“ಹೂಂ, ಅವಳಾ... ಅವಳ್ಬಿಡು!”
“ಈಗ ನಾವು ಸರ್ವವ್ಯಾಪಿ. ಆದರೂ ನಾವುಗಳು ನಾವು ಎಂದು ಗುರ್ತಿಸಿಕೊಂಡು ಅಸ್ತಿತ್ವ ಉಳಿಸಿಕೊಳ್ಳಬೇಕಾದರೆ ನಿಮಗಿಂತ ದುಪ್ಪಟ್ಟು ಶ್ರಮ ಪಡಬೇಕು ಅನ್ನುವುದು ವಿಕಾರ ಸತ್ಯ. ನಿಮಗೆ ಏನೇ ಬೇಕಾದರೂ ಅದು ಮೂಲಭೂತ ಅವಶ್ಯಕತೆ. ಅದನ್ನೇ ನಾವು ಕೇಳಿದರೆ ಅದು ಸವಲತ್ತು. ಒಳಗೇನಿದ್ದರೂ ಉಗುಳಿಬಿಡಲು ನಾವು ವಿಷ ಉಗುಳುವ ಜಂತುಗಳಲ್ಲ. ಆದರೆ ನಾವು ನುಂಗಿಕೊಂಡಿರುವುದನ್ನು ಬೆಂಬಲಿಸುವವರು ನಿಮ್ಮಲ್ಲಿದ್ದರೆ ಅವರ ಸಂತತಿ ಸಾವಿರವಾಗಲಿ.” ಹೀಗೆಲ್ಲಾ ಬಯಸುತ್ತಿರಬಹುದೇ ಉದ್ಯೋಗಸ್ಥ ಮಹಿಳೆ?!
ಈ ದಿನ ನಾನು ನಿಮಗೊಂದು ಸಿಕ್ಕಾಪಟ್ಟೆ un-interesting ವಿಷಯ ಹೇಳ್ಬೇಕೂಂತಿದ್ದೀನಿ. ಅರೆ, ಅದರಲ್ಲಿ ಸತ್ವವೆ ಇಲ್ಲ ಅಂದಮೆಲೆ ಯಾಕ್ಹೇಳ್ಬೇಕು ಅಂತೀರಾ? ಆದರೆ ಏನು ಮಾಡೋದು ಹುಟ್ಟ್ಗುಣ ಸುಟ್ಟ್ರೂ ಹೋಗಲ್ಲ ಅಂತಾರಲ್ಲ ಹಾಗೆ! ಅರ್ಥವೋ ಅಪಾರ್ಥವೋ ಎಲ್ಲವನ್ನೂ ಹೇಳಿಬಿಡಬೇಕು ನಿಮ್ಮ ಬಳಿ. ಎಷ್ಟೋ ಸಲಿ ಅನ್ನಿಸುತ್ತೆ ನಿಮ್ಮ ತರಹ ಚುಪ್‍ಚಾಪ್ ಇದ್ದುಬಿಡೋಣಾ ಅಂತ. ಆದರೆ ನನ್ನ ಮನಸ್ಸು ಬಾವಿ ರಾಟೆಗೆ ಜೋತು ಬಿಟ್ಟ ಹಗ್ಗದಂತೆ ಕಣ್ರೀ. ಭಾರದ ಕಡೆ ವಾಲ್ಕೊಂಡೇ ಇರುತ್ತೆ ನೋಡಿ!
ಪೂಜ ಗೊತ್ತಲ್ಲ? ಉಹೂಂ ಅವಳಲ್ಲಪ್ಪಾ. . .ಅವಳ ತರಹ ಇವಳಿಗೆ ವರದಕ್ಷಿಣೆ ಕಾಟಾನೂ ಇಲ್ಲ ಹಾಗೇ ಅವಳ ತರಹ ಓಡೋಕ್ಕೆ ಇವಳಿಗೆ ಆಗೋದು ಇಲ್ಲ ಬಿಡಿ! ಇವಳು ಶ್ರೀನಾಥಣ್ಣನ ಆಫೀಸ್‍ನಲ್ಲಿ ಕೆಲ್ಸ ಮಾಡ್ತಾಳಲ್ಲ ಆ ಪೂಜ. ಕೆಲಸಕ್ಕೆ ಸೇರ್ಕ್ಕೊಂಡೆರಡೇ ವರ್ಷದಲ್ಲಿ ಮೂರು ಪ್ರಮೋಷನ್ನು ಸಿಕ್ಕಿದೆ ಅವಳಿಗೆ. ಎಷ್ಟೋ ಬಾರಿ ಅಂದ್ಕೋತಿರ್ತೀನಿ ಅದ್ಹೇಗೆ ಅವಳು ಎಲ್ಲಾನೂ balance ಮಾಡ್ದ್ತಾಳೆ ಅಂತ! ಮಾತು ಕಡಿಮೆ ಮಾಡಿದ್ರೆ ನಾನೂ ಅವಳ ತರಹಾನೇ ಆಗ್ಬಹುದೇನೋ ಅಲ್ಲ್ವಾ? ಅದರ ಬಗ್ಗೆ ಆಮೇಲೆ ಮಾತಾಡೋಣ ಬಿಡಿ. . . .ಮೊನ್ನೆ ಅವಳ ಪ್ರಮೋಷನ್ ವಿಷಯ ಗೊತ್ತಾದ ಮೇಲೆ ಅಣ್ಣ ಬಂದಿದ್ದ.
ಎರಡೇ ವರ್ಷದಲ್ಲಿ ಪೂಜ ಎಷ್ಟು ಮೇಲೆ ಬಂದ್ಳಲ್ಲ್ವಾ? ಅಂದೆ. ಅದಕ್ಕೆ ಅವನು ಏನಂದ ಗೊತ್ತಾ? “ಹೂಂ ಅವಳಾ, ಅವಳ್ಬಿಡು. . . . .” ಅದ್ಯಾಕೋ ಅವನ intonation ನನಗಂತು ನೀರಿಗ್ಬಿದ್ದ ಬಣ್ಣದ ತಗಡಿನ ತುತ್ತೂರಿ ಧ್ವನಿ ತರಹ ಅನ್ನಿಸಿತು. ಅಲ್ಲ, ವಾರಕ್ಕಾರೂವರೆ ದಿನ ಅತ್ತಿಗೆ ಮಕ್ಕಳನ್ನು ಬಿಟ್ಟು ದಿಲ್ಲಿ ಗಲ್ಲಿ ಅಂತ ಸುತ್ತಿರ್ತಾನೆ. “ಅದೇನ್ಕೆಲ್ಸಾನೋ ಏನೋ. . . . . .” ಅಂತ ನಾವುಗಳೂ ಅವನ ಸ್ವರದಲ್ಲೇ ರಾಗ ಎಳೆದ್ರೆ ಹೇಗಿರುತ್ತೆ ಹೇಳಿ?!
ಅದ್ಯಾಕ್ಕೋಪ್ಪಾ, ಅವಳಿಗೆ ಒಂದು ಪ್ರಮೋಷನ್ನು, ಒಂದು incentive ಒಂದು ಅವಾರ್ಡು ಹೀಗೇ ಏನೇ ಬಂದ್ರೂ “ಹೂಂ ಅವಳಾ, ಅವಳ್ಬಿಡು. . . . .” ಅನ್ನುವುದೇ ಒಂದು ಖಾಯಂ ಪ್ರತಿಕ್ರಿಯೆ ಆಗ್ಬಿಟ್ಟಿರತ್ತೆ. ಅದೆ ಅವನಿಗೆ ಅಫೀಸಿನಲ್ಲಿ ಒಂದು ಸ್ವೀಟ್ ಡಬ್ಬ ಸಿಕ್ಕ್ರೂ ಅದು celebration ಟೈಂ ಆಗ್ಬಿಡತ್ತೆ. ನಿಮ್ಮ್ಹತ್ರ ನನಗಿದೆಲ್ಲಾ ಸರಿಹೋಗಲ್ಲ ಅಂತ ಒಂದ್ಮಾತ್ನ ಎರಡ್ಸರ್ತಿ ಹೇಳಿದ್ರೆ “ನೀನು ತುಂಬ negetive. ನಿನಗೆ ಒಳ್ಳೆ tution ಅಗತ್ಯ ಇದೆ” ಅಂತೆಲ್ಲಾ ಹೇಳ್ತೀರಲ್ಲ ಪ್ರಮಾಣ ಮಾಡಿ ಹೇಳಿ ಮತ್ತೆ ,ನಾನ್ಹೇಳ್ತಿರೋದು ಸರಿಯಲ್ಲ ಅಂತ! ಅಯ್ಯೋ, ಅದಕ್ಕ್ಯಾಕೆ ಇಷ್ಟು ಸಿಡಸಿಡಾ ಅಂತೀಯಾ ಅಂತ್ಕೇಳ್ತೀರಾ? ಅದು ಸರಿ ಅನ್ನಿ, ಇಂತಹ ಮಾಮೂಲು ವಿಷಯವನ್ನು ಯಾಕ್ತಾನೆ ಪದೇ ಪದೇ ಆಡ್ತಿರ್ಬೇಕು?
ಎಲ್ಲಾ ಉದ್ಯೋಗಸ್ಥ ಹೆಂಗಸರು ನಿಂತಿರೋದು ಬಯಲು ದಾರೀಲಿ ತಾನೆ? ದೈನಂದಿನ ಬದುಕಿನ ಓಟ, ಏಕಾಂಗಿಯಾಗಿ ಬೆನ್ನ ಮೇಲೆ ಹೊತ್ತುಕೊಂಡ ಸಂಸಾರ ಮತ್ತು ಆಫೀಸಿನ ಸಂಯೋಗದ ಒತ್ತಡ. ಒಟ್ಟಿನಲ್ಲಿ ಒಳಗೆ ಹೊಳೆ ಹೊರಗೆ ಮಳೆ. ಇದೆಲ್ಲಾ ಅಂತಹ ಮೆದುಳು ಅಲ್ಲಾಡೋ ಸಂಗತಿ ಅಲ್ಲ ಬಿಡಿ. ನಾನೇನು ಸಮಾಜ ಉದ್ಧಾರ ಮಾಡ್ತೀನಿ ಅಂತಾಗ್ಲೀ ಅಥವಾ ನಾನು ಸಮಾಜ ಸೇವಕಿ ಅಂತಾಗ್ಲೀ ನಿಮ್ಮ್ಹತ್ರ ಯಾವತ್ತೂ ಹೇಳಿಕೊಂಡಿಲ್ಲ. ಅದ್ದ್ರಿಂದ, ನನಗೆ ಯಾವ ಜವಾಬ್ದಾರೀನೂ ಇಲ್ಲ. ಏನೋ ಮನಸ್ಸಿಗೆ ತೋಚಿದ್ದು ನಿಮ್ಮ ಮುಂದೆ ಗೀಚಿದ್ದು ಅಷ್ಟೆ. ಅದಕ್ಕೆ ನಾನು ಮೊದಲೇ ಹೇಳಿದ್ದು ನಿಮಗೀದಿನ ನಾನೊಂದು un-inetesting ವಿಷಯ ಹೇಳ್ತೀನಿ ಅಂತ!












Click it and Unblock the Notifications