ಸಖತ್ 'ಕೈ' ಕೊಟ್ಟು ಕಾಂಗ್ರೆಸ್ಸಿಗೆ 'ದುಃಖ' ತಂದರೆ ಆನಂದ್ ಸಿಂಗ್?
ಬೆಂಗಳೂರು, ಮೇ 17: ಈ ಬಾರಿಯ ಚುನಾವಣೆಯಲ್ಲಿ ಭಾರಿ ಅಂತರದ ಹಿನ್ನಡೆ ಅನುಭವಿಸಿದ್ದರೂ ಜೆಡಿಎಸ್ ಜತೆಗೂಡಿ ಮತ್ತು ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ಪಾಳಯದಲ್ಲಿ, ತಮ್ಮ ಶಾಸಕರು ಕೈ ಜಾರಿ ಬಿಜೆಪಿ ಪಾಲಾಗುವ ಭೀತಿ ಮಾಯವಾಗಿಲ್ಲ.
ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿ ಆಯ್ಕೆಯಾಗಿರುವ ಬಳ್ಳಾರಿಯ ವಿಜಯನಗರ ಶಾಸಕ ಆನಂದ್‌ಸಿಂಗ್ ಇದುವರೆಗೂ ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಸಿಕ್ಕಿಲ್ಲ.
ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರನ್ನು ಹೊರತುಪಡಿಸಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಎಲ್ಲ ಶಾಸಕರೂ ನಮ್ಮ ಜತೆ ಇದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.

ಶಾಸಕ ಆನಂದ್ ಸಿಂಗ್ ಅವರು ನಮ್ಮ ಜತೆಗಿಲ್ಲ. ಬಹುಶಃ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಹಿಡಿತದಲ್ಲಿ ಇರಬಹುದು ಎಂದು ಸುರೇಶ್ ಹೇಳಿದ್ದಾರೆ.
ಆಮಿಷಕ್ಕೆ ಒಳಗಾಗಿ ಶಾಸಕರು ಬಿಜೆಪಿಯತ್ತ ಸುಳಿಯಬಹುದು ಎಂಬ ಭಯದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ಶಾಸಕರನ್ನು ಕಾಯುವ ಕೆಲಸ ಮಾಡುತ್ತಿವೆ. ಆದರೆ, ಬೆಂಗಳೂರಿನಲ್ಲಿ ಕಾಂಗ್ರೆಸ್ ಪಾಳಯವನ್ನು ಸೇರಬೇಕಾದ ಆನಂದ್ ಸಿಂಗ್ ಇನ್ನೂ ಪತ್ತೆಯಾಗಿಲ್ಲ.
ಆನಂದ್ ಸಿಂಗ್ ಅವರು ಪತ್ನಿಯೊಂದಿಗೆ ಕಾರ್‌ನಲ್ಲಿ ಬಳ್ಳಾರಿಯಿಂದ ಬೆಂಗಳೂರಿನತ್ತ ಹೊರಟಿದ್ದಾರೆ ಎನ್ನಲಾಗಿತ್ತು. ಇದುವರೆಗೂ ಅವರು ಪಕ್ಷದ ಸದಸ್ಯರನ್ನು ಸೇರಿಕೊಂಡಿಲ್ಲ. ಅಲ್ಲದೆ, ಪಕ್ಷದವರ ಫೋನ್ ಸಂಪರ್ಕಕ್ಕೂ ಸಿಕ್ಕಿಲ್ಲ ಎನ್ನಲಾಗಿದೆ.
ಆನಂದ್ ಸಿಂಗ್ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಬಹುಶಃ ಅವರು ಮೋದಿ ಮತ್ತು ಬಿಜೆಪಿ ಹಿಡಿತದಲ್ಲಿ ಇರಬಹುದು. ಆದರೂ ನಮ್ಮ ಬಳಿ ಸರ್ಕಾರ ರಚಿಸುವಷ್ಟು ಬಹುಮತವಿದೆ ಎಂದು ಸುರೇಶ್ ಹೇಳಿದ್ದಾರೆ.
ಆನಂದ್ ಸಿಂಗ್ ಮೇಲೆ ಜಾರಿ ನಿರ್ದೇಶನಾಲಯದಲ್ಲಿ ಅನೇಕ ದೂರುಗಳಿವೆ. ಈ ದೂರುಗಳ ಆಧಾರದಲ್ಲಿ ಅವರಿಗೆ ಬಿಜೆಪಿ ಬೆದರಿಕೆ ಹಾಕಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಬಿಜೆಪಿಯು ದೂರುಗಳನ್ನು ಮುಂದಿಟ್ಟುಕೊಂಡು ಶಾಸಕರಿಗೆ ಬೆದರಿಕೆಯೊಡ್ಡಿ ಅವರ ಬೆಂಬಲವನ್ನು ಪಡೆದುಕೊಳ್ಳಲು ಯತ್ನಿಸುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದರು.
ಆನಂದ್ ಸಿಂಗ್ ವಿರುದ್ಧ ಜಾರಿ ನಿರ್ದೇಶನಾಲಯವನ್ನು ಬಿಜೆಪಿ ಛೂ ಬಿಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರದ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಕುಮಾರಸ್ವಾಮಿ ದೂರಿದ್ದರು.
ವಿಜಯನಗರ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಆನಂದ್ ಸಿಂಗ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು.











Click it and Unblock the Notifications