ರಾಯಚೂರು ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗಳ ಪರಿಚಯ
Recommended Video

ರಾಯಚೂರು, ಫೆಬ್ರವರಿ 27 : ಎರಡು ರಾಷ್ಟ್ರೀಯ ಪಕ್ಷಗಳಿಗಿಂತ ಮೊದಲು ಜೆಡಿಎಸ್ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 126 ಕ್ಷೇತ್ರಗಳಿಗೆ ಪಕ್ಷ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.
ರಾಯಚೂರು ಜಿಲ್ಲೆಯಲ್ಲಿ ರಾಯಚೂರು ಗ್ರಾಮಾಂತರ, ರಾಯಚೂರು, ಮಾನ್ವಿ, ದೇವದುರ್ಗ, ಲಿಂಗಸುಗೂರು, ಸಿಂಧನೂರು, ಮಸ್ಕಿ ಸೇರಿದಂತೆ 7 ವಿಧಾನಸಭಾ ಕ್ಷೇತ್ರಗಳಿವೆ.
ಜೆಡಿಎಸ್ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪೈಕಿ ಮಾನ್ವಿ, ದೇವದುರ್ಗ, ಲಿಂಗಸಗೂರು ಮತ್ತು ಮಸ್ಕಿ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಅಭ್ಯರ್ಥಿಗಳು ಈಗಾಗಲೇ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ.
2013ರ ಚುನಾವಣೆಯಲ್ಲಿ ರಾಯಚೂರು ಜಿಲ್ಲೆಯಲ್ಲಿ ಲಿಂಗಸಗೂರು ಕ್ಷೇತ್ರದಿಂದ ಮಾನಪ್ಪ ವಜ್ಜಲ್, ರಾಯಚೂರು ನಗರ ಕ್ಷೇತ್ರದಿಂದ ಡಾ.ಶಿವರಾಜ್ ಪಾಟೀಲ್ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದರು.
ಆದರೆ, ರಾಜಕೀಯ ಚಿತ್ರಣ ಬದಲಾಗಿದೆ. ಇಬ್ಬರೂ ನಾಯಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ. ಇದರಿಂದಾಗಿ 2018ರ ಚುನಾವಣೆಯಲ್ಲಿ ಈ ಎರಡು ಕ್ಷೇತ್ರಗಳ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ...

ಮಾನ್ವಿ ಕ್ಷೇತ್ರ
ರಾಯಚೂರು ಜಿಲ್ಲೆಯ ಮಾನ್ವಿ ಕ್ಷೇತ್ರಕ್ಕೆ ರಾಜಾ ವೆಂಕಟಪ್ಪ ನಾಯ್ಕ್ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. 2013ರ ಚುನಾವಣೆಯಲ್ಲಿ ಅವರು ಕ್ಷೇತ್ರದಲ್ಲಿ 43,632 ಮತಗಳನ್ನು ಪಡೆದು ಸೋಲು ಅನುಭವಿಸಿದ್ದರು.

ಲಿಂಗಸಗೂರು ಕ್ಷೇತ್ರ
ಲಿಂಗಸಗೂರು ಕ್ಷೇತ್ರಕ್ಕೆ ಸಿದ್ದು.ವೈ.ಬಂಡಿ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ಲಿಂಗಸಗೂರು ಕ್ಷೇತ್ರದ ಜೆಡಿಎಸ್ ಶಾಸಕರಾಗಿದ್ದ ಮಾನಪ್ಪ ವಜ್ಜಲ್ ಬಿಜೆಪಿ ಸೇರಿದ ಬಳಿಕ, ಬಿಜೆಪಿಯಲ್ಲಿದ್ದ ಸಿದ್ದು.ವೈ.ಬಂಡಿ ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದಾರೆ. 2013ರ ಚುನಾವಣೆಯಲ್ಲಿ ಅವರು ಕ್ಷೇತ್ರದಿಂದ ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 25,005 ಮತಗಳನ್ನು ಪಡೆದು ಸೋಲು ಕಂಡಿದ್ದರು.

ವೆಂಕಟೇಶ್ ಪೂಜಾರಿ
ಬಿಜೆಪಿಯಿಂದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ವೆಂಕಟೇಶ್ ಪೂಜಾರಿ ಅವರು ಜೆಡಿಎಸ್ ಸೇರಿದ್ದಾರೆ. ಈ ಬಾರಿಯ ಚುನಾವಣೆಗೆ ಅವರಿಗೆ ಕ್ಷೇತ್ರದಿಂದ ಟಿಕೆಟ್ ಘೋಷಣೆ ಮಾಡಲಾಗಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕೆ.ಶಿವನಗೌಡ ನಾಯರ್ ಸ್ಪರ್ಧಿಸಿದರೆ ಅವರ ಬಾವಮೈದ ವೆಂಕಟೇಶ್ ಪೂಜಾರಿ ಜೆಡಿಎಸ್‌ನಿಂದ ಕಣಕ್ಕಿಳಿಯಲಿದ್ದಾರೆ.

ರಾಜಾ ಸೋಮನಾಥ ನಾಯಕ್
ಮಸ್ಕಿ ಕ್ಷೇತ್ರದಲ್ಲಿ ರಾಜಾ ಸೋಮನಾಥ ನಾಯಕ್ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಗುರುಗುಂಟಾ ದೊರೆ ರಾಜಾ ಸೋಮನಾಥ ನಾಯಕ್ ಯುವಕರ ಪಡೆ ಕಟ್ಟಿಕೊಂಡು ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. 2013ರ ಚುನಾವಣೆಯಲ್ಲಿ ಕ್ಷೇತ್ರದಿಂದ ಅಮರೀಶ್ ಎಂಬುವವರು ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದ್ದರು ಮತ್ತು 3,488 ಮತಳನ್ನು ಪಡೆದಿದ್ದರು.












Click it and Unblock the Notifications