60 ಕೋಟಿ ಪುನೀತ್ ರಾಜ್‌ಕುಮಾರ್ ವ್ಯವಹಾರ ಬಗ್ಗೆ ಮಾತನಾಡಿದ ಜಗ್ಗೇಶ್!
ನಟ ಜಗ್ಗೇಶ್ ಹಾಗೂ ಪವರ್ ಸ್ಟಾರ್ ದಿವಂಗತ ಪುನೀತ್ ರಾಜ್‌ಕುಮಾರ್ ಅವರಿಬ್ಬರು ಅತ್ಯಂತ ಆತ್ಮೀಯರಾಗಿದ್ದರು. ಇಬ್ಬರ ಬರ್ತಡೇಯೂ ಒಂದೇ ದಿನ ಇದೆ. ಇಬ್ಬರು ತಮಾಷೆ ಮಾಡುವ ಹಾಗೂ ಕಾಲೆಳೆಯುವ ವಿಡಿಯೋಗಳು ಈಗಲೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದು ಇದೆ. ಇನ್ನು ನಟ ಜಗ್ಗೇಶ್ ಅವರು ಇದೀಗ ನಟ ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಹೇಳಿರುವ ಮತ್ತೊಂದು ಮಾತು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಮೂಲಕ ನಟ ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಮತ್ತೆ ಅವರ ಅಭಿಮಾನಿಗಳು ನೆನಪಿಸಿಕೊಳ್ಳುತ್ತಿದ್ದಾರೆ. ನಟ ಪುನೀತ್ ರಾಜ್‌ಕುಮಾರ್ ಅವರು ನಮ್ಮೊಂದಿಗೆ ಇಲ್ಲ ಎನ್ನುವ ವಿಚಾರವನ್ನು ಈಗಲೂ ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ. ವಿವಿಧ ಹಬ್ಬ ಅಥವಾ ವಿಶೇಷ ಸಂದರ್ಭಗಳಲ್ಲಿ ಅವರು ಜನರಿಗೆ ವಿಶ್ ಮಾಡುವ ವಿಡಿಯೋಗಳು ಈಗಲೂ ಸೋಷಿಯಲ್ ಮೀಡಿಯಾದಲ್ಲಿ ಜನ ಶೇರ್ ಮಾಡಿಕೊಳ್ಳುವುದು ಇದೆ. ಈ ರೀತಿ ಇರುವಾಗಲೇ ನಟ ಜಗ್ಗೇಶ್ ಅವರು ನಟ ಪುನೀತ್ ರಾಜ್‌ಕುಮಾರ್ ಅವರು ಅವರೊಂದಿಗೆ ಹಂಚಿಕೊಂಡ ವಿಶೇಷ ಸಂದರ್ಭವೊಂದನ್ನು ಹೇಳಿದ್ದಾರೆ.
ವಿಶ್ವ ಅಪ್ಪಂದಿರ ದಿನಾಚರಣೆಯಂದು ಕಾರ್ಯಕ್ರಮವೊಂದರಲ್ಲಿ ನಟ ಜಗ್ಗೇಶ್ ಅವರು ಮಾತನಾಡಿರುವುದು ವೈರಲ್ ಆಗುತ್ತಿದೆ. ಜೀವನದಲ್ಲಿ ತಂದೆಗೆ ಬೇರೆ ಯಾವುದೇ ಆಲೋಚನೆಗಳು ಸಹ ಇರಲ್ಲ. ಅವರಿಗೆ ಯಾವಾಗಲೂ ನನ್ನ ಮಕ್ಕಳು, ನನ್ನ ಪತ್ನಿ ಹಾಗೂ ನನ್ನ ಕುಟುಂಬ ಅಂತ ಸದಾ ಕುಟುಂಬದ ಬಗ್ಗೆಯೇ ಚಿಂತಿಸುತ್ತಿರುತ್ತಾರೆ ಎಂದಿದ್ದಾರೆ. ತಂದೆ ಸಾವನ್ನಪ್ಪಿದಾಗ ಆಸ್ತಿ ವಿಂಗಡಣೆ ಹೇಗೆ ಮಾಡಬೇಕು ಎಂದು ಕಿತ್ತಾಡಿಕೊಳ್ಳಬಾರದು. ಈ ರೀತಿಯ ದರಿದ್ರವನ್ನು ನಾನು ನನ್ನ ಕಣ್ಣಾರೆ ನೋಡಿದ್ದೇನೆ. ಕೆಲವರು ಹೆಣದ ಮುಂದೆಯೇ ಕಿತ್ತಾಡಿಕೊಳ್ಳುತ್ತಾರೆ ಅಂತ ನಟ ಜಗ್ಗೇಶ್ ಅವರು ಹೇಳಿದ್ದಾರೆ. ಇದಾದ ಮೇಲೆ ಅವರು ನಟ ಪುನೀತ್ ಅವರ ಬಗ್ಗೆ ಮಾತನಾಡಿದ್ದಾರೆ.

ಪುನೀತ್ ಮಾತುಕತೆ ಹಂಚಿಕೊಂಡ ಜಗ್ಗೇಶ್: ನಟ ಜಗ್ಗೇಶ್ ಅವರು ಪುನೀತ್ ರಾಜ್‌ಕುಮಾರ್ ಅವರೊಂದಿಗಿನ ಸಂಭಾಷಣೆಯನ್ನು ಹಂಚಿಕೊಂಡಿದ್ದಾರೆ. ಅಣ್ಣ ನಾನೊಂದು ವಿಚಾರವನ್ನು ನಿಮ್ಮ ಬಳಿ ಹಂಚಿಕೊಳ್ಳುವುದಿದೆ ಎಂದು ಪುನೀತ್ ಹೇಳಿದ್ದರು. ನಾನು ಏನು ವಿಷಯ ಹೇಳಪ್ಪಾ ಅಂತ ಕೇಳಿದ್ದೆ. ಆಗ ಪುನೀತ್ ರಾಜ್‌ಕುಮಾರ್, 60 ಕೋಟಿ ರೂಪಾಯಿ ಮೌಲ್ಯದ ವ್ಯವಹಾರಗಳನ್ನ ಒಪ್ಪಿಕೊಂಡಿದ್ದೇನೆ ಅಂತ ಹೇಳಿದ್ದ. ನನಗೆ ಈ ವಿಚಾರ ಕೇಳಿ ಬಹಳ ಖುಷಿ ಆಯ್ತು. ಇದನ್ನು ಕೇಳಿದ್ದರೆ ನಿಮ್ಮ ತಂದೆ ಎಷ್ಟು ಖುಷಿಪಡುತ್ತಿದ್ದರೋ ನಿಮ್ಮಪ್ಪ ಈಗ ಇರಬೇಕಿತ್ತು ಅಂತ ನಾನು ಹೇಳಿದ್ದೆ. ಕೇವಲ ಸಾವಿರ ರೂಪಾಯಿ ತೆಗೆದುಕೊಂಡು ವರ್ಷಗಟ್ಟಲೆ ಕೆಲಸ ಮಾಡಿ, ಯಾರೋ ಒಬ್ಬರು ಅವರಿಗೆ ಲಕ್ಷ ಕೊಟ್ಟಾಗ ಉಬ್ಬಿ, ಹಿಗ್ಗಿ ಹೀರೇಕಾಯಿ ಆಗಿದ್ದರು. ಅವರ ಮಗ ನೀನು. ಐ ಆಮ್ ವೆರಿ ಹ್ಯಾಪಿ ಅಂತ ಹೇಳಿದ್ದೇ ಅಂತ ನಟ ಜಗ್ಗೇಶ್ ಅವರು ಹೇಳಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕೆಲವು ದಿನಗಳ ನಂತರ ಮಲ್ಲೇಶ್ವರಕ್ಕೆ ಬಂದಿದ್ದೀನಿ ಅಣ್ಣ ಅಂತ ಪುನೀತ್ ರಾಜ್‌ಕುಮಾರ್ ಕಾಲ್ ಮಾಡಿದ್ದರು. ನೋವಿಗೆ ಚಿಕಿತ್ಸೆ ತೆಗೆದುಕೊಳ್ಳೋದಕ್ಕೆ ಬಂದಿದ್ದ. ಆದರೆ ಮಾರನೇ ದಿನ ಅವನೇ ಇಲ್ಲ. 60 ಕೋಟಿ ರೂಪಾಯಿ ವ್ಯವಹಾರ ಒಪ್ಪಿಕೊಂಡಿದ್ದೀನಿ ಎಂದಿದ್ದ ದೇವರು ಚಿಟಿಕೆ ಹೊಡೆದಾಗ, ಇದೆಲ್ಲವನ್ನೂ ಬಿಟ್ಟು ಹೊರಟುಬಿಟ್ಟ. ಇದೇ ಪರಿಸ್ಥಿತಿ ಎಲ್ಲರಿಗೂ. ಯಾವುದೂ ನಮ್ಮದಲ್ಲ. ಸುಮ್ಮನೆ ಎಲ್ಲರಿಗೂ ಆಸೆ ಅಷ್ಟೇ ಅಂತ ಜಗ್ಗೇಶ್ ನೋವಿನಿಂದ ಹೇಳಿಕೊಂಡಿದ್ದಾರೆ.
ಪುನೀತ್ ನೆನಪು: ಇನ್ನು ನಟ ಜಗ್ಗೇಶ್ ಅವರ ಮಾತಿನ ಬೆನ್ನಲ್ಲೇ ನಟ ಪುನೀತ್ ರಾಜ್ ಕುಮಾರ್ ಅವರ ವ್ಯಕ್ತಿತ್ವ ಮತ್ತು ನಟನೆಯ ಬಗ್ಗೆ ಮತ್ತೆ ಚರ್ಚೆಗಳು ಶುರುವಾಗಿವೆ. ನಟ ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಅವರ ಅಭಿಮಾನಿಗಳು ಸ್ಮರಿಸುತ್ತಿದ್ದಾರೆ.












Click it and Unblock the Notifications