ಪಂಚಮಸಾಲಿ ಮೀಸಲಿಗಿದ್ದ ಅಡ್ಡಿ ನಿವಾರಿಸಿದ ಕರ್ನಾಟಕ ಹೈಕೋರ್ಟ್
ಬೆಂಗಳೂರು, ಮಾರ್ಚ್ 24; ಪಂಚಮಸಾಲಿ ಲಿಂಗಾಯತ ಉಪ ಜಾತಿಗೆ ಪ್ರವರ್ಗ 2ಎ ಅಡಿಯಲ್ಲಿ ಮೀಸಲಾತಿ ನೀಡುವ ಪ್ರಕ್ರಿಯೆ ಸಂಬಂಧ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನೀಡಿದ್ದ ಮಧ್ಯಂತರ ಆದೇಶವನ್ನು ಕರ್ನಾಟಕ ಹೈಕೋರ್ಟ್ ತೆರವುಗೊಳಿಸಿದೆ. ಇದರಿಂದಾಗಿ ಪಂಚಮಸಾಲಿಗೆ ಮೀಸಲು ಕಲ್ಪಿಸಲು ಇದ್ದ ಅಡ್ಡಿ ನಿವಾರಣೆಯಾಗಿದ್ದು, ಇಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.
ಚುನಾವಣಾ ಸಮಯದಲ್ಲಿ ಇದು ಸರ್ಕಾರಕ್ಕೆ ಬಹುದೊಡ್ಡ ಮುನ್ನಡೆಯಾಗಲಿದೆ. ಹೈಕೋರ್ಟಿನ ಈ ಆದೇಶದಿಂದ ಪಂಚಮಸಾಲಿ ಸೇರಿದಂತೆ ಲಿಂಗಾಯತರು ಪ್ರವರ್ಗಗಳನ್ನು ಹಿಂದುಳಿದ ವರ್ಗಗಳ ಪ್ರವರ್ಗ 2ಸಿ ಮತ್ತು ಒಕ್ಕಲಿಗರ ಸಮುದಾಯವನ್ನು 2ಡಿಗೆ ಸೇರಿಸಲು ಪ್ರಕ್ರಿಯೆ ಕೈಗೊಳ್ಳಲು ಈವರೆಗೂ ಇದ್ದಂತಹ ಅಡ್ಡಿ ದೂರವಾಗಿದೆ. ಪಂಚಮಸಾಲಿ ಲಿಂಗಾಯತ ಉಪ ಜಾತಿಗೆ ಪ್ರವರ್ಗ 2ಎ ಅಡಿ ಮೀಸಲಾತಿ ನೀಡುವ ಸಂಬಂಧದ ಸರ್ಕಾರದ ಪ್ರಕ್ರಿಯೆ ಪ್ರಶ್ನಿಸಿ ಬೆಂಗಳೂರಿನ ಡಿ. ಜಿ. ರಾಘವೇಂದ್ರ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಳೆ ಮತ್ತು ನ್ಯಾಮೂರ್ತಿ ಆಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಾದ ಆಲಿಸಿದ ಬಳಿಕ ನ್ಯಾಯಾಲಯ ಜ.12ರಂದು ನೀಡಿದ್ದ ಯಥಾಸ್ಥಿತಿ ಆದೇಶವನ್ನು ತೆರವು ಮಾಡಿತು.

ಸರ್ಕಾರದ ತೀರ್ಮಾನ ಅಂತಿಮ ಆದೇಶದ ವ್ಯಾಪ್ತಿಗೆ: ಸರ್ಕಾರದ ಪರ ವಕೀಲರು, ರಾಜ್ಯ ಸರ್ಕಾರವು 2ಎ ಪ್ರವರ್ಗಕ್ಕೆ ಯಾವುದೇ ತೊಂದರೆಯಾಗದಂತೆ ನಡೆದುಕೊಳ್ಳಲಾಗುವುದು. ಹಾಗಾಗಿ ಪ್ರಕರಣದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಈ ಹಿಂದೆ ನೀಡಿರುವ ಆದೇಶ ತೆರವು ಮಾಡಬೇಕು ಎಂದು ಕೋರಿದರು. ಅಲ್ಲದೇ , ಈ ಕುರಿತು ದಿನದ ಅಂತ್ಯದೊಳಗೆ ಲಿಖಿತ ಹೇಳಿಕೆಯನ್ನು ಸಲ್ಲಿಸಲಾಗುವುದು ಎಂದರು. ಆಗ ನ್ಯಾಯಪೀಠ, ಪ್ರಕರಣದಲ್ಲಿ ಸರ್ಕಾರ ಮುಂದೆ ಕೈಗೊಳ್ಳುವ ಎಲ್ಲ ಕ್ರಮಗಳು ಈ ಅರ್ಜಿ ಕುರಿತ ನ್ಯಾಯಾಲಯ ಹೊರಡಿಸುವ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಿತು.
ಸರ್ಕಾರದ ಸಮರ್ಥನೆ: ಈ ಹಿಂದೆ ಅರ್ಜಿಯ ವಿಚಾರಣೆ ವೇಳೆ ಸರ್ಕಾರ, ಸಮುದಾಯವನ್ನು ಹಿಂದುಳಿದ ವರ್ಗಗಳ ಅಡಿ ಮೀಸಲು ಕಲ್ಪಿಸಲು ಕೋರಿದ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿರುವ ರಾಜ್ಯ ಸರ್ಕಾರ, ಪ್ರತಿ ಹತ್ತು ವರ್ಷಕ್ಕೊಮ್ಮೆ ಹಿಂದುಳಿದ ವರ್ಗಗಳ ಮೀಸಲು ಪಟ್ಟಿಯನ್ನು ಪರಿಷ್ಕರಿಸುವ ಅಧಿಕಾರ ತನಗೆ ಇದೆ ಎಂದು ಪ್ರತಿಪಾದಿಸಿತ್ತು. ಅಲ್ಲದೆ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಕಾಯ್ದೆ-1995ರ ಸೆಕ್ಷನ್ 9 ಪ್ರಕಾರ ಯಾವುದಾದರೂ ಒಂದು ಸಮುದಾಯವು ತನ್ನನ್ನು ಹಿಂದುಳಿದ ವರ್ಗಕ್ಕೆ ಸೇರಿಸುವಂತೆ ಮನವಿ ಸಲ್ಲಿಸಿದರೆ, ಅದನ್ನು ಪರಿಶೀಲಿಸುವುದಕ್ಕೆ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಅವಕಾಶವಿದೆ ಎಂದು ಹೇಳಿತು.
ನಿಯಮಗಳ ಪ್ರಕಾರ ಆಯೋಗವು ಮನವಿ ಮಾಡಿರುವ ಸಮುದಾಯಗಳು ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದೆಯೇ ವಿಚಾರಣೆ/ ಸಮೀಕ್ಷೆ/ ತನಿಖೆ ನಡೆಸಿ ನಾಗರಿಕರ ಹಿಂದುಳಿದ ವರ್ಗಗಳ ವರ್ಗೀಕರಣದ ಬಗ್ಗೆ ಸರ್ಕಾರಕ್ಕೆ ಶಿಫಾರಸು ಮಾಡಬೇಕಾಗುತ್ತದೆ ಎಂದು ಆಕ್ಷೇಪಣೆಯಲ್ಲಿ ಸರ್ಕಾರ ತಿಳಿಸಿತ್ತು. ಅಲ್ಲದೆ, ಕಾಯ್ದೆಯ ಸೆಕ್ಷನ್ 11ರ ಪ್ರಕಾರ ರಾಜ್ಯ ಸರ್ಕಾರವು ಆಯೋಗದೊಂದಿಗೆ ಸಮಾಲೋಚಿಸಿ ಪ್ರತಿ ಹತ್ತು ವರ್ಷಗಳಿಗೊಮ್ಮೆ, ಹಿದುಳಿದ ವರ್ಗಗಳ ಪಟ್ಟಿಯನ್ನು ಪರಿಷ್ಕರಣೆ ಮಾಡಬಹುದಾಗಿದೆ. ಈ ರೀತಿಯಲ್ಲಿ ಒಂದೆಲ್ಲಾ ಒಂದು ಸಮುದಾಯ ಸಲ್ಲಿಸುವ ಮನವಿಯನ್ನು ಸದಾ ಆಯೋಗದ ಮಂದೆ ಪರಿಣನೆಯಲ್ಲಿರುತ್ತದೆ. ಇದು ಸಹ ನಿರಂತರ ಪ್ರಕ್ರಿಯೆಯಾಗಿದೆ ಎಂದು ಆಕ್ಷೇಪಣೆಯಲ್ಲಿ ಸರ್ಕಾರ ವಿವರಿಸಿದೆ.

ಇನ್ನೂ ಆಯೋಗ ಸಹ ಕಾಲ ಕಾಲಕ್ಕೆ ಸರ್ಕಾರಕ್ಕೆ ಹಲವು ಶಿಫಾರಸು ಮಾಡಿದ್ದು, ಅದಕ್ಕೆ ಅನುಗುಣವಾಗಿ ಸರ್ಕಾರವು ಹಲವು ಹಿಂದುಳಿದ ವರ್ಗಗಳನ್ನು ವರ್ಗೀಕರಣ ಮತ್ತು ಮರುವರ್ಗೀಕರಣ ಮಾಡಿಕೊಂಡು ಬಂದಿದೆ. ಯಾವುದೇ ಹಿಂದುಳಿದ ವರ್ಗದ ವ್ಯಕ್ತಿಯ ಸಾಮಾಜಿಕ ಸ್ಥಿತಿಗತಿ ಒಂದೇ ರೀತಿ ಇರುವುದಿಲ್ಲ. ತೀರಾ ಹಿಂದುಳಿದ ವರ್ಗದ ವ್ಯಕ್ತಿ ಭವಿಷ್ಯದಲ್ಲಿ ಮುಂದುವರಿದ ವರ್ಗಕ್ಕೆ ವರ್ಗಾವಣೆಯಾಗಬಹುದು ಎಂದು ಆಕ್ಷೇಪಣೆಯಲ್ಲಿ ತಿಳಿಸಲಾಗಿದೆ.
ಲಿಂಗಾಯತ ಪಂಚಮಸಾಲಿ ಸಮುದಾಯವು ತನ್ನನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿ ಮೀಸಲು ಕಲ್ಪಿಸಲು ಕೋರಿದೆ. ಆ ಬಗ್ಗೆ ಆಯೋಗವು ಪರಿಶೀಲನೆ ನಡೆಸಿ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದೆ. ಅದನ್ನು ಸರ್ಕಾರ ಈಗಾಗಲೇ ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದೆ. ಈ ಅರ್ಜಿ ಸಲ್ಲಿಸಿರುವ ಅರ್ಜಿದಾರರ ನಡೆಯು ಅಕಾಲಿಕವಾಗಿದೆ. ಅರ್ಜಿಯಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲವಾಗಿದೆ. ಆದ್ದರಿಂದ ಅರ್ಜಿ ವಿಚಾರಣಾ ಮಾನ್ಯತೆ ಹೊಂದಿಲ್ಲ ಹಾಗೂ ವಜಾಗೊಳಿಸಲು ಅರ್ಹವಾಗಿದೆ ಎಂದು ಆಕ್ಷೇಪಣೆಯಲ್ಲಿ ಸರ್ಕಾರ ನ್ಯಾಯಾಲಯವನ್ನು ಕೋರಿದೆ.












Click it and Unblock the Notifications