Dr Rajkumar: ಡಾ.ರಾಜ್ ಅಪಹರಣ ಪ್ರಕರಣಕ್ಕೆ ಇಂದಿಗೆ 25 ವರ್ಷ; ಜುಲೈ 30, 2000 ರಂದು ಅಪಹರಿಸಿದ್ದ ವೀರಪ್ಪನ್
ಬೆಂಗಳೂರು, ಜುಲೈ 30: ವರನಟ ಡಾ. ರಾಜ್ ಕುಮಾರ್ ಅಪಹರಣ ಪ್ರಕರಣಕ್ಕೆ ಇಂದಿಗೆ 25 ವರ್ಷಗಳು ಪೂರ್ಣವಾಗಿವೆ. 2000ನೇ ಜುಲೈ 30ರಂದು, ಪ್ರಸಿದ್ಧ ಚಿತ್ರನಟ ಡಾ. ರಾಜ್ ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಹಾಗೂ ಅವನ ತಂಡವು ಗಾಜನೂರಿನ ಅವರ ತೋಟದ ಮನೆಯಿಂದ ಅಪಹರಿಸಿತು. ಈ ಘಟನೆ ಕನ್ನಡಿಗರಿಗೆ ಮತ್ತು ಚಿತ್ರರಂಗಕ್ಕೆ ಕರಾಳ ನೆನಪಾಗಿ ಉಳಿದಿದೆ. ಆ ರಾತ್ರಿ ಭೀಮನ ಅಮಾವಾಸ್ಯೆ ದಿನವಾಗಿದ್ದು, ವೀರಪ್ಪನ್ 108 ದಿನಗಳ ಕಾಲ ಡಾ.ರಾಜ್ ಕುಮಾರ್ ಹಾಗೂ ಇನ್ನಿತರ ಮೂವರನ್ನು ಸತ್ಯ ಮಂಗಲ ಕಾಡಿನಲ್ಲಿ ಒತ್ತೆಯಾಳಾಗಿರಿಸಿಕೊಂಡಿದ್ದನು. ನಂತರ, 2000ರ ನವೆಂಬರ್ ನಲ್ಲಿ ಅವರನ್ನು ಬಿಡುಗಡೆಗೊಳಿಸಲಾಯಿತು.
ಈ ಅಪಹರಣ ಪ್ರಕರಣವು ರಾಷ್ಟ್ರವ್ಯಾಪಿ ಸಂಚಲನಕೊಂಡಿದ್ದು, ಈ ಪ್ರಕರಣ ಅಂದಿನ ಸರ್ಕಾರಕ್ಕೂ ಭಾರಿ ಸವಾಲು ತಂದಿತ್ತು. ಈ ಘಟನೆಗೆ ಕಾರಣ ವೀರಪ್ಪನ್ ಸರ್ಕಾರಕ್ಕೆ ನನ್ನ ಬೇಡಿಕೆಗಳನ್ನು ಈಡೇರಿಸುವೆಂದು ಸಂದೇಶ ನೀಡಿದ್ದರು. ಈ ಘಟನೆಯ 25ನೇ ವರ್ಷದ ನೆನಪಿನಲ್ಲಿ, ಇನ್ನೂ ಕರ್ನಾಟಕ ಜನರ ಮನದಲ್ಲಿ ಆತಂಕದ ನೆನಪಾಗಿ ಉಳಿದಿದೆ. ಕನ್ನಡಿಗರಿಗೆ, ಡಾ. ರಾಜ್ ಕುಮಾರ್ ಅಭಿಮಾನಿಗಳಿಗೆ ಜುಲೈ 30, 2000ನೇ ಇಸವಿ ಅಂದ್ರೆ ಮರೆಯಲಾಗದ ದಿನ. ಕನ್ನಡಿಗರ ಆರಾಧ್ಯ ದೈವ ಎಂದೆನಿಸಿದ್ದ ಅಣ್ಣಾವ್ರ ಕುಟುಂಬವನ್ನೇ ತಲ್ಲಣಗೊಳಿಸಿದ ಈ ಅಪಹರಣ ಘಟನೆ ಕರಾಳ ನೆನಪಾಗಿ ಉಳಿದಿದೆ.

ಡಾ.ರಾಜ್‌ಕುಮಾರ್ ಅವರಿಗೆ ಗಾಜನೂರನ್ನು ಕಂಡರೆ ಹೆಚ್ಚು ಪ್ರೀತಿ. ಅಲ್ಲಿರುವ ಅವರ ಜಮೀನಿನಲ್ಲಿ ಕೊರೆಸಿರುವ ಕೊಳವೆಬಾವಿಯಲ್ಲಿ ನೀರು ಬಂತೆಂಬ ಸುದ್ದಿ ತಿಳಿದು ಪತ್ನಿ ಪಾರ್ವತಮ್ಮ ಅವರೊಡನೆ ಗಾಜನೂರಿಗೆ ಬಂದಿದ್ದರು. ಆದರೆ, ಆ ರಾತ್ರಿ ವೇಳೆ ಕಾಡುಗಳ್ಳ ವೀರಪ್ಪನ್ ವರನಟ ರಾಜ್ ಕುಮಾರ್ ಅವರನ್ನೇ ಅಪಹರಿಸಿದ್ದ. ಸತ್ಯ ಮಂಗಲ ಕಾಡಿನಲ್ಲಿ ಒತ್ತೆಯಾಳಾಗಿರಿಸಿಕೊಂಡು 108 ದಿನಗಳ ನಂತರ ಬಿಡುಗಡೆಗೊಳಿಸಿದ್ದರು. ಇದೀಗ ಆ ಕಹಿ ಘಟನೆ ಕುರಿತು ಡಾ. ರಾಜ್ ಕುಮಾರ್ ಅವರ ಕುಟುಂಬಸ್ಥರು ಮಾತನಾಡಿದ್ದಾರೆ.
ಅಂದು ರಾತ್ರಿ ಬಂದೂಕುಗಳೊಂದಿಗೆ ಬಂದಿದ್ದ ವೀರಪ್ಪನ್ ಹಾಗೂ ಸಹಚರರು, ಮನೆಯನ್ನು ಕೂಡ ಸುತ್ತುವರಿದಿದ್ದರು. ಪಾರ್ವತಮ್ಮರಿಗೆ ಕ್ಯಾಸೆಟ್ ಕೊಟ್ಟು ಸರ್ಕಾರಕ್ಕೆ ತಲುಪಿಸಲು ಹೇಳಿದ್ದ. ಮನೆಯವರಿಗೆ, ಮಕ್ಕಳಿಗೆ ತೊಂದರೆ ಕೊಡಬೇಡ ನಾನೇ ನಿನ್ನ ಜೊತೆಗೆ ಬರ್ತೀನಿ ಅಂತಾ ಹೇಳಿ ನಟ ರಾಜ್‌ಕುಮಾರ್ ವೀರಪ್ಪನ್ ಜೊತೆಗೆ ಹೋಗಿದ್ರು. ಅವರ ಅಳಿಯ ಎಸ್.ಎ ಗೋವಿಂದರಾಜ್, ಸಹ ನಿರ್ದೇಶಕ ನಾಗಪ್ಪ ಮಾರಡಗಿ ಹಾಗೂ ಸಂಬಂಧಿ ನಾಗೇಶ್ ಅವರನ್ನು ವೀರಪ್ಪನ್ ಅಪಹರಿಸಿದ್ದರು ಎಂದು ರಾಜ್ ಕುಮಾರ್ ಕುಟುಂಬಸ್ಥರು ಹೇಳಿದ್ದಾರೆ.
ಅವತ್ತು ರಾತ್ರಿ 9 ಗಂಟೆ ಸಮಯ. ನ್ಯೂಸ್ ಮುಗಿದ ನಂತರ ಊಟ ಮಾಡಿ ವಿಷ್ಣುವರ್ಧನ್ ಸಿನಿಮಾ ನೋಡುತ್ತಿದ್ದರು. ಇನ್ನೂ ಅಣ್ಣಾವ್ರ ಟಿ ವಿ ನೋಡ್ತಾ ಇದ್ರು. ಅಣ್ಣಾವ್ರ ಜೊತೆಗೆ ಮೂರು ಜನ ಟಿವಿ ನೋಡ್ತಾ ಇದ್ರು. ನಾವು ಮನೆ ಹಿಂದೆ ಇದ್ವಿ. ಚಿಕ್ಕ ಹುಡುಗಿ ಬಂದು ನಮಗೆ ಹೇಳಿದ ಮೇಲೆ ನಾವು ಬಂದಿದ್ದು, ವೀರಪ್ಪನ್ ಹಿಂದೆ ಒಮ್ಮೆ ನೋಡಿದ್ವಿ. ನಮಗೆ ಭಯ ಆಯ್ತು. ಅಣ್ಣಾವ್ರು ಮಕ್ಕಳಿಗೆ ಏನು ತೊಂದರೆ ಮಾಡಬೇಡಿ. ನಾನೇ ಬರ್ತಿನಿ ಅಂತ ಅಣ್ಣಾವ್ರು ಅವರ ಜೊತೆಗೆ ಹೋದ್ರು ಎಂದು ಕುಟುಂಬಸ್ಥರು ಖಾಸಗಿ ವಾಹಿನಿ ಜೊತೆಗೆ ಮಾತನಾಡಿದ್ದಾರೆ.
ಅವತ್ತು ಡಾ. ರಾಜ್ ಕುಮಾರ್ ಅವರು ಅಪಹರಣ ಆದ ಕೆಲವೇ ನಿಮಿಷಗಳಲ್ಲಿ ನಡೆದು ಹೋದ ಅನಿರೀಕ್ಷಿತ ಬೆಳವಣಿಗೆಯಿಂದ ಗಾಜನೂರಿನ ಮನೆಯಲ್ಲಿದ್ದ ಎಲ್ಲರೂ ಕಂಗಾಲಾಗಿ ಹೋಗಿದ್ದರು. ಆದರೆ ಈ ಅನಿರೀಕ್ಷಿತ ಘಟನೆಯಿಂದ ಎದೆಗುಂದದೆ ಪಾರ್ವತಮ್ಮ ರಾಜ್‌ಕುಮಾರ್ ಅವರು ಅಂದು ರಾತ್ರಿಯೇ ಬೆಂಗಳೂರಿಗೆ ಪ್ರಯಾಣಿಸಿ ಅಂದಿನ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರಿಗೆ ವೀರಪ್ಪನ್ ನೀಡಿದ್ದ ಆಡಿಯೋ ಕ್ಯಾಸೆಟ್ ತಲುಪಿಸಿದ್ದರು.












Click it and Unblock the Notifications