• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇದು ಎಂಥ ವೇಷವಯ್ಯಾ...? (ರಸಪ್ರಶ್ನೆ)

By Staff
|


ಪ್ರಶ್ನಾವಳಿ

1. ಆಸ್ಕರ್‌ ವೈಲ್ಡ್‌ ಉವಾಚ ಒಂದಿದೆ: Man is least himself when he talks in his own person. Give him a mask, and he will tell you the truth. ಅಂದರೆ ಮಾಸ್ಕ್‌ಗೆ ಒಂದು ಅದ್ಭುತ ಶಕ್ತಿಯಿದೆ! ಬಹುಶಃ ವೇಷದ ಆವೇಷದಲ್ಲಿ ವೇಷಧಾರಿಯ ಬಾಯಿಂದ ಸತ್ಯ ಹೊರಬರುತ್ತದೆ! ಇರಲಿ, ಸದ್ಯಕ್ಕೆ ‘ಮಾಸ್ಕ್‌’ಗೆ ಸಮಾನಾರ್ಥಕ ಕನ್ನಡಪದವೇನು ನಿಮ್ಮ ಬಾಯಿಂದ ಈ ಸತ್ಯ ಹೊರಬಂದರೆ ತಿಳಿಸಿ.
2. ಭೂತಕೋಲದ ವೇಷಧಾರಿಯ ಚಿತ್ರವಿದು. ಕಾಲ್ಗೆಜ್ಜೆಗಳನ್ನು (ಅವಕ್ಕೆ ತುಳುಭಾಷೆಯಲ್ಲಿ ‘ಗಗ್ಗರ’ ಎನ್ನುವುದು) ಧರಿಸುವ ಮುನ್ನ ಅವುಗಳಿಗೆ ನಮಿಸುತ್ತಿದ್ದಾನೆ. ಅವನು ಹಾಕಿಕೊಂಡಿರುವ ಉಡುಪು ಕೆಂಪು (ಅದರ ಮೇಲೆ ತೆಂಗಿನಗರಿಗಳ ಸ್ಕರ್ಟ್‌ ಮತ್ತು ಪ್ರಭಾವಳಿಗಳನ್ನು ಹಾಕಿಕೊಳ್ಳುತ್ತಾನೆ). ಕೇಪಳಹೂ, ಆಬ್ಬಲಿಗೆ (ಕನಕಾಂಬರ) ಹೂಗಳಿಂದ ಅಲಂಕೃತವಾದ ಕಿರೀಟವೂ ಕೆಂಪು. ಆತನ ಮೈಮೇಲೆ ಆವೇಷವಾಗಲಿರುವ ಭೂತದ ಹೆಸರೂ ಕೆಂಪು ನೆತ್ತರನ್ನು ನೆನಪಿಸುವಂಥದೇ!
3. 18 ಗಂಟುಗಳಷ್ಟು (ಒಂದೊಂದು ಗಂಟೂ ಒಂದೊಂದು ‘ಧರ್ಮ’ ಎಂಬ ನಂಬಿಕೆ) ಉದ್ದದ ಬಿದಿರುಕೋಲು. ಅದಕ್ಕೆ ಚಿನ್ನ, ಬೆಳ್ಳಿಯ ಲೇಪನದ ಅಲಂಕಾರ. ಮೇಲೆ ಪುಟ್ಟದಾದ ರೇಷ್ಮೆಛತ್ರಿಯಂತಹ ರಚನೆ. ಇಂತಹ ಕೋಲುಗಳನ್ನು ತಲಾ ಒಂದೊಂದರಂತೆ ಹಿಡಿದುಕೊಂಡು ಅದರ ಸಮತೋಲನವನ್ನು ಕಾಪಾಡುತ್ತ ತಾಳವಾದ್ಯನಿನಾದಕ್ಕೆ ಹೆಜ್ಜೆ ಹಾಕುತ್ತ ನರ್ತಿಸುವ ಶಿವಭಕ್ತರ ಈ ವೀರಾವೇಷದ ನರ್ತನ ನಿಜಕ್ಕೂ ರುದ್ರರಮಣೀಯ!
4. ದಕ್ಷಯಜ್ಞವನ್ನು ಧ್ವಂಸಪಡಿಸಿದ ವೀರಭದ್ರನ ಅವತಾರರೂಪವೆಂದು ನಂಬಲಾದ ‘ಲಿಂಗದೇವರು’ಗಳ ನೃತ್ಯ. ಬಿಳಿಧೋತಿ, ಕಾವಿಬಣ್ಣದ ಅಂಗಿ, ತಲೆಗೆ ಮುಂಡಾಸು, ಹಣೆಮೇಲೆ ವಿಭೂತಿ, ಕೊರಳಲ್ಲಿ ರುದ್ರಾಕ್ಷಮಾಲೆ, ಭುಜಕ್ಕೆ ನಾಗಾಭರಣ, ಎಡಗೈಯಲ್ಲಿ ಗುರಾಣಿ, ಬಲಗೈಯಲ್ಲಿ ಖಡ್ಗ - ಈ ವೇಷಭೂಷಣಗಳೊಂದಿಗೆ 8-10 ಮಂದಿಯ ತಂಡ ನರ್ತಿಸುತ್ತದೆ.
5. ಇದು ದಿ। ಎಚ್‌.ಎಲ್‌.ನಾಗೇಗೌಡ ಅವರ ಭಾವಚಿತ್ರ. 91 ವರ್ಷಗಳ ತುಂಬುಜೀವನದಲ್ಲಿ ಕನ್ನಡ/ಕರ್ನಾಟಕ ಜನಪದ ವಿದ್ಯಾಪೀಠವೇ ಆಗಿದ್ದ ನಾಗೇಗೌಡರು ಬೆಂಗಳೂರು-ಮೈಸೂರು ಹೆದ್ದಾರಿಯ ಪಕ್ಕದಲ್ಲಿ ’ಜನಪದ ಲೋಕ’ವನ್ನು ಕಟ್ಟಿದವರು; ಕನ್ನಡಮಣ್ಣಿಂದ ಹುಟ್ಟಿದ ವೇಷ ವೈವಿಧ್ಯಗಳ ಆಗರವಾದ ಅದು ಜನಪದ ಡಿಸ್ನಿಲ್ಯಾಂಡ್‌ ಆಗಬೇಕೆಂದು ಕನಸುಕಂಡವರು. ಈ ಪ್ರಶ್ನೆಯ ಉತ್ತರವಾಗಿ ನೀವು ನಾಗೇಗೌಡರ ಒಂದು ಜನಪ್ರಿಯ ಕಾದಂಬರಿಯನ್ನು ಹೆಸರಿಸಬಹುದು, ಅಥವಾ ದೂರದರ್ಶನಕ್ಕಾಗಿ ಅವರು ನಿರ್ಮಿಸಿದ್ದ ಜನಪದ ಕಲಾಸಿರಿಯ ಡಾಕ್ಯುಮೆಂಟರಿ ಧಾರಾವಾಹಿಯ ಹೆಸರನ್ನಾದರೂ ಸೂಚಿಸಬಹುದು.
6. ಬಣ್ಣಬಣ್ಣದ ವೇಷ ತೊಟ್ಟ ಕೊಡಗಿನ ಬೆಡಗಿಯರ ಈ ಮನಮೋಹಕ ನಾಟ್ಯಕ್ಕೆ ಮೋಹಿನಿ ನೃತ್ಯವೆಂಬ ಹೆಸರೂ ಇದೆ. ನಾಲ್ಕೈದು ನೀರೆಯರು ವರ್ತುಲಾಕಾರದಲ್ಲಿ ನಿಂತು, ನಡುವೆ ನೀರಿನ ಬಿಂದಿಗೆ ಹಿಡಿದ ಇನ್ನೊಬ್ಬ ನಾರಿಯಿರುತ್ತಾಳೆ. ಆಕೆ ‘ಕಾವೇರಿ ಮಾತೆ’ಯಿದ್ದಂತೆ. ಅವಳ ಸುತ್ತ ನರ್ತನ, ಜತೆಯಲ್ಲೇ ತಾಳ ಬಾರಿಸುತ್ತ ಗಾಯನ. ಇತ್ತೀಚಿಗೆ ಅಮೆರಿಕದಲ್ಲಿ ನಡೆದ ‘ಅಕ್ಕ’ ಸಮ್ಮೇಳನದಲ್ಲಿ ವಿಜೃಂಭಿಸಿದ ಪ್ರಸ್ತುತಿಗಳಲ್ಲಿ ಇದೊಂದು.
7. ಯಕ್ಷಗಾನದಲ್ಲಿ ಮುಖ್ಯವಾಗಿ ರಾಕ್ಷಸವೇಷಧಾರಿಯ ಮುಖವರ್ಣಿಕೆಗೆ ಇದೊಂದು ಪ್ರಸಾಧನ ಸಾಮಗ್ರಿ. ಒಂದು ಕೈಯಲ್ಲಿ ಕನ್ನಡಿ ಇನ್ನೊಂದು ಕೈಯಲ್ಲಿ ಕಡ್ಡಿ ಹಿಡಿದು ಸ್ವತಃ ಮೇಕ್‌ಅಪ್‌ ಮಾಡಿಕೊಳ್ಳುತ್ತಿರುವ ಕಲಾವಿದ ಇದನ್ನುಪಯೋಗಿಸಿ ತನ್ನ ಮುಖದ ಮೇಲೆ ಮೂಡಿಸಿರುವ ಅದ್ಭುತವಾದ ಕುಸುರಿ ಕೆಲಸವನ್ನು ಗಮನಿಸಿ!
8. ಮಂಗಳೂರು ಮತ್ತು ಕರಾವಳಿಕರ್ನಾಟಕದ ಇತರ ಪ್ರದೇಶಗಳಲ್ಲಿ ಮಹಾನವಮಿಯ ಸಡಗರಕ್ಕೆ ರಂಗೇರುವುದು ಈ ನರ್ತನದಿಂದಲೇ. ನವರಾತ್ರಿಯ ಅಧಿದೇವತೆ ನವದುರ್ಗೆಯ ವಾಹನದಂತೆಯೇ ವೇಷಧರಿಸಿ ಆವೇಷದಿಂದ ಕುಣಿಯುವುದಷ್ಟೇ ಅಲ್ಲದೆ ಕುರಿಯನ್ನು ಕೊಲ್ಲುವ ಅಭಿನಯ, ನೆಲದಲ್ಲಿಟ್ಟ ಕರೆನ್ಸಿನೋಟನ್ನು ಅಂಗಾತ ಬಗ್ಗಿ ಬಾಯಿಂದ ಕಚ್ಚಿ ತೆಗೆಯುವ ಚಮತ್ಕಾರ ಇತ್ಯಾದಿಯೆಲ್ಲ ಈ ನಾಟ್ಯದ ಥ್ರಿಲ್ಲಿಂಗ್‌ ಎಕ್ಸ್ಟ್ರಾಗಳು.
9. ಸವತಿಯರಿಬ್ಬರ ಕಿರಿಕಿರಿಯನ್ನು ಸ್ವತಃ ಶ್ರೀಕೃಷ್ಣಪರಮಾತ್ಮನೇ ಅನುಭವಿಸಿದ ಕಥೆಯಲ್ಲಿ ಬರುವ ಹೂವು. ರುಕ್ಮಿಣಿ ಮೆಚ್ಚಿದ ಹೂವಿನಮರವನ್ನು ಇಂದ್ರಲೋಕದಿಂದ ಭೂಲೋಕಕ್ಕೆ ತಂದು ನೆಟ್ಟ ಕೃಷ್ಣ. ಆದರೆ ಆ ಮರ ಸ್ವಲ್ಪ ಬಾಗಿ ಹೂಗಳೆಲ್ಲ ಸತ್ಯಭಾಮೆಯ ಕಂಪೌಂಡ್‌ ಒಳಗಡೆ ಬಿದ್ದರೆ ರುಕ್ಮಿಣಿಯ ಮುಖವೆಲ್ಲ ಆವೇಷದಿಂದ ಈ ಹೂವಿನ ದಂಟಿನಷ್ಟೇ ಕೆಂಪಾಗಿರಲಾರದೇ? ಸ್ವಾರಸ್ಯವಾದ ಈ ಕಥೆಯ ಅಭಿನಯರೂಪ ಯಕ್ಷಗಾನ ಮತ್ತು ಬಯಲಾಟಗಳ ಮಿಶ್ರತಳಿಯಂತಹ ಕಲಾಪ್ರಕಾರವು ಉತ್ತರಕರ್ನಾಟಕದ ಒಂದು ವೈಶಿಷ್ಟ್ಯ.
10. ದಕ್ಷಿಣಕನ್ನಡದ ದೇವಸ್ಥಾನಗಳ ಜಾತ್ರೆಗಳ ವೇಳೆ ಒಂದು ಪ್ರಧಾನ ಆಕರ್ಷಣೆಯೆಂದರೆ ಈ ಭೀಮಗಾತ್ರದ ಗಂಡು-ಹೆಣ್ಣು ಜೋಡಿ. ಬಿದಿರಿನ ಕಡ್ಡಿಗಳಿಂದ ಮಾಡಿದ ಮನುಷ್ಯನಾಕೃತಿಯ ಮೇಲೆ ಬಣ್ಣಬಣ್ಣದ ಬಟ್ಟೆಗಳ ವೇಷ ಹೊದಿಸಿ ಆಮೇಲೆ ಆ ಆಕೃತಿಯಾಳಗೆ ನಿಂತುಕೊಂಡು ನಿಧಾನಕ್ಕೆ ಹೆಜ್ಜೆ ಹಾಕಿದರೆ ಮೆರವಣಿಗೆಯನ್ನು ನೋಡುವವರ ದೃಷ್ಟಿ ಈ ಬೃಹತ್‌ ಜೋಡಿಯ ಮೇಲೆಯೇ!
11. ಈ ಚಿತ್ರದಲ್ಲಿರುವವರು ಕನ್ನಡದ ಖ್ಯಾತ ಚಿತ್ರನಿರ್ದೇಶಕ ಗಿರೀಶ್‌ ಕಾಸರವಳ್ಳಿ. ದ್ವೀಪ, ತಾಯಿಸಾಹೇಬ, ತಬರನಕಥೆ, ಘಟಶ್ರಾದ್ಧ ಮೊದಲಾದ ಕಲಾತ್ಮಕ ಚಿತ್ರಗಳ ನಿರ್ದೇಶಕ. 1988ರಲ್ಲಿ ಅವರು ದೂರದರ್ಶನಕ್ಕಾಗಿ ಒಂದು ಚಲನಚಿತ್ರವನ್ನು ನಿರ್ದೇಶಿಸಿದರು. ಯಕ್ಷಗಾನ ವೇಷಧಾರಿ ‘ಶಂಭು’ ಎನ್ನುವ ಪಾತ್ರ ಆ ಚಿತ್ರದ ನಾಯಕ. ಚಿತ್ರದ ಹೆಸರು?
12. ಕೋಲುಮಂಡೆ ಜಂಗಮದೇವರು ಕ್ವಾರಣ್ಯಕ್ಕೆ ದಯಮಾಡವ್ರೆ... ‘ಜನುಮದಜೋಡಿ’ ಚಿತ್ರದಲ್ಲಿನ ಈ ಹಾಡಿಗೆ ಶಿವರಾಜಕುಮಾರ್‌ ಮತ್ತು ಸಂಗಡಿಗರ ಕುಣಿತ ನೆನಪಿದೆಯಷ್ಟೇ? ಮುಂಡಾಸಿನ ವೇಷದೊಂದಿಗೆ ಕೈಯಲ್ಲಿ ತಾಳ ಹಿಡಿದು ಹಾಡುತ್ತ ನರ್ತಿಸುವ ಈ ಜನಪದಪ್ರಕಾರದ ಹೆಸರೇನು?
13. ಆಟಿ ತಿಂಗಳಲ್ಲಿ (ಆಷಾಢಮಾಸ, ಸರಿಸುಮಾರು ಜುಲೈ-ಆಗಸ್ಟ್‌) ದಕ್ಷಿಣಕನ್ನಡದ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಈ ವೇಷವು ಕಾರಣಿಕವಾದದ್ದು, ದೆವ್ವಾಂಶಸಂಭೂತವಾದದ್ದು ಎಂಬ ನಂಬಿಕೆಯಿದೆ. ಭೂತಕೋಲದ ವೇಷವನ್ನೇ ಹೆಚ್ಚುಕಡಿಮೆ ಹೋಲುವ ಇದರ ಕೈಯಲ್ಲಿ ತೆಂಗಿನಗರಿಗಳಿಂದ ಮಾಡಿದ ಛತ್ರಿ ಇರುವುದು ವಿಶೇಷ.
14. ಉತ್ತರಕನ್ನಡ ಪ್ರದೇಶದ ಬಡಗುತಿಟ್ಟಿನ ಯಕ್ಷಗಾನದ ಶ್ರೇಷ್ಠ ಕಲಾವಿದರಲ್ಲೊಬ್ಬರಾದ ಇವರು ಪ್ರಸಂಗವೊಂದರಲ್ಲಿ ಭೀಷ್ಮ ಪಿತಾಮಹನ ವೇಷ ಹಾಕಿದಾಗಿನ ಚಿತ್ರವಿದು. ಮೊನ್ನೆಯಷ್ಟೇ ನಡೆದ ‘ಅಕ್ಕ’ ವಿಶ್ವಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲು ಅಮೆರಿಕ ದೇಶಕ್ಕೆ ಬಂದಿದ್ದ ಈ ಹಿರಿಯ ಕಲಾವಿದ, ಸಮ್ಮೇಳನದ ನಂತರ ಅಮೆರಿಕದ ವಿವಿಧೆಡೆಗಳಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ನೀಡಿ ಜನಮನ ಗೆದ್ದಿದ್ದಾರೆ.
15. ಬೀರೇಶ್ವರನನ್ನು ಆರಾ-ಧಿಸುವ ಕುರುಬರು ಡೋಲು ಬಾರಿಸುತ್ತ ಹಾಡುತ್ತ ಕುಣಿಯುವ ಮತ್ತು ಅದರಲ್ಲೇ ವಿವಿಧ ಕರಾಮತ್ತುಗಳನ್ನು ತೋರುವ ವಿಶಿಷ್ಟ ಜನಪದ ನೃತ್ಯ. ಬಾಲ್ಟಿಮೋರ್‌ನಲ್ಲಿ (ಸಪ್ಟೆಂಬರ್‌ 2006) ನಡೆದ ವಿಶ್ವಕನ್ನಡ ಸಮ್ಮೇಳನಕ್ಕೆ ಕನ್ನಡ ಜನಪದ ಆವೇಷ ಅಬ್ಬರ ತಂದ ಅಂಶಗಳಲ್ಲಿ ಇದೂ ಒಂದಾಗಿತ್ತು.
16. ಇದೊಂದು ಹೆಚ್ಚುವರಿ ಪ್ರಶ್ನೆ, ಜಸ್ಟ್‌ ಫ‚ಾರ್‌ ಫ‚ನ್‌. ತನ್ನ ಆಫಿ‚ೕಸ್‌ನಲ್ಲಿ ನಡೆದ ಹ್ಯಾಲೊವಿನ್‌ ಛದ್ಮವೇಷ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳಿಸಿದ ಈತ ಯಾರಿರಬಹುದು? ಪ್ರಶ್ನೆ ತುಂಬಾ ವೇಗ್‌ ಅನಿಸುತ್ತದೆಯಾದರೆ ವೇಗವಾಗಿ ಉತ್ತರ ಸಿಗುವಂತೆ ಸುಳಿವು ಬೇಕಾ? ಈತ ನಿಮಗೆ ಇ-ಪರಿಚಿತನೇ ಆಗಿರುವ ಒಬ್ಬ ಕನ್ನಡಿಗ!

*

ವೇಷ ಧರಿಸುವ ಈ ವಿಚಿತ್ರಾನ್ನ ಕ್ವಿಜ್‌ ನಿಮಗೆ ಇಷ್ಟವಾಗುತ್ತದೆಯೆಂದುಕೊಂಡಿದ್ದೇನೆ. ಈ ಕ್ವಿಜ್‌ನ ಮೂಲಕಲ್ಪನೆ ಮತ್ತು ಕೆಲವು ಪೂರಕ ಸಾಮಗ್ರಿಯನ್ನು ಒದಗಿಸಿದವರು ಕ್ಯಾಲಿಫ‚ೊರ್ನಿಯಾದಲ್ಲಿರುವ ಸ್ನೇಹಿತ ಗೌತಮ್‌ ಸುದತ್ತ. ಹಾಗೆಯೇ ಪ್ರಶ್ನೆಗಳಿಗೆ ಪೂರಕವಾಗುವಂತೆ ಕೆಲವು ಚಿತ್ರಗಳಿಗಾಗಿ ಕಾಮತ್‌ ಡಾಟ್‌ ಕಾಮ್‌ ಮೊದಲಾದ ಅಂತರ್ಜಾಲಪುಟಗಳ ಸೌಜನ್ಯವನ್ನೂ ಕೃತಜ್ಞತಾಪೂರ್ವಕ ಪಡೆಯಲಾಗಿದೆ.

ಕನ್ನಡ ರಾಜ್ಯೋತ್ಸವ ಸ್ವರ್ಣ ಸಂಭ್ರಮದ ಸಂದರ್ಭದಲ್ಲಿ ವಿಚಿತ್ರಾನ್ನ ಓದುಗಮಿತ್ರರಿಗೆಲ್ಲ ಹಾರ್ದಿಕ ಶುಭಾಶಯಗಳು.

- srivathsajoshi@yahoo.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more