Exit Poll : ದಿಗ್ವಿಜಯ ಮತ್ತು ವಿಜಯವಾಣಿ ಫಲಿತಾಂಶ ಬಿಜೆಪಿ ಬಹುಮತಕ್ಕೆ ಹತ್ತಿರ
ಬೆಂಗಳೂರು, ಮೇ 12: ಕರ್ನಾಟಕ ವಿಧಾನಸಭೆಯ 222 ಸ್ಥಾನಕ್ಕಾಗಿ ಮೇ.12 ರಂದು ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಅಂತ್ಯ ಕಂಡಿದೆ. ದಿಗ್ವಿಜಯ ನ್ಯೂಸ್ ಮತ್ತು ವಿಜಯವಾಣಿ ನಡೆಸಿರುವ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಬಹುಮತಕ್ಕೆ ಸನಿಯದಲ್ಲಿದೆ.
ದಿಗ್ವಿಜಯ ಮತ್ತು ವಿಜಯವಾಣಿ ಜಂಟಿಯಾಗಿ ನಡೆಸಿರುವ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ 103-110 ಸ್ಥಾನಗಳನ್ನು ಪಡೆದುಕೊಳ್ಳಲಿದೆ ಎಂದಿದೆ. ಆ ಮೂಲಕ ಬಹುಮತಕ್ಕೆ ಹತ್ತಿರವಿದ್ದು ಸರ್ಕಾರವನ್ನು ಬಿಜೆಪಿಯೇ ರಚಿಸಲಿದೆ ಎನ್ನುತ್ತಿದೆ ಈ ಸಮೀಕ್ಷೆ.
ಚುನಾವಣೋತ್ತರ ಸಮೀಕ್ಷೆ ಪ್ರಕಾರ ಕಾಂಗ್ರೆಸ್‌ಗೆ 76-80 ಸ್ಥಾನ ಪಡೆದುಕೊಂಡರೆ, ಜೆಡಿಎಸ್ ಪಕ್ಷವು 31-35 ಸ್ಥಾನಗಳನ್ನು ಪಡೆದುಕೊಳ್ಳಲಿದೆ. ಇತರ ಪಕ್ಷ ಅಥವಾ ಪಕ್ಷೇತರರು 04-18 ಸ್ಥಾನಗಳನ್ನು ಗೆದ್ದುಕೊಳ್ಳಲಿದೆ.

ಬಹುತೇಕ ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ಮತ್ತು ನ್ಯೂಸ್ ಏಜೆನ್ಸಿಗಳು ಚುನಾವಣೋತ್ತರ ಸಮೀಕ್ಷೆ ಪ್ರಕಟಿಸಿದ್ದು ಅಲ್ಲಿಯೂ ಮಿಶ್ರ ಫಲಿತಾಂಶ ದೊರಕಿದೆ. ಕೆಲವು ಸುದ್ದಿವಾಹಿನಿಗಳು ಕಾಂಗ್ರೆಸ್‌ಗೆ ಬಹುಮತ ಎಂದರೆ ರಿಪಬ್ಲಿಕ್ ಸೇರಿದಂತೆ ಇನ್ನು ಕೆಲವು ಮಾಧ್ಯಮಗಳು ಬಿಜೆಪಿಗೆ ಬಹುಮತ ಎಂದಿವೆ. ಇನ್ನು ಕೆಲವು ವಾಹಿನಿಗಳು ಅತಂತ್ರ ಸರ್ಕಾರ ಎಂದಿವೆ.
ಈ ಬಾರಿ ರಾಜ್ಯದಲ್ಲಿ ಒಟ್ಟು 5,00,15,895 (5 ಕೋಟಿ) ಮತದಾರರಿದ್ದಾರೆ. ಇದರಲ್ಲಿ 2,53,26,629 ಪುರುಷ ಮತದಾರರಾದರೆ, ಮಹಿಳಾ ಮತದಾರರ ಸಂಖ್ಯೆ 2,46,84,311. ಇನ್ನು 4,955 ತೃತೀಯ ಲಿಂಗಿ ಮತದಾರರೂ ರಾಜ್ಯದಲ್ಲಿದ್ದಾರೆ.
2,622 ಅಭ್ಯರ್ಥಿಗಳಿದ್ದು, ಪುರುಷ ಅಭ್ಯರ್ಥಿಗಳು 2,405, ಮಹಿಳೆಯರು 217. ಪಕ್ಷವಾರು: ಬಿಜೆಪಿ 222, ಕಾಂಗ್ರೆಸ್ 220, ಜೆಡಿಎಸ್ 199, ಬಿಎಸ್ಪಿ 18, ಇತರೆ 1963.
2013ರಲ್ಲಿ ಶೇ 71.45ರಷ್ಟು ಮಾತ್ರ ಮತದಾನ ದಾಖಲಾಗಿತ್ತು. ಕೊನೆ ಗಳಿಗೆಯಲ್ಲಿ ಮತದಾರರು ಕ್ಯೂನಲ್ಲಿ ಬಂದು ನಿಂತರೆ ರಾತ್ರಿ ಹತ್ತು ಗಂಟೆಯಾದರೂ ಮತದಾನ ಮಾಡುವ ಅವಕಾಶ ನೀಡಬೇಕಾಗುತ್ತದೆ.
ಎಲೆಕ್ಟ್ರಾನಿಕ್ ಮಾಧ್ಯಮಗಳು ಮತದಾನಕ್ಕೂ 48 ಗಂಟೆಗಳಿಗೂ ಮುನ್ನ ಯಾವುದೇ ಸಮೀಕ್ಷೆ, ಫಲಿತಾಂಶ ಹೊರ ಹಾಕದಂತೆ ಚುನಾವಣಾ ಆಯೋಗ ನಿಯಮ ಜಾರಿಗೊಳಿಸಿತ್ತು. ಅದರಂತೆ, ಮತದಾನ ಪ್ರಕ್ರಿಯೆ ಮುಗಿದ ನಂತರ ಚುನಾವಣೋತ್ತರ ಸಮೀಕ್ಷೆ ಫಲಿತಾಂಶವನ್ನು ಎಲ್ಲಾ ಮಾಧ್ಯಮಗಳು ಪ್ರಕಟಿಸಿದೆ.












Click it and Unblock the Notifications