ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾ ಪ್ರವಾಸಕಥನ : ಭಾಮಿನಿ ಸ್ಟೈಲ್!

By Staff
|
Google Oneindia Kannada News


America travelogue in Bhamini style
ನಯಾಗರಾ ಟ್ರಿಪ್ ವೇಳೆ ಮೊಮ್ಮಗನ ಒತ್ತಾಯಕ್ಕಾಗಿ ಮೆಕ್‌ಡೊನಾಲ್ಡ್ಸ್‌ಗೆ ಹೋಗಿಬಂದದ್ದನ್ನು, ಅಲ್ಲಿ ಫಿಂಗರ್ ಚಿಪ್ಸ್ ಕರಿಯುವ ಎಣ್ಣೆಯಲ್ಲಿ ಬೀಫ್ (ತುರು = ದನ) ಅಂಶವಿರುತ್ತದೆಯೆಂದು ಎಲ್ಲೋ ಓದಿದ್ದು ನೆನಪಾಗಿ ಹೊಟ್ಟೆ ತೊಳಸಿದ ಸನ್ನಿವೇಶವನ್ನು, ನಾರಣಪ್ಪನವರು ವಿವರಿಸುವುದು ಹೀಗೆ:

ಕರೆದು ಎಳೆದನು ತುಂಟ ಪೌತ್ರನು
ಎರಡು ಚಾಪದ ಚಿಹ್ನೆಯಿರುವೆಡೆ
ಬೆರಳತೆರನಿಹ ಫ್ರೆಂಚುಫ್ರೈಗಳ ತಿನ್ನು ನೀನೆಂದ
ತುರುವಿನಂಶದ ಎಣ್ಣೆಯಲ್ಲಿಯೆ
ಕರಿದ ತಿಂಡಿಯ ಹೇಗೆ ತಿನ್ನಲಿ
ಬರಿದೆ ಹೊಟ್ಟೆಯು ತೊಳಸಿತಾಗಲೆ ಹರಸು ಗೋವಿಂದ ||

ಬಿಗ್ ಆಪಲ್ ಎಂದು ಖ್ಯಾತವಾದ ನ್ಯೂಯಾರ್ಕ್ ನಗರಿಯ ದೃಶ್ಯವೈಭವವು ನಾರಣಪ್ಪನವರನ್ನು ಮೂಕವಿಸ್ಮಿತವಾಗಿಸಿದೆ. ಒಂದು ಕೈಯಲ್ಲಿ ಸ್ವಾತಂತ್ರ್ಯದಿನಾಂಕ ಬರೆದ ಪುಸ್ತಕ ಇನ್ನೊಂದು ಕೈಯಲ್ಲಿ ಸ್ವಾತಂತ್ರ್ಯಸಂಕೇತದ ಪಂಜನ್ನು ಹಿಡಿದ ಲಿಬರ್ಟಿ ಸ್ಟಾಚ್ಯೂವಿನ ಭವ್ಯತೆಗೆ ಅವರು ಬೆಕ್ಕಸಬೆರಗಾಗಿದ್ದಾರೆ. ವರ್ಲ್ಡ್‌ಟ್ರೇಡ್ ಸೆಂಟರ್ ಇದ್ದ, ಈಗ ಗ್ರೌಂಡ್ ಜೀರೊ ಆಗಿರುವ ಪ್ರದೇಶವನ್ನು ನೋಡಿದಾಗ ನಾರಣಪ್ಪನವರ ಕಣ್ಣಂಚಲ್ಲಿ ನೀರಿಳಿದಿದೆ. ಆದರೂ ಟೈಮ್ಸ್ ಸ್ಕ್ವೇರ್‌ನ ರಾತ್ರಿಯ ಜಗಮಗ ನೋಡಿ ಅವರ ಮುಖ ಅರಳಿದ್ದು ಸುಳ್ಳಲ್ಲ!

ಪಿರಿದು ಸೇಬಿನ ಚರಿತೆಯಿದ ಕೇಳ್
ಕರದಿ ಪುಸ್ತಕ ಪಿಡಿದ ಕನ್ಯೆಯು
ಕರೆಯುತಿರುವಳು ಮನುಜರೆಲ್ಲರ ತನ್ನ ಪರಿಧಿಯೊಳು
ಉರಿದುಬಿದ್ದಿಹ ಸಿರಿಯಕೇಂದ್ರವು
ಮರುಕ ಹುಟ್ಟಿಸುವಂತೆ ಇರುವುದು
ಅರಳಿತೆನ್ನಯ ಮೊಗವು ಸಮಯದ ಚೌಕ ಬೆಳಗಿರಲು ||

ವಾರಾಂತ್ಯಗಳಲ್ಲಿ ಪ್ರವಾಸಗಳು ಪಿಕ್‌ನಿಕ್‌ಗಳು ಸಕ್ಕತ್ ಮಜಾ ಆಗಿರುತ್ತವೆ, ಆದರೆ ವಾರದ ದಿನಗಳಲ್ಲಿ ಮಗ-ಸೊಸೆ ಆಫೀಸಿಗೆ ಹೋದರೆ ಮನೆಯೆಂಬ ಬಂಗಾರದಪಂಜರದೊಳಗೇ ಇರಬೇಕು. ಮಾಲ್‌ಗಳಿಗಾಲೀ ವಾಲ್‌ಮಾರ್ಟಿಗಾಗಲೀ ಎಷ್ಟು ಸಲವೆಂದು ಹೋಗುವುದು? ಈಗೇನೋ ಶಾಲೆಗೆ ರಜಾ ಆದ್ದರಿಂದ ಮೊಮ್ಮಕ್ಕಳಾದರೂ ಮನೆಯಲ್ಲಿ ಇರುತ್ತಾರೆ, ಇಂಟರ್‌ನೆಟ್‌ನಲ್ಲಿ ಕನ್ನಡ ಪತ್ರಿಕೆಗಳು ಓದಲಿಕ್ಕೆ ಸಿಗುತ್ತವೆ, ಅಪ್ಪ‍ಅಮ್ಮ ಬರುತ್ತಾರೆಂದೇ ಮಗ ಉದಯ ಟಿವಿ ಚಾನೆಲ್ ಹಾಕಿಸಿದ್ದಾನೆ... ಹಾಗಾಗಿ ಸ್ವಲ್ಪವಾದರೂ ಟೈಮ್‍ಪಾಸ್ ಆಗುತ್ತದೆಯೆನ್ನುತ್ತಾರೆ ನಾರಣಪ್ಪ:

ಮಾಲು ತಿರುಗುತ ಮಹಲು ನೋಡುತ
ವಾಲುಮಾರ್ಟಲಿ ಕಾರ್ಟು ದೂಡುತ
ಕಾಲ ಕಳೆಯುವೆ ಹಾಡು ಕೇಳುತ ಉದಯ ಠೀವಿಯಲಿ
ಬಾಲಲೀಲೆಗಳನ್ನು ಸವಿಯುತ
ಜಾಲದಲ್ಲಿಯ ಪೇಪರೋದುತ
ಕಾಲು ಸಡಿಲಿಸೆ ವಾಕು ಹೋಗುವೆ ಸಂಜೆ ಪಾರ್ಕಿನಲಿ ||

ನಾರಣಪ್ಪನವರ ಸೊಸೆಯದೂ ಎಲ್ಲರಂತೆಯೇ ವಾರಕ್ಕಾಗುವಷ್ಟು ಅಡುಗೆಯನ್ನು ಮಾಡಿಟ್ಟು ತಂಗಳುಪೆಟ್ಟಿಗೆಯಲ್ಲಿಡುವ ಕ್ರಮ. ಆದರೆ ಈಗ ಅತ್ತೆ ಇರುವುದರಿಂದ ದಿನಾ ಫ್ರೆಷ್ ಅಡುಗೆ. ಕೆಲವೊಮ್ಮೆ ಸ್ನೇಹಿತರ ಮನೆಗಳಲ್ಲಿ ಪಾಟ್‍ಲಕ್ ಡಿನ್ನರ್ ಇಟ್ಟುಕೊಳ್ಳುತ್ತಾರೆ, ಒಂದೊಂದು ಮನೆಯವರೂ ಒಂದೊಂದು ಭಕ್ಷ್ಯವನ್ನು ಒಯ್ದರಾಯಿತು. ಮತ್ತೆ ದೇವಸ್ಥಾನಕ್ಕೆ ಹೋದ ದಿನವಂತೂ ಅಲ್ಲಿನ ಕೆಫೆಟೆರಿಯಾದಲ್ಲಿ ಇಡ್ಲಿ ದೋಸೆ ಪೂರಿ ಪುಳಿಯೊಗರೆ ಮೊಸರನ್ನ ಹುಳಿಯನ್ನ ಪಾರ್ಸೆಲ್ ಕಟ್ಟಿತಂದರೆ ಅವತ್ತು ಆಮೇಲೆ ಮನೆಯಲ್ಲಿ ಅಡುಗೆ ಮಾಡುವ ತಲೆಬಿಸಿಯಿಲ್ಲ. ಅಮೆರಿಕ ವಾಸ್ತವ್ಯದ ದಿನಗಳಲ್ಲಿನ ಊಟತಿಂಡಿಯ ವಿವರಗಳನ್ನು ನಾರಣಪ್ಪ ಹೀಗೆ ಬಣ್ಣಿಸುತ್ತಾರೆ:

ಅಡಿಗೆಮಾಡುವ ಚಿಂತೆಯೇನಿದೆ
ಗಡಿಗೆಯೋಗದ ಔತಣವು ಇದೆ
ಬಡಿಸಿಕೊಂಡೇ ತಿಂದರಾಯಿತು ಹರಟೆ ಹೊಡೆಯುತ್ತ
ಗುಡಿಯ ಒಳಗೇ ದೋಸೆ ಮಾರ್ವರು
ಮಡಿಯು ಮೈಲಿಗೆ ಎನುತ ನೀ ಕಂ
ಗೆಡದೆತಿಂದರೆ ಹೊಟ್ಟೆತುಂಬಿತು ರುಚಿಯ ಸವಿಯುತ್ತ ||

ಈರೀತಿ ನಾರಣಪ್ಪನವರ ಪ್ರವಾಸಕಥನದ ಒಂದು ಪಕ್ಷಿನೋಟ, ಸ್ಪೆಷಲ್ ಪ್ರಿವ್ಯೂ ನಿಮಗೀಗ ಸಿಕ್ಕಿದೆ. ಜತೆಯಲ್ಲೇ ಭಾಮಿನಿಷಟ್ಪದಿಯ 3,4,3,4... ಮಾತ್ರಾಗಣಗಳ ಸುಲಭ ಮಾದರಿಯ ಬಗ್ಗೆ ಶಾಲೆಯಲ್ಲಿ ಕಲಿತದ್ದು ನೆನಪಾಗಿದೆ. ಈ ಪ್ರಾತಿನಿಧಿಕ ಪ್ರಸಂಗಗಳೇ ನಿಮಗೆ ಖುಶಿಕೊಟ್ಟಿದ್ದರೆ ಇನ್ನು ನಾರಣಪ್ಪನವರ ಅಮೆರಿಕಾಯಾತ್ರೆಯ ಸಂಪೂರ್ಣ ಕಾವ್ಯವನ್ನು ಓದುವ ಅನುಭವ ಹೇಗಿರಬಹುದೆಂದು ನೀವೇ ಊಹಿಸಿ!

- [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X