಶುರುವಾಗಿದ್ದು, ಹಾಗಾದ್ರೆ ಸಿನಿಮಾ ನೋಡಿದ ಅಭಿಮಾನಿಗಳು ಹೇಳಿದ್ದು ಏನು? ಪ್ರಭಾಸ್ ಗೆದ್ದರಾ? ಅಥವಾ ಮತ್ತೆ ಸೋತರಾ? ಮುಂದೆ ಓದಿ.
ಪ್ರಶಾಂತ್ ನೀಲ್ ಡೈರೆಕ್ಟರ್ ಕ್ಯಾಪ್ ಹಾಕಿ ನಿಂತರು ಅಂದ್ರೆ ಅಲ್ಲಿ ಏನೋ ಒಂದು ಕಮಾಲ್ ಗ್ಯಾರಂಟಿ. ಸಿನಿಮಾದ ಪ್ರತಿಯೊಂದು ಸೀನ್ ಕೂಡ ಹಿಂಗೆ ಬರಬೇಕು, ಹಿಂಗೆ ಇರಬೇಕೆಂಬ ಕನಸುಗಳ ಜೊತೆಗೆ ಪ್ರಶಾಂತ್ ನೀಲ್ ಹೆಜ್ಜೆ ಹಾಕುತ್ತಾರೆ. ಹೀಗಾಗಿಯೇ ಪ್ರಶಾಂತ್ ನೀಲ್‌ರ ಸಿನಿಮಾಗಳು ಸಖತ್ ಸರ್ಪ್ರೈಸ್ ಕೊಡುತ್ತವೆ. ಉಗ್ರಂ, ಕೆಜಿಎಫ್-1, ಕೆಜಿಎಫ್-2 ಸಿನಿಮಾಗಳ ಮೂಲಕ ಪ್ರಶಾಂತ್ ನೀಲ್ ಇದನ್ನ ಸಾಧಿಸಿ ತೋರಿಸಿದ್ದಾರೆ. ಹಾಗಾದ್ರೆ ಇದೀಗ ತಮ್ಮ 3ನೇ ಸಿನಿಮಾ, 'ಸಲಾರ್' ಅಖಾಡದಲ್ಲಿ ಪ್ರಶಾಂತ್ ನೀಲ್ ಗೆದ್ದು ಬೀಗಿದ್ದಾರೆ. ಹಾಗಾದರೆ ಈಗ ಕನ್ನಡಿಗರು 'ಸಲಾರ್' ಸಿನಿಮಾನ ಏಕೆ ನೋಡಬೇಕು? 7 ಕಾರಣಗಳು ಇಲ್ಲಿವೆ ತಿಳಿಯಿರಿ.

ಕಾರಣ-1: ಬಾಹುಬಲಿ ಪ್ರಭಾಸ್ ಈಸ್ ಬ್ಯಾಕ್!
ಸಲಾರ್ ಸಿನಿಮಾನ ಯಾಕೆ ನೋಡಬೇಕು ಎಂಬುದಕ್ಕೆ ಮೊದಲ ಕಾರಣವೇ ನಟ ಪ್ರಭಾಸ್ ಎನ್ನಬಹುದು. ಯಾಕಂದ್ರೆ ನಟ ಡಾರ್ಲಿಂಗ್ ಪ್ರಭಾಸ್ ಬಾಹುಬಲಿ-1 ಮತ್ತು ಬಾಹುಬಲಿ-2 ಮೂಲಕ ದೊಡ್ಡ ಸಾಧನೆ ಮಾಡಿ ವರ್ಲ್ಡ್ ಲೆವೆಲ್ ಸ್ಟಾರ್ ಆಗಿದ್ದರು. ಆದರೆ ಆ ನಂತರ, ಸಾಲು ಸಾಲು ಸೋಲುಗಳಿಂದ ಕಂಗೆಟ್ಟು ಹೋಗಿದ್ದರು ಪ್ರಭಾಸ್. ಈಗ ಸಲಾರ್ ಸಿನಿಮಾ ಮೂಲಕ ಹಳೇ ಪ್ರಭಾಸ್ ಕಂಬ್ಯಾಕ್ ಮಾಡಿದ್ದಾರೆ.
ಕಾರಣ-2: ಕೆಜಿಎಫ್-2ಗಿಂತ 10 ಪಟ್ಟು ದೊಡ್ಡದು
ಕನ್ನಡ ಸಿನಿಮಾಗಳಿಗೆ ಹೊಸ ಗತ್ತು ತಂದುಕೊಟ್ಟಿದ್ದ ಸಿನಿಮಾ ಅಂದ್ರೆ ಕೆಜಿಎಫ್-1 ಹಾಗೂ ಕೆಜಿಎಫ್-2. ಉತ್ತರ ಭಾರತದಲ್ಲಿ ಕನ್ನಡ ಸಿನಿಮಾಗಳ ಬಗ್ಗೆ ಅಸಡ್ಯ ಭಾವನೆ ಇದ್ದಾಗಲೇ, ಕನ್ನಡಿಗರ 'ಕೆಜಿಎಫ್' ಸರಣಿ ಸಿನಿಮಾ ದೊಡ್ಡ ಕಮಾಲ್ ಮಾಡಿತ್ತು. ಇದೀಗ 'ಕೆಜಿಎಫ್ ಚಾಪ್ಟರ್ 2'ಗಿಂತ 10 ಪಟ್ಟು ದೊಡ್ಡದಾಗಿ ಸಲಾರ್ ಸಿನಿಮಾ ಮೂಡಿಬಂದಿದೆ. ಕೆಜಿಎಫ್ 2ಗೆ 100 ಕೋಟಿ ಬಂಡವಾಳ ಹಾಕಿತ್ತು ಹೊಂಬಾಳೆ ಸಂಸ್ಥೆ. ಆದ್ರೆ ಈಗ ಸಲಾರ್ ಚಿತ್ರಕ್ಕೆ ಭರ್ಜರಿ 270 ಕೋಟಿ ಹಣ ಹೂಡಿಕೆ ಮಾಡಿ, ದುಡ್ಡಿಗೆ ತಕ್ಕಂತೆಯೇ ಮೇಕಿಂಗ್ ಕೂಡ ಮಾಡಿದೆ.
ಕಾರಣ-3: ತೆಲುಗು ಸಿನಿಮಾದಲ್ಲಿ ಕನ್ನಡಿಗರ ಅಬ್ಬರ
'ಸಲಾರ್' ತೆಲುಗು ಸಿನಿಮಾ ಆಗಿದ್ದರೂ ಕನ್ನಡ ನಟರ ದೊಡ್ಡ ದಂಡೇ ಈ ಸಿನಿಮಾದಲ್ಲಿ ಅಬ್ಬರಿಸಿದೆ. ಕೆಜಿಎಫ್ ಪಾರ್ಟ್ 1 ಮೂಲಕ, ವಿಲನ್ ಅಂದ್ರೆ ಹಿಂಗೆ ಇರಬೇಕು ಅನ್ನೋ ಭಯ ಹುಟ್ಟಿಸಿದ್ದ ಗರುಡ ಖ್ಯಾತಿಯ ರಾಮಚಂದ್ರ ರಾಜು ಸಲಾರ್ ಸಿನಿಮಾದಲ್ಲಿ ವಿಲನ್ ಆಗಿ ಮತ್ತೆ ಮಿಂಚಿದ್ದಾರೆ. ಹಾಗೇ ಪೋಷಕ ನಟ ರವಿ ಭಟ್, ನಟ ಪ್ರಮೋದ್, ಭಜರಂಗಿ ಸೇರಿ ಹಲವು ಕನ್ನಡ ಸಿನಿಮಾಗಳಲ್ಲಿ ಮಿಂಚಿದ್ದ ಮಧು ಗುರುಸ್ವಾಮಿ ಈ ಸಿನಿಮಾದಲ್ಲಿ ಇದ್ದಾರೆ.

ಕಾರಣ-4: ತಂತ್ರಜ್ಞರು ಕೂಡ ಕನ್ನಡದವರು!
ಹೌದು, 'ಸಲಾರ್' ಸಿನಿಮಾ ನಿರ್ಮಾಣ ಮಾಡಿರುವುದು ಕನ್ನಡಿಗರು. ಅದರಲ್ಲೂ ಕನ್ನಡ ಸಿನಿಮಾ ರಂಗದಲ್ಲಿ ಮಿಂಚು ಹರಿಸುತ್ತಿರುವ, ಹೊಂಬಾಳೆ ಸಂಸ್ಥೆ ಸಲಾರ್ ಸಿನಿಮಾ ನಿರ್ಮಾಣ ಮಾಡಿದೆ. ಹೀಗಾಗಿ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಲಾಗಿದೆ. ರವಿ ಬಸ್ರೂರು ಕೆಜಿಎಫ್ ರೀತಿಯೇ ಮತ್ತೊಮ್ಮೆ ಸಲಾರ್ ಮೂಲಕ ಸಂಗೀತದ ಕಮಾಲ್ ಮಾಡಿದ್ದಾರೆ. ಇನ್ನುಳಿದಂತೆ ಕೆಜಿಎಫ್ ಸಿನಿಮಾ ಸರಣಿಗೆ ಕ್ಯಾಮೆರಾ ವರ್ಕ್ ಮಾಡಿದ್ದ ಭುವನ್ ಗೌಡ ಇಲ್ಲೂ ಮಿಂಚಿದ್ದು ವಿಶೇಷ ಎನ್ನಬಹುದು.
ಕಾರಣ-5: ಪ್ರಶಾಂತ್ ನೀಲ್ + ಹೊಂಬಾಳೆ!
ಡೈರೆಕ್ಟರ್ ಪ್ರಶಾಂತ್ ನೀಲ್ ಸುಮಾರು 8 ವರ್ಷದ ಹಿಂದೆ ಹೊಂಬಾಳೆ ಸಂಸ್ಥೆ ಜೊತೆಯಲ್ಲಿ ಕೈಜೋಡಿಸಿದ್ದರು. ಹೀಗೆ ಬಂದ ಪ್ರಶಾಂತ್ ನೀಲ್ ಅವರನ್ನು ಹೊಂಬಾಳೆ ಬಿಟ್ಟುಕೊಡುವ ಲಕ್ಷಣವೇ ಕಾಣುತ್ತಿಲ್ಲ. ಯಾಕೆ ಗೊತ್ತಾ? ಇಂತಹ ಅತ್ಯದ್ಭುತ ನಿರ್ದೇಶಕನ ಜೊತೆಗೆ ಸಾಲು ಸಾಲು ಸಿನಿಮಾಗೆ ಒಪ್ಪಂದ ಮಾಡಿಕೊಳ್ಳುತ್ತಿದೆ ಹೊಂಬಾಳೆ ಸಂಸ್ಥೆ. ಈಗ ಸಲಾರ್ ಕೂಡ, ಪ್ರಶಾಂತ್ ನೀಲ್ + ಹೊಂಬಾಳೆ ಕಾಂಬೋದಲ್ಲಿ ಮೂಡಿಬಂದಿದೆ.
ಕಾರಣ-6: ಸ್ಟಾರ್ ಡೈರೆಕ್ಟರ್ ಅಬ್ಬರ ಜೋರು
ಉಗ್ರಂ, ಕೆಜಿಎಫ್-1 ಹಾಗೂ ಕೆಜಿಎಫ್-2 ಸಿನಿಮಾಗಳ ಮೂಲಕ ಪ್ರಶಾಂತ್ ನೀಲ್ ಇಡೀ, ಭಾರತೀಯ ಸಿನಿಮಾ ರಂಗ ಕನ್ನಡ ಚಿತ್ರರಂಗದ ಕಡೆಗೆ ತಿರುಗಿ ನೋಡುವಂತೆ ಮಾಡಿದ್ದರು. ಇದೀಗ ಮತ್ತೊಮ್ಮೆ ಅಂತಹದ್ದೇ ಕಮಾಲ್ ಮಾಡಿದ್ದು, ತೆಲುಗು ಚಿತ್ರರಂಗಕ್ಕೆ ಇನ್ನೊಂದು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಕೊಟ್ಟಿದ್ದಾರೆ ಪ್ರಶಾಂತ್ ನೀಲ್. ನೀಲ್ + ಪ್ರಭಾಸ್ ಅವರ ಕಾಂಬಿನೇಷನ್ ಈ ಮೂಲಕ ಸಖತ್ ಆಗಿ ವರ್ಕೌಟ್ ಆಗಿದೆ.

ಕಾರಣ-7: ದಕ್ಷಿಣ ಭಾರತ ಪವರ್ ಫುಲ್!
ಸೌತ್ ಸಿನಿಮಾಗಳ ಖದರ್ ಮತ್ತೊಮ್ಮೆ ಜಗತ್ತಿಗೆ ಗೊತ್ತಾಗಿದೆ. ಸಲಾರ್ ಸಿನಿಮಾ ಮೂಲಕ ಈ ಕಾರ್ಯವನ್ನು ಸಾಧಿಸಿ ತೋರಿಸಿದ್ದಾರೆ ಪ್ರಶಾಂತ್ ನೀಲ್. ಕೆಜಿಎಫ್ ಸರಣಿ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗವು ಮಿಂಚಿತ್ತು ಹಾಗೇ ಕಳೆದ ವರ್ಷ ರಿಲೀಸ್ ಆಗಿದ್ದ ಆರ್‌ಆರ್‌ಆರ್ ಮೂಲಕ ತೆಲುಗು ಚಿತ್ರರಂಗ ಮಿಂಚಿತ್ತು. ಇನ್ನು ತಮಿಳು ಚಿತ್ರರಂಗಕ್ಕೆ ವಿಕ್ರಂ ಸಿನಿಮಾದ ಕೊಡುಗೆ ದೊಡ್ಡದಾಗಿತ್ತು. ಕಾಂತಾರ ಅಬ್ಬರವನ್ನೂ ಜಗತ್ತು ಕಣ್ತುಂಬಿಕೊಂಡಿದೆ. ಜೈಲರ್ ಸಿನಿಮಾ ಮೂಲಕ ಸೂಪರ್ ಸ್ಟಾರ್ ರಜಿನಿಕಾಂತ್ ಅಬ್ಬರ ಜೋರಾಗಿತ್ತು. ಇದೀಗ ಸಲಾರ್ ಮತ್ತೊಮ್ಮೆ ದಕ್ಷಿಣ ಭಾರತದ ಕೀರ್ತಿಯ ಪತಾಕೆಯನ್ನ ದೊಡ್ಡ ಮಟ್ಟದಲ್ಲಿ ಹಾರಿಸಿದೆ.












Click it and Unblock the Notifications