ಕರ್ನಾಟಕ ಚುನಾವಣಾ ಕಣದಲ್ಲಿ ಕೊನೆಗೆ ಉಳಿದವರೆಷ್ಟು?
ಬೆಂಗಳೂರು, ಏಪ್ರಿಲ್ 28: ವಿಧಾನಸಭೆ ಚುನಾವಣೆ ಪ್ರಕ್ರಿಯೆಯ ಒಂದು ಹಂತ ಮುಕ್ತಾಯವಾಗಿದೆ. ಟಿಕೆಟ್ ಹಂಚಿಕೆ, ನಾಮಪತ್ರ ಮತ್ತು ಆಸ್ತಿ ವಿವರ ಸಲ್ಲಿಕೆ, ನಾಮಪತ್ರ ತಿರಸ್ಕಾರ, ಹಿಂಪಡೆಯುವಿಕೆ ಮುಂತಾದ ಗೊಂದಲ, ಗದ್ದಲಗಳಿಗೆ ತೆರೆಬಿದ್ದಿದೆ. ಈಗ ಉಳಿದಿರುವುದು ಅಂತಿಮವಾಗಿ ಕಣದಲ್ಲಿರುವ ಪಕ್ಷವಾರು ಮತ್ತು ಪಕ್ಷೇತರ ಅಭ್ಯರ್ಥಿಗಳ ಪ್ರಚಾರದ ಕಾರ್ಯ ಮತ್ತು ಮತದಾನ.
ನಾಮಪತ್ರ ಸಲ್ಲಿಕೆ, ಪರಿಶೀಲನೆ, ಹಿಂಪಡೆಯುವಿಕೆ ಮತ್ತು ತಿರಸ್ಕರಿಸುವ ಚುನಾವಣಾ ಆಯೋಗದ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಪಕ್ಷೇತರರಾಗಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಿಗೆ ಗುರುತಿನ ಚಿಹ್ನೆಗಳನ್ನು ನೀಡಲಾಗಿದೆ. ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಕಣಕ್ಕೆ ಇಳಿಯಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಚುನಾವಣಾ ಆಯೋಗ ಅಂತಿಮಗೊಳಿಸಿದೆ.
ಒಟ್ಟು ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 224 ಆದರೂ ಕೆಲವು ಕ್ಷೇತ್ರಗಳಲ್ಲಿ ಒಂದು ಪಕ್ಷದಿಂದ ಕೆಲವರು ಒಂದಕ್ಕಿಂತ ಅಧಿಕ ನಾಮಪತ್ರ ಸಲ್ಲಿಸಿದ್ದರು. ಇನ್ನು ಟಿಕೆಟ್ ಸಿಗದ ಆಕಾಂಕ್ಷಿಗಳು ಬಂಡಾಯವೆದ್ದು ಪಕ್ಷೇತರರಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಇವುಗಳಲ್ಲಿ ಅನೇಕರು ನಾಮಪತ್ರ ಹಿಂದಕ್ಕೆ ಪಡೆದುಕೊಂಡಿದ್ದರೆ, ಇನ್ನು ಕೆಲವರ ಉಮೇದುವಾರಿಕೆಯನ್ನು ಆಯೋಗ ತಿರಸ್ಕರಿಸಿದೆ.

ಸಲ್ಲಿಕೆಯಾಗಿದ್ದು 4,853 ನಾಮಪತ್ರ
ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 24 ಕೊನೆಯ ದಿನವಾಗಿತ್ತು. ಒಟ್ಟು 3,374 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದರು. ಅದರಲ್ಲಿ ಬಿಜೆಪಿಯ 282, ಕಾಂಗ್ರೆಸ್ 250, ಜೆಡಿಎಸ್ 239, ಬಿಎಸ್‌ಪಿ 22, ಸಿಪಿಐ 3 ಮತ್ತು ಪಕ್ಷೇತರರಾಗಿ 1,673 ಮಂದಿ ನಾಮಪತ್ರ ಸಲ್ಲಿಸಿದ್ದರು. ಕೆಲವು ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಒಟ್ಟು 4,853 ನಾಮಪತ್ರಗಳು ಚುನಾವಣಾ ಆಯೋಗದ ಕಚೇರಿ ಟೇಬಲ್ ತಲುಪಿದ್ದವು.

ಕಣದಲ್ಲಿ ಉಳಿದವರು 2,665 ಮಂದಿ
ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರನ್ನು ಚುನಾವಣಾ ಆಯೋಗ ಅಂತಿಮಗೊಳಿಸಿದ್ದು, ಒಟ್ಟು 224 ಕ್ಷೇತ್ರಗಳಲ್ಲಿ 2,665 ಮಂದಿ ಸ್ಪರ್ಧಿಸುವ ಅರ್ಹತೆ ಗಳಿಸಿದ್ದಾರೆ. 271 ಆಕಾಂಕ್ಷಿಗಳ ನಾಮಪತ್ರ ತಿರಸ್ಕೃತಗೊಂಡಿವೆ. 583 ಅಭ್ಯರ್ಥಿಗಳು ನಾಮಪತ್ರ ಹಿಂದಕ್ಕೆ ಪಡೆದುಕೊಂಡಿದ್ದಾರೆ.

ಪಕ್ಷೇತರರ ಸಂಖ್ಯೆ ಹೆಚ್ಚಳ
2013ರ ವಿಧಾನಸಭಾ ಚುನಾವಣೆಯಲ್ಲಿ 1,217 ಮಂದಿ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಅವರಲ್ಲಿ 9 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಪ್ರಸಕ್ತ ಚುನಾವಣೆಯಲ್ಲಿ 1,673 ಅಭ್ಯರ್ಥಿಗಳ ಪೈಕಿ 1,555 ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಇನ್ನು ಉಳಿದ 118 ಅಭ್ಯರ್ಥಿಗಳಲ್ಲಿ ಕೆಲವರು ಉಮೇದುವಾರಿಕೆ ವಾಪಸ್ ಪಡೆದುಕೊಂಡಿದ್ದರೆ, ಇನ್ನು ಉಳಿದವರ ನಾಮಪತ್ರ ಅಸಿಂಧುವಾಗಿದೆ.

ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಸ್ಪರ್ಧೆ
ಈ ಬಾರಿಯ ಚುನಾವಣೆಯಲ್ಲಿ ಎಲ್ಲ 224 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದು ಬಿಜೆಪಿ ಮಾತ್ರ. ಕಳೆದ ಚುನಾವಣೆಯಲ್ಲಿ 222 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಿತ್ತು. ಕಾಂಗ್ರೆಸ್‌ನ ಅಭ್ಯರ್ಥಿಗಳು 222 ಕ್ಷೇತ್ರಗಳಲ್ಲಿ ಅಖಾಡಕ್ಕೆ ಇಳಿದಿದ್ದಾರೆ. ಬಹುಜನ ಸಮಾಜ ಪಕ್ಷದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಜೆಡಿಎಸ್ 201 ಕ್ಷೇತ್ರಗಳಲ್ಲಿ ಪೈಪೋಟಿ ನಡೆಸುತ್ತಿದ್ದರೆ, ಅದರ ಮಿತ್ರಪಕ್ಷ ಬಿಎಸ್‌ಪಿ 18 ಕ್ಷೇತ್ರಗಳನ್ನು ಪಡೆದುಕೊಂಡಿದೆ.

ಪುರುಷ ಅಭ್ಯರ್ಥಿಗಳ ಪ್ರಾಬಲ್ಯ
ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪುರುಷ ಅಭ್ಯರ್ಥಿಗಳ ಸಂಖ್ಯೆ 2,436. ಕೇವಲ 219 ಮಹಿಳೆಯರು ಈ ಬಾರಿ ಕಣಕ್ಕಿಳಿದಿದ್ದಾರೆ. ಆದರೆ ಕಳೆದ ಚುನಾವಣೆಗೆ ಹೋಲಿಸಿದರೆ ಮಹಿಳಾ ಅಭ್ಯರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. 2013ರ ಚುನಾವಣೆಯಲ್ಲಿ 175 ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಬಾರಿ ಬಿಜೆಪಿ 17 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದರೆ, ಕಾಂಗ್ರೆಸ್ 16 ಮತ್ತು ಜೆಡಿಎಸ್ 14 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು.












Click it and Unblock the Notifications