ಶ್ರೀನಿವಾಸಪುರ ಕ್ಷೇತ್ರದಲ್ಲಿ ಏನಿದ್ದರೂ ರೆಡ್ಡಿ ವರ್ಸಸ್ ಸ್ವಾಮಿ
ಈ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಗಳು ಗೌಣ. ಏನಿದ್ದರೂ ರೆಡ್ಡಿ ವರ್ಸಸ್ ಸ್ವಾಮಿ ಜಿದ್ದಾಜಿದ್ದಿ. ರೆಡ್ಡಿ ಅಂದರೆ ಜಿ.ಕೆ.ವೆಂಕಟಶಿವಾ ರೆಡ್ಡಿ. ಅವರು ಸದ್ಯ ಜೆಡಿಎಸ್ ನಲ್ಲಿದ್ದಾರೆ. ಇನ್ನು ಸ್ವಾಮಿ ಅಂದರೆ ಕೆ.ಆರ್.ರಮೇಶ್ ಕುಮಾರ್. ಅವರು ಕಾಂಗ್ರೆಸ್ ನಲ್ಲಿದ್ದು, ಆರೋಗ್ಯ ಸಚಿವರಾಗಿದ್ದಾರೆ. ಪಕ್ಷದ ಬೆಂಬಲಿಗರು ಎಂಬುದಕ್ಕಿಂತ ಹೆಚ್ಚಾಗಿ ವ್ಯಕ್ತಿಗಳ ಅನುಯಾಯಿಗಳು ಅಥವಾ ಬೆಂಬಲಿಗರೇ ಇಲ್ಲಿ ಹೆಚ್ಚು.
ಒಂದು ಸಲ ಇಲ್ಲಿ ರೆಡ್ಡಿಯನ್ನು ಗೆಲ್ಲಿಸಿದರೆ, ಮತ್ತೊಂದು ಸಲ ಸ್ವಾಮಿಯನ್ನು ಗೆಲ್ಲಿಸುತ್ತಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಮೇಶ್ ಕುಮಾರ್, ಇದು ನನ್ನ ಕೊನೆಯ ಚುನಾವಣೆ ಅಂತಲೇ ಪ್ರಚಾರ ಮಾಡಿದ್ದರು. ಈ ಬಾರಿ ಜಿ.ಕೆ.ವೆಂಕಟಶಿವಾ ರೆಡ್ಡಿ ಅದೇ ರೀತಿ ಪ್ರಚಾರ ಆರಂಭಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಇಬ್ಬರ ಕೊಡುಗೆಯೂ ಇದೆ ಎನ್ನುತ್ತಾರೆ ಸ್ಥಳೀಯರು. ಒಕ್ಕಲಿಗರು ಹಾಗೂ ರೆಡ್ಡಿ ಸಮುದಾಯದ ಮತಗಳು ಪ್ರಮುಖವಾದವು.
ಆದರೆ, ರಮೇಶ್ ಕುಮಾರ್ ಮಾಧ್ಯಮಗಳ ಮುಂದೆ ಹೆಚ್ಚು ಕಾಣಿಸಿಕೊಳ್ಳುತ್ತಾರೆ. ವೆಂಕಟಶಿವಾ ರೆಡ್ಡಿ ಹೆಚ್ಚು ಕಾಣಿಸಿಕೊಳ್ಳುವವರು ಅಲ್ಲ. ಮಾವು ಅಂದರೆ ತಕ್ಷಣಕ್ಕೆ ಶ್ರೀನಿವಾಸಪುರ ನೆನಪಾಗುತ್ತದೆ. ಟೊಮೆಟೊ, ಹಾಲು, ರೇಷ್ಮೆ ಇವೆಲ್ಲಕ್ಕೂ ಈ ವಿಧಾನಸಭಾ ಕ್ಷೇತ್ರ ಗುರುತು ಎಂಬಂತಿದೆ.

ಸರಕಾರಿ ಯೋಜನೆಗಳು ಸಹ ಇಲ್ಲಿಗೆ ಯಥೇಚ್ಚವಾಗಿ ಬಂದರೂ ಅದರ ಫಾಯಿದೆ ಆದಂತೆ ಕಾಣುವುದಿಲ್ಲ. ಇಲ್ಲಿನ ಜನರ ಬಡತನಕ್ಕೆ ಅವು ಇಲಾಜು ಅಂತಾಗಿಲ್ಲ. ಶಿಕ್ಷಣ ಚೆನ್ನಾಗಿದೆ. ಆದರೆ ಉದ್ಯೋಗಾವಕಾಶ ಕಡಿಮೆ ಆದ್ದರಿಂದ ಜನ ವಲಸೆ ಹೋಗುತ್ತಿದ್ದಾರೆ. ಮೊದಲೇ ಹೇಳಿದ ಹಾಗೆ ಇಲ್ಲಿ ಪಕ್ಷಕ್ಕಿಂತ ವ್ಯಕ್ತಿಗಳ ಮಧ್ಯೆ ಪೈಪೋಟಿ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ
ವೈ.ಎ.ನಾರಾಯಣಸ್ವಾಮಿ ಅವರು ಬಿಜೆಪಿಯಿಂದ ಈ ಕ್ಷೇತ್ರಕ್ಕೆ ಸ್ಪರ್ಧಿಸಬಹುದು ಎಂಬ ಮಾತು ಕೇಳಿಬರುತ್ತಿದೆ. ಉಳಿದ ಕ್ಷೇತ್ರಗಳಲ್ಲಿರುವಂತೆ ಚುನಾವಣೆ ಉತ್ಸಾಹ ಅಷ್ಟಾಗಿಲ್ಲ. ಹ್ಞಾಂ, ಇಲ್ಲಿಂದ ಬಿಜೆಪಿಗೆ ಎಸ್ ಎಲ್ ಎನ್ ಮಂಜು ಎಂಬುವವರ ಹೆಸರು ಕೂಡ ಕೇಳಿಬರುತ್ತಿದೆ. ಅವರು ಈಗಾಗಲೇ ವೇದಿಕೆ ಸಿದ್ಧ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾತೂ ಇದೆ.
ಇನ್ನು ನೀರಾವರಿ ಹೋರಾಟದ ವಿಚಾರಕ್ಕೆ ಬಂದರೆ ಅದರಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡವರು ಕೆ.ಆರ್. ರಮೇಶ್ ಕುಮಾರ್. ಈ ವಿಚಾರ ಅವರ ಪಾಲಿಗೆ ಪ್ಲಸ್ ಆಗಬಹುದು. ದಲಿತ ಸಂಘಟನೆಗಳು ಛಿದ್ರ ಆಗಿರುವುದರಿಂದ ಅವುಗಳು ಚುನಾವಣೆ ದಿಕ್ಸೂಚಿ ಆಗುವ ಸಾಧ್ಯತೆ ಕಡಿಮೆ. ಈ ಕ್ಷೇತ್ರದಲ್ಲಿ ತೆಲುಗು ಭಾಷೆ ಪ್ರಭಾವ ದಟ್ಟವಾಗಿದೆ.












Click it and Unblock the Notifications