ಕರುನಾಡು ಮಾರಾಟಕ್ಕಿಲ್ಲ!: ರಾಜಭವನಕ್ಕೆ ಲಗ್ಗೆ ಇಡಲಿದ್ದಾರೆ ಪ್ರತಿಭಟನಾಕಾರರು
ಬೆಂಗಳೂರು, ಮೇ 17: ಸರ್ಕಾರ ರಚನೆಗೆ ಬಿಜೆಪಿಗೆ ಆಹ್ವಾನ ನೀಡಿದ ರಾಜ್ಯಪಾಲ ವಜೂಭಾಯಿ ವಾಲಾ ಅವರ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ರಾಜ್ಯಪಾಲರ ನಡೆ ಸಂವಿಧಾನ ವಿರೋಧಿಯಾಗಿದೆ ಎಂದು ಆರೋಪಿಸಿರುವ ಬಿಜೆಪಿ ಸಿದ್ಧಾಂತ ವಿರೋಧಿ ಸಮಾನ ಮನಸ್ಕರ ಬಳಗದ ಸದಸ್ಯರು ಗುರುವಾರ ಮಧ್ಯಾಹ್ನ 1 ಗಂಟೆಗೆ ರಾಜಭವನ ಚಲೋ ನಡೆಸಲು ಮುಂದಾಗಿದ್ದಾರೆ.
ರಾಜ್ಯಪಾಲರು ಬಿಜೆಪಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಅವರು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಸರ್ಕಾರ ರಚನೆಗೆ ಅಗತ್ಯವಿರುವಷ್ಟು ಸಂಖ್ಯಾಬಲ ಬಿಜೆಪಿಯಲ್ಲಿ ಇರದಿದ್ದರೂ ಅವರಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಜತೆಗೂಡಿ ಬಹುಮತ ಸಾಬೀತುಪಡಿಸುವಷ್ಟು ಶಾಸಕರ ಸಹಿ ಸಂಗ್ರಹಿಸಿ ನೀಡಿದರೂ ಅದಕ್ಕೆ ಮನ್ನಣೆ ನೀಡಿಲ್ಲ ಎಂದು ಆರೋಪಿಸಿದ್ದಾರೆ.

ರಾಜ್ಯಪಾಲರ ನಿರ್ಧಾರವು ರಾಜ್ಯದಲ್ಲಿ ಕುದುರೆ ವ್ಯಾಪಾರ ನಡೆಸಲು ಬಿಜೆಪಿಗೆ ಅವಕಾಶ ನೀಡುವ ಉದ್ದೇಶ ಹೊಂದಿದೆ. ಕರ್ನಾಟಕ ಮಾರಾಟಕ್ಕಿಲ್ಲ. ರಾಜ್ಯಪಾಲರ ನಡೆ ತಪ್ಪು ಎಂದು ಖಂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ.
ಬಹುಮತಕ್ಕೆ ಬೇಕಾದಷ್ಟು ಶಾಸಕರ ಸಂಖ್ಯೆ ಇಲ್ಲದಿದ್ದರೂ ಬಿಜೆಪಿ ಅಧಿಕಾರ ಹಿಡಿಯಲು ಹೊರಟಿದೆ. ಬಿಜೆಪಿ ಪ್ರಜಾಸತ್ತೆಯನ್ನು ಕಗ್ಗೊಲೆ ಮಾಡುತ್ತಿದೆ ಎಂದು ದೂರಲಾಗಿದೆ.
ಸಂವಿಧಾನದ 164 ನೇ ವಿಧಿಯ ಬಗ್ಗೆ ತಪ್ಪು ವ್ಯಾಖ್ಯಾನ ಮಾಡುತ್ತಾ ರಾಜ್ಯಪಾಲರ ನಡೆಯನ್ನು ಕೆಲವರು ಸಮರ್ಥಿಸುತ್ತಿದ್ದಾರೆ.

ಸಂವಿಧಾನದ 164ನೇ ವಿಧಿಯು ಮುಖ್ಯಮಂತ್ರಿ ಹಾಗೂ ಮಂತ್ರಿಮಂಡಲವನ್ನು ನೇಮಿಸುವ ಅಧಿಕಾರವನ್ನು ರಾಜ್ಯಪಾಲರಿಗೆ ನೀಡುತ್ತದೆ. ಹೀಗೆ ಮಾಡುವಾಗ ಒಂದು ಪಕ್ಷ ಅಥವಾ ಒಂದಕ್ಕಿಂತ ಹೆಚ್ಚು ಪಕ್ಷಗಳ ಮೈತ್ರಿಕೂಟ ಶೇ 50ಕ್ಕಿಂತ ಹೆಚ್ಚಿನ ಸದಸ್ಯರ ಬೆಂಬಲವನ್ನು ಸಾಬೀತುಪಡಿಸಬೇಕಾಗುತ್ತದೆ. ಅಕಸ್ಮಾತ್ ಇಂತಹ ಸಾಧ್ಯತೆ ಇಲ್ಲವಾದಾಗ ಅತಿ ದೊಡ್ಡ ಪಕ್ಷಕ್ಕೆ ಸರ್ಕಾರ ರಚಿಸುವ ಅವಕಾಶ ನೀಡಿ ತಿಂಗಳೊಳಗೆ ಬಹುಮತ ಸಾಬೀತುಪಡಿಸಲು ಅವಕಾಶ ನೀಡುವ ವಿವೇಚನಾಧಿಕಾರ ರಾಜ್ಯಪಾಲರಿಗಿರುತ್ತದೆ.
ಕರ್ನಾಟಕದ ಸಧ್ಯದ ಪರಿಸ್ಥಿತಿಯಲ್ಲಿ ಬಹುಮತ ಸಾಧ್ಯವಿಲ್ಲ ಎನ್ನುವ ಸ್ಥಿತಿ ಇಲ್ಲ. 104 ಸೀಟು ಪಡೆದು ಅತಿ ದೊಡ್ಡ ಪಕ್ಷವಾಗಿರುವ ಬಿಜೆಪಿ ಗೆ ಬಹುಮತ ಲಭ್ಯವಿಲ್ಲವಾದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡರ ಮೈತ್ರಿಗೆ ಬಹುಮತ ಸಾಧ್ಯವಿದೆ.
ಒಬ್ಬ ಜವಾಬ್ದಾರಿ ಇರುವ ರಾಜ್ಯಪಾಲ ಬಹುಮತ ಸಾಬೀತುಪಡಿಸಲು ಸಾಧ್ಯ ಇರುವವರಿಗೆ ಅವಕಾಶ ನೀಡಬೇಕು. ಇದು ಸಂವಿಧಾನದ 164ನೇ ವಿಧಿಯ ಸಾರಾಂಶ.
ಆದರೆ ಸಂವಿಧಾನಕ್ಕೆ ಕಿವುಡು ಕಾಸಿನ ಬೆಲೆ ಕೊಡದ ಪಕ್ಷದ ಚೇಲಾಗಿರಿಗಿಳಿದರೆ ಹೇಗೆ ಬೇಕಾದರೂ ವ್ಯಾಖ್ಯಾನ ಮಾಡಿಕೊಳ್ಳಬಹುದು ಎಂದು 'ಸಂವಿಧಾನ ಉಳಿವಿಗಾಗಿ ಕರ್ನಾಟಕ' ಎಂಬ ಫೇಸ್‌ಬುಕ್ ಪುಟದಲ್ಲಿ ರಾಜ್ಯಪಾಲರನ್ನು ಟೀಕಿಸಲಾಗಿದೆ.












Click it and Unblock the Notifications