ಬೆಳಗಾವಿ ದಕ್ಷಿಣ: ಶತಾಯಗತಾಯ ಕ್ಷೇತ್ರ ಗೆಲ್ಲಲು ಹೊರಟಿದೆ ಬಿಜೆಪಿ
ಬೆಳಗಾವಿಯ ನಗರದ ಭಾಗಗಳನ್ನು ಒಳಗೊಂಡ ಕ್ಷೇತ್ರ ಬೆಳಗಾವಿ ದಕ್ಷಿಣ. ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಈ ಕ್ಷೇತ್ರ 2008ರ ಕ್ಷೇತ್ರಗಳ ಪುನರ್ ವಿಂಗಡಣೆ ಬಳಿಕ ಅಸ್ತಿತ್ವಕ್ಕೆ ಬಂತು.
2013ರ ಚುನಾವಣೆಯಲ್ಲಿ ಎಂಇಎಸ್ ಬೆಂಬಲದೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸಂಭಾಜಿ ಪಾಟೀಲ್ ಇಲ್ಲಿ ಗೆಲುವು ಸಾಧಿಸಿದ್ದರು. ಈ ಚುನಾವಣೆಯಲ್ಲಿ ಸಂಭಾಜಿ ಪಾಟೀಲ್ 54,426 ಮತಗಳನ್ನು ಪಡೆದರೆ ಬಿಜೆಪಿಯ ಅಭಯ್ ಪಾಟೀಲ್ 47,894 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ ನ ಅನಿಲ್ ಎಂ ಪೋತೆದಾರ್ 20,536 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದ್ದರು.
ಇದಕ್ಕೂ ಮೊದಲಿನ ಅಂದರೆ 2008ರ ಚುನಾವಣೆಯಲ್ಲಿ ಬಿಜೆಪಿಯ ಅಭಯ್ ಪಾಟೀಲ್ ವಿರುದ್ದ ಸಂಭಾಜಿ ಪಾಟೀಲ್ ಸೋಲು ಕಂಡಿದ್ದರು. ಆದರೆ 2013ರಲ್ಲಿ ಸಂಭಾಜಿ ಪಾಟೀಲ್ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ಆದರೆ ಈ ಬಾರಿ ಇಲ್ಲಿ ಸಂಭಾಜಿ ಪಾಟೀಲ್ ಸ್ಪರ್ಧಿಸುತ್ತಿಲ್ಲ. ಅವರು ಹಾಲಿ ಶಾಸಕರಾದರೂ ಬೆಳಗಾವಿ ಉತ್ತರ ಕ್ಷೇತ್ರಕ್ಕೆ ಹೋಗಿ ಅಲ್ಲಿ ಸ್ಪರ್ಧಿಸುತ್ತಿದ್ದಾರೆ. ಇನ್ನು ಇಲ್ಲಿ ಬಿಜೆಪಿಯಿಂದ ಕಳೆದ ಬಾರಿ ಸೋತಿದ್ದ ಎರಡು ಬಾರಿಯ ಶಾಸಕ ಅಭಯ್ ಪಾಟೀಲ್ ಕಣದಲ್ಲಿದ್ದಾರೆ. ಅವರು ಈ ಬಾರಿ ಶತಾಯಗತಾಯ ಗೆಲ್ಲಲೇಬೇಕು ಎಂದು ಹೊರಟಿದ್ದಾರೆ.
ಕಾಂಗ್ರೆಸ್ ಅಳೆದೂ ತೂಗಿ, ನೇಕಾರ ಸಮುದಾಯದ ಎಂ.ಡಿ. ಲಕ್ಷ್ಮೀನಾರಾಯಣ ಅವರನ್ನು ಕಣಕ್ಕಿಳಿಸಿದೆ. ಇಲ್ಲಿ ನೇಕಾರ ಸಮುದಾಯದ ಮತಗಳು ಹೆಚ್ಚಿರುವ ಕಾರಣ ಅದೇ ಸಮುದಾಯದವರಿಗೆ ಕಾಂಗ್ರೆಸ್ ಮಣೆ ಹಾಕಿದೆ. ವಿಧಾನ ಪರಿಷತ್ ಸದಸ್ಯರೂ ಆಗಿರುವ ಲಕ್ಷ್ಮೀನಾರಾಯಣ ಗೆಲ್ಲಬಹುದು ಎಂದು ಕಾಂಗ್ರೆಸ್ ಲೆಕ್ಕಾಚಾರ ಹಾಕಿಕೊಂಡಿದೆ.
ಇಲ್ಲಿ 2008ರಲ್ಲಿ ಎರಡನೇ ಸ್ಥಾನವನ್ನು ಪಡೆದಿದ್ದ ಬೆಳಗಾವಿ ಮಾಜಿ ಮೇಯರ್ ಕಿರಣ ಸಾಯನಾಕ್ ಈ ಬಾರಿ ಮತ್ತೆ ಕಣದಲ್ಲಿದ್ದಾರೆ. ಅವರ ಸ್ಪರ್ಧೆ ಯಾರ ಮತಗಳನ್ನು ಕಿತ್ತುಕೊಳ್ಳಲಿದೆ ಎನ್ನುವುದರ ಮೇಲೆ ಉಳಿದವರ ಸೋಲು ಗೆಲುವು ನಿರ್ಧಾರವಾಗಲಿದೆ.
ಒಟ್ಟಿನಲ್ಲಿ ಬೆಳಗಾವಿ ದಕ್ಷಿಣದಲ್ಲಿ ಬಿಜೆಪಿಗೆ ಗೆಲ್ಲುವ ಅವಕಾಶಗಳು ಹೆಚ್ಚಿವೆ, ಆದರೆ ಕಿರಣ್ ಸಾಯನಾಕ್ ಮತ್ತು ಎಂ.ಡಿ ಲಕ್ಷ್ಮೀನಾರಾಯಣ ಗೆದ್ದರೂ ಅಚ್ಚರಿ ಇಲ್ಲ.











Click it and Unblock the Notifications