'ನನ್ನ ಮಾತಲ್ಲಿ ಅಪಾರ್ಥ ಕಲ್ಪಿಸಿರುವುದು ದುರದೃಷ್ಟಕರ': ಸುಧಾಕರ್ ಅಸಮಾಧಾನ
ಬೆಂಗಳೂರು, ಅಕ್ಟೋಬರ್ 11: "ಇಂದಿನ ಆಧುನಿಕ ಭಾರತೀಯ ಮಹಿಳೆಯರು ಈಗ ಸಾಮಾನ್ಯವಾಗಿ ಒಬ್ಬಂಟಿಯಾಗಿರಲು ಇಷ್ಟ ಪಡುತ್ತಾರೆ, ಒಂದು ವೇಳೆ ಮದುವೆಯಾದರೂ ಕೂಡಾ ಮಗುವಿಗೆ ಜನ್ಮ ನೀಡಲು ಇಚ್ಛಿಸಲ್ಲ," ಎಂದು ಭಾನುವಾರ ಹೇಳಿಕೆ ನೀಡಿದ್ದ ಕರ್ನಾಟಕ ರಾಜ್ಯ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಸೋಮವಾರ ಈ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದ್ದಾರೆ.
ವಿಶ್ವ ಮಾನಸಿಕ ಆರೋಗ್ಯ ದಿನದ ಹಿನ್ನೆಲೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವೈಜ್ಞಾನಿಕ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ರಾಜ್ಯ ಆರೋಗ್ಯ ಸಚಿವ ಡಾ. ಕೆ ಸುಧಾಕರ್, ಆಧುನಿಕ ಭಾರತೀಯ ಮಹಿಳೆಯರು ಒಬ್ಬಂಟಿಯಾಗಿರಲು ಇಷ್ಟ ಪಡುತ್ತಾರೆ, ಮದುವೆಯಾದರೂ ಮಗುವಿಗೆ ಜನ್ಮ ನೀಡಲು ಬಯಸಲ್ಲ," ಎಂದು ಹೇಳಿದ್ದರು. ಈ ಹೇಳಿಕೆಯು ಸುದ್ದಿ ಆಗುತ್ತಿದ್ದಂತೆ ಸ್ಪಷ್ಟಣೆಯನ್ನು ನೀಡಿರುವ ಆರೋಗ್ಯ ಸಚಿವ ಡಾ. ಕೆ ಸುಧಾಕರ್, "ನಾನು ವಿಶ್ವ ಮಾನಸಿಕ ಆರೋಗ್ಯ ದಿನದ ಹಿನ್ನೆಲೆ ಈ ಕೋವಿಡ್ ಸಂದರ್ಭದಲ್ಲಿ ಆಗಿರುವ ಮಾನಸಿಕ ಒತ್ತಡಗಳ ಬಗ್ಗೆ ಮಾತನಾಡಿದ್ದೇನೆ. ಮುಖ್ಯವಾಗಿ ನಮ್ಮ ಯುವ ಜನರಲ್ಲಿ ಈಗ ಮಾನಸಿಕ ಖಿನ್ನತೆ, ಆಕ್ರೋಶ, ಒತ್ತಡ ಅಧಿಕವಾಗಿರುವ ಬಗ್ಗೆ ನಾನು ಮಾತನಾಡಿದ್ದೇನೆ. ನನ್ನ ಭಾಷಣದ ಉದ್ದಕ್ಕೂ ನಾನು ಈ ಬಗ್ಗೆ ಮಾತನಾಡಿದ್ದೇನೆ. ಈ ನಡುವೆ ನಾನು ಕುಟುಂಬ ಮೌಲ್ಯಗಳ ವಿಚಾರದಲ್ಲಿ ಮಾತನಾಡಿದ ಒಂದು ಭಾಗ ಮಾತ್ರ ಈಗ ಸುದ್ದಿಯಾಗುತ್ತಿರುವುದು ದುರದೃಷ್ಟಕರ," ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಶತಮಾನದ ಅತ್ಯಂತ ದೊಡ್ಡ ಸಾಂಕ್ರಾಮಿಕವನ್ನು ಜಗತ್ತು ಎದುರಿಸುತ್ತಿರುವ ಸಮಯದಲ್ಲಿ, ಬೆಂಗಳೂರಿನ ಪ್ರತಿಷ್ಠಿತ ನಿಮ್ಹಾನ್ಸ್ ಸಂಸ್ಥೆಯಲ್ಲಿ ಅಕ್ಟೋಬರ್ 11 ರ ಭಾನುವಾರದಂದು ವಿಶ್ವ ಮಾನಸಿಕ ಆರೋಗ್ಯ ದಿನ ಆಚರಣೆಯಾಯಿತು. ಸಾಂಕ್ರಾಮಿಕದಿಂದ ತಮ್ಮವರನ್ನು ಕಳೆದುಕೊಂಡಿರುವುದು, ಒಂಟಿತನ, ಆರ್ಥಿಕ ನಷ್ಟ, ಆತಂಕ ಮೊದಲಾದ ಕಾರಣಗಳಿಂದ ಜನರಲ್ಲಿ ಮಾನಸಿಕ ಒತ್ತಡ, ಉದ್ವೇಗ, ಖಿನ್ನತೆ ಹೆಚ್ಚಾಗಿದೆ. ಅದರಲ್ಲೂ ಯುವಜನಾಂಗದಲ್ಲಿ ಈ ಸಮಸ್ಯೆ ಅಧಿಕವಾಗಿದೆ. ನಿಮ್ಹಾನ್ಸ್ ಕಾರ್ಯಕ್ರಮದ ನನ್ನ ಭಾಷಣದಲ್ಲಿ ಈ ಮಾನಸಿಕ ಸಮಸ್ಯೆ, ಸವಾಲುಗಳನ್ನು ಭಾರತದ ಕೌಟುಂಬಿಕ ಮೌಲ್ಯಗಳ ಮೂಲಕ ಹೇಗೆ ನಿವಾರಿಸಬಹುದು ಎಂಬ ಸಂದೇಶವನ್ನು ನೀಡಬೇಕೆಂಬ ಉದ್ದೇಶ ಹೊಂದಿದ್ದೆ," ಎಂದು ಸ್ಪಷ್ಟಣೆಯಲ್ಲಿ ತಿಳಿಸಿದ್ದಾರೆ.

"ನಾನು ಒಬ್ಬ ಹೆಮ್ಮೆಯ ಹೆಣ್ಣು ಮಗಳ ತಂದೆ"
"ಭಾನುವಾರ ನಿಮ್ಹಾನ್ಸ್ ನಲ್ಲಿ 'ವಿಶ್ವ ಮಾನಸಿಕ ಆರೋಗ್ಯ ದಿನ' ಕಾರ್ಯಕ್ರಮದಲ್ಲಿ ಮಾಡಿದ 19.30 ನಿಮಿಷದ ನನ್ನ ಈ ದೀರ್ಘ ಭಾಷಣದಲ್ಲಿ, ಒಂದು ಭಾಗವನ್ನು ನೈಜವಾದ ಉದ್ದೇಶದಿಂದ ಹೊರಗೆಳೆದು ಅಪಾರ್ಥ ಕಲ್ಪಿಸಲಾಗಿದೆ ಎಂಬುದು ಬಹಳ ದುರದೃಷ್ಟಕರ ಸಂಗತಿ. ಈ ಮೂಲಕ ಭಾಷಣದ ವ್ಯಾಪಕವಾದ ಅರ್ಥವನ್ನು ಸಂಕೀರ್ಣಗೊಳಿಸಲಾಗಿದೆ. ನಾನು ಒಬ್ಬ ಹೆಮ್ಮೆಯ ಹೆಣ್ಣು ಮಗಳ ತಂದೆ ಹಾಗೂ ಸಂಪೂರ್ಣ ವೃತ್ತಿಪರ ತರಬೇತಿ ಪಡೆದ ವೈದ್ಯ ಎಂದು ಮೊದಲಿಗೆ ಹೇಳುತ್ತೇನೆ. ಆದ್ದರಿಂದ ಮಹಿಳೆಯರ ಸುತ್ತಲಿನ ಸೂಕ್ಷ್ಮತೆಗಳನ್ನು, ಸಂವೇದನೆಗಳನ್ನು ಸಂಪೂರ್ಣವಾಗಿ ಅರಿತಿದ್ದೇನೆ ಹಾಗೂ ನಾವು ಎದುರಿಸುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿತಿದ್ದೇನೆ," ಎಂದಿದ್ದಾರೆ.

ಭಾರತೀಯ ಸಮಾಜವು ಸಾಮೂಹಿಕತೆ, ಪರಸ್ಪರ ಅವಲಂಬನೆಯನ್ನು ಪ್ರೋತ್ಸಾಹಿಸುತ್ತದೆ
"ಮಾನಸಿಕ ಆರೋಗ್ಯದ ಸವಾಲುಗಳನ್ನು ಪರಿಹರಿಸುವ ಸೌಲಭ್ಯಗಳ ಕೊರತೆ ಇರುವ ಕಡೆಗಳಲ್ಲಿ, ಕುಟುಂಬಗಳು ವ್ಯಕ್ತಿಗೆ ಮೌಲ್ಯಯುತವಾದ ವ್ಯವಸ್ಥೆಯನ್ನು ಸೃಷ್ಟಿಸಿಕೊಡುತ್ತದೆ ಎಂಬುದು ಸಂಶೋಧನೆ ಹಾಗೂ ಅಧ್ಯಯನಗಳಿಂದ ಸಾಬೀತಾಗಿದೆ. ಇದು ವ್ಯಕ್ತಿಯ ವಿವಿಧ ಮಾನಸಿಕ ಒತ್ತಡಗಳನ್ನು ನಿರ್ವಹಣೆ ಮಾಡಲು ಸಹಾಯಕವಾಗುತ್ತದೆ. ಭಾರತೀಯ ಸಮಾಜವು ಪರಸ್ಪರ ಅವಲಂಬನೆ, ಸಾಮಾಜಿಕ ಒಗ್ಗಟ್ಟು, ಸಾಮೂಹಿಕತೆಯಿಂದ ಕೂಡಿದೆ. ಭಾರತದ ಸಾಂಪ್ರದಾಯಿಕ ಅವಿಭಕ್ತ ಕುಟುಂಬವು ಸಾಮೂಹಿಕತೆಯ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ ಹಾಗೂ ಇದು ಮಾನಸಿಕ ಆರೋಗ್ಯ ಸಮಸ್ಯೆಗೊಳಗಾದವರ ಆರೈಕೆಗೆ ಸೂಕ್ತ ಸೌಲಭ್ಯ ಒದಗಿಸುತ್ತದೆ," ಎಂದು ತಿಳಿಸಿದ್ದಾರೆ. "ಪಶ್ಚಿಮದ ದೇಶಗಳ ಸಮಾಜವು ವಿಭಕ್ತ ವ್ಯವಸ್ಥೆಯನ್ನು ಉತ್ತೇಜಿಸಿದರೆ, ಭಾರತೀಯ ಸಮಾಜವು ಸಾಮೂಹಿಕತೆ, ಪರಸ್ಪರ ಅವಲಂಬನೆಯನ್ನು ಪ್ರೋತ್ಸಾಹಿಸುತ್ತದೆ. ಆದ್ದರಿಂದ ಭಾರತೀಯ ಹಾಗೂ ಏಷ್ಯಾದ ಕುಟುಂಬಗಳು, ಸದಸ್ಯರ ಬಗ್ಗೆ ಕಾಳಜಿ ವಹಿಸುವುದಕ್ಕೆ ಹೆಚ್ಚು ಒತ್ತು ನೀಡುತ್ತದೆ ಮತ್ತು ಇದರಿಂದಲೇ ಪಾಶ್ಚಿಮಾತ್ಯ ದೇಶಗಳಿಗಿಂತ ಹೆಚ್ಚು ಆರೋಗ್ಯದ ಹೊರೆಯನ್ನು ಹೊತ್ತುಕೊಳ್ಳುತ್ತದೆ. ಭಾರತೀಯ ಕುಟುಂಬಗಳು ತಮ್ಮ ರೋಗಿಗಳ ವಿಚಾರದಲ್ಲಿ ಹೆಚ್ಚು ಕಾಳಜಿ ವಹಿಸುತ್ತದೆ ಹಾಗೂ ಆರೈಕೆಯಲ್ಲೂ ಹೆಚ್ಚು ಜವಾಬ್ದಾರಿ ವಹಿಸಿಕೊಳ್ಳುತ್ತದೆ. ಇಂಡಿಯನ್ ಜರ್ನಲ್ ಆಫ್ ಸೈಕಿಯಾಟ್ರಿಯಲ್ಲಿ ಪ್ರಕಟಗೊಂಡ ಸಂಶೋಧನೆಯಲ್ಲಿ ಸಾಬೀತಾಗಿದೆ," ಎಂದು ಕೂಡಾ ಹೇಳಿದ್ದಾರೆ.

ಸಮೀಕ್ಷೆಯನ್ನು ಉಲ್ಲೇಖ ಮಾಡಿದ ಸಚಿವರು
"ಯುವಜನರಲ್ಲಿ ಮದುವೆಗೆ ನಿರಾಕರಣೆ ಹಾಗೂ ಮಕ್ಕಳನ್ನು ಪಡೆಯುವುದಕ್ಕೆ ಹಿಂಜರಿಕೆಗೆ ಸಂಬಂಧಿಸಿದ ನನ್ನ ಹೇಳಿಕೆ ಕೂಡ ಸರ್ವೆಯೊಂದನ್ನು ಆಧರಿಸಿದ ಹೇಳಿಕೆಯಾಗಿದೆ. YouGov-Mint-CPR Millennial Survey ಪ್ರಕಾರ, ಹೊಸ ಪೀಳಿಗೆಯಲ್ಲಿ ಶೇ.19 ರಷ್ಟು ಮಂದಿ ಮದುವೆ ಹಾಗೂ ಮಕ್ಕಳನ್ನು ಪಡೆಯುವುದಕ್ಕೆ ಆಸಕ್ತಿ ಹೊಂದಿಲ್ಲ. ಇನ್ನೂ ಶೇ.8 ರಷ್ಟು ಮಂದಿ ಮಕ್ಕಳ ಬಗ್ಗೆ ಆಸಕ್ತಿ ಹೊಂದಿದ್ದಾರೆ, ಆದರೆ ವಿವಾಹಕ್ಕೆ ಸಿದ್ಧರಾಗಿಲ್ಲ. ನಂತರದ ಪೀಳಿಗೆಯಲ್ಲಿ (ಪೋಸ್ಟ್ ಮಿಲೆನಿಯಲ್ಸ್-ಜನರೇಶನ್ ಝೆಡ್) ಶೇ.23 ರಷ್ಟು ಮಂದಿ ವಿವಾಹ ಹಾಗೂ ಮಕ್ಕಳ ಬಗ್ಗೆ ಆಸಕ್ತಿ ಹೊಂದಿಲ್ಲ. ಈ ಟ್ರೆಂಡ್ ನಲ್ಲಿ ಲಿಂಗ ಆಧಾರಿತವಾಗಿ ಕೆಲ ವ್ಯತ್ಯಾಸಗಳಿವೆ. ಇದು ಪುರುಷರು ಹಾಗೂ ಮಹಿಳೆಯರಿಬ್ಬರಿಗೂ ಸಂಬಂಧಿಸಿದೆ," ಎಂದು ಸಮೀಕ್ಷೆಯೊಂದನ್ನು ತನ್ನ ಸ್ಪಷ್ಟೀಕರಣ ಹೇಳಿಕೆಯಲ್ಲಿ ಉಲ್ಲೇಖ ಮಾಡಿದ್ದಾರೆ.

ಫೇಸ್‌ಬುಕ್‌ನಲ್ಲಿ ನನ್ನ ಭಾಷಣ ನೋಡಿ ಎಂದ ಸಚಿವರು
"ಅದ್ಭುತವಾದ ಬೆಂಬಲ ನೀಡುವಂತಹ ವಾತಾವರಣ ಹೊಂದಿರುವ ನಮ್ಮ ಸಾಂಪ್ರದಾಯಿಕ ಕೌಟುಂಬಿಕ ವ್ಯವಸ್ಥೆಯಿಂದ, ಮಾನಸಿಕ ಆರೋಗ್ಯ ಸಮಸ್ಯೆಗಳಾದ ಒತ್ತಡ, ಉದ್ವೇಗ, ಖಿನ್ನತೆಗೆ ನಮ್ಮ ಯುವಜನತೆ ಪರಿಹಾರ ಪಡೆಯಬಹುದು ಎಂಬುದು ಮಾತ್ರ ನನ್ನ ಮಾತಿನ ಮುಖ್ಯ ಉದ್ದೇಶವಾಗಿತ್ತು. ಏಕಾಂಗಿಯಾಗಿ ಜೀವನ ನಡೆಸುತ್ತಿರುವ ಮಹಿಳೆಯರನ್ನು ಉದ್ದೇಶಿಸಿ ನಾನು ಅಂತಹ ಹೇಳಿಕೆಯನ್ನು ನೀಡಿಲ್ಲ ಹಾಗೂ ನನ್ನ ಮಾತು ಅಂತಹ ಉದ್ದೇಶವನ್ನು ಹೊಂದಿರಲೇ ಇಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇನೆ. ಜೊತೆಗೆ ಪ್ರತಿಯೊಬ್ಬರೂ ಕೆಳಕಂಡ ಫೇಸ್ ಬುಕ್ ಪೇಜ್ ನಲ್ಲಿ ಲಭ್ಯವಿರುವ ನನ್ನ ಭಾಷಣವನ್ನು ಸಂಪೂರ್ಣವಾಗಿ ಆಲಿಸಬೇಕೆಂದು ಕೋರುತ್ತೇನೆ," ಎಂದು ಸಚಿವರು ಮನವಿ ಮಾಡಿದ್ದಾರೆ.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications