Debate: ವೀರಶೈವ - ಲಿಂಗಾಯತರ ಮತ ಈ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ?
ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಮಂಚೂಣಿಯಲ್ಲಿ ನಿಲ್ಲುವ ಸಮುದಾಯವೆಂದರೆ ಅದು ವೀರಶೈವ - ಲಿಂಗಾಯತರು. 2018ರ ಚುನಾವಣೆಯಲ್ಲೂ ಈ ಸಮುದಾಯದ ಮತ ಯಾವ ಪಕ್ಷಕ್ಕೆ ಎನ್ನುವ ಚರ್ಚೆ ಜೋರಾಗಿತ್ತು. ಅದಕ್ಕೆ ಕಾರಣ, ಸಿದ್ದರಾಮಯ್ಯನವರ ಸರಕಾರ ಲಿಂಗಾಯತ ಧರ್ಮವನ್ನು ಪ್ರತ್ಯೇಕಿಸಲು ಹೊರಟಿದ್ದು.
2023ರ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕದ ವಿಧಾನಸಭಾ ಚುನಾವಣೆಗೆ ದಿನಾಂಕವನ್ನು ಪ್ರಕಟಿಸಲಿದೆ. ಪ್ರಧಾನಿ ಮೋದಿಯವರು ಹಾಲೀ ವರ್ಷದಲ್ಲಿ ಏಳನೇ ಬಾರಿಗೆ ಇದೇ ಬರುವ ಶನಿವಾರ (ಮಾರ್ಚ್ 25) ರಾಜ್ಯಕ್ಕೆ ಆಗಮಿಸಲಿದ್ದಾರೆ. ಇದಾದ ನಂತರ, ಆಯೋಗ ದಿನಾಂಕವನ್ನು ಘೋಷಿಸಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ.

ಯಡಿಯೂರಪ್ಪನವರು ಹಾಲೀ ಹದಿನೈದನೇ ವಿಧಾನಸಭೆಯಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಲಿಂಗಾಯತ ಸಮುದಾಯಕ್ಕೆ (ನವೆಂಬರ್ 17, 2020ರಲ್ಲಿ) ಪ್ರತ್ಯೇಕ ಮಂಡಳಿಯನ್ನು ರಚಿಸಿ ಬರೋಬ್ಬರಿ ಐನೂರು ಕೋಟಿ ರೂಪಾಯಿಯನ್ನು ನೀಡುವುದಾಗಿ ವಾಗ್ದಾನ ಮಾಡಿದ್ದರು. ಅದಾದ ನಂತರದ ಬೆಳವಣಿಗೆಯಲ್ಲಿ ಯಡಿಯೂರಪ್ಪನವರು ರಾಜೀನಾಮೆ ನೀಡಿದ್ದರು.
ಪಂಚಮಸಾಲಿ ಮೀಸಲಿಗಿದ್ದ ಅಡ್ಡಿ ನಿವಾರಿಸಿದ ಕರ್ನಾಟಕ ಹೈಕೋರ್ಟ್
ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಕ್ಕೆ ಒಬಿಸಿ ಕ್ಯಾಟಗರಿ ನೀಡುವ ಸರಕಾರದ ನಿರ್ಧಾರಕ್ಕೆ ಕರ್ನಾಟಕ ಹೈಕೋರ್ಟ್ ತಡೆಯನ್ನು ನೀಡಿತ್ತು. 3A, 3Bಕ್ಯಾಟಗರಿಯನ್ನು ರದ್ದುಗೊಳಿಸಿ ಮೀಸಲಾತಿ ನೀಡಲು ಸರಕಾರ ನಿರ್ಧರಿಸಿತ್ತು. ಈಗ ಮತ್ತೆ ತಡೆಯನ್ನು ಕೋರ್ಟ್ ತೆರವುಗೊಳಿಸಿದ್ದು ಪಂಚಮಸಾಲಿ ಸಮುದಾಯಕ್ಕೆ 2ಸಿ, 2ಡಿ ಮೀಸಲಾತಿ ನೀಡಲು ಯಾವುದೇ ಅಡ್ಡಿ ಇಲ್ಲದಂತಾಗಿದೆ. ಇದು, ಬಿಜೆಪಿಗೆ ಚುನಾವಣೆಯ ವೇಳೆ ದೊಡ್ಡ ಬೂಸ್ಟ್ ಸಿಕ್ಕಿದಂತಾಗಿದೆ.
ಮೀಸಲಾತಿ ನೀಡುವ ವಿಚಾರದಲ್ಲಿ ವೀರಶೈವ-ಲಿಂಗಾಯತ ಸಮುದಾಯದವರು ಪೀಠಾಧಿಪತಿಗಳು ಬಹುದೊಡ್ಡ ಹೋರಾಟ/ಪಾದಯಾತ್ರೆಯನ್ನು ನಡೆಸಿದ್ದರು. ಹಲವು ಬಾರಿ ಬೊಮ್ಮಾಯಿ ಸರಕಾರ ಭರವಸೆಯನ್ನು ನೀಡಿ, ಅದರಂತೆ ನಡೆದುಕೊಂಡಿಲ್ಲ ಎನ್ನುವ ಕೋಪಕ್ಕೂ ಸರಕಾರ ಗುರಿಯಾಗಿತ್ತು. ಬಿಜೆಪಿಯ ನಾಯಕರುಗಳೇ ಪರಸ್ಪರ ಆರೋಪ/ಪ್ರತ್ಯಾರೋಪದಲ್ಲಿ ತೊಡಗಿಸಿಕೊಂಡಿದ್ದರು.
ಇವೆಲ್ಲದರ ನಡುವೆ ಪಂಚಮಶಾಲಿ ಸಮುದಾಯದ ಪ್ರಬಾವೀ ಮಠಾಧೀಶರಾದ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿಯಾಗಿದ್ದರು. ಚುನಾವಣಾ ವರ್ಷದಲ್ಲಿ ಈ ಭೇಟಿಗೆ ವಿಶೇಷ ಮಹತ್ವ ಬಂದಿದೆ. ನಾನು ಕಿಂಗ್ ಮೇಕರ್, ಕಿಂಗ್ ಅಲ್ಲ ಎನ್ನುವ ಹೇಳಿಕೆಯನ್ನು ಈ ಹಿಂದೆ ಸ್ವಾಮೀಜಿಗಳು ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
ತಾವು ಮತ್ತು ತಮ್ಮ ಪಕ್ಷ ನೆಚ್ಚಿಕೊಂಡಿರುವ ವೀರಶೈವ ಲಿಂಗಾಯತ ಮತಗಳು ತಮ್ಮ ಮಡಿಲಿನಿಂದ ಹೋಗದಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿ ಯಡಿಯೂರಪ್ಪನವರ ಮೇಲಿದೆ. ಆ ಜವಾಬ್ದಾರಿಯನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ಅವರು ತಲೆಕೆಡಿಸಿಕೊಂಡಿದ್ದಾರೆ. ಅದಕ್ಕೆ ಬೇಕಾದ ರಣತಂತ್ರವನ್ನೂ ಬಳಸುತ್ತಿದ್ದಾರೆ.
ವಿವಿಧ ಪಕ್ಷದ ರಾಜಕಾರಣಿಗಳು ಸಮುದಾಯದ ಮಠಕ್ಕೆ ಭೇಟಿ ನೀಡುತ್ತಿದ್ದಾರೆ. ಹೇಳಿ ಕೇಳಿ ಚುನಾವಣಾ ವರ್ಷವಲ್ಲವೇ.. ಏನೇ ಆದರೂ ಸಮುದಾಯದ ಮತ ನಮಗೇ ಎನ್ನುವ ಅದಮ್ಯ ವಿಶ್ವಾಸದಲ್ಲಿ ಬಿಜೆಪಿಯಿದೆ. ಈ ಬಾರಿ ಸಮುದಾಯವನ್ನು ತನ್ನತ್ತ ಸೆಳೆಯಲು ಕಾಂಗ್ರೆಸ್ ಭಾರೀ ಪ್ರಯತ್ನ ನಡೆಸುತ್ತಿದೆ. ಬಿಜೆಪಿ, ಕಾಂಗ್ರೆಸ್ ನೋಡಿದ್ದೀರಿ.. ನಮಗೂ ಒಂದು ಅವಕಾಶ ಕೊಡಿ ಎಂದು ಜೆಡಿಎಸ್ ಆಸೆಯ ಕಣ್ಣಿನಿಂದ ನೋಡುತ್ತಿದೆ. ಇವೆಲ್ಲವನ್ನೂ ನೋಡಿದಾಗ, ವೀರಶೈವ - ಲಿಂಗಾಯತರ ಮತ, ಈ ಬಾರಿಯ ಚುನಾವಣೆಯಲ್ಲಿ ಯಾರಿಗೆ? ಒಂದು ಚರ್ಚೆ..












Click it and Unblock the Notifications