ಚಿಕ್ಕನಾಯಕನಹಳ್ಳಿ ಕ್ಷೇತ್ರ: ಕೊಬ್ಬರಿ- ಹೈನುಗಾರಿಕೆ ಜೀವಾಳ
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ವ್ಯವಸಾಯ ಪ್ರಾಶಸ್ತ್ಯವಿರುವ, ಕೊಬ್ಬರಿಯಿಂದ ಆದಾಯ ನಿರೀಕ್ಷೆ ಮಾಡುವ, ಸಾಂಸ್ಕೃತಿಕವಾಗಿ ಚಟುವಟಿಕೆಯಿಂದ ಇರುವ ತಾಲೂಕು ಅಥವಾ ಕ್ಷೇತ್ರ. ಹೈನುಗಾರಿಕೆ- ಕುರಿ ಸಾಕಣೆಗೂ ಇಲ್ಲಿ ಪ್ರಾಶಸ್ತ್ಯವಿದೆ. ಜೆಡಿಎಸ್ ನ ಸಿ.ಬಿ.ಸುರೇಶ್ ಬಾಬು ಶಾಸಕರು. ಬಿಜೆಪಿಯಿಂದ ಇಲ್ಲಿ ಪೈಪೋಟಿ ನೀಡುವ ಎಲ್ಲ ಸಾಧ್ಯತೆ ಇದೆ.
ಆದರೆ, ಬಿಜೆಪಿ ಒಳಗೆ ಪರಿಹರಿಸಿಕೊಳ್ಳಬೇಕಾದ ಒಂದಿಷ್ಟು ಮನಸ್ತಾಪ- ಅಸಮಾಧಾನ ಇದೆ. ಇದು ಉಳಿದ ಕ್ಷೇತ್ರಗಳಲ್ಲೂ ಇರುವ ಕೆಜೆಪಿ- ಬಿಜೆಪಿಯ ಸಂಘರ್ಷ. ಜತೆಗೆ ಇಡೀ ತುಮಕೂರಿನ ಯಾವ ಕ್ಷೇತ್ರದಲ್ಲಿ ಗಮನಿಸಿದರೂ ಜೆಡಿಎಸ್- ಕಾಂಗ್ರೆಸ್ ನ ಹಣಾಹಣಿ ಹೆಚ್ಚು ಸ್ಪಷ್ಟವಾಗಿ ಕಾಣುತ್ತದೆ.
ಜೆ.ಸಿ.ಮಾಧುಸ್ವಾಮಿ ಅವರ ಕಾರಣಕ್ಕೆ ಬಿಜೆಪಿಯ ಪಾಲಿಗೆ ಇಲ್ಲೊಂದು ಹೋರಾಟದ ಭರವಸೆ ಇದೆ. ಆರೋಗ್ಯ, ಶಿಕ್ಷಣ, ಮೂಲಸೌಕರ್ಯದಂಥ ಸಮಸ್ಯೆ ಈ ಕ್ಷೇತ್ರದ ಜನರ ಪಾಲಿಗೆ ಅಗತ್ಯದಂತೆ ಕಂಡುಬಂದರೆ, ಪಶುವೈದ್ಯಕೀಯ ವ್ಯವಸ್ಥೆ ತುರ್ತಾಗಿ ಮಾಡಿಕೊಡಬೇಕಾದ ಅನುಕೂಲ.

ಸಚಿವರಾದ ಟಿ.ಬಿ.ಜಯಚಂದ್ರ ಮಗ ಸಂತೋಷ್ ಜಯಚಂದ್ರ ಇಲ್ಲಿ ಕಾಂಗ್ರೆಸ್ ನ ಅಭ್ಯರ್ಥಿ ಆಗಿದ್ದಾರೆ. ಈ ಕ್ಷೇತ್ರದ ಮೇಲೆ ಜಯಚಂದ್ರ ಅವರ ಹಿಡಿತ ಸ್ವಲ್ಪ ಮಟ್ಟಿಗೆ ಇರುವುದರಿಂದ ತಮ್ಮ ಮಗನನ್ನು ಇಲ್ಲಿಂದ ಕಣಕ್ಕೆ ಇಳಿಸಿದ್ದಾರೆ. ಆದರೂ ಇಲ್ಲಿ ಮಾಧುಸ್ವಾಮಿ ಹಾಗೂ ಸುರೇಶ್ ಬಾಬು ಮಧ್ಯೆ ಹಣಾಹಣಿ ಎಂದು ಜನ ಮಾತನಾಡುತ್ತಾರೆ.
ಸಾಹಿತ್ಯಕ್ಕೂ ಹೆಸರಾದ ಈ ತಾಲೂಕಿನಲ್ಲಿ ರಸ್ತೆ, ನೀರು ಮುಂತಾದ ಮೂಲ ಸೌಕರ್ಯಕ್ಕೆ ಸಮಸ್ಯೆಗಳಿವೆ. ಇನ್ನು ಜಾತಿ ಸಂಘರ್ಷಗಳು ಸಹ ಆಗಾಗ ಕಾಣಿಸಿಕೊಂಡಿದ್ದಿದೆ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಜನರ ಒಅಲವು ಯಾರ ಕಡೆಗೋ ಎಂಬ ಕುತೂಹಲ ಅಂತೂ ಇದ್ದೇ ಇದೆ.












Click it and Unblock the Notifications