ಮಾತಿನ ಮಲ್ಲ ಪ್ರಥಮ್‌ನ ಕನಸಿನ ಕರ್ನಾಟಕ ಹೀಗಿರಬೇಕಂತೆ
Recommended Video

ಮಾತಿನ ಮಲ್ಲ ಬಿಗ್ ಬಾಸ್ ಖ್ಯಾತಿಯ ಪ್ರಥಮ್, ಹುಡುಗಾಟದ ಹುಡುಗನಾದರೂ ಕರ್ನಾಟಕದ ವಿಷಯ ಬಂದಾಗ ಗಂಭೀರ. ತಮ್ಮ ಕನಸಿನ ಕರ್ನಾಟಕದ ಬಗ್ಗೆ ಅವರಿಗೆ ಅವರದ್ದೇ ಆದ ಸುಂದರ ಕಲ್ಪನೆಗಳಿವೆ. ತಮ್ಮ ಕನಸಿನ ಕರ್ನಾಟಕ ಹೇಗಿರಬೇಕು ಎಂಬುದನ್ನು ಅವರು 'ಒನ್ ಇಂಡಿಯಾ ಕನ್ನಡ' ಬಳಿ ಹಂಚಿಕೊಂಡಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಅವರ ಮಾತು ಪ್ರಾರಂಭವಾಗುವುದು ಹತ್ತಿರದಲ್ಲೇ ಇರುವ ವಿಧಾನಸಭೆ ಚುನಾವಣೆ ಇಂದ. 'ಚುನಾವಣೆ ಹತ್ತಿರವಿದೆ, ರಾಜ್ಯದ ಜನರೆಲ್ಲರೂ ತಮ್ಮ ಭವಿಷ್ಯ ನಿರ್ಧಾರಕ್ಕಾಗಿ ಸ್ವಯಂ ಪ್ರೇರಿತವಾಗಿ ಮತ ಚಲಾಯಿಸುವ ಜಾಗೃತಿ ಬರಬೇಕು, ಜಾಗೃತ ನಾಗರೀಕರಿರುವ ಕರ್ನಾಟಕ ನಮ್ಮದಾಗಬೇಕು'. ಪ್ರಜಾಪ್ರಭುತ್ವದ ಸುಂದರತೆ ಮತ್ತು ವಿಶಾಲತೆಯನ್ನು ಅರಿತುಕೊಂಡು ನಡೆಯುವ ಕರ್ನಾಟಕ ಸೃಷ್ಠಿಯಾಗಬೇಕು ಎಂಬುದು ಅವರ ಮೊದಲ ಕನಸು.
ಅವರ ಮುಂದಿನ ಆದರೆ ಹೆಚ್ಚಿನ ಆದ್ಯತೆ ರಾಜ್ಯದ ಅನ್ನದಾತರ ಬಗ್ಗೆ. ರೈತರ ಬಗ್ಗೆ ಅತೀವ ಕಾಳಜಿ ಮತ್ತು ಕುಕ್ಕುಲತೆಯಿಂದ ಮಾತನಾಡಿರುವ ಅವರು 'ನಮ್ಮದು ಎಂತಹಾ ರಾಜ್ಯವಾಗಬೇಕೆಂದರೆ, ಇಲ್ಲಿನ ರೈತ ನೆಮ್ಮದಿಯಿಂದ ಜೀವನ ಸಾಗಿಸುವಂತಿರಬೇಕು, ಆತ ಬೆಳೆದ ಬೆಳೆಗೆ ಉತ್ತಮ ಬೆಲೆ ನಿಗದಿಯಾಗಬೇಕು, ನೀರಿನ ಕೊರತೆ ಸೇರಿದಂತೆ ಆತನಿಗೆ ತನ್ನ ಕಾಯಕ ಮಾಡಲು ಯಾವುದೇ ಕಷ್ಟ ಎದುರಾಗದ ವ್ಯವಸ್ಥೆಯೊಂದು ನಿರ್ಮಾಣವಾಗಿರುವ ರಾಜ್ಯ ನಮ್ಮದಾಗಬೇಕು' ಎನ್ನುತ್ತಾರೆ ಪ್ರಥಮ್.

ಅವರ ಮೂರನೇ ಆದ್ಯತೆ ಧರ್ಮನಿರಪೇಕ್ಷತೆಯದ್ದು. 'ಯಾವುದೇ ಬಲವಂತದ ಮತಾಂತರ ಇಲ್ಲದ, ಪರಸ್ಪರ ಧರ್ಮಗಳ ನಡುವೆ, ಜಾತಿಗಳ ನಡುವೆ ಕಂದಕಗಳೇ ಇಲ್ಲದ ಹಾಗೆ, ಎಲ್ಲರೂ ಎಲ್ಲರ ಆಚರಣೆಗಳನ್ನು ಗೌರವಿಸುವ ರಾಜ್ಯ ಕರ್ನಾಟಕವಾಗಬೇಕು, ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ಧರ್ಮಗಳಿವೆ ಇನ್ನೂ ಕೆಲವು ಧರ್ಮಗಳು ಹುಟ್ಟುವ ಮುನ್ಸೂಚನೆ ಕಾಣುತ್ತಿದೆ ಆದರೆ ಇಲ್ಲಿನ ಜನ ಧರ್ಮಗಳಾಚೆಗೆ ಅನ್ಯೋನ್ಯವಾದ ಬಂಧವನ್ನು ಪ್ರದರ್ಶಿಸಬೇಕು, ಧರ್ಮವನ್ನು ದಾಟಿ ನಿಂತ ಜನರ ರಾಜ್ಯ ನನ್ನದಾಗಬೇಕು' ಎಂಬುದು ಪ್ರಥಮ್ ಆಶಯ.
ಪ್ರಥಮ್‌ರ ಕನಸಿನ ಕರ್ನಾಟಕದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ, 'ಹಣದ ಸೋಂಕು ಇಲ್ಲದೆ ಎಲ್ಲರಿಗೂ ಸಮಾನ ಶಿಕ್ಷಣ ಸಿಗುವಂತಹಾ ರಾಜ್ಯ ನಮ್ಮದಾಗಬೇಕು' ಎಂಬುದು ಅವರ ಆಸೆ.
ಸಾವಿರಾರು ಭಿನ್ನ ಸಂಸ್ಕೃತಿಗಳನ್ನು ತನ್ನಲ್ಲಿ ಹುದುಗಿಸಿಟ್ಟುಕೊಂಡಿರುವ ಕರ್ನಾಟಕ ಅನೇಕ ಆದರ್ಶ ಜೀವನ ಪದ್ಧತಿಯನ್ನು ಜಗತ್ತಿಗೆ ಪರಿಚಯಿಸಿದೆ, ತನ್ನ ವಿವಿಧತೆ, ಸುಂದರತೆ, ಸಹಿಷ್ಣುತೆ, ಅಹಿಂಸಾತ್ಮಕತೆಗಳಿಂದ ಕರ್ನಾಟಕ ವಿಶ್ವಮಟ್ಟದಲ್ಲಿ ಬೆಳಗಬೇಕು ಜೊತೆಗೆ ವಿಶ್ವಕ್ಕೆ ಬೆಳಕು ಕೊಡಬೇಕು ಎಂಬುದು ಅವರ ಕರ್ನಾಟಕದ ಬಗೆಗೆ ಒಳ್ಳೆ ಹುಡುಗ ಪ್ರಥಮ್‌ರ ಕನಸು.












Click it and Unblock the Notifications