ಕ್ಷೇತ್ರ ಪರಿಚಯ: ಕಾಪುವಿನಲ್ಲಿ ಬಿಜೆಪಿ-ಕಾಂಗ್ರೆಸ್ ಇಬ್ಬರಿಗೂ ಸಮಾನ ಅವಕಾಶ
ಉಡುಪಿಯಿಂದ ದಕ್ಷಿಣಕ್ಕೆ ಕೇವಲ 13 ಕಿಲೋ ಮೀಟರ್ ದೂರದಲ್ಲಿರುವ ಕಡಲ ತಡಿಯ ಸಣ್ಣ ಪಟ್ಟಣ ಕಾಪು. ಹಾಗೆ ನೋಡಿದರೆ ಇದು ಮಂಗಳೂರಿಗೂ ಕೇವಲ 40 ಕಿಲೋಮೀಟರ್ ದೂರದಲ್ಲಿದೆ.
ಇಲ್ಲಿನ ಕಾಪು ದೀಪಸ್ಥಂಭ ಜನಪ್ರಿಯವಾದುದು. ಜತೆಗೆ ಇಲ್ಲಿರುವ ಮೂರು ಮಾರಿಯಮ್ಮ (ಮಾರಿಗುಡಿ) ದೇವಸ್ಥಾನಗಳು, ಟಿಪ್ಪು ಸುಲ್ತಾನ್ ಕಟ್ಟಿದ ಬಂದರು ಕೂಡ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿನ ಬೀಚ್ ಕೂಡ ಜನರ ಮೆಚ್ಚುಗೆ ಗಳಿಸಿದ್ದು, ಸೂರ್ಯಾಸ್ತ ನೋಡಲು ಪ್ರವಾಸಿಗರು ಹೆಚ್ಚಾಗಿ ಆಗಮಿಸುತ್ತಾರೆ. ಒಂದಷ್ಟು ಉತ್ತಮ ರೆಸಾರ್ಟ್ ಗಳೂ ಇಲ್ಲಿವೆ.
ಈ ಕ್ಷೇತ್ರದ ಮೇಲೆ ದಿವಂಗತ ವಸಂತ ವಿ. ಸಾಲ್ಯಾನ್ ಪ್ರಬಲ ಹಿಡಿತ ಹೊಂದಿದ್ದರು. ಸತತ ಐದು ಬಾರಿ ಈ ಕ್ಷೇತ್ರದಲ್ಲಿ ಅವರು ಗೆಲುವು ಸಾಧಿಸಿದ್ದರು. 1983, 85, 89, 94, 99ರಲ್ಲಿ ಕಾಂಗ್ರೆಸ್ ನಿಂದ ಕಣಕ್ಕಿಳಿದು ಸಾಲ್ಯಾನ್ ಇಲ್ಲಿ ಗೆಲುವಿನ ಬಾವುಟ ಹಾರಿಸುತ್ತಾ ಬಂದಿದ್ದರು. ಹಲವು ಬಾರಿ ಅವರು ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.

ಆದರೆ, 2004 ರಲ್ಲಿ ಇಲ್ಲಿ ವಸಂತ ಸಾಲ್ಯಾನ್ ವಿರೋಚಿತ ಸೋಲು ಕಂಡರು. 1994 ಮತ್ತು 1999ರಲ್ಲಿ ವಸಂತ ಸಾಲ್ಯಾನ್ ವಿರುದ್ಧ ಅಲ್ಪ ಮತಗಳಿಂದ ಸೋತಿದ್ದ ಬಿಜೆಪಿಯ ಲಾಲಾಜಿ ಮೆಂಡನ್ 2004ರಲ್ಲಿ ಸಾಲ್ಯಾನ್ ರಿಗೆ ಕೇವಲ 1ಸಾವಿರ ಮತಗಳಿಂದ ಸೋಲುಣಿಸಿ ಮೊದಲ ಬಾರಿಗೆ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ದಕ್ಕಿಸಿಕೊಟ್ಟರು.
ವಿಶೇಷ ಎಂದರೆ 2008ರಲ್ಲೂ ಇಲ್ಲಿ ಬಿಜೆಪಿಯ ಲಾಲಾಜಿ ಮೆಂಡನ್ ಕಾಂಗ್ರೆಸಿನ ವಸಂತ ವಿ ಸಾಲ್ಯಾನ್ ರನ್ನು ಸೋಲಿಸಿದರಾದರೂ, ಗೆಲುವಿನ ಅಂತರ ಮಾತ್ರ ಮತ್ತೆ ಕೇವಲ 1 ಸಾವಿರ ಚಿಲ್ಲರೆ ಮತಗಳಷ್ಟೇ ಇತ್ತು. ಸೋತರೂ ಸಾಲ್ಯಾನ್ ಪ್ರಭಾವ ಕ್ಷೇತ್ರದಲ್ಲಿ ತಗ್ಗಿರಲಿಲ್ಲ.
2013ರಲ್ಲಿ ಇಲ್ಲಿ ಕಾಂಗ್ರೆಸ್ ವಸಂತ ಸಾಲಿಯಾನ್ ಗೆ ಟಿಕೆಟ್ ನೀಡದೆ ಅನುಭವಿ ರಾಜಕಾರಣಿ ವಿನಯ್ ಕುಮಾರ್ ಸೊರಕೆಯವರಿಗೆ ಟಿಕೆಟ್ ನೀಡಿತ್ತು. ಬಂಡೆದ್ದ ವಸಂತ ಸಾಲ್ಯಾನ್ ಜೆಡಿಎಸ್ ಸೇರಿ ಅಲ್ಲಿಂದ ಕಣಕ್ಕಿಳಿದರು.
ಸೊರಕೆ ಒಮ್ಮೆ ಲೋಕಸಭಾ ಸದಸ್ಯರಾಗಿದ್ದವರು; 1985 ಮತ್ತು 1989ರಲ್ಲಿ ಅವರು ಪುತ್ತೂರು ಕ್ಷೇತ್ರವನ್ನೂ ಪ್ರತಿನಿಧಿಸಿದ್ದರು. 2013ರ ಚುನಾವಣೆಯಲ್ಲಿ ಇಲ್ಲಿ ಸೊರಕೆ ನಿಂತಾಗ, ಇವರು ಸಚಿವರಾಗುತ್ತಾರೆ ಎಂದೇ ಕಾಂಗ್ರೆಸ್ ಮತಯಾಚನೆ ಮಾಡಿತ್ತು.
ಮತದಾನ ನಡೆದು ಫಲಿತಾಂಶ ಹೊರಬಿದ್ದಾಗ ಸೊರಕೆ ಸುಮಾರು ಒಂದೂವರೆ ಸಾವಿರ ಮತಗಳ ಅಂತರದಿಂದ ಪ್ರಯಾಸದ ಜಯ ದಾಖಲಿಸಿದ್ದರು. ಸೋತರೂ ಬಿಜೆಪಿಯ ಲಾಲಾಜಿ ಮೆಂಡನ್ ಪ್ರಬಲ ಸ್ಪರ್ಧೆ ನೀಡಿದ್ದರು. ಜೆಡಿಎಸ್ ನಿಂದ ಕಣಕ್ಕಿಳಿದಿದ್ದ ವಸಂತ ವಿ ಸಾಲ್ಯಾನ್ ಕೇವಲ 4 ಸಾವಿರ ಮತಗಳನ್ನಷ್ಟೇ ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಮುಂದೆ ಸಾಲ್ಯಾನ್ ಸಾವನ್ನಪ್ಪಿದ್ದರು.
ಗೆದ್ದ ಸೊರಕೆ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರೂ ಆಗಿದ್ದರು. ಮುಂದೆ ಅವರನ್ನು ಸಂಪುಟ ಪುನಾರಚನೆ ವೇಳೆ ಕೈಬಿಡಲಾಯಿತು.
ಇಲ್ಲಿ ನಡೆದ ಕಳೆದ 5 ಚುನಾವಣೆಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಯಾರೇ ಗೆದ್ದರೂ ಗೆಲುವಿನ ಅಂತರ ಕೇವಲ 1-3 ಸಾವಿರ ಮತಗಳಷ್ಟೇ ಇದೆ. ಇದು ಇಬ್ಬರಿಗೂ ಈ ಬಾರಿ ಇಲ್ಲಿ ಸಮಾನ ಗೆಲುವಿನ ಅವಕಾಶಗಳಿರುವುದನ್ನು ಸಾರಿ ಹೇಳುತ್ತಿದೆ.
ಇಲ್ಲಿ ಈ ಬಾರಿಯೂ ವಿನಯ ಕುಮಾರ್ ಸೊರಕೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಬಿಜೆಪಿಯಿಂದ ಯಾರು ಕಣಕ್ಕಿಳಿಯುತ್ತಾರೋ ಗೊತ್ತಿಲ್ಲ.











Click it and Unblock the Notifications