ತುಮಕೂರಿನ ಭುಜಕೀರ್ತಿ ತಿಪಟೂರಿಗೆ ಸೌಕರ್ಯದ ಕೊರತೆ ಕಪ್ಪುಚುಕ್ಕೆ
ತುಮಕೂರು ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರ ತಿಪಟೂರು. ಅತಿ ದೊಡ್ಡ ಜಿಲ್ಲೆಯಾದ ತುಮಕೂರನ್ನು ಆಡಳಿತಾತ್ಮಕ ದೃಷ್ಟಿಯಿಂದ ಮತ್ತೊಂದು ಜಿಲ್ಲೆ ಮಾಡಬೇಕು ಎಂಬ ಬೇಡಿಕೆ ಇದ್ದು, ತಿಪಟೂರು ಜಿಲ್ಲಾ ಕೇಂದ್ರ್ ಅಗಬೇಕು ಎಂಬುದು ಬಹಳ ಕಾಲದ ಬೇಡಿಕೆ. ಸದ್ಯಕ್ಕೆ ಇಲ್ಲಿನ ಶಾಸಕರು ಕಾಂಗ್ರೆಸ್ ನ ಷಡಕ್ಷರಿ.
ಕಾಂಗ್ರೆಸ್ ಸರಕಾರದ ಕೊನೆ ಕಂತಿನಲ್ಲಿ ಸ್ವಲ್ಪದರಲ್ಲಿ ಸಚಿವ ಸ್ಥಾನ ಪಡೆಯುವುದರಿಂದ ವಂಚಿತರಾದವರು. ಜತೆಗೆ ಕಾಂಗ್ರೆಸ್ ನ ಮೊದಲ ಪಟ್ಟಿಯಲ್ಲಿ ಟಿಕೆಟ್ ಘೋಷಣೆಯಾಗದೆ ಆನಂತರ ಟಿಕೆಟ್ ಪಡೆದವರು. ಈ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಬಿಜೆಪಿಗೂ ನೆಲೆ ಇದೆ. ಬಿಜೆಪಿಯಿಂದ ನಾಗೇಶ್, ಜೆಡಿಎಸ್ ನಿಂದ ನಿವೃತ್ತ ಎಸಿಪಿ ಲೋಕೇಶ್ವರ್ ಸ್ಪರ್ಧೆ ಮಾಡುತ್ತಿದ್ದಾರೆ.
ಜಿಲ್ಲಾ ಪಂಚಾಯಿತಿಗೆ ಸ್ವತಂತ್ರವಾಗಿ ನಿಂತು ಗೆದ್ದಿರುವ ನಂಜಾಮರಿ ಹೆಸರು ಮೊದಲಿಗೆ ಕಾಂಗ್ರೆಸ್ ನಿಂದ ಕೇಳಿಬಂದಿತ್ತು. ಇದೀಗ ಸ್ವತಂತ್ರವಾಗಿ ಸ್ಪರ್ಧೆಯಲ್ಲಿದ್ದಾರೆ. ಕೊಬ್ಬರಿಗೆ ಮಾರುಕಟ್ಟೆ ಇರುವ ತಿಪಟೂರು ಆರ್ಥಿಕ ಚಟುವಟಿಕೆ ಹೆಚ್ಚಿರುವ ಕೇಂದ್ರವೂ ಹೌದು. ಶೈಕ್ಷಣಿಕವಾಗಿ, ವಾಣಿಜ್ಯವಾಗಿ, ಸಾಹಿತ್ಯಿಕವಾಗಿ ತಿಪಟೂರು ಎಂದಿಗೂ ತುಮಕೂರು ನಗರಕ್ಕೆ ಭುಜಕೀರ್ತಿಯಂತೆ ಕಾಣುತ್ತದೆ.

ಆದರೆ, ಇಲ್ಲೂ ಮೂಲಸೌಕರ್ಯದ್ದೇ ಸಮಸ್ಯೆ. ಎದೆಯೆತ್ತರಕ್ಕೆ ಬೆಳೆದ ಮಗನ ಆದಾಯ, ಹೆಸರು ಬೇಕು. ಆದರೆ ಅವನಿಗೆ ಒಳ್ಳೆ ಬಟ್ಟೆ- ಸೂಟು-ಬೂಟು ಕೊಡಲ್ಲ ಅಂದರೆ ಹೇಗೋ ಹಾಗಾಗಿದೆ ತಿಪಟೂರಿನ ಸ್ಥಿತಿ. ತಿಪಟೂರು ತಾಲೂಕು ಶೈಕ್ಷಣಿಕ ಕೇಂದ್ರವಾಗಿಯೂ ಹೆಸರು ಪಡೆದಿದೆ. ಇಲ್ಲಿನ ಕೊಬ್ಬರಿ ಮಾರುಕಟ್ಟೆಯೂ ಬಹಳ ಪ್ರಸಿದ್ಧಿ.
ಸೌಕರ್ಯಗಳ ವಿಚಾರಕ್ಕೆ ಬಂದರೆ ಸಮಸ್ಯೆಗಳಂತೂ ಇದ್ದೇ ಇದೆ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಜಿದ್ದಾಜಿದ್ದಿ ಪೈಪೋಟಿ ನಿರೀಕ್ಷೆ ಮಾಡಬಹುದು. ಬಿಜೆಪಿ- ಕಾಂಗ್ರೆಸ್- ಜೆಡಿಎಸ್ ಜತೆಗೆ ಪಕ್ಷೇತರರಾಗಿ ಸ್ಪರ್ಧೆಯಲ್ಲಿರುವ ನಂಜಾಮರಿ ಅವರ ಕಾರಣಕ್ಕೆ ಅಖಾಡ ರಂಗೇರಿದೆ.












Click it and Unblock the Notifications