ಹರದನಹಳ್ಳಿಯಲ್ಲಿ ಗೊಣ್ಣೆ ಸುರಿಸಿಕೊಂಡಿದ್ದವ ಪ್ರಧಾನಿಯಾಗಲಿಲ್ಲವೇ?: ದೇವೇಗೌಡ ಸ್ವಯಂ ಲೇವಡಿ
Recommended Video

ಹಾಸನ: 'ಅವಕಾಶಗಳು ತಾನಾಗಿಯೇ ಹುಡುಕಿಕೊಂಡು ಬರುತ್ತವೆ. ಹರದನಹಳ್ಳಿಯಲ್ಲಿ ಗೊಣ್ಣೆ ಸುರಿಸಿಕೊಂಡಿದ್ದವ - ಪ್ರಧಾನಿಯಾಗಲಿಲ್ಲವೇ?'- ಇದು ತಮ್ಮನ್ನು ಉದಾಹರಣೆಯಾಗಿಸಿಕೊಂಡು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಮಾಡಿಕೊಂಡ ಸ್ವಯಂಲೇವಡಿ.
ನೇರ, ನಿಷ್ಠುರತೆ, ವ್ಯಂಗ್ಯ ಮತ್ತು ಆತ್ಮವಿಮರ್ಶೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಮಾತುಗಳಲ್ಲಿ ಢಾಳಾಗಿ ಕಾಣಿಸುವ ಸಂಗತಿ.
ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ನೀಡದಿರುವ ವಿಚಾರ ಹಾಸನದ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿದೆ. ಪ್ರಜ್ವಲ್ ಪರ ಅನೇಕ ಮುಖಂಡರು ಬ್ಯಾಟ್ ಬೀಸಿದ್ದರು. ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಅವರಿಗೆ ಟಿಕೆಟ್ ನೀಡಬೇಕೆಂಬ ಒತ್ತಾಯ ಕೇಳಿಬಂದಿತ್ತು. ಪ್ರಜ್ವಲ್ ಅವರೂ ಆರ್‌ಆರ್ ನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಂಡಿದ್ದರು.

ಆದರೆ, ಕುಮಾರಸ್ವಾಮಿ ಮತ್ತು ರೇವಣ್ಣ ಹೊರತಾಗಿ ಕುಟುಂಬ ಇತರೆ ಯಾರಿಗೂ ಟಿಕೆಟ್ ನೀಡುವುದಿಲ್ಲ ಎಂದು ದೇವಗೌಡ ಅವರು ನಿರ್ಧರಿಸಿದ್ದರು. ಮನೆಯೊಳಗೆ ಹಾಗೂ ಕಾರ್ಯಕರ್ತರಿಂದ ಒತ್ತಡಗಳು ಬಂದರೂ ಪಟ್ಟು ಸಡಿಲಿಸಿರಲಿಲ್ಲ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕಾರ್ಯಕರ್ತರನ್ನು ಸಮಾಧಾನಪಡಿಸುವ ಮಾತುಗಳನ್ನಾಗಿಡುವ ದೇವೇಗೌಡ, ಮುಂದೆ ಅವಕಾಶಗಳು ತಾನಾಗಿಯೇ ಬರುತ್ತವೆ ಎಂದಿದ್ದಾರೆ. ಯಾರ ಹಣೆಬರಹವನ್ನೂ ತಿದ್ದಲು ಸಾಧ್ಯವಿಲ್ಲ. ಹರದನಹಳ್ಳಿಯಲ್ಲಿ ಗೊಣ್ಣೆ ಸುರಿಸಿಕೊಂಡಿದ್ದವ ನಾನೇ ಮುಂದೆ ಪ್ರಧಾನಿಯಾದೆ.
ಸದ್ಯ ಪ್ರಜ್ವಲ್ ಹಾಸನದ ಏಳೂ ಕ್ಷೇತ್ರಗಳಲ್ಲಿ ಓಡಾಡಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಾರೆ. ಎಲ್ಲ ಏಳು ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮವಹಿಸುವಂತೆ ಸೂಚಿಸಿದ್ದೇನೆ ಎಂದು ದೇವೇಗೌಡ ಹೇಳಿದರು.
ನೇರವಾಗಿ ಚುನಾವಣಾ ಅಖಾಡಕ್ಕೆ ಇಳಿಯುವ ಮೊದಲು, ಚುನಾವಣೆಯ ಹಿಂದಿರುವ ಪರಿಶ್ರಮ, ತಂತ್ರಗಳು ಮೊಮ್ಮಗನಿಗೆ ತಿಳಿಯಲಿ ಎಂಬ ಕಾರಣಕ್ಕೆ ಎಚ್‌ಡಿಡಿ ಪ್ರಜ್ವಲ್ ಅವರಿಗೆ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿ ನೀಡಿದ್ದಾರೆ.












Click it and Unblock the Notifications