ಸಿ-ಫೋರ್ ಸಮೀಕ್ಷೆ : ಹಳೆ ಮೈಸೂರು ಪ್ರಾಂತ್ಯದಲ್ಲಿ ಕಾಂಗ್ರೆಸ್ ನಾಗಾಲೋಟ
Recommended Video

ಬೆಂಗಳೂರು, ಏಪ್ರಿಲ್ 30 : ಸಿ-ಫೋರ್ ನಡೆಸಿರುವ ಚುನಾವಣಾಪೂರ್ವ ಸಮೀಕ್ಷೆ ನಿಜವೇ ಆದರೆ, ಮೇ 17ರಂದು ಪ್ರಮಾಣ ವಚನ ಸ್ವೀಕರಿಸುವೆ ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮೇ 18ರಂದು ಅಪ್ಪಾಜಿ ಹುಟ್ಟುಹಬ್ಬದಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವೆ ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕನಸುಗಳು ನುಚ್ಚುನೂರಾಗಲಿವೆ.
ಅಂತಹುದೊಂದು, ಕಾಂಗ್ರೆಸ್ಸಿಗೆ ಮೋತಿಚೂರ್ ಲಾಡು ತಿನಿಸುವ ಮತ್ತು ಉಳಿದೆರಡು ಪಕ್ಷಗಳಿಗೆ 'ನೀರು ಕುಡಿಸುವ' ಸಮೀಕ್ಷೆ ಹೊರಬಿದ್ದಿದ್ದು, ಕಾಂಗ್ರೆಸ್ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಲಿದೆ. ಸಿದ್ದರಾಮಯ್ಯನವರಿಗೆ ಚಾಮುಂಡೇಶ್ವರಿ ಮತ್ತು ಬನಶಂಕರಿ ಇಬ್ಬರೂ ದೇವಿಯರ ಕೃಪೆ ಆಗಿ, ಮುಖ್ಯಮಂತ್ರಿ ಕುರ್ಚಿಯ ಮೇಲೆ ವಿರಾಜಮಾನರಾಗಲಿದ್ದಾರೆ.
ರಾಜಕಾರಣಿಗಳು ತಾವೇ ಸ್ವತಃ ಹೇಳುವಂತೆ ಚುನಾವಣಾಪೂರ್ವ ಸಮೀಕ್ಷೆಗಳು, ಚುನಾವಣೋತ್ತರ ಸಮೀಕ್ಷೆಗಳಂತೆ ಅಷ್ಟು ನಿಖರವಾಗಿರುವುದಿಲ್ಲ. ಏನೇ ಆಗಲಿ, ಕಾಂಗ್ರೆಸ್ ಪಾಲಿಗೆ ಇದೊಂದು ಸಂತಸದ ಸುದ್ದಿ. ಎಲ್ಲಕ್ಕಿಂತ ಹೆಚ್ಚಾಗಿ ಅತೀಹೆಚ್ಚು ಕ್ಷೇತ್ರ(60)ಗಳಿರುವ ಹಳೆ ಮೈಸೂರು ಪ್ರಾಂತ್ಯದಲ್ಲಿ ಕಾಂಗ್ರೆಸ್ ಪಕ್ಷ ಕಂಡುಕೇಳರಿಯದಂಥ ಯಶಸ್ಸು ಸಾಧಿಸಲಿದ್ದು, ಸಿದ್ದರಾಮಯ್ಯನವರಿಗೆ ಈ ಚುನಾವಣೆ ರಾಷ್ಟ್ರಮಟ್ಟದಲ್ಲಿ ಮಿಂಚುವಂತೆ ಮಾಡಲಿದೆ.

ಎಲ್ಲ ಜಾತಿ, ವಯೋಮಾನದ ಸಮೀಕ್ಷೆ
ಸಿ-ಫೋರ್ ಸಂಸ್ಥೆ ಏಪ್ರಿಲ್ 20ರಿಂದ ಏಪ್ರಿಲ್ 30ರವರೆಗೆ ನಡೆಸಿರುವ ಸಮೀಕ್ಷೆಯಲ್ಲಿ 61 ವಿಧಾನಸಭಾ ಕ್ಷೇತ್ರಗಳಲ್ಲಿ 6,247 ಮತದಾರರನ್ನು ವಿವಿಧ ವಿಷಯಗಳ ಬಗ್ಗೆ ಕರ್ನಾಟಕದ ಐದು ಪ್ರಾಂತ್ಯಗಳಲ್ಲಿ ಸಿ-ಫೋರ್ ಮಾಹಿತಿ ಸಂಗ್ರಹಿಸಿದ್ದು, ಎಲ್ಲ ಜಾತಿ, ವರ್ಗಗಳ, ಎಲ್ಲ ವಯೋಮಾನದ ಜನರನ್ನು ಪರಿಗಣಿಸಿ ಈ ಸಮೀಕ್ಷೆಯನ್ನು ಮಾಡಿದೆ. ಈ ಸಮೀಕ್ಷೆ ಎಷ್ಟು ನಿಖರವಾಗಿದೆ ಎಂಬುದು ಮೇ 15ರ ಫಲಿತಾಂಶದಂದು ತಿಳಿದುಬರಲಿದೆ.

ಹಳೆ ಮೈಸೂರು ಪ್ರಾಂತ್ಯದಲ್ಲಿರುವ ಕ್ಷೇತ್ರಗಳು
ಹಳೆ ಮೈಸೂರು ಪ್ರಾಂತ್ಯ ಚಿಕ್ಕಮಗಳೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಹಾಸನ, ಮೈಸೂರು, ಚಾಮರಾಜನಗರ, ರಾಮನಗರ ಕ್ಷೇತ್ರಗಳನ್ನು ಒಳಗೊಂಡಿದೆ. ಈ ಎಲ್ಲ ಕ್ಷೇತ್ರಗಳಲ್ಲಿ ಹಿಂದಿನ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪ್ರಾಬಲ್ಯವನ್ನು ಹೊಂದಿತ್ತು. ಈ ಬಾರಿ ಕೂಡ ಕಾಂಗ್ರೆಸ್ ತನ್ನ ಅಧಿಪತ್ಯವನ್ನು ಹೆಚ್ಚೂಕಡಿಮೆ ಎಲ್ಲಾ ಕ್ಷೇತ್ರಗಳಲ್ಲಿ ಮೆರೆಯಲಿದೆ. ಅದರ ಬೆನ್ನ ಹಿಂದೆಯೇ ಕೆಲ ಕ್ಷೇತ್ರಗಳಲ್ಲಿ ಜೆಡಿಎಸ್ ಕಾಂಗ್ರೆಸ್ಸಿಗೆ ಪೈಪೋಟಿ ನೀಡಲಿದೆ.

ಎಷ್ಟು ಸೀಟು ಯಾವ ಪಕ್ಷದ ಪಾಲು?
ಸಿದ್ದರಾಮಯ್ಯ ಅವರ ವರ್ಚಸ್ಸು ಮತ್ತು ಕಳೆಗುಂದುತ್ತಿರುವ ಜೆಡಿಎಸ್ ಪರ ಒಲವಿನಿಂದಾಗಿ ಕಾಂಗ್ರೆಸ್ 31-33 ಸ್ಥಾನಗಳು, ಬಿಜೆಪಿ 5-6 ಸ್ಥಾನ ಮತ್ತು ಜೆಡಿಎಸ್ 25-27 ಮತ್ತು ಜೆಡಿಎಸ್ 5-6 ಸೀಟುಗಳನ್ನು ಕಬಳಿಸಲಿವೆ. ಉಳಿದಂತೆ, ಇತರರು ಅಥವಾ ಪಕ್ಷೇತರ ಅಭ್ಯರ್ಥಿಗಳ ಬಗ್ಗೆ ಹಳೆ ಮೈಸೂರು ಪ್ರಾಂತ್ಯದಲ್ಲಿ ಜನರಿಗೆ ಹೆಚ್ಚಿನ ಒಲವಿದ್ದಂತಿಲ್ಲ. ಇತರರು ಕೇವಲ 2-3 ಸೀಟುಗಳನ್ನು ಮಾತ್ರ ಗೆಲ್ಲಲು ಶಕ್ತರಾಗಲಿದ್ದಾರೆ. ಇದಕ್ಕೆ ಮೈಸೂರು ಪ್ರಾಂತ್ಯದ ಕೆಲ ಧೀಮಂತ ನಾಯಕರು ಪಕ್ಷಾಂತರ ಮಾಡಿ ಪಕ್ಷಕ್ಕೆ ದ್ರೋಹ ಬಗೆದದ್ದೂ ಇರಬಹುದು.

ಸಿದ್ದರಾಮಯ್ಯನವರ ರಾಜಕೀಯ ಮೌಲ್ಯ
ಈ ಸಮೀಕ್ಷೆಯನ್ನು ಕೂಲಂಕಷವಾಗಿ ಗಮನಿಸಿದರೆ, ಮಹಿಳೆಯರ, ಎಲ್ಲ ವಯೋಮಾನದವರ ಮತಗಳು ಸಿದ್ದರಾಮಯ್ಯ ಪರವಾಗಿ ತೇಲಿ ಬರಲಿರುವುದು ಖಚಿತ. ದೇಶದ ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ಸೋತು ಸುಣ್ಣವಾಗುತ್ತಿರುವ ಸಮಯದಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಬಹುಮತ ಗಳಿಸಿದರೆ ಸಿದ್ದರಾಮಯ್ಯನವರ ರಾಜಕೀಯ ಮೌಲ್ಯ ನೂರು ಪಟ್ಟು ಹೆಚ್ಚಲಿದೆ. ಅಲ್ಲದೆ, ಕಾಂಗ್ರೆಸ್ ಹೈಕಮಾಂಡೇ ಸಿದ್ದರಾಮಯ್ಯನವರ ಬೆರಳ ತುದಿಯಲ್ಲಿ ನರ್ತಿಸುವಂತಾಗಲಿದೆ. ಇದೇ ಪ್ರಥಮ ಬಾರಿಗೆ ಇವರೇ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಸಿದ್ದರಾಮಯ್ಯನವರನ್ನು ರಾಹುಲ್ ಗಾಂಧಿ ಘೋಷಿಸಿರುವುದರಿಂದ ಕಾಂಗ್ರೆಸ್ ಇತಿಹಾಸ ನಿರ್ಮಿಸಲಿದೆ.

ಹಳೆ ಸಮೀಕ್ಷೆ ಕೂಡ ಇಷ್ಟೇ ಸಂಖ್ಯೆ ತಿಳಿಸಿತ್ತು
ಕಳೆದ ಸಮೀಕ್ಷೆಯಲ್ಲಿ ಕೂಡ ಸಿ-ಫೋಸ್ ಸಂಸ್ಥೆ ಕಾಂಗ್ರೆಸ್ಸಿಗೆ 126 ಕ್ಷೇತ್ರ ಬರುತ್ತವೆಂದು ಹೇಳಿತ್ತು. ಈ ಬಾರಿ ಕೂಡ ಅದರ ಆಸುಪಾಸಿನಲ್ಲಿ ಅಂದರೆ, 118-128 ಸ್ಥಾನಗಳು ಕಾಂಗ್ರೆಸ್ಸಿ ಲಭಿಸಲಿವೆ. ಬಹುಮತ ಸಾಬೀತುಪಡಿಸಲು ಯಾವುದೇ ಪಕ್ಷಕ್ಕೆ ಬೇಕಾಗಿರುವುದು 113 ಸೀಟುಗಳು. ಈ ಅಂಕಿಸಂಖ್ಯೆಗಳನ್ನು ನೋಡಿದರೆ, ಬಿಜೆಪಿ ಮತ್ತು ಜೆಡಿಎಸ್ಸಿಗೆ ಈ ಬೇಸಿಗೆ ಬಲು ಭೀಕರವಾಗಿ ಕಾಡಲಿದೆ. ವಿಧಾನಸೌಧದಲ್ಲಿ ವಿರೋಧಪಕ್ಷದ ಸ್ಥಾನದಲ್ಲಿ ತಣ್ಣಗೆ ಕುಳಿತುಕೊಳ್ಳುವುದು ಈ ಎರಡು ಪಕ್ಷಗಳಿಗೆ ಅನಿವಾರ್ಯವಾಗಲಿದೆ.

ಈ ಅಂಕಿಸಂಖ್ಯೆಗಳು ಏರುಪೇರು ಕೂಡ ಆಗಬಹುದು
ಕಳೆದ ತಿಂಗಳು ಸಿ-ಫೋರ್ ನಡೆಸಿದ್ದ ಸಮೀಕ್ಷೆಯಲ್ಲಿ ಕೂಡ ಇದೇ ಬಗೆಯ ಅಂಕಿಸಂಖ್ಯೆಗಳು ಹೊರಬಿದ್ದಿದ್ದವು. ಕಾಂಗ್ರೆಸ್ 33, ಬಿಜೆಪಿ 7, ಜೆಡಿಎಸ್ 24 ಮತ್ತು ಇತರೆ 1 ಸೀಟು ಗೆಲ್ಲುತ್ತವೆ ಎಂದು ಹೇಳಲಾಗಿತ್ತು. ಹೊಸ ಸಮೀಕ್ಷೆಯಲ್ಲಿ ಶೇ.43ರಷ್ಟು ಮತ ಕಾಂಗ್ರೆಸ್ ಪಡೆಯಲಿದೆ, ಬಿಜೆಪಿ ಶೇ.17 ಮತ್ತು ಜೆಡಿಎಸ್ ಶೇ.34ರಷ್ಟು ಮತ ಗಳಿಸಲಿದೆ. ಇನ್ನು ಉಳಿದಿರುವ 12 ದಿನಗಳಲ್ಲಿ ಕೆಲ ಪ್ರಭಾವಿಗಳ ಪ್ರಚಾರದಿಂದಾಗಿ ಈ ಅಂಕಿಸಂಖ್ಯೆಗಳು ಏರುಪೇರು ಕೂಡ ಆಗಬಹುದು. ಚುನಾವಣಾ ಮಾತ್ರ ಭಾರೀ ಕುತೂಹಲ ಘಟ್ಟ ತಲುಪಿದೆ.












Click it and Unblock the Notifications