• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಕ್‌ಟೈಲೂ ಕುಕ್ಕುಟಪುಚ್ಛಭಸ್ಮವೂ...

By Staff
|
Srivathsa Joshi *ಶ್ರೀವತ್ಸ ಜೋಶಿ

ಔಟ್‌ಸೆಟ್ಟಿನಲ್ಲೇ (at the outset) ಒಂದು ಮಾತನ್ನು ಒಪ್ಪಿಸಿಬಿಡುತ್ತೇನೆ - ‘ಕಾಕ್‌ಟೈಲ್‌’ ಬಗ್ಗೆಯಾಗಲೀ ಅದರ ಪರಬ್ರಹ್ಮಾನಂದ ಸ್ವರೂಪದ ಬಗ್ಗೆಯಾಗಲೀ, ಮತ್ತೇರುವಂತೆ ಮಾತಾಡಲು ಅಥವಾ ಬರೆಯಲು ನಾನು ಅರ್ಹನಲ್ಲ. ಟೀಟೋಟ್ಲರ್‌ (ಟೋಟಲೀ ಟೀ ಮಾತ್ರ ಕುಡಿಯುವವನು?) ಆಗಿರುವ ನಾನು ಕಾಕ್‌ಟೈಲ್‌ ರಸಾನುಭವಕ್ಕೆ ತಕ್ಕುದಾದ ನ್ಯಾಯವೊದಗಿಸುತ್ತೇನೆ ಎಂದು ಹೇಳಲಾರೆ. ಆದರೆ ನನ್ನ ಫೇವರಿಟ್‌ ವಿಷಯವಾದ ಶಬ್ದನಿಷ್ಪತ್ತಿ (etimology)ಯಲ್ಲಿನ ನನ್ನ ಆಸಕ್ತಿಯನ್ನು ಇವತ್ತು ಕಾಕ್‌ಟೈಲ್‌ ಎಂಬ ಪದದ ಮೇಲೆ ಕೇಂದ್ರೀಕರಿಸಬೇಕೆಂದಿದ್ದೇನೆ. ಹೇಗಿದ್ದರೂ ಈ ಕ್ಯಾಲೆಂಡರ್‌ ವರ್ಷಕ್ಕಿದು ಕೊನೆಯ ಸಂಚಿಕೆ, ಹಾಗಾಗಿ at the tail end of the year, ಇವತ್ತು ಕಾಕ್‌ಟೈಲ್‌ ಬಗ್ಗೆ ಒಂದು ವಿಚಿತ್ರಾನ್ನವನ್ನು ಕುಕ್ಕಿಸೋಣ.

ಹೊಸವರ್ಷವನ್ನು ಸ್ವಾಗತಿಸಲು ಒಂದು ಸ್ವಲ್ಪ ಸೋಮರಸವನ್ನು ಸೇವಿಸುವ ಅಭ್ಯಾಸ ನಿಮ್ಮಲ್ಲಾರಿಗಾದರೂ ಇದ್ದರೆ ಇವತ್ತಿನ ಸಂಚಿಕೆಯ ವಿಷಯ ಸಕಾಲಿಕವೂ, ಸಂದರ್ಭೋಚಿತವೂ ಆಗಿದೆಯೆಂದು ಹೇಗೂ ಅನುಮೋದಿಸುತ್ತೀರಿ ತಾನೆ? ಏಕೆಂದರೆ,

ಬರುತ್ತಿರುವುದು ಹೊಸವರ್ಷ ಇಸ್ವಿ ಎರಡುಸಾವಿರದಾರು

ಭವ್ಯಸ್ವಾಗತ ನೀಡಲು ಏರಿಸಿಕೊಳ್ಳಬೇಕು ಸ್ವಲ್ಪ ‘ದಾರು’?

*

ಋಷಿಮೂಲ ನದೀಮೂಲ ಇತ್ಯಾದಿಯನ್ನೆಲ್ಲ ಕೆದಕಬಾರದು ಎನ್ನುವ ಅನುಭವನುಡಿಯನ್ನು ಪ್ರಾಯಶಃ ಕಾಕ್‌ಟೈಲ್‌ ಮೂಲಕ್ಕೂ ಅನ್ವಯಿಸಬಹುದೆಂದು ಕಾಣುತ್ತದೆ. ಯಾಕೆಂದರೆ ಕಾಕ್‌ಟೈಲ್‌ ಪದ ಮತ್ತು ಪದ್ಧತಿಯ ಮೂಲದ ಬಗ್ಗೆ ಅನೇಕಾನೇಕ ಐತಿಹ್ಯಗಳು ಸಿಗುತ್ತವೆ. ಒಂದೊಂದೂ ಸಾಕಷ್ಟು ಕುತೂಹಲಕರವಾದದ್ದು ಮತ್ತು ಹಾಗೆಯೇ ಇರಲೂಬಹುದೇನೊ ಎಂದು ನಂಬುವಂಥದ್ದು. ಈ ಎಲ್ಲ ಕಟ್ಟುಕಥೆಗಳ ಒಂದು ಸಾಮಾನ್ಯಾಂಶವೆಂದರೆ ಕಾಕ್‌ಟೈಲ್‌ ಪಕ್ಕಾ ಅಮೆರಿಕನ್‌ ಸಂಸ್ಕೃತಿಯಿಂದ ಉದ್ಭವಿಸಿದ್ದು. ಇಂಗ್ಲಿಷ್‌ ಭಾಷೆಗೆ ಈ ಪದವನ್ನು ಸೇರಿಸಿದವರು ಅಮೆರಿಕನ್ನರು.

ಕಾಕ್‌ಟೈಲ್‌ ಪದಮೂಲದ ಬಗ್ಗೆ ಕೆಲವು ಥಿಯರಿಗಳು ಹೀಗಿವೆ :

- ಪೆನ್ಸಿಲ್ವೇನಿಯಾ ಸಂಸ್ಥಾನದಲ್ಲಿ ಒಂದು ‘ಶರಾಬು ಅಂಗಡಿ’ಯನ್ನಿಟ್ಟುಕೊಂಡಿದ್ದ ಬೆಟ್ಸಿ ಫ್ಲೆನಿಗನ್‌ ಎನ್ನುವ ಮಹಿಳೆ ತನ್ನ ಗಿರಾಕಿಗಳಿಗೆ ಕೊಡುತ್ತಿದ್ದ ಮದ್ಯದ ಗ್ಲಾಸ್‌ಗೆ ಒಂದು ಕೋಳಿಗರಿಯನ್ನು ಸಿಕ್ಕಿಸಿ ಕೊಡುವ ಪರಿಪಾಠವನ್ನಿಟ್ಟುಕೊಂಡಿದ್ದಳಂತೆ. ಆಗಿನದು ಅಮೆರಿಕನ್‌ ಕ್ರಾಂತಿಯ ಯುದ್ಧದ ಸಮಯ. ಬೆಟ್ಸಿಯ ಮದ್ಯಗಿರಾಕಿಗಳಲ್ಲಿ ಸೈನಿಕರೂ ಇರುತ್ತಿದ್ದರು, ಅವರು ಈರೀತಿ ಕೋಳಿಗರಿಯಿಂದ ಸಾಲಂಕೃತ ಮದ್ಯವನ್ನು ಅರ್ಥಪೂರ್ಣವಾಗಿಯೇ ಕಾಕ್‌ಟೈಲ್‌ ಎಂದು ಕರೆಯತೊಡಗಿದರೆಂದು ಕಾಣುತ್ತದೆ.

- ‘ಕೋಳಿಅಂಕ’ ರೀತಿಯ ಜೂಜಾಟ (ದಕ್ಷಿಣಕನ್ನಡದಲ್ಲಿ ಈಗಲೂ ಅದೊಂದು ಗ್ರಾಮೀಣ ಕ್ರೀಡೆಯಾಗಿದೆ) ಶತಮಾನಗಳ ಹಿಂದೆ ಅಮೆರಿಕದ ಗ್ರಾಮೀಣ ಪ್ರದೇಶಗಳಲ್ಲೂ ಚಾಲ್ತಿಯಲ್ಲಿತ್ತು. ರಣರಂಗಕ್ಕಿಳಿಯುವ ಮೊದಲು ಕೋಳಿಗಳಿಗೆ ವಿವಿಧ ಮದ್ಯಗಳ ಮಿಶ್ರಣದಲ್ಲಿ ಅದ್ದಿದ ಬ್ರೆಡ್‌ಅನ್ನು ತಿನಿಸುವ ಕ್ರಮವಿತ್ತು. ಅದಕ್ಕೆ ಇಂಗ್ಲಿಷಲ್ಲಿ cock ale ಎಂದು ಹೆಸರು. ಕೋಳಿಯಂಕದಲ್ಲಿ ಜಯಶಾಲಿಯಾದ ಕೋಳಿಯ ಒಡೆಯನಿಗೆ ಟೋಸ್ಟ್‌ ಆಗಿ ಮದ್ಯ ಸಮಾರಾಧನೆ. ಅವನ ಕೋಳಿಯ ಬಾಲದಲ್ಲಿ ಎಷ್ಟು ಗರಿಗಳು ಉಳಿದಿವೆಯಾ ಅಷ್ಟು ಸಂಖ್ಯೆಯ ಗರಿಗಳಿಂದ ಮದ್ಯದ ಗ್ಲಾಸ್‌ಗೆ ಅಲಂಕಾರ.

- ಫ್ರಾನ್ಸ್‌ನಲ್ಲಿ ಹದಿನೆಂಟನೆಯ ಶತಮಾನದಲ್ಲಿ ಜನಪ್ರಿಯವಾಗಿದ್ದ coquetel ಎಂಬ ವೈನ್‌-ಮಿಶ್ರಣವು, 1777ರಲ್ಲಿ ಜನರಲ್‌ ಲಾಫಯೆಟ್‌ ಅಮೆರಿಕೆಗೆ ಸೈನ್ಯಾಧಿಕಾರಿಯಾಗಿ ಬಂದಾಗ ಅವನ ಮೂಲಕ ಅಮೆರಿಕದಲ್ಲೂ ಪ್ರಸಿದ್ಧವಾಯಿತು. ಹೆಸರು ಮಾತ್ರ ಇಲ್ಲಿನವರ ಬಾಯಲ್ಲಿ cocktail ಆಯಿತು.

- ದೊಡ್ಡ ದೊಡ್ಡ ಪೀಪಾಯಿಗಳಲ್ಲಿಟ್ಟು ಮದ್ಯವನ್ನು ಮಾರುತ್ತಿದ್ದಾಗ ಕೊನೆಗೆ ಅವುಗಳ ತಳದಲ್ಲಿ ಉಳಿದಿರುತ್ತಿದ್ದ ಅಲ್ಪಸ್ವಲ್ಪ ಮದ್ಯವನ್ನು ಪೀಪಾಯಿಯ ಕೆಳಭಾಗದಲ್ಲಿರುತ್ತಿದ್ದ ಕೋಳಿಯಾಕಾರಾದ ಕೊಳವೆಯ ಮೂಲಕ ಒಟ್ಟುಸೇರಿಸಿ, ಬೇರೆಬೇರೆ ಮದ್ಯಗಳಾಗಿದ್ದರೂ ಅವನ್ನೆಲ್ಲ ಕಲಸಿ ಮತ್ತೆ ಮಾರುತ್ತಿದ್ದರಂತೆ. ಹೀಗೆ ಮಾರಲ್ಪಡುವ ಮದ್ಯಮಿಶ್ರಣಕ್ಕೆ ಕಾಕ್‌ಟೈಲ್‌ ಎಂಬ ಹೆಸರು ಬಂದಿರಬಹುದು.

- ಮಿಶ್ರತಳಿಯ ಕುದುರೆಗಳನ್ನು ಅವುಗಳ ಬಾಲದ ವಿಶೇಷತೆಯಿಂದ (ಅದು ಕೋಳಿಬಾಲದಂತೆ ಇರುತ್ತಿದ್ದುದರಿಂದ) ಗುರುತಿಸಲಾಗುತ್ತಿತ್ತಂತೆ. ಅವು ಕಾಕ್‌ಟೈಲ್‌ ಕುದುರೆಗಳು. ಮದ್ಯತಯಾರಿ/ಮಾರಾಟದಲ್ಲೂ ‘ಮಿಶ್ರತಳಿ’ ಪ್ರಾಕ್ಟೀಸ್‌ ಶುರುವಾದಾಗ ಅದಕ್ಕೆ ಕಾಕ್‌ಟೈಲ್‌ ಎನ್ನುವ ಹೆಸರಾಯಿತು.

- ಪಶ್ಚಿಮ ಆಫ್ರಿಕಾದ ಬುಡಕಟ್ಟು ಜನಾಂಗದ ಭಾಷೆಯಲ್ಲಿ kaketal ಎಂದರೆ ಚೇಳು ಎಂದರ್ಥ. ತಥಾಕಥಿತ ಕಾಕ್‌ಟೈಲ್‌ ಕುಡಿಯುವಾಗಿನ ‘ಚೇಳು ಕಡಿದಂಥ ಅನುಭವ’ದಿಂದಾಗಿ ಅದಕ್ಕೆ kaketalನ ಅಪಭ್ರಂಶವಾಗಿ cocktail ಎಂಬ ನಾಮಕರಣ.

- ಲೂಸಿಯಾನಾ ಸಂಸ್ಥಾನದ ನ್ಯೂ ಆರ್ಲಿಯೆನ್ಸ್‌ (ಅದೇ, ಮೊನ್ನೆಮೊನ್ನೆ ‘ಕಟ್ರೀನಾ’ದಿಂದ ಕಂಗೆಟ್ಟ ಪ್ರದೇಶ)ದಲ್ಲಿನ ಒಬ್ಬ ಔಷಧವ್ಯಾಪಾರಿ ಅಥವಾ ಅಳಲೆಕಾಯಿ ಪಂಡಿತ, ಆಂಟೊನಿ ಪೆಚೌಡ್‌ ಎಂಬವನು, ಸಕಲವ್ಯಾಧಿಗಳಿಗೂ ರಾಮಬಾಣವಾದ ಕಷಾಯಗಳಿಗೆ ವಿಶೇಷವಾಗಿ ಪ್ರಸಿದ್ಧನಾಗಿದ್ದನಂತೆ. ಕಹಿಮೂಲಿಕೆಗಳು, ಸಕ್ಕರೆ, ನೀರು, ಒಂದಿಷ್ಟು ಬ್ರಾಂಡಿ - ಇವುಗಳ ಮಿಶ್ರಣದ ಕಷಾಯವನ್ನು ಅವನು ಕೋಳಿಮೊಟ್ಟೆಯಾಕಾರದ ಪಾತ್ರೆಯಾಂದರಲ್ಲಿ ಕುಡಿಯಲಿಕ್ಕೆ ಕೊಡುತ್ತಿದ್ದದ್ದು. ಆಂಟೊನಿಯ ಕಷಾಯ ಎಷ್ಟು ಪ್ರಸಿದ್ಧವೋ ಅವನ ಆ ಔಷಧಪಾತ್ರೆಯೂ ಅಷ್ಟೇ ಪ್ರಸಿದ್ಧವಾಗಿತ್ತು. ಫೆಂಚ್‌ ಭಾಷೆಯಲ್ಲಿ ಅಂಥ ಪಾತ್ರೆಗೆ coquetier ಎನ್ನುವುದರಿಂದ ಆಂಟೊನಿಯ ಕಷಾಯಕ್ಕೇ ಇಂಗ್ಲಿಷಲ್ಲಿ ಕಾಕ್‌ಟೈಲ್‌ ಎಂಬ ಹೆಸರು ಬಂತು. ಕ್ರಮೇಣ ಎಲ್ಲರೀತಿಯ ಮದ್ಯಮಿಶ್ರಣಕ್ಕೂ ಅದೇ ಹೆಸರಾಯಿತು.

ಇಂಥ ರಂಜನೀಯ ಚರಿತ್ರೆಯುಳ್ಳ ‘ಕಾಕ್‌ಟೈಲ್‌’ ಮೊಟ್ಟಮೊದಲಿಗೆ ಲಿಖಿತದಾಖಲೆಯಲ್ಲಿ ಉಲ್ಲೇಖವಾದದ್ದು 1806ರಲ್ಲಿ ನ್ಯೂಯಾರ್ಕ್‌ನ ಒಂದು ವಾರ್ತಾಪತ್ರಿಕೆಯಲ್ಲಿ. ಆಗ ಅದನ್ನು a stimulating liquor, composed of spirits of any kind, sugar, water and bitters and is supposed to be an excellent electioneering potion ಎಂದು ವಿವರಿಸಲಾಗಿತ್ತು. ಅಂದರೆ ರಾಜಕಾರಣ ಸಂಬಂಧಿ ಔತಣಕೂಟಗಳ ರಂಗೇರಿಸಲು ಕಾಕ್‌ಟೈಲ್‌ ಪ್ರಥಮತಃ ಕಾಣಿಸಿಕೊಂಡದ್ದು. ‘ಮ್ಯಾನ್‌ಹಟ್ಟನ್‌’, ‘ಮಾರ್ಟಿನಿ’, ‘ಓಲ್ಡ್‌ ಫ್ಯಾಷನ್ಡ್‌’ ಮೊದಲಾದ ಹೆಸರುವಾಸಿ ಕಾಕ್‌ಟೈಲ್‌ ಪ್ರಕಾರಗಳು ಪ್ರಸಿದ್ಧಿಗೊಂಡದ್ದು; ಕಾಕ್‌ಟೈಲ್‌ನಿಂದಾಗಿಯೇ ಇಂಗ್ಲಿಷ್‌ ಭಾಷೆಯಲ್ಲಿ Cocktail hour, Cocktail party, Cocktail longue, Cocktail dress ಮೊದಲಾದ ಪದಪ್ರಯೋಗ ಶುರುವಾದದ್ದು.

ಆಶ್ಚರ್ಯವೆಂದರೆ ಆ ಕಾಲದಲ್ಲಿ (19, 20ನೇ ಶತಮಾನಗಳಲ್ಲಿ) ಪಾಶ್ಚಾತ್ಯ ದೇಶಗಳಲ್ಲಿ ವಿಪರೀತ ಪ್ರಮಾಣದಲ್ಲಿದ್ದ ಆಲ್ಕೋಹಾಲ್‌ ಸೇವನೆ ಕ್ರಮೇಣ ಕಡಿಮೆಯಾಗತೊಡಗಿತು. ಅದಕ್ಕನುಗುಣವಾಗಿಯೇ ‘ಕಾಕ್‌ಟೈಲ್‌’ ಎಂಬ ಪದವನ್ನು ಸಹ ಆಲ್ಕೊಹಾಲ್‌ ಹೊರತಾಗಿಯೂ ಉಪಯೋಗಿಸುವ ರೂಢಿ ಬಂತು. ಯಾವುದೇ ‘ಸ್ಟಿಮ್ಯುಲೇಟಿಂಗ್‌’ ಮಿಕ್ಸ್ಚರ್‌ ಇದ್ದರೂ ಅದಕ್ಕೆ ಕಾಕ್‌ಟೈಲ್‌ ಎಂಬ ವಿಶೇಷಣದ ಬಳಕೆ ಶುರುವಾಯಿತು - Fruit cocktail, Shrimp cocktail ಇತ್ಯಾದಿ. ಎಷ್ಟೆಂದರೆ ವಿವಿಧ ಸ್ಫೋಟಕ ಸಾಮಗ್ರಿಗಳ ಮಿಶ್ರಣಕ್ಕೆ (ಆತ್ಮಹತ್ಯಾದಳದ ಮಾನವ ಬಾಂಬ್‌ಗಳು ಉಪಯೋಗಿಸುವುದು ಅದನ್ನೇ) ಸಹ Molotov cocktail ಎಂಬ ಹೆಸರು!

ಕುಕ್ಕುಟಪುಚ್ಛ ಭಸ್ಮ!

ಹೈದರಾಬಾದ್‌ನಲ್ಲಿದ್ದಾಗ ನನ್ನ ಸಹೋದ್ಯೋಗಿಯಾಬ್ಬರ ತಂದೆಯವರು ನನಗೆ ಪರಿಚಯವಾಗಿ ಸ್ನೇಹಿತರಾಗಿದ್ದರು. ಅವರ ಹೆಸರು ಚಿದಂಬರಂ ಅಯ್ಯರ್‌ ಎಂದು. ಧರ್ಮಭೀರುವೂ ದೈವಭಕ್ತರೂ ಆದ ಅವರು ಎಂಬತ್ತರ ಆಸುಪಾಸಿನ ವಯೋವೃದ್ಧರಾಗಿದ್ದರೂ ಜೀವನೋತ್ಸಾಹ, ಲವಲವಿಕೆ ತುಂಬಿತುಳುಕುತ್ತಿದ್ದವರು. ಸತತ ಹದಿನೆಂಟು ಬಾರಿ ಶಬರಿಮಲೆಗೆ ಹೋಗಿಬಂದವರವರು! ದಕ್ಷಿಣಭಾರತದ ನಾಲ್ಕೂ ಪ್ರಮುಖ ಭಾಷೆಗಳಷ್ಟೇ ಅಲ್ಲದೆ ಇಂಗ್ಲಿಷ್‌-ಹಿಂದಿ-ಸಂಸ್ಕೃತ ಸಹ ಬಲ್ಲವರು, ಸ್ನೇಹಜೀವಿ ಮತ್ತು ಸರಳವ್ಯಕ್ತಿ.

ಚಿದಂಬರಂ ಅವರು ತನ್ನ ಜೋಳಿಗೆಚೀಲದಲ್ಲಿ ಭಸ್ಮದ ಒಂದು ಪುಟ್ಟ ಕರಂಡಕವನ್ನಿಟ್ಟುಕೊಂಡಿರುತ್ತಿದ್ದರು. ಅದು ಅವರ ನೂರಾರು ತೀರ್ಥಯಾತ್ರೆಗಳಲ್ಲಿ ಶೇಖರಣೆಯಾದ, ಎಲ್ಲ ಕ್ಷೇತ್ರಗಳ ಭಸ್ಮವನ್ನೂ ಒಟ್ಟುಮಾಡಿಟ್ಟ ಕರಂಡಕ. ಅದರಿಂದಾಗಿ ತನಗೆ ಒಂದುರೀತಿಯ ರಕ್ಷಣೆ ಮತ್ತು ಅದೃಷ್ಟ ಲಭಿಸುತ್ತದೆ ಎಂದು ಅವರದೊಂದು ನಂಬಿಕೆ. ಆಬಗ್ಗೆ ವಿಶೇಷವಾಗಿ ಪ್ರಚಾರ-ಪ್ರಶಂಸೆಗಳನ್ನೇನೂ ಅವರು ಮಾಡುತ್ತಿರಲಿಲ್ಲವಾದರೂ ಸಾಕಷ್ಟು ಪೂಜ್ಯಭಾವ ಖಂಡಿತವಾಗಿಯೂ ಇತ್ತು.

ಯಾವುದೋ ಒಂದು ಸಂದರ್ಭದಲ್ಲಿ ನನಗೆ ಅವರು ಆ ಭಸ್ಮದ ಒಂದು ಸಣ್ಣ ಪ್ಯಾಕೇಟ್‌ ಮಾಡಿಕೊಟ್ಟಿದ್ದರು; ದಿನಾ ಬೆಳಿಗ್ಗೆ ಮತ್ತು ಸಂಜೆ ಹಚ್ಚಿಕೊಳ್ಳುವಂತೆ ಶಿಫಾರಸು ಮಾಡಿದ್ದರು. ಏನು ಆ ಭಸ್ಮದ ವಿಶೇಷ ಎಂದು ನಾನು ಕೇಳಿದ್ದಕ್ಕೆ ಅವರು ಕೊಟ್ಟಿದ್ದ ಉತ್ತರ ಮಾತ್ರ ಸಕ್ಕತ್ತಾಗಿತ್ತು : Just like how cocktail drink gives you a good kick, this cocktail bhasma gives you a good luck! ಎಂಬ ಅವರ ಉವಾಚ ನನಗೆ ಮಜಾ ಎನಿಸಿತ್ತು - ಅಸಲಿ ಕಾಕ್‌ಟೈಲ್‌ ಸಂಗತಿ ಚಿದಂಬರಂಗಾಗಲೀ ನನಗಾಗಲೀ ಗೊತ್ತೇ ಇಲ್ಲವಾದರೂ! ಅವತ್ತಿಂದ ಅದನ್ನು ನಾವು ‘ಕಾಕ್‌ಟೈಲ್‌ ಭಸ್ಮ’ ಎಂದೇ ಕರೆಯುತ್ತಿದ್ದೆವು.

ಚಿದಂಬರಂ ಅವರು ಕೊಟ್ಟ ಭಸ್ಮದ ಪ್ಯಾಕೇಟನ್ನು ನಾನು ಜೋಪಾನವಾಗಿ ಇಟ್ಟುಕೊಂಡೆ. ನೆನಪಾದರೆ ಯಾವಾಗಾದರೂ ಒಮ್ಮೊಮ್ಮೆ ಅದನ್ನು ಒಂಚೂರು ಹಚ್ಚಿಕೊಂಡದ್ದೂ ಇದೆ, ಆದರೆ ಆ ಭಸ್ಮದ ಪವರ್‌ಗಿಂತ ಅದಕ್ಕೆ ನಾವು ಕೊಟ್ಟ ಹೆಸರಿನ ಬಗ್ಗೆ ನನಗೆ ಹೆಚ್ಚಿನ ಕಾಳಜಿ. ಸಕಲ ತೀರ್ಥಕ್ಷೇತ್ರಗಳ ಸಂಗ್ರಹಿತ ಭಸ್ಮ ಅದಾದ್ದರಿಂದ ಕಾಕ್‌ಟೈಲ್‌ ಎಂದಿದ್ದರಲ್ಲಿ ತಪ್ಪಿಲ್ಲ, ಆದರೆ ಎಷ್ಟೆಂದರೂ ಪರಮಪೂಜ್ಯವಾದ ಭಸ್ಮಕ್ಕೆ ಆ ಪದವನ್ನು ಅಂಟಿಸುವುದು ಭಸ್ಮವನ್ನು ಹಚ್ಚಿಕೊಳ್ಳದಿರುವ ಪಾಪಕ್ಕಿಂತಲೂ ಹೆಚ್ಚಿನದು; ಹಾಗಾಗಿ ಭಸ್ಮದ ಹೆಸರನ್ನು ಸಂಸ್ಕೃತೀಕರಣಗೊಳಿಸಲು ನಿರ್ಧರಿಸಿದ ನಾನು ಅದರ ವರ್ಡ್‌-ಟು-ವರ್ಡ್‌ ಭಾಷಾಂತರ ಮಾಡಿ ‘ ಕುಕ್ಕುಟ ಪುಚ್ಛ ಭಸ್ಮ’ ಎಂಬ ಹೆಸರನ್ನು ಸೂಚಿಸಿದೆ, ಚಿದಂಬರಂ ನಗುಮೊಗದಿಂದ ಅದನ್ನು ಅನುಮೋದಿಸಿದರು!

ಇತಿ ಕುಕ್ಕುಟಪುಚ್ಛಭಸ್ಮ ಪುರಾಣಂ ಸಮಾಪ್ತಂ ।।

*

ವಿಚಿತ್ರಾನ್ನ ಓದುಗರಿಗೆಲ್ಲ ಮುಂಗಡವಾಗಿ ಹೊಸವರ್ಷದ ಶುಭಾಶಯಗಳು.

- srivathsajoshi@yahoo.com

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more