ಕೆಜಿಎಫ್ ವಿಧಾನಸಭಾ ಕ್ಷೇತ್ರ: ಸರ್ವ ಜನಾಂಗದ ಶ್ರಮಿಕರ ತೋಟ
ಕೋಲಾರ ಜಿಲ್ಲೆಯಲ್ಲೇ ಬಿಜೆಪಿಯ ಅಸ್ತಿತ್ವ ತುಂಬ ಸ್ಪಷ್ಟವಾಗಿ ಕಾಣುವ ಕ್ಷೇತ್ರ ಕೆಜಿಎಫ್. ಇಲ್ಲಿಂದ ಆರಿಸಿಬಂದ ಬಿಜೆಪಿ ಶಾಸಕಿ ವೈ.ರಾಮಕ್ಕ ಅವರು ಸಂಪಂಗಿ ತಾಯಿ. ಬಿಜಿಎಂಎಲ್ ಎಂಬ ಕಂಪೆನಿ ಸಾವಿರಾರು ಮಂದಿಗೆ ಅನ್ನ ಹಾಕಿದ ತಾಯಿ. ಇನ್ನು ಇಲ್ಲಿ ಖಾಸಗೀಕರಣದ ಅಂಚಿನಲ್ಲಿರುವ ಬೆಮೆಲ್ ಕೂಡ ಇದೆ.
ಕನ್ನಡ, ತಮಿಳು, ತೆಲುಗು ಪ್ರಭಾವ ದಟ್ಟವಾಗಿದೆ. ಬ್ರಿಟಿಷರ ಪದ್ಧತಿಗಳು ಇಂದಿಗೂ ಇಲ್ಲಿನ ಜನರ ಮೇಲಿದೆ. ಜತೆಗೆ ಬಡತನವೂ ಹಾಗೆ. ಕಾಂಗ್ರೆಸ್ ಸರಕಾರದ ಅನ್ನ ಭಾಗ್ಯ ಯೋಜನೆಗೆ ಅತಿ ಹೆಚ್ಚು ಮೈಲೇಜ್ ದೊರೆಯುವಂತಿದ್ದರೆ ಇಲ್ಲೇ. ಇನ್ನೊಂದು ಅಂಶ ನೆನಪಿಡಿ, ಕೆಜಿಎಫ್ ತಾಲೂಕು ಕೇಂದ್ರವಲ್ಲ. ಬಂಗಾರಪೇಟೆ ತಾಲೂಕಿನಲ್ಲಿ ಬರುವ ಒಂದು ಕ್ಷೇತ್ರ.
ಆದರೆ ಅಲ್ಲಿಗಿಂತ ಇದು ಹೆಸರುವಾಸಿ. ಜತೆಗೆ ಕೋಟಿಲಿಂಗ ಬಹಳ ಹೆಸರು ಪಡೆದ ಕ್ಷೇತ್ರ. ಸಂಸದ ಕೆ.ಎಚ್.ಮುನಿಯಪ್ಪ ಅವರ ಮಗಳು ರೂಪಕಲಾ ಈ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಜೆಡಿಎಸ್ ನಿಂದ ಭಕ್ತವತ್ಸಲಂ. ಇನ್ನು ಬಿಜೆಪಿಯಿಂದ ಸಂಪಂಗಿ ಮಗಳು ಅಶ್ವಿನಿ ಕಣದಲ್ಲಿದ್ದಾರೆ.

ಕಳೆದ ಜಿಲ್ಲಾಪಂಚಾಯಿತಿ ಚುನಾವಣೆಯಲ್ಲಿ ಸಂಪಂಗಿ ಅವರ ಮಗಳು ಅಶ್ವಿನಿ ಅವರು ರೂಪಕಲಾ ಅವರನ್ನು ಸೋಲಿಸಿದ್ದರು. ಇದಕ್ಕೆ ಕಾರಣ ಆಗಿದ್ದು ಜೆಡಿಎಸ್ ನ ಭಕ್ತವತ್ಸಲಂ ಬೆಂಬಲ. ತಮ್ಮ ಅಭ್ಯರ್ಥಿಯನ್ನು ಕಣದಲ್ಲಿ ಇಳಿಸದೆ ಅಶ್ವಿನಿಯನ್ನು ಬೆಂಬಲಿಸಿದ್ದರು. ಆಗ ನೂರೈವತ್ತು ಚಿಲ್ಲರೆ ಮತಗಳಿಂದ ಅಶ್ವಿನಿ ಜಯ ಸಾಧಿಸಿದ್ದರು.
ಆದರೆ, ಬದಲಾದ ಕಾಲ ಘಟ್ಟದಲ್ಲಿ ಬಿಜೆಪಿಯ ಸಂಪಂಗಿ ಕುಟುಂಬಕ್ಕೆ ಸ್ಥಳೀಯವಾಗಿ ಕೇಸರಿ ಪಕ್ಷದ ನಾಯಕರ ವಿರೋಧವಿದೆ. ಹೇಗಾದರೂ ಸರಿ ಈ ಸಲ ಸಂಪಂಗಿ ಕುಟುಂಬವನ್ನು ಬೆಂಬಲಿಸಬಾರದು ಎಂಬ ಸಿಟ್ಟು ಎದ್ದು ಕಾಣುತ್ತಿದೆ. ಈ ಅಂಶವು ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿ ಇರುವ ಸಂಪಂಗಿ ಅವರ ಮಗಳಿಗೆ ಹಿನ್ನಡೆ ಆಗಬಹುದು.
ಇನ್ನು ಜಾತಿ ಲೆಕ್ಕಾಚಾರದಿಂದ ನೋಡಿದರೆ ಪರಿಶಿಷ್ಟ ಜಾತಿ ಹಾಗೂ ಕುರುಬ ಸಮುದಾಯದ ಮತಗಳು ನಿರ್ಣಾಯಕವಾದವು. ಆದರೆ ಈ ಸಲ ಸಂಸದ ಕೆ.ಎಚ್.ಮುನಿಯಪ್ಪ ಅವರ ಮಗಳು ಕಾಂಗ್ರೆಸ್ ನ ರೂಪಕಲಾ ಅವರಿಗೆ ಪ್ಲಸ್ ಆಗಬಹುದಾದಂಥ ಬಹಳ ಅಂಶಗಳಿವೆ ಎಂದು ಸ್ಥಳೀಯ ಮುಖಂಡರು ಅಭಿಪ್ಪ್ರಾಯ ಪಡುತ್ತಾರೆ.
ಕೆರೆ ಒತ್ತುವರಿ, ಸಮುದಾಯ ಶೌಚಾಲಯ ಸೇರಿದಂತೆ ಈ ಕ್ಷೇತ್ರದಲ್ಲಿ ಕೆಲವು ಸಮಸ್ಯೆಗಳಿವೆ. ಇಲ್ಲಿಯ ಕಾರ್ಮಿಕ ವರ್ಗಕ್ಕೆ ದುಡಿಯುವ ಮಾರ್ಗ ಬೇಕಿದೆ. ಜತೆಗೆ ಕಾನೂನು ಸುವ್ಯವಸ್ಥೆ ಇನ್ನಷ್ಟು ಬಲಿಷ್ಠ ಆಗಬೇಕಿದೆ ಎನ್ನುತ್ತಾರೆ ಸ್ಥಳೀಯರು.












Click it and Unblock the Notifications