ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಹ್ಯಾಕಾಶದಿಂದ ‘ಉನ್ನತ ವ್ಯಾಖ್ಯೆ’ಯಲ್ಲಿ ನೇರಪ್ರಸಾರ!

By Staff
|
Google Oneindia Kannada News


ಆಕಾಶ ತನ್ನ ಗರ್ಭದಲ್ಲಿ ಏನೇನನ್ನೋ ಬಚ್ಚಿಟ್ಟುಕೊಂಡಿದೆ! ಆ ಬೆರಗುಗಳನ್ನು ಮತ್ತು ಗುಟ್ಟುಗಳನ್ನು ಬಿಡಿಸುವ ಯತ್ನ ಮನುಷ್ಯನಿಂದ ನಡೆಯುತ್ತಲೇ ಇದೆ. ಈ ಹಾದಿಯಲ್ಲಿನ ಬಾಹ್ಯಾಕಾಶ ಯಾತ್ರೆ, ಬಸ್‌ ಪ್ರಯಾಣದಷ್ಟೇ ಸುಲಭವಾಗುವ ದಿನಗಳು ಹತ್ತಿರದಲ್ಲಿದ್ದರೂ ಅಚ್ಚರಿಯೇನಿಲ್ಲ! ಆ ಕನಸುಗಳನ್ನು ಪಕ್ಕಕ್ಕಿಟ್ಟು, ಬಾಹ್ಯಾಕಾಶ ನೌಕೆಯಾಳಗಿನ ಬದುಕು ಹೇಗಿರುತ್ತದೆ ಎಂಬುದನ್ನು ವಿಚಿತ್ರಾನ್ನ-215ನೇ ಸಂಚಿಕೆಯಲ್ಲಿ ಅರಿಯೋಣ.

  • ಶ್ರೀವತ್ಸ ಜೋಶಿ
ಕಿತ್ತಳೆಹಣ್ಣಿನ ರಸದ ಸ್ಯಾಶೆಯನ್ನು ತೆರೆದು ಒಂದು ಹನಿಯನ್ನು ಬೇಕಂತಲೇ ಹೊರಚೆಲ್ಲಿ ತೋರಿಸಿದರು ಕಮಾಂಡರ್‌ ಮೈಕೆಲ್‌ ಲೊಪೆಜ್‌. ನಮ್ಮನಿಮ್ಮ ಮನೆಗಳಲ್ಲಿ ಹೀಗೆ ಹಣ್ಣಿನ ರಸ ಚೆಲ್ಲಿದರೆ ಕಾರ್ಪೆಟ್‌ ಗಲೀಜಾಯಿತೆಂದೋ, ಒಂಚೂರಾದ್ರೂ ಚೆಲ್ಲದೆ ಶಿಸ್ತಾಗಿ ತಿನ್ನುವುದು ಕುಡಿಯುವುದು ಗೊತ್ತೇ ಇಲ್ವಲ್ಲ ದರಿದ್ರಕ್ಕೆ ಎಂದೋ ಹಿಡಿಶಾಪ ಕೇಳಿಸಿಕೊಳ್ಳಬೇಕಾದೀತು!

ಆದರೆ ವ್ಯೋಮಯಾತ್ರಿ ಕಮಾಂಡರ್‌ ಮೈಕೆಲ್‌ ಲೊಪೆಜ್‌ಗೆ ಆ ಸಮಸ್ಯೆಯಿಲ್ಲ. ಏಕೆಂದರೆ ಅವರು ಹಣ್ಣಿನರಸ ಚೆಲ್ಲಿದ್ದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ತನ್ನ ಪ್ರಯೋಗಶಾಲೆಯಲ್ಲಿ. ಸ್ಯಾಶೆಯಿಂದ ಹೊರಬಂದ ರಸದ ಹನಿ ಅಲ್ಲಿ ಕೆಳಬೀಳುವುದಿಲ್ಲ, ಬದಲಿಗೆ ಗೋಲಾಕಾರದ ಚಂದದ ಗುಳ್ಳೆಯಾಗಿ ತೇಲತೊಡಗುತ್ತದೆ. ಅದನ್ನು ಊದಿ ಆಟವಾಡುತ್ತಾರೆ ಲೊಪೆಜ್‌. ಕೊನೆಗೆ ಬಾಯ್ತೆರೆದು ಒಳಸೇರಿಸಿಕೊಳ್ಳುತ್ತಾರೆ. ಹಣ್ಣಿನರಸದ ಬುದ್ಬುದವನ್ನು ತಿನ್ನಲು ಹೊರಚಾಚಿದ ಅವರ ನಾಲಗೆಯ ಜಿಹ್ವಾರಂಧ್ರಗಳು ಸಹಿತ ಅತ್ಯಂತ ಸ್ಪಷ್ಟವಾಗಿ ಕಾಣುತ್ತವೆ, ನಮ್ಮ ಹೈ-ಡೆಫಿನಿಶನ್‌ ಟಿವಿಯಲ್ಲಿ.

ಮೊನ್ನೆ ನವಂಬರ್‌ 15ರಂದು ಇಂಟರ್‌ನ್ಯಾಶನಲ್‌ ಸ್ಪೇಸ್‌ ಸೆಂಟರ್‌ನಿಂದ ಪ್ರಪ್ರಥಮ ಬಾರಿಗೆ ಹೈ-ಡೆಫಿನಿಶನ್‌ ಟೆಲಿವಿಶನ್‌ನಲ್ಲಿ ನೇರಪ್ರಸಾರದ ಕಾರ್ಯಕ್ರಮವಿತ್ತು. ಬಾಹ್ಯಾಕಾಶ ನೌಕೆಯಾಳಗಿನ ಲಿವಿಂಗ್‌ ಹೇಗಿರುತ್ತದೆಯೆಂದು ಜನಸಾಮಾನ್ಯರಿಗೆ ಲಿವಿಂಗ್‌ರೂಮ್‌ನಲ್ಲಿ ಕುಳಿತಲ್ಲಿಂದಲೇ ಒಂದು ಇಣುಕುನೋಟದ ಅವಕಾಶ. ಇತ್ತೀಚೆಗಷ್ಟೇ ಎಚ್‌ಡಿಟಿವಿ ಸೆಟ್‌ನ ‘ಪ್ರೌಡ್‌ ಒನರ್‌’ ಆಗಿ ಡಿಶ್‌ನೆಟ್‌ವರ್ಕ್‌ನ ಎಚ್‌ಡಿ ಸೇವೆಗೆ ಚಂದಾದಾರನಾದ್ದರಿಂದ ನನಗೂ ಈ ಅಪೂರ್ವ ಕಾರ್ಯಕ್ರಮವನ್ನು ವೀಕ್ಷಿಸುವುದು ಸಾಧ್ಯವಾಯಿತು. ತಂತ್ರಜ್ಞಾನದ ಪರಾಕಾಷ್ಠೆಯನ್ನು ಕಂಡು ರೋಮಾಂಚನವಾಯಿತು. ತುಂಬಾ ಖುಶಿಯಾಗಿ ನಿಮ್ಮೊಂದಿಗೆ ಹಂಚಿಕೊಳ್ಳೋಣವೆನಿಸಿತು, ಅದಕ್ಕಾಗಿ ಬರೆದೆ.

*


ಪ್ರಥಮತಃ ‘ಇಂಟರ್‌ನ್ಯಾಶನಲ್‌ ಸ್ಪೇಸ್‌ ಸೆಂಟರ್‌’ ಎಂದರೆ ಏನು? ಭೂಮಿಯಿಂದ ಸುಮಾರು 250 ಮೈಲುಗಳಷ್ಟು ಎತ್ತರದಲ್ಲಿ (ಅಂದರೆ ಬಾಹ್ಯಾಕಾಶದಲ್ಲಿ) ಇರುವ ಪ್ರಯೋಗಶಾಲೆ. 350 ಇನ್‌ಟು 290 ಅಡಿಗಳ ವಿಸ್ತೀರ್ಣದ ಈ ಯಂತ್ರಭವನದಲ್ಲಿ ಆರು ಸುಸಜ್ಜಿತ ಲ್ಯಾಬೊರೆಟರಿಗಳಿವೆ. ವಿದ್ಯುಚ್ಛಕ್ತಿ ಪೂರೈಕೆಗಾಗಿ ಸುಮಾರು ಒಂದೆಕರೆ ವಿಸ್ತೀರ್ಣದ ಸೌರಕೋಶಗಳಿವೆ. ಯುಎಸ್‌ಎ, ಕೆನಡಾ, ಜಪಾನ್‌, ರಷ್ಯಾ, ಬ್ರೆಜಿ‚ಲ್‌ ಮತ್ತು ಯುರೋಪ್‌ನ 11 ದೇಶಗಳ ಸಹಯೋಗದಲ್ಲಿ ಇದು ಕಾರ್ಯವೆಸಗುತ್ತದೆ. ಈ ದೇಶಗಳ ವ್ಯೋಮಯಾತ್ರಿಗಳು ಅಲ್ಲಿಗೆ ಹೋಗಿ-ಬಂದು ಮಾಡುತ್ತಿರುತ್ತಾರೆ. ಸದ್ಯಕ್ಕೆ ಕಮಾಂಡರ್‌ ಮೈಕೆಲ್‌ ಲೊಪೆಜ್‌ ನೇತೃತ್ವದ ವಿಜ್ಞಾನಿಗಳ ‘ಎಕ್ಸ್‌ಪೆಡಿಶನ್‌-14’ ತಂಡ (ಇದರಲ್ಲಿ ಭಾರತೀಯ ಮೂಲದ ಸುನಿತಾ ವಿಲಿಯಮ್ಸ್‌ ಸಹ ಇದ್ದಾರೆ) ಈ ಪ್ರಯೋಗಶಾಲೆಯಲ್ಲಿದೆ.

ಅಲ್ಲಿ ವ್ಯೋಮಯಾನಿಗಳ ದೈನಂದಿನ ಜೀವನ ಹೇಗಿರುತ್ತದೆ? ಅವರ ಚಟುವಟಿಕೆಗಳೇನು? ಹಸಿವು-ಬಾಯಾರಿಕೆಗಳನ್ನು ಅವರು ಹೇಗೆ ನೀಗಿಸಿಕೊಳ್ಳುತ್ತಾರೆ? ಭೂಕಕ್ಷೆಯಿಂದ ಹೊರಡುವಾಗ ಮತ್ತು ಹಿಂದಿರುಗುವಾಗ ಅವರೆಲ್ಲ ಧರಿಸಿಕೊಳ್ಳುವ ಕೇಸರಿಬಣ್ಣದ ಐದಿಂಚುದಪ್ಪದ ಉಡುಪುಗಳನ್ನೇ ಸದಾಕಾಲ ಧರಿಸಿರುತ್ತಾರೆಯೇ? ಅಂಥ ಉಡುಪು ಹಾಕಿಕೊಂಡಿರುವಾಗ ಬೆನ್ನು ತುರಿಸಲಾರಂಭಿಸಿದರೆ ಏನು ಮಾಡುತ್ತಾರೆ? ಹಗಲು-ರಾತ್ರಿ ಮತ್ತು ಋತುಬದಲಾವಣೆಗಳೇ ಇಲ್ಲದೆ ಒಂಥರಾ ವಿಚಿತ್ರಜೀವಿಗಳಾಗಿಬಿಡುತ್ತಾರಾ?... ನಮ್ಮಂಥ ಕುತೂಹಲಿಗಳಿಗೆ ಈ ರೀತಿಯ ಪ್ರಶ್ನೆಗಳು ಅನೇಕವಿರುತ್ತವೆಯಲ್ಲವೆ? ಅಂತಹ ಪ್ರಶ್ನೆಗಳಿಗೆ ಉತ್ತರ ಕೊಡಲಿಕ್ಕೆಂದೇ ಮೊನ್ನೆಯ ನೇರಪ್ರಸಾರ ಕಾರ್ಯಕ್ರಮವಿದ್ದದ್ದು.

ರೇಡಿಯಾದಲ್ಲಿ, ಟಿವಿಯಲ್ಲಿ ‘ನೇರಪ್ರಸಾರ’ದ ರೋಮಾಂಚನ ನಮಗೆ ಹೊಸತೇನಲ್ಲ. ಅದರಲ್ಲೂ ಕ್ರಿಕೆಟ್‌ ಹುಚ್ಚು ಇರುವವರಂತೂ ‘ಲೈವ್‌’ ಟೆಲಿಕಾಸ್ಟ್‌/ಕಾಮೆಂಟರಿ ಇಲ್ಲದಿದ್ದರೆ ‘ಡೆಡ್‌’ ಆಗಿಬಿಡುತ್ತೇವೆ. 1983ರಲ್ಲಿ ಲಾರ್ಡ್ಸ್‌ನಲ್ಲಿ ಕಪಿಲ್ಸ್‌-ಡೆವಿಲ್ಸ್‌ ಬಿರುಗಾಳಿಗೆ ವೆಸ್ಟ್‌ಇಂಡೀಸ್‌ ತತ್ತರಗೊಂಡು ಭಾರತವು ವರ್ಲ್ಡ್‌ಕಪ್‌ ಗೆದ್ದದ್ದನ್ನು ರೇಡಿಯಾಗೆ ಕಿವಿಯಾಲಿಸಿ ಕ್ಷಣಕ್ಷಣವೂ ಅನುಭವಿಸಿ ಆನಂದಿಸಿದವರೇ ತಾನೆ ನಾವೆಲ್ಲ? ದೂರದರ್ಶನ ಬಂದ ಮೇಲಂತೂ ಈಗ ಕ್ರಿಕೆಟ್‌, ಫುಟ್‌ಬಾಲ್‌ ಮಾತ್ರವಲ್ಲದೆ ಸಭೆಸಮಾರಂಭಗಳೂ ನೇರಪ್ರಸಾರಗೊಳ್ಳುತ್ತವೆ - ಕೆಂಪುಕೋಟೆಯಿಂದ ಪ್ರಧಾನಿ ಭಾಷಣದಿಂದ ಹಿಡಿದು ಕೊಳಕುರಾಜಕಾರಣಿಯ ಸತ್ಯನಡತೆಯ ಪ್ರಮಾಣವಚನ ಸ್ವೀಕಾರದವರೆಗೂ. ಗಣ್ಯರ ಅಂತ್ಯಸಂಸ್ಕಾರಗಳಿಂದ ಹಿಡಿದು ಆ ವೇಳೆ ಅಭಿಮಾನದ ವೇಷದಲ್ಲಿ ಕಿಡಿಗೇಡಿಗಳು ಮಾಡುವ ದುಷ್ಕೃತ್ಯಗಳವರೆಗೂ ಎಲ್ಲವನ್ನೂ ‘ಲೈವ್‌’ ನೋಡುವ ಸೌಭಾಗ್ಯ ಈಗ ನಮಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X