ಕರ್ನಾಟಕ ಚುನಾವಣೆ : ಶುಕ್ರವಾರದ ಬೆಳವಣಿಗೆಗಳ
ಬೆಂಗಳೂರು, ಮೇ 11 : ಸುಮಾರು ಒಂದೂವರೆ ತಿಂಗಳ ಪ್ರಚಾರದ ಅಬ್ಬರ, ಭರವಸೆ, ಟೀಕಾ ಪ್ರಹಾರಗಳಿಗೆ ತೆರೆ ಬಿದ್ದಿದೆ. ಶನಿವಾರ ಕರ್ನಾಟಕ ವಿಧಾನಸಭೆ ಚುನಾವಣೆ 2018ಕ್ಕೆ ಮತದಾನ ನಡೆಯಲಿದೆ. ಮತದಾನಕ್ಕೆ ವೇದಿಕೆ ಸಿದ್ಧವಾಗಿದ್ದು, ಜನರು ಸಹ ಮತದಾನ ಮಾಡಲು ಸಿದ್ಧರಾಗಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ 2018ಕ್ಕೆ ಶನಿವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯ ತನಕ ಮತದಾನ ನಡೆಯಲಿದೆ. ಚುನಾವಣಾಧಿಕಾರಿಗಳು ಮತಗಟ್ಟೆಗೆ ಇಂದು ಸಂಜೆಯ ವೇಳೆಗೆ ತಲುಪಲಿದ್ದಾರೆ.

ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ. ಮೇ 28 ರಂದು ಚುನಾವಣೆ ನಡೆಯಲಿದ್ದು ಮೇ 31ರಂದು ಫಲಿತಾಂಶ ಪ್ರಕಟವಾಗಲಿದೆ.
ವಿಜಯಪುರದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಮಹಾನಗರ ಪಾಲಿಕೆ ಡಿ. ದರ್ಜೆ ನೌಕರ ವಿಠ್ಠಲ ಕುರ್ಲೆ (52) ಅವರು ಮೃತಪಟ್ಟಿದ್ದಾರೆ. ಸೈನಿಕ ಶಾಲೆಯಲ್ಲಿ ಸಿಬ್ಬಂದಿಯನ್ನು ಆಯಾ ಮತಗಟ್ಟೆಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ವಿಠ್ಠಲ ಅವರಿಗೆ ಹೃದಯಾಘಾತ ಸಂಭವಿಸಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಹಾವೇರಿ ಜಿಲ್ಲೆಯಾದ್ಯಂತ ವಿಧಾನಸಭಾ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ 1465 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಜಿಲ್ಲೆಯಲ್ಲಿ 5,97,320 ಮಹಿಳೆಯರು ಹಾಗೂ 14,582 ವಿಕಲಚೇತನ ಮತದಾರರು ಒಳಗೊಂಡಂತೆ 12,39,289 ಮತದಾರರು ಇದ್ದಾರೆ. ಜಿಲ್ಲೆಯಲ್ಲಿ 6 ವಿಧಾನಸಭಾ ಕ್ಷೇತ್ರಗಳಿವೆ.
ಮತದಾನ ಹಿನ್ನಲೆಯಲ್ಲಿ ಶನಿವಾರ ಬೆಂಗಳೂರು ನಗರದಲ್ಲಿ ಇಂದಿರಾ ಕ್ಯಾಂಟೀನ್ ಬಾಗಿಲು ಮುಚ್ಚಲಿವೆ. ನಗರದಲ್ಲಿ ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳಿಗೆ ಇಂದಿರಾ ಕ್ಯಾಂಟೀನ್‌ನಿಂದ ಊಟ ಪೂರೈಕೆ ಮಾಡಲಾಗುತ್ತದೆ. ಆದ್ದರಿಂದ, ಕ್ಯಾಂಟೀನ್ ಬಾಗಿಲು ಮುಚ್ಚಲು ಬಿಬಿಎಂಪಿ ನಿರ್ಧಿರಿಸಿದೆ.
ಶಿವಮೊಗ್ಗ ಜಿಲ್ಲಾಡಳಿತ ಮತದಾನಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿದೆ. ಒಟ್ಟು 14,26,208 ಮತದಾರರು 1756 ಮತಗಟ್ಟೆಗಳಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. 9563 ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 14,26, 208 ಮತದಾರರು ಈ ಬಾರಿ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದು, ಇವರಲ್ಲಿ 711732 ಪುರುಷರು ಹಾಗೂ 714415 ಮಹಿಳಾ ಮತದಾರರು ಹಾಗೂ 61ಮಂದಿ ಇತರ ಮತದಾರರು ಇದ್ದಾರೆ.
ಸ್ವೀಪ್ ಸಮಿತಿ ವತಿಯಿಂದ ಹುಣಸೂರು ತಾಲೂಕಿನಲ್ಲಿ 7 ವಿಶೇಷ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ತಾಲೂಕಿನ ನಾಗಾಪುರ ಗಿರಿಜನ ಹಾಡಿಯಲ್ಲಿ ಗಿರಿ ಜನರ ಸಂಸ್ಕೃತಿ, ಪರಂಪರೆ ಬಿಂಬಿಸುವ ಮಾದರಿಯಲ್ಲಿ ಮತಗಟ್ಟೆ ನಿರ್ಮಿಸಲಾಗಿದೆ. ಇಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಬಿಳಿ ಪಂಚೆ, ಶರ್ಟ್, ಮೈಸೂರು ಪೇಟ ತೊಡಲಿದ್ದಾರೆ. ಇಲ್ಲಿ ಮತದಾನ ಮಾಡುವ ಜನರಿಗೆ ವಿವಿಧ ಬೇರುಗಳ ಪಾನಕ ನೀಡಲಾಗುತ್ತದೆ.
ವಿಧಾನಸಭೆ ಚುನಾವಣೆ ಪ್ರಕ್ರಿಯೆಯಲ್ಲಿ ಮತಗಟ್ಟೆ ಸಿಬ್ಬಂದಿಗಳಿಗೆ ಮತ ಯಂತ್ರಗಳು ಹಾಗೂ ಚುನಾವಣಾ ಸಾಮಗ್ರಿಯನ್ನು ವಿತರಿಸುವ ಪ್ರಮುಖ ಘಟ್ಟವಾಗಿರುವ ಮಸ್ಟರಿಂಗ್ ಕಾರ್ಯ ಕೊಪ್ಪಳದ ಗವಿಸಿದ್ದೇಶ್ವರ ಪ್ರೌಢಶಾಲೆ ಆವರಣದಲ್ಲಿ ನಡೆಯಿತು. ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 287 ಮತಗಟ್ಟೆಗಳಿದ್ದು, ಒಟ್ಟು 1720 ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ವಿಚಕ್ಷಣ ದಳದ ಸಿಬ್ಬಂದಿ 2.17 ಕೋಟಿ ಹಣವನ್ನು ವಶಪಡಿಸಿಕೊಂಡಿದ್ದಾರೆ. ರಾಯದುರ್ಗ ಸಮೀಪದ ಯದ್ದಲಬೊಮ್ಮನಹಟ್ಟಿ ಗ್ರಾಮದಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಸ್ಕಾರ್ಪಿಯೋ ವಾಹನದಲ್ಲಿದ್ದ ಹಣವನ್ನು ವಶಕ್ಕೆ ಪಡೆದುಕೊಂಡು, ಚಾಲಕನ ವಿಚಾರಣೆ ನಡೆಸುತ್ತಿದ್ದಾರೆ.
ಯಾದಗಿರಿ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ 1129 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಸುಮಾರು 9 ಲಕ್ಷ ಮತದಾರರು ಇದ್ದಾರೆ. 1129 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದ್ದು, 226 ಅತಿಸೂಕ್ಷ್ಮ ಮತಗಟ್ಟೆಗಳಿವೆ. 4 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 40 ಮತದಾರರು ಇದ್ದಾರೆ.
ರಾಮನಗರ ಜಿಲ್ಲೆಯಲ್ಲಿ ಒಟ್ಟು 1,140 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮಾಗಡಿಯಲ್ಲಿ 2, ಚನ್ನಪಟ್ಟಣದಲ್ಲಿ 4, ಕನಕಪುರದಲ್ಲಿ 4, ರಾಮನಗರದಲ್ಲಿ 5 ಪಿಂಕ್ ಮತಗಟ್ಟೆಗಳನ್ನು ಮಹಿಳೆಯರಿಗಾಗಿ ಸ್ಥಾಪನೆ ಮಾಡಲಾಗಿದೆ.
ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್.ರಾಜು ಅವರು ಈ ಬಾರಿಯ ಚುನಾವಣೆಯಲ್ಲಿ ಮತದಾನ ಮಾಡುವಂತಿಲ್ಲ. ಕಳೆದ 23 ವರ್ಷಗಳಿಂದ ಅವರು ದೆಹಲಿಯಲ್ಲಿ ವಾಸವಾಗಿದ್ದರು. ಕಳೆದ ವರ್ಷ ಅವರು ಕರ್ನಾಟಕದ ಸೇವೆಗಾಗಿ ಆಗಮಿಸಿದ್ದಾರೆ. ಆದರೆ, ಅವರು ಕರ್ನಾಟಕದಲ್ಲಿ ಮತದಾರರ ಗುರುತಿನ ಚೀಟಿಯನ್ನು ಹೊಂದಿಲ್ಲ.
ಧಾರವಾಡ ಜಿಲ್ಲೆಯಲ್ಲಿ ಒಟ್ಟು 1,628 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ 319 ಸೂಕ್ಷ್ಮ, 206ಅತಿಸೂಕ್ಷ್ಮ ಗತಟ್ಟೆಗಳು. ಜಿಲ್ಲೆಯಾದ್ಯಂತ ಭದ್ರತೆಗೆ 7 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 14,48,748 ಮತಗಟ್ಟೆಗಳಿವೆ.
ಮತದಾನಕ್ಕೆ ಒಂದು ದಿನ ಬಾಕಿ ಇರುವಾಗ ಬೀದರ್ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಖೇಣಿ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಕ್ರಮವಾಗಿ ಹಣ ಸಂಗ್ರಹಣೆ ಮಾಡಲಾಗಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಬೀದರ್‌ನ ದಾರೇಂಪುರೆಯಲ್ಲಿರುವ ಖೇಣಿ ನಿವಾಸದ ಮೇಲೆ ದಾಳಿ ನಡೆಸಿ, ಪರಿಶೀಲನೆ ಮಾಡಲಾಗುತ್ತಿದೆ.
ಮಂಡ್ಯ ಜಿಲ್ಲೆಯಲ್ಲಿ ಒಟ್ಟು 7 ವಿಧಾನಸಭಾ ಕ್ಷೇತ್ರಗಳಿವೆ. ಜಿಲ್ಲೆಯ 1795 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 84 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 22 ಮಹಿಳಾ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ.
ಬೆಂಗಳೂರು ನಗರದಲ್ಲಿ 28 ವಿಧಾನಸಭಾ ಕ್ಷೇತ್ರಗಳಿವೆ. ಜಯನಗರ ಹೊರತು ಪಡಿಸಿ 27 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. ‘ಬೆಂಗಳೂರು ನಗರದಲ್ಲಿ ಭದ್ರತೆಗಾಗಿ 10,500 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ನಾಗಾಲ್ಯಾಂಡ್ ಪೊಲೀಸ್, ಕೇಂದ್ರ ಮೀಸಲು ಪಡೆ 34, ಕೆಎಸ್‌ಆರ್‌ಪಿ, ಹೋಂ ಗಾರ್ಡ್‌ಗಳನ್ನು ನಿಯೋಜನೆ ಮಾಡಲಾಗಿದೆ' ಎಂದು ಬೆಂಗಳೂರ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಹೇಳಿದ್ದಾರೆ.
'ಮತದಾನಕ್ಕೆ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ರಾಜ್ಯಾದ್ಯಂತ ಸೂಕ್ತ ಭದ್ರತೆ ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರೆ ಸಾಕು. ಮತದಾರರ ಗುರುತಿನ ಚೀಟಿ ಇಲ್ಲದಿದ್ದರೂ ಆಯೋಗ ಹೇಳಿರುವ 12 ದಾಖಲೆಗಳನ್ನು ತೋರಿಸಿ ಮತದಾನ ಮಾಡಬಹುದು' ಎಂದು ರಾಜ್ಯ ಮುಖ್ಯಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದರು.















Click it and Unblock the Notifications