Get Updates
Get notified of breaking news, exclusive insights, and must-see stories!

ಜ್ಯೋತಿ ಬೆಳಗುವ ಅನುಭೂತಿ : ಮಂಗಳಾರತಿ

Srivathsa Joshi *ಶ್ರೀವತ್ಸ ಜೋಶಿ

Managalaarati - an enlightening ritual‘ ದೂರದ ಗುಡಿಯಲಿ ಪೂಜೆಯ ವೇಳೆಗೆ ಘಂಟೆಯು ಮೊಳಗಿತ್ತು... ಟಂ ಢಂ ಟಂ ಢಂ ಎನ್ನುತ ಸೇವೆಗೆ ಎಲ್ಲರ ಕರೆದಿತ್ತು... ಅದಕೇಳಿ ನಾ ಮೈ ಮರೆತೆ...’ ಅಂತ ಮುಂದುವರಿಯುತ್ತದಲ್ಲವೆ ಆ ಹಾಡಿನ ಚರಣ? ಗುಡಿಯಲ್ಲಿ ಪೂಜೆ ನಡೆದಿದ್ದು, ಇದೀಗ ಮಹಾಮಂಗಳಾರತಿಯ ಸಮಯವೆಂದುಕೊಳ್ಳಿ, ಅದೆಂಥ ಧಾವಂತದ ಚಟುವಟಿಕೆಯಲ್ಲಿ ನಾವು ಮುಳುಗಿದ್ದರೂ, ದೇವಸ್ಥಾನದಲ್ಲಿ ದೇವರಿಗೆ ಮಹಾಮಂಗಳಾರತಿ ನಡೆಯುತ್ತಿದೆ ಎಂಬ ಕಲ್ಪನೆಯೇ ಒಂದುಕ್ಷಣದ ರೋಮಾಂಚನವನ್ನು, ಕ್ಷಣಿಕವಾದರೂ ಭಕ್ತಿಪರವಶಭಾವದ ಪುಳಕವನ್ನು ಕೊಡುತ್ತದಲ್ಲವೆ? ಶಂಖ-ಜಾಗಟೆ-ಘಂಟೆಗಳ ಧ್ವನಿ, ಮಂತ್ರಘೋಷಗಳು ಒಂದೊಮ್ಮೆ ನಮ್ಮ ಕಿವಿತುಂಬಿ ಮೈದುಂಬಿ ವಿದ್ಯುತ್‌ಸಂಚಾರ ಮಾಡಿಸುತ್ತದಲ್ಲವೆ? ನಿಜವಾಗಿಯೂ ಅದೊಂದು ದಿವ್ಯವಾದ ಅದ್ಭುತವಾದ ಹಿತಾನುಭವ; ಮಂಗಳಾರತಿಯದು ಅದೊಂದು ಅಗೋಚರ ಅಮೋಘವಾದ ಶಕ್ತಿ.

ದೇವರಿಗೆ ನಾವು ಸಲ್ಲಿಸುವ ಅರ್ಚನೆ-ಉಪಾಸನೆಗಳ ವಿಧಿವಿಧಾನಗಳು ಅದೆಷ್ಟೋ ಇದ್ದರೂ ನಮ್ಮ ಮನಸ್ಸಿಗೆ ಅತ್ಯಂತ ಆಪ್ಯಾಯಮಾನವೆನಿಸುವುದು, ಪರಮಾವಧಿಯಲ್ಲಿ ತನ್ಮಯತೆ-ಧನ್ಯತಾಭಾವವನ್ನು ಕೊಡುವುದು, ಪೂಜಾವಿಧಿಯ ಉತ್ತುಂಗಕ್ಷಣವಾದ ಮಹಾಮಂಗಳಾರತಿ ಎಂದರೆ ಅತಿಶಯೋಕ್ತಿಯಾಗದು ಅಲ್ಲವೆ? ಅಂತಹ ಅನಿರ್ವಚನೀಯ ಅನುಭೂತಿಯನ್ನು ತರುವ ‘ ಮಂಗಳಾರತಿ’ಯ ಬಗ್ಗೆ ಇವತ್ತಿನ ಲೇಖನ; ಒಂದಿಷ್ಟು ನೆನಪುಗಳು, ಒಂದಿಷ್ಟು ವ್ಯಾಖ್ಯಾನ - ಎಂದಿನಂತೆಯೇ ವಿಚಿತ್ರಾನ್ನ ಶೈಲಿಯಲ್ಲಿ!

*

ನಾನು ಐದನೆಯ ತರಗತಿಯವರೆಗೆ ಕಲಿತ ನಮ್ಮೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ (ಅದು ಆಗ ಏಕೋಪಾಧ್ಯಾಯ ಶಾಲೆ) ಪ್ರತಿ ಶುಕ್ರವಾರ ಕೊನೆಯ ಅವಧಿ ‘ಭಜನೆ’ಗೆ ಮೀಸಲಾಗಿರುತ್ತಿತ್ತು. ಐದೂ ತರಗತಿಗಳವರು ಸೇರಿ ನಾವಿದ್ದದ್ದು ಸುಮಾರು 25 ಅಥವಾ 30 ವಿದ್ಯಾರ್ಥಿಗಳು. ಅರ್ಧ ಗಂಟೆಯ ಭಜನೆಯ ಕೊನೆಯಲ್ಲಿ ಎಲ್ಲರೂ ಎದ್ದುನಿಂತು ಕೈಮುಗಿಯುತ್ತಿದ್ದಂತೆ, ಶಾಲಾ ಮುಖ್ಯಮಂತ್ರಿಯು ದೇವರ ಪಟಕ್ಕೆ ಆರತಿ ಬೆಳಗುವ ಕ್ರಮ. ಆರತಿಯ ವೇಳೆ ಸಮೂಹಗಾನದಲ್ಲಿ ‘ಜಯ ಜಯ ಆರತ ರಾಮ ತುಮ್ಹಾರೆ... ಪ್ರಾಣನಾಥ ರಘುನಾಥ ಮುರಾರೇ...’ ಎಂಬ ಹಾಡು (ಅದೊಂದು ಕಬೀರದಾಸ್‌ ಭಜನ್‌, ಆಗ ಅದರ ಬಗ್ಗೆಯೇನೂ ಗೊತ್ತಿರಲಿಲ್ಲ). ಹಳೆವಿದ್ಯಾರ್ಥಿಗಳ ಕಾಲದಿಂದಲೂ ಬಂದ ಸಂಪ್ರದಾಯ.

ಆರತಿ ಆದ ಮೇಲೆ ಕೊನೆಯಲ್ಲಿ ‘ಚಲಿಸುವ ಜಲದಲಿ ಮತ್ಸ್ಯನಿಗೆ... ಗಿರಿಯ ಬೆನ್ನಲಿಪೊತ್ತ ಕೂರ್ಮನಿಗೆ...’ ಹಾಡಿನೊಂದಿಗೆ ಭಜನೆಗೆ ಮಂಗಲ. ತದನಂತರ ಪ್ರಸಾದವಿತರಣೆ - ಬಹುತೇಕವಾಗಿ ತೆಂಗಿನಕಾಯಿ ಒಡೆದಿದ್ದರ ಚೂರುಗಳು, ಬಾಳೆಹಣ್ಣು ಇತ್ಯಾದಿ (ಸರದಿಪ್ರಕಾರ ಒಬ್ಬೊಬ್ಬ ವಿದ್ಯಾರ್ಥಿಯ ಮನೆಯಿಂದ ಅದರ ಪೂರೈಕೆ). ನವರಾತ್ರೆ ರಜೆಗಿಂತ ಹಿಂದಿನ ಶುಕ್ರವಾರದಂದು ‘ಶಾರದಾಪೂಜೆ’ ಹೆಸರಲ್ಲಿ ವಾರ್ಷಿಕ ವಿಶೇಷ ಕಾರ್ಯಕ್ರಮ. ಅವತ್ತು ದೇವರಪಟಕ್ಕೆ ಭಾರಿ ಅಲಂಕಾರ, ಹೆಚ್ಚು ಹೊತ್ತು ಭಜನೆ, ಹೆಚ್ಚು ಹೊತ್ತು ಮಂಗಳಾರತಿ, ಹೆಚ್ಚು ನಮೂನೆಯ ಪ್ರಸಾದ, ಒಟ್ಟಿನಲ್ಲಿ ಹೆಚ್ಚು ಅದ್ದೂರಿ.

ನಮ್ಮ ಶಾಲೆಯ ಪಕ್ಕದಲ್ಲೇ ನಮ್ಮೂರಿನ ಶ್ರೀ ಕಾಲಕಾಮ ಪರಶುರಾಮ ದೇವಸ್ಥಾನವಿರುವುದು. ಹಾಗಾಗಿ ದೇವಸ್ಥಾನದಲ್ಲಿ ಮಧ್ಯಾಹ್ನದ ಪೂಜೆಯ ಮಹಾಮಂಗಳಾರತಿಯನ್ನು ‘ಕೇಳುವ’ ಪುಣ್ಯ ಮತ್ತು ಭಾಗ್ಯ ನಮಗೆಲ್ಲ ಅಯಾಚಿತವಾಗಿ, ಅನುದಿನವೂ ಇರುತ್ತಿತ್ತು! ಬಾಲ್ಯದಲ್ಲಿ ನಮಗೆ ಸಿಕ್ಕ ಸಂಸ್ಕಾರ-ಸಂಸ್ಕೃತಿ ಸಿಂಚನದಲ್ಲಿ ಪ್ರಾಯಶಃ ಅದರ ಕೊಡುಗೆಯೂ ಇದೆ. ದೇವಸ್ಥಾನದಲ್ಲಿ ಜರಗುವ ವಿಶೇಷ ಪೂಜೆ-ಪುನಸ್ಕಾರಗಳು, ಜಾತ್ರೆ ಉತ್ಸವಾದಿಗಳಿಗೆ ನಾವೆಲ್ಲ ತಪ್ಪದೇ ಹೋಗುತ್ತಿದ್ದೆವೆನ್ನಿ, ಆಗೆಲ್ಲ ಮಹಾಮಂಗಳಾರತಿಯನ್ನು ‘ಕೇಳುವು’ದಷ್ಟೆ ಅಲ್ಲ, ನೋಡಿ ಧನ್ಯರಾಗುವ ಅವಕಾಶ. ದೇವಸ್ಥಾನದ ಲಕ್ಷದೀಪೋತ್ಸವದ ಸಂಭ್ರಮದಲ್ಲಂತೂ ಸುಮಾರು ಹತ್ತಿಪ್ಪತ್ತು ನಿಮಿಷಗಳ ಅವಧಿಯ ಮಹಾಮಂಗಳಾರತಿ. ಶಂಖ-ಜಾಗಟೆ-ಘಂಟೆಗಳಷ್ಟೇ ಅಲ್ಲದೆ ವಾಲಗ ಊದುವವರ, ಬ್ಯಾಂಡ್‌ಸೆಟ್‌ನವರ, ಸುಡುಮದ್ದು ಸುಡುವವರ ಅಬ್ಬರ. ‘ಮಹಾಮಂಗಳಾರತಿ’ಯ ರೋಮಾಂಚಕಾರಿ ಕಲ್ಪನೆ ನಮ್ಮ ಮನದಲ್ಲಿ ಶಾಶ್ವತವಾಗಿ ಮುದ್ರಿತವಾಗುವುದಕ್ಕೆ ಅದೇ ಕಾರಣವೆಂದುಕೊಳ್ಳುತ್ತೇನೆ.

ಮುಂದೆ ಪಿಯುಸಿ ಓದುವಾಗ ನಾನು ಉಜಿರೆಯ ‘ಸಿದ್ಧವನ ಗುರುಕುಲ’ ವಿದ್ಯಾರ್ಥಿನಿಲಯದಲ್ಲಿದ್ದೆ. ಅಲ್ಲೂ ಪ್ರತಿ ಶನಿವಾರ ಸಂಜೆ ಭಜನೆಯಿರುತ್ತಿತ್ತು. ಅಲ್ಲಿನ ಮಂಗಳಾರತಿಯ ಹಾಡು ‘ಜಗದಾಂಬಿಕೆಗೆ ಆರತಿ ಬೆಳಗುವೆ ಭಕುತಿಯಲಿ...’ ಈಗಲೂ ನನಗೆ ನೆನಪಿದೆ. ವಿದ್ಯಾಸಂಸ್ಥೆಗಳಲ್ಲಿ, ವಿದ್ಯಾರ್ಥಿನಿಲಯಗಳಲ್ಲಿ ‘ಸರಸ್ವತಿ ವಂದನ್‌’ ಇರಬೇಕು/ಇರಬಾರದು ಎಂದೆಲ್ಲ ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಲೇಪದ ಚರ್ಚೆ-ವಿಮರ್ಶೆ-ಪ್ರತಿಭಟನೆಗಳೆಲ್ಲ ಏನೇ ನಡೆದಿರಲಿ ಅಂತೂ ನಮ್ಮ ಪ್ರಾಥಮಿಕ ಶಾಲೆಯಲ್ಲಿನ ಪ್ರತಿ ಶುಕ್ರವಾರದ ಆ ಭಜನೆ, ಮಂಗಳಾರತಿ, ಪ್ರಸಾದವಿತರಣೆಗಳದೇನೊ ವಿಶೇಷ ಸೆಳೆತ ಇತ್ತು, ನಮ್ಮೆಲ್ಲರನ್ನು ’ಸಂಸ್ಕರಿಸು’ವಲ್ಲಿ ಆ ಚಟುವಟಿಕೆಯ ಪ್ರಭಾವ ಖಂಡಿತವಾಗಿಯೂ ಇತ್ತು ಎಂಬುದನ್ನು ನಾನು ಈಗಲೂ ಹೇಳಬಲ್ಲೆ. ನಾನೊಬ್ಬ ಮಹಾಆಸ್ತಿಕ ಅಥವಾ ಧರ್ಮಭೀರು ಅಂತೇನೂ ಕರೆದುಕೊಳ್ಳಲಾರೆನಾದರೂ ನನಗೆ ‘ದೇವಸ್ಥಾನದಲ್ಲಿ ಮಹಾಮಂಗಳಾರತಿ’ ಎನ್ನುವುದೂ ಒಂದು ಆಸಕ್ತಿಯ, ಅಧ್ಯಯನಯೋಗ್ಯ ವಿಷಯವೇ!

ಯಾವುದೇ ದೇವಸ್ಥಾನವಿರಲಿ, ಅದು ಎಷ್ಟು ಸಣ್ಣದು ಅಥವಾ ದೊಡ್ಡದೇ ಇರಲಿ, ನಾಗಸ್ವರ ಮೇಳೈಸುವ ದಕ್ಷಿಣ ಭಾರತದ ಶೈಲಿಯ ‘ಗುಡಿ’ಯಿರಲಿ ಅಥವಾ ಓಂ ಜೈ ಜಗದೀಶ್‌ ಹರೇ... ಮೊಳಗುವ ಉತ್ತರಭಾರತ ಶೈಲಿಯ ‘ಮಂದಿರ್‌’ ಇರಲಿ - ಅಲ್ಲಿ ಮಹಾಮಂಗಳಾರತಿಗೆಂದೇ ಸಮಯ ನಿಗದಿಯಾದದ್ದಿರುತ್ತದೆ. ವಾರಣಾಸಿಯಲ್ಲಿ ವಿಶ್ವನಾಥನ ಸನ್ನಿಧಿಯಲ್ಲಿ ಪ್ರತಿದಿನ ಸಂಜೆಯ ‘ಗಂಗಾ ಆರತಿ’ ಬಹಳ ಪ್ರಸಿದ್ಧವಾದುದು. ಬಹುತೇಕ ದೇವಸ್ಥಾನಗಳಲ್ಲಿ ಪ್ರಾದೇಶಿಕತೆಗನುಗುಣವಾಗಿ, ಧರ್ಮಶಾಖೆಗಳ ಶಾಸ್ತ್ರಕ್ಕನುಗುಣವಾಗಿ ಅಥವಾ ದಿನದ ವೇಳೆಯನ್ನನುಸರಿಸಿ ಕಾಕಡಾರತಿ (ಬೆಳಗಿನಜಾವದ ಆರತಿ), ಮಧ್ಯಾಹ್ನದಾರತಿ, ಧೂಪಾರತಿ (ಸಾಯಂಕಾಲ), ಶೇಜಾರತಿ (ರಾತ್ರಿಯ ವೇಳೆ) - ಹೀಗೆ ವಿವಿಧ ಹೆಸರುಗಳಲ್ಲಿ ಮಂಗಳಾರತಿಯ ಸೇವೆ ನಡೆಯುತ್ತಿರುತ್ತದೆ.

ದೇವಸ್ಥಾನಕ್ಕೆ ಹೀಗೇ ಸಾಮಾನ್ಯವೇಳೆಯಲ್ಲಿ ಭೇಟಿಯಿತ್ತು ಬರುವುದಕ್ಕೂ, ಮಹಾಮಂಗಳಾರತಿಯ ಸಮಯಕ್ಕೆ ಸರಿಯಾಗಿ ಹೋಗಿಬಂದಾಗಿನ ಸನ್ನಿವೇಶಕ್ಕೂ ನಮಗಾಗುವ ತೃಪ್ತಿ-ಧನ್ಯತಾಭಾವಗಳಲ್ಲಿ ಅಜಗಜಾಂತರವಿರುತ್ತದೆ ಎಂಬುದನ್ನು ಯಾವ ಅನುಮಾನವೂ ಇಲ್ಲದೇ ನೀವೂ ಒಪ್ಪುತ್ತೀರಿ. ಅದನ್ನೇ ನಾನು ದೇವಸ್ಥಾನದ ಮಹಾಮಂಗಳಾರತಿಯ ಅಗೋಚರ ಶಕ್ತಿ ಎಂದು ಬಣ್ಣಿಸಿದ್ದು. ಈ ಲೇಖನವನ್ನೋದಿದ ಮೇಲೆ ಮುಂದಿನ ಸಲ ದೇವಸ್ಥಾನಕ್ಕೆ ಹೋದಾಗ, ಅದೂ ಮಹಾಮಂಗಳಾರತಿಯ ಸಮಯದಲ್ಲಾದರೆ ಇನ್ನೂ ನಿಚ್ಚಳವಾಗಿ ಇದು ನಿಮ್ಮ ಅನುಭವಕ್ಕೆ ಬರಲಿದೆ, ನೋಡಿ!

ದೇವಸ್ಥಾನದ ಮಂಗಳಾರತಿ ದೃಶ್ಯವನ್ನು ಅದೆಷ್ಟೋ ಚಲನಚಿತ್ರಗಳಲ್ಲೂ ಕಥೆಗೆ ಪೂರಕವಾಗಿ, ನೈಜತೆಗೆ ಸನ್ನಿಹಿತವಾಗಿ ಪರಿಣಾಮಕಾರಿಯಾಗಿ ಬಳಸಿದ್ದಾರೆ. ‘ಮೆ ತೊ ಆರತೀ ಉತಾರೂಂರೇ ಸಂತೋಷಿ ಮಾತಾ ಕೀ...’ ಹಾಡಿನ ಜೈ ಸಂತೋಷಿ ಮಾ ಚಲನಚಿತ್ರ ಎಪ್ಪತ್ತರ ದಶಕದಲ್ಲಿ ಭರ್ಜರಿ ಯಶಸ್ಸನ್ನು ಕಂಡಿತ್ತು. ಇವತ್ತಿಗೂ ಆ ಹಾಡಿನ ಹಿನ್ನೆಲೆಯಿಟ್ಟು ಮಾಡುವ ‘ದೀಪ ನೃತ್ಯ’ ಶಾಲಾ-ಕಾಲೇಜುಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿಯಲ್ಲಿ ನಿತ್ಯನೂತನ ಜನಪ್ರಿಯತೆಯುಳ್ಳ ಪ್ರಸ್ತುತಿ. ಚಲನಚಿತ್ರಗಳಲ್ಲಿ ಮಹಾಮಂಗಳಾರತಿಯ ವಿಷಯ ಬಂದಾಗ ನೆನಪಾಗುವುದು ಶಂಕರಾಭರಣಂದಲ್ಲಿ ಶಂಕರಶಾಸ್ತ್ರಿಗಳು ಅಂಗೈಯಲ್ಲೇ ಕರ್ಪೂರವನ್ನು ಉರಿಸಿ ‘ಶಂಕರಾ.... ನಾದಶರೀರಾಪರಾ...’ ಎಂದು ವೀರಾವೇಶದಿಂದ ಹಾಡುತ್ತ ಶಂಕರಭಗವಾನನಿಗೆ ಆರತಿಯೆತ್ತುವ ದೃಶ್ಯ. ಮಂಗಳಾರತಿಯ ರೋಚಕತೆಯನ್ನು ಹೆಚ್ಚಿಸಲು ದೇವಸ್ಥಾನದ ಗಂಟೆಗಳು ಅತಿರಭಸದ ಗಾಳಿಮಳೆಗೆ ತೂಗಾಡುತ್ತ ತಾವಾಗಿಯೇ ಮೊಳಗುವಂಥ ಕರಾಮತ್ತನ್ನೂ ಕೆಲ ನಿರ್ದೇಶಕರು ತುರುಕಿಸುವುದಿದೆ!

ಮಂಗಳಾರತಿಯ ಮೋಡಿ ದೇವಸ್ಥಾನಗಳಿಗಷ್ಟೇ ಸೀಮಿತವೆಂದೇನೂ ಹೇಳುತ್ತಿಲ್ಲ ನಾನು. ನಮ್ಮ ಮನೆಗಳಲ್ಲಿ ನಿತ್ಯಪೂಜೆ, ಹಬ್ಬಹರಿದಿನಗಳ ವಿಶೇಷಪೂಜೆ, ಸತ್ಯನಾರಾಯಣ ವ್ರತ ಇತ್ಯಾದಿಯಲ್ಲೂ ದೇವರಿಗೆ ಆರತಿ ಬೆಳಗುವಾಗಿನ ‘ಧನ್ಯೋಸ್ಮಿ’ ಭಾವಕ್ಕೆ ಸಾಟಿಯಾದುದು ಇಲ್ಲ. ಸತ್ಯನಾರಾಯಣ ವ್ರತದಲ್ಲಂತೂ ಒಂದು ಹಂತದ ಪೂಜೆ ಮುಗಿದಮೇಲೆ ಒಮ್ಮೆ ಮಂಗಳಾರತಿ, ಮತ್ತೆ ‘ಕಥಾ ಶ್ರವಣ’ದ ವೇಳೆ ಒಂದೊಂದು ಅಧ್ಯಾಯ ಮುಗಿದಮೇಲೂ ತೆಂಗಿನಕಾಯಿ ಒಡೆದು ನೈವೇದ್ಯ ಮಾಡಿ ಆರತಿ, ಕೊನೆಯಲ್ಲಿ ಮಹಾಮಂಗಳಾರತಿ - ಹೀಗೆ ಆರತಿಯ ವೈಭವ. ‘ಅಮೆಚುರ್‌’ ಪೂಜಾರಿಗಳಾದ ನಾವೆಲ್ಲ ಬಲಗೈಯಲ್ಲಿ ಆರತಿ ಹಿಡಿದು ಅದನ್ನು ಪ್ರದಕ್ಷಿಣಾಕಾರವಾಗಿ ದೇವರೆದುರು ಬೆಳಗುತ್ತಿದ್ದಂತೆಯೇ, ಘಂಟಾಮಣಿಯನ್ನು ಹಿಡಿದ ನಮ್ಮ ಎಡಗೈಯೂ ನಮಗರಿವಿಲ್ಲದಂತೆಯೇ (ಭಕ್ತಿರಸ ಉಕ್ಕಿ ಹರಿದು?) ತಾನೂ ಘಂಟಾಮಣಿ ಸಮೇತ ಪ್ರದಕ್ಷಿಣಾಕಾರವೋ ಅಪ್ರದಕ್ಷಿಣಾಕಾರವೋ ಸುತ್ತುಬರುವುದಂತೂ ಹೌದು!

ಷೋಡಶೋಪಚಾರ ಪೂಜಾವಿಧಿಗಳಲ್ಲೇ ‘ಪರಾಕಾಷ್ಠೆ’ಯದೆಂನ್ನಿಸಿಕೊಳ್ಳುವ ಮಹಾಮಂಗಳಾರತಿಯ ಆಧ್ಯಾತ್ಮಿಕ ಹಿನ್ನೆಲೆ/ವಿವರಣೆಯೂ ಚಿಂತನಯೋಗ್ಯವಾಗಿದೆ. ಭಾರವಾಗದಂತೆ, ಚುಟುಕಾಗಿ ಅದರ ಸಾರಸಂಗ್ರಹ ಹೀಗಿದೆ:

ಸಂಸ್ಕೃತದ ‘ಆರತ್ರಿಕ್‌’ ಶಬ್ದದಿಂದ (ಬೆಳಕು ಅಥವಾ ದೀಪ ಎಂಬ ಅರ್ಥ) ಬಂದಿರುವ ಆರತಿಗೆ ಇನ್ನೊಂದು ಪರ್ಯಾಯ ಪದ ‘ನೀರಾಜನಂ’. ಪರಮಾತ್ಮನಿಗೆ ಆರತಿಯ ರೂಪದಲ್ಲಿ ನಾವು ಬೆಳಗುವ ತುಪ್ಪದಬತ್ತಿ ಅಥವಾ ಕರ್ಪೂರವು ಸಂಪೂರ್ಣವಾಗಿ ಉರಿದುಹೋಗುವುದನ್ನು, ಸತ್ಯ(ಭಗವಂತ)ವನ್ನು ಬೆಳಗುವ ಜ್ಞಾನಜ್ಯೋತಿಯೆದುರು ನಮ್ಮ ಕಾಮಕ್ರೋಧಾದಿ ‘ವಾಸನೆ’ಗಳು ಭಸ್ಮವಾಗುವುದರ ಸಂಕೇತ ಎಂದು ಬಣ್ಣಿಸುತ್ತಾರೆ ವಿದ್ವಾಂಸರು. ಉರಿಯುತ್ತಿರುವಾಗಲೂ ಕಂಪನ್ನು ಹರಡುವ ಕರ್ಪೂರದಂತೆ ನಾವೂ ಅಧ್ಯಾತ್ಮಸಾಧನೆಯ ಹಾದಿಯಲ್ಲಿ ಜೀವನವನ್ನು ಸವೆಯುವಾಗ ಸಮಾಜದ ಒಳಿತಿಗಾಗಿ ಪ್ರೀತಿ ವಿಶ್ವಾಸಗಳನ್ನು ತೋರಿ, ಇನ್ನೊಬ್ಬರಿಗೆ ಒಳ್ಳೆಯದಾಗುವಂತೆ ನಡೆಯಬೇಕು, ಅಹಂಕಾರವೆಲ್ಲ ಉರಿದುಹೋಗುವಾಗ ನಮ್ಮ ನಿಜವಾದ ಮೌಲ್ಯದ ಪರಿಚಯ ಲೋಕಕ್ಕೆ ಆಗಬೇಕು - ಇದು ಆರತಿಯ ಸಾಂಕೇತಿಕ ಮಹತ್ವ.

ಪರಮಾತ್ಮನ ಸನ್ನಿಧಿಯಲ್ಲಿ ಆರತಿಯ ವಿಷಯ ಇಂತಾದರೆ, ಮನುಷ್ಯರಿಗೂ ಆರತಿಯೆತ್ತುವ ಸಂಪ್ರದಾಯ ಯಾಕೆ, ಹೇಗೆ ಬಂದಿರಬಹುದು? ರಕ್ಷಾಬಂಧನದ ದಿನ, ಭಾತೃಬಿದಿಗೆಯ ದಿನ ಅಣ್ಣ-ತಮ್ಮಂದಿರಿಗೆ ಅಕ್ಕ/ತಂಗಿ ಆರತಿ ಬೆಳಗುವ ಕ್ರಮವಿದೆ. ಉಪನಯನದಲ್ಲಿ ವಟುವಿಗೆ ಆರತಿಬೆಳಗುವ ಕ್ರಮವೂ ಕೆಲವೆಡೆ ಇದೆ. ಮದುವೆಯಲ್ಲಿ ನವವಿವಾಹಿತ ದಂಪತಿಗಳಿಗೆ ಆರತಿ ಬೆಳಗಿ ಒಗಟು ಹೇಳಿಸುವುದು, ಉರುಟಣೆ ಉಯ್ಯಾಲೆ ಕ್ರಮಗಳೆಲ್ಲ ಇರುತ್ತವೆ. ಒಂದು ಸೂಕ್ಷ್ಮವನ್ನಿಲ್ಲಿ ಗಮನಿಸಬೇಕು - ಪ್ರೀತಿಯ, ಆದರದ, ಆಶೀರ್ವಾದದ ಈಎಲ್ಲ ಸಂದರ್ಭಗಳಲ್ಲೂ, ತುಪ್ಪದ ಜಂಟಿ-ಸೊಡರುಗಳನ್ನು ಬೆಳ್ಳಿತಟ್ಟೆಯಲ್ಲಿಟ್ಟು ಸಂಪ್ರದಾಯದಹಾಡು ಹೇಳುತ್ತ ಹೆಂಗಳೆಯರು ದೀಪಬೆಳಗುವುದು ಕ್ರಮ. ದೇವರಿಗೆ ಬೆಳಗುವ ಮಂಗಳಾರತಿಗಿಂತ ಇದು ಭಿನ್ನ. ಇಲ್ಲಿ ಕರ್ಪೂರ ಉರಿವ ಆಧ್ಯಾತ್ಮವಿಲ್ಲ, ಶಂಖ-ಜಾಗಟೆಗಳ ಅಬ್ಬರವಿಲ್ಲ. ಒಂದುರೀತಿಯಲ್ಲಿ ಆತ್ಮೀಯತೆಯ ಆಶೀರ್ವಚನದ, ಶುಭಹಾರೈಕೆಗಳ ಸಂಕೇತವಾಗಿ ತಲೆತಲಾಂತರಗಳಿಂದ ಉಳಿದುಬಂದಿರುವ ಸಂಪ್ರದಾಯವಿದು.

ಈ ಗೌರವಾದರ ಭಾವವನ್ನೇ ಹಿನ್ನೆಲೆಯಾಗಿಟ್ಟು ಅತಿಥಿಗಳನ್ನು ಆರತಿಯೆತ್ತಿ ಸ್ವಾಗತಿಸುವ ಕ್ರಮವೂ ಹೆಚ್ಚುಕಡಿಮೆ ಒಣಶಿಷ್ಟಾಚಾರ ರೂಪದಲ್ಲಿ, ಆರತಿಯೆತ್ತಿಸಿಕೊಳ್ಳುವವರಿಗೆ ಇರುಸುಮುರುಸಾಗುವ ರೀತಿಯಲ್ಲಿ ಅಥವಾ ಆಬಗ್ಗೆ ಏನೇನೂ ಕಲ್ಪನೆಯೇ ಇಲ್ಲದ ರೀತಿಯಲ್ಲೂ ಕೆಲವೊಮ್ಮೆ ನಡೆಯುವುದಿದೆ. ಅಲ್ಲಿ ಸಂಸ್ಕೃತಿಯ ಸೊಗಡಿಗಿಂತ, ಶುಭಾಶಯದ ಸೊಬಗಿಗಿಂತ ಸುಪ್ಪತ್ತಿಗೆಯ ‘ಸೋಗು’ ಹೆಚ್ಚು ಅಂದರೆ ತಪ್ಪಾಗಲಾರದು. ಆಸ್ಟ್ರೇಲಿಯಾ ಕ್ರಿಕೆಟಿಗ ಸ್ಟೀವ್‌ ವಾ ಬೆಂಗಳೂರಿಗೆ ಆಗಮಿಸಿದಾಗ ವಿಮಾನನಿಲ್ದಾಣದಲ್ಲೇ ಆತನಿಗೆ ಆರತಿಬೆಳಗಿ ಮೈಸೂರುಪೇಟ ತೊಡಿಸಿ ಆತ್ಮೀಯಸ್ವಾಗತ ಕೋರುವ ಚಿತ್ರ ಮಾರನೆದಿನ ಪತ್ರಿಕೆಗಳಿಗೆ ಮುಖಪುಟ ಸಾಮಗ್ರಿಯಾಗುತ್ತದೆ. ಮುಂದೆ ಅದೇ ಸ್ಟೀವ್‌ ವಾ ಬಳಗವು ಭಾರತ ತಂಡವನ್ನು ಮೊದಲ ಪಂದ್ಯದಲ್ಲೇ ಮಣ್ಣುಮುಕ್ಕಿಸಿ ‘ಮುಖಕ್ಕೆ ಮಂಗಳಾರತಿ ಮಾಡು’ವ ಸಮಾಚಾರವೂ ಅದೇ ಪತ್ರಿಕೆಗಳಲ್ಲಿ ರಾರಾಜಿಸುತ್ತದೆ. ಅಷ್ಟಕ್ಕೇ ನಿಲ್ಲುವುದಿಲ್ಲ ಆರತಿ ಸಮಾಚಾರ; ಮುಂದಿನ ಪಂದ್ಯಗಳಲ್ಲಾದರೂ ಭಾರತ ಗೆಲ್ಲುವಂತೆ ಪ್ರಾರ್ಥಿಸಿ ದೇವಸ್ಥಾನಗಳಲ್ಲಿ ಕ್ರಿಕೆಟ್‌ಭಕ್ತರಿಂದ ವಿಶೇಷ ಮಂಗಳಾರತಿಸೇವೆ ನಡೆಯುತ್ತದೆ. ಪಾಕಿಸ್ತಾನದ ವಿರುದ್ಧ ಸರಣಿಯಾಂದರ ವೇಳೆ ಒಂದಿಬ್ಬರು ಟೆಸ್ಟ್‌ಕ್ರಿಕೆಟಿಗರೇ ಇಂದೋರ್‌ನ ಮಂದಿರವೊಂದರಲ್ಲಿ ದೇವರಿಗೆ ಆರತಿ ಬೆಳಗಿದ ಸಚಿತ್ರವರದಿಯೂ ಒಮ್ಮೆ ಪತ್ರಿಕೆಗಳಲ್ಲಿ ಬಂದಿತ್ತು!

ಇನ್ನೊಂದು ಆರತಿ ವಿಚಾರ ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ, ಅಂತರ್ಜಾಲಪುಟಗಳಲ್ಲಿ ಬಿಸಿಬಿಸಿ ಸುದ್ದಿಗೆ ಗ್ರಾಸವಾದದ್ದೆಂದರೆ ಕ್ರೈಸ್ತಗುರು ‘ಪೋಪ್‌’ (ಇತ್ತೀಚೆಗೆ ನಿಧನರಾದವರು) ಭಾರತಕ್ಕೆ ಬಂದಿದ್ದಾಗ ಅವರಿಗೆ ಭಾರತೀಯ ಮಹಿಳೆಯಾಬ್ಬಳು ಆರತಿ ಬೆಳಗಿ ಹಣೆಗೆ ತಿಲಕವಿರಿಸಿದ ಚಿತ್ರ ಬಂದಾಗ. ಈ ಹಿಂದೂಸಂಪ್ರದಾಯವನ್ನು ಅರಗಿಸಿಕೊಳ್ಳುವುದು, ಅದೂ ಧರ್ಮಗುರುಗಳ ವಿಚಾರದಲ್ಲಿ, ಪಾಶ್ಚಾತ್ಯರಿಗೆ ತುಂಬ ಇಕ್ಕಟ್ಟಿನ, ಮುಜುಗರದ ಸಂಗತಿಯಾಗಿತ್ತು. ಆರತಿ ಬೆಳಗಿ ಸ್ವಾಗತಿಸುವುದೆಂದರೆ ಭಾರತದ ಜನರ ಒಂದು ಪರಂಪರಾಗತ ಮೂಢನಂಬಿಕೆ, ಹಸ್ತಲಾಘವ ಇದ್ದಂತೆಯೇ ಸ್ವಾಗತದ ಒಂದು ಪರಿಯೇ ಹೊರತು ಅದಕ್ಕೆ ಧಾರ್ಮಿಕ ಮಹತ್ವವನ್ನೇನೂ ಊಹಿಸಬಾರದು ಎಂದು ಪೋಪ್‌ ಮೂಲಗಳೇ ಈ ಜನರನ್ನು ಸಮಾಧಾನಿಸಬೇಕಾಗಿ ಬಂದಿತ್ತು! ಆದರೆ, ಅವರೇನು ಬಲ್ಲರು ನಮ್ಮ ‘ಮಹಾಮಂಗಳಾರತಿ’ಯ ಹಿಂದಿನ ಸಂಸ್ಕೃತಿ ಸಂಪ್ರದಾಯಗಳನ್ನು? ‘ಮಂಗಳಾರತಿ’ ಎಂಬ ಶಬ್ದವೇ ಸೂಚಿಸುವ ಮಂಗಲಮಯ ಮನಸ್ಥಿತಿಯನ್ನು? ಮೈಮನ ಮರೆಸುವ ಅದರ ಮಹಾಮಹಿಮೆಯನ್ನು?!

*

ಈಸಲ ‘ ಮಂಗಳಾರತಿ’ ವಿಷಯದ ಬಗ್ಗೆ ಬರೆಯುವುದಕ್ಕೆ ಏನು ಕಾರಣ, ಯಾವ ಕಲ್ಪನೆ ಅಂತ ನಿಮಗೆ ಕುತೂಹಲವಿದ್ದರೆ ಅದನ್ನೂ ತಿಳಿಸಿಯೇ ಲೇಖನವನ್ನು ಮುಗಿಸುತ್ತೇನೆ. ಅನ್ನಮಯ್ಯ ವಿರಚಿತ ತೆಲುಗುಕೃತಿ

‘ಕ್ಷೀರಾಬ್ಧಿಕನ್ಯಕಕು ಶ್ರೀಮಹಾಲಕ್ಷ್ಮಿಕಿನಿ ನೀರಜಾಲಯಕುನು ನೀರಾಜನಂ...’ ಎಂಬ ಒಂದು ಅತ್ಯುತ್ತಮ ಕೀರ್ತನೆಯನ್ನು ನೀವು ಕೇಳಿರಬಹುದು. ಹೆಚ್ಚಾಗಿ ಸಂಗೀತಕಚೇರಿಯ ಅಂತ್ಯದಲ್ಲಿ ಅಥವಾ ಭರತನಾಟ್ಯದ ಮಂಗಲವಾಗಿ ಇದನ್ನು ಪ್ರಸ್ತುತಪಡಿಸುವುದು, ತನ್ಮೂಲಕ ಲಕ್ಷ್ಮಿಗೆ ಆರತಿಯಾಂದಿಗೆ ಕಾರ್ಯಕ್ರಮವನ್ನು ಮುಗಿಸುವುದು ಪದ್ಧತಿ. ಮೊನ್ನೆ ಇಲ್ಲಿ ವಾಷಿಂಗ್ಟನ್‌ನಲ್ಲಿ ನಡೆದ ಒಂದು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ, ಬೆಂಗಳೂರಿನ ‘ಸಮರ್ಥನಂ’ ತಂಡದ ಅಂಧವಿದ್ಯಾರ್ಥಿಗಳ ಭರತನಾಟ್ಯವನ್ನು ವೀಕ್ಷಿಸುವ ಅವಕಾಶ ಸಿಕ್ಕಿತ್ತು. ಅದೊಂದು ಹೃದಯಸ್ಪರ್ಶಿ, ಭಾವುಕಕ್ಷಣಗಳ ಕಾರ್ಯಕ್ರಮವೇ ಸೈ. ಆ ನೃತ್ಯಕಾರ್ಯಕ್ರಮದ ಮುಕ್ತಾಯದ ಪ್ರಸ್ತುತಿಯಾಗಿ ಇಬ್ಬರು ಅಂಧನೃತ್ಯಗಾರ್ತಿಯರಿಂದ ಕೈಗಳೆರಡರಲ್ಲೂ ದೀಪದ ಹಣತೆ ಹಿಡಿದು ‘ ಕ್ಷೀರಾಬ್ಧಿಕನ್ಯಕಕು...’ ಹಾಡಿಗೆ ಹೆಜ್ಜೆಹಾಕುತ್ತ ಮಂಗಳಾರತಿ! ಸುಶ್ರಾವ್ಯ ಸಂಗೀತದ ಹಿನ್ನೆಲೆಯಲ್ಲಿ, ಮಂದಬೆಳಕಿನ ವೇದಿಕೆಯಲ್ಲಿ, ‘ ಬೆಳಕು’ ಎಂದರೇನೆಂದೇ ಅರಿಯದ ಕಂದಮ್ಮಗಳಿಂದ ಭಕ್ತಿಯ ಬೆಳಗು! ಆ ಅಂಧಕಲಾವಿದರ ಸಾಧನೆಗೆ, ಅವರನ್ನು ತರಬೇತಿಸಿದ ಗುರುಗಳ ಪರಿಶ್ರಮಕ್ಕೆ ನಮಿಸುತ್ತ, ಮತ್ತೆ ಮನತಟ್ಟಿದ ‘ ಮಹಾಮಂಗಳಾರತಿ’ಯ ಬಗ್ಗೆ ಬರೆಯಲೇಬೇಕೆಂಬ ಮನಸ್ಸಿಂದ ಇದನ್ನು ಬರೆದೆ.

ನಿಮ್ಮ ಮನಸ್ಸಿಗೆ ಏನನ್ನಿಸಿತು, ಬರೆದು ತಿಳಿಸಿ. ವಿಳಾಸ - [email protected].

ಮುಂಬಯಿಯ ಶ್ರೀಸಿದ್ಧಿವಿನಾಯಕ ದೇವಸ್ಥಾನದ ಮಹಾಮಂಗಳಾರತಿ ವಿಡಿಯಾ ಇಲ್ಲಿದೆ. ವೀಕ್ಷಿಸಿ ಧನ್ಯರಾಗಿ!


ಮುಖಪುಟ / ಅಂಕಣಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+