ಡಿಬೇಟ್: ಬಿಎಸ್‌ವೈ ಮನೆ ಮೇಲಿನ ದಾಳಿಯ ಹಿಂದೆ ಅಡಗಿದೆಯಾ ರಾಜಕೀಯ?
ಚುನಾವಣೆಯ ವೇಳೆ ಒಳ ಮೀಸಲಾತಿ ವಿಚಾರದಲ್ಲಿ ಬಂಜಾರ ಸಮುದಾಯದ ಪ್ರತಿಭಟನೆ ಎರಡನೇ ದಿನವೂ ಮುಂದುವರಿದಿದೆ. ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಯುತ್ತಿದ್ದು, ಬಂಧನಕ್ಕೊಳಗಾಗಿರುವ ಸಮದಾಯದ ಜನರನ್ನು ಬಿಡುಗಡೆ ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ.
ಬಾಗಲಕೋಟೆಯಲ್ಲೂ ಸರಕಾರದ ವಿರುದ್ದ ಪ್ರತಿಭಟನೆ ಆರಂಭವಾಗಿದ್ದು, ತಾಂಡಾಗಳಿಗೆ ಬಿಜೆಪಿ ನಾಯಕರ ಪ್ರವೇಶವನ್ನು ಸಮುದಾಯದವರು ನಿಷೇಧಿಸಿದ್ದಾರೆ. ಈ ನಡುವೆ ಹೋರಾಟದ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಆರೋಪ/ಪ್ರತ್ಯಾರೋಪದಲ್ಲಿ ತೊಡಗಿದೆ. ದಾಳಿ ನಡೆಯುತ್ತಿರುವುದು ಪೂರ್ವನಿಯೋಜಿತ ಎನ್ನುವ ರೀತಿಯಲ್ಲಿ ಪರಸ್ಪರ ಕೆಸೆರೆರೆಚಾಟ ನಡೆಸುತ್ತಿದ್ದಾರೆ.
ಯಡಿಯೂರಪ್ಪನವರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿಯವರೇ ನಡೆಸುತ್ತಿರುವ ಷಡ್ಯಂತ್ರವಿದು ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಮೀಸಲಾತಿ ಅವಾಂತರಕ್ಕೆ ಹೊಣೆಗಾರರಲ್ಲದ BSYರ ಮನೆ ಮೇಲೆ ದಾಳಿ ಮಾಡಿದ್ದು ಯಾರ "ಸಂತೋಷ" ದ ಕಾರಣಕ್ಕೆ ಎಂದು ಕೆಪಿಸಿಸಿ ಪರೋಕ್ಷವಾಗಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೆಸರನ್ನು ಎಳೆದು ತಂದಿದೆ.

ತಪ್ಪು ಗ್ರಹಿಕೆಯಿಂದ ನನ್ನ ಮನೆ ಮೇಲೆ ದಾಳಿ ನಡೆದಿದೆ ಎಂದು ಯಡಿಯೂರಪ್ಪನವರು ಹೇಳಿದರೆ, ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯಿಂದಾಗಿ ಪ್ರತಿಭಟನೆ ನಡೆಯುತ್ತಿದೆ ಎಂದು ಸಿಎಂ ಆದಿಯಾಗಿ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಹಾಗಾದರೆ, ಸಮುದಾಯದ ಪ್ರತಿಭಟನೆ ಪೂರ್ವನಿಯೋಜಿತವೇ, ಇದರ ಹಿಂದೆ ರಾಜಕೀಯ ಅಡಗಿದೆಯೇ? ಒಂದು ಚರ್ಚೆ..












Click it and Unblock the Notifications