ರಿಪಬ್ಲಿಕ್ ಎಕ್ಸಿಟ್ ಪೋಲ್ : ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಬಿಜೆಪಿ
ಬೆಂಗಳೂರು, ಮೇ 12 : ರಿಪಬ್ಲಿಕ್ ಟಿವಿ ಮತ್ತು ಸಿವೋಟರ್ ನಡೆಸಿರುವ ಚುನಾವಣೋತ್ತರ ಸಮೀಕ್ಷೆಯಂತೆ ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, ಸರಕಾರ ರಚಿಸಲು ಸೆಣಸಾಡುವಂಥ ಪರಿಸ್ಥಿತಿ ತಲೆದೋರಲಿದೆ.
ಹಲವಾರು ಚುನಾವಣಾಪೂರ್ವ ಸಮೀಕ್ಷೆಗಳು ನಿರೀಕ್ಷಿಸಿದಂತೆ ಕರ್ನಾಟಕದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದ್ದು, ಕಾಂಗ್ರೆಸ್ ಎರಡನೇ ಸ್ಥಾನ ಮತ್ತು ಜಾತ್ಯತೀತ ಜನತಾದಳ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ.

ಈ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಹೀಗಿದೆ :
ಬಿಜೆಪಿ - 95-114
ಕಾಂಗ್ರೆಸ್ - 73-82
ಜೆಡಿಎಸ್ - 32-43
ಇತರ - 2-3
ಕರ್ನಾಟಕ ವಿಧಾನಸಭೆಯ 222 ಸ್ಥಾನಕ್ಕಾಗಿ ಮೇ.12 ರಂದು ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಅಂತ್ಯ ಕಂಡಿದೆ. ಈಗ ಚುನಾವಣೋತ್ತರ ಸಮೀಕ್ಷೆ, ಫಲಿತಾಂಶದ ಕಾಲ ಆರಂಭವಾಗಿದೆ.
ಈ ಬಾರಿ ರಾಜ್ಯದಲ್ಲಿ ಒಟ್ಟು 5,00,15,895 (5 ಕೋಟಿ) ಮತದಾರರಿದ್ದಾರೆ. ಇದರಲ್ಲಿ 2,53,26,629 ಪುರುಷ ಮತದಾರರಾದರೆ, ಮಹಿಳಾ ಮತದಾರರ ಸಂಖ್ಯೆ 2,46,84,311. ಇನ್ನು 4,955 ತೃತೀಯ ಲಿಂಗಿ ಮತದಾರರೂ ರಾಜ್ಯದಲ್ಲಿದ್ದಾರೆ.
2013ರಲ್ಲಿ ಶೇ 71.45ರಷ್ಟು ಮಾತ್ರ ಮತದಾನ ದಾಖಲಾಗಿತ್ತು. ಕೊನೆ ಘಳಿಗೆಯಲ್ಲಿ ಮತದಾರರು ಕ್ಯೂನಲ್ಲಿ ಬಂದು ನಿಂತರೆ ರಾತ್ರಿ ಹತ್ತು ಗಂಟೆಯಾದರೂ ಮತದಾನ ಮಾಡುವ ಅವಕಾಶ ನೀಡಬೇಕಾಗುತ್ತದೆ.
ಎಲೆಕ್ಟ್ರಾನಿಕ್ ಮಾಧ್ಯಮಗಳು ಮತದಾನಕ್ಕೂ 48 ಗಂಟೆಗಳಿಗೂ ಮುನ್ನ ಯಾವುದೇ ಸಮೀಕ್ಷೆ, ಫಲಿತಾಂಶ ಹೊರ ಹಾಕದಂತೆ ಚುನಾವಣಾ ಆಯೋಗ ನಿಯಮ ಜಾರಿಗೊಳಿಸಿತ್ತು. ಅದರಂತೆ, ಮತದಾನ ಪ್ರಕ್ರಿಯೆ ಮುಗಿದ ನಂತರ ಚುನಾವಣೋತ್ತರ ಸಮೀಕ್ಷೆ ಫಲಿತಾಂಶವನ್ನು ಎಲ್ಲಾ ಮಾಧ್ಯಮಗಳು ಪ್ರಕಟಿಸಿದೆ.











Click it and Unblock the Notifications